ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಕಪಾಟಿನ ಪದಗಳು


ನಿನಗಾಗಿ ಕಾಯುವ
ಅದೆಷ್ಟೋ ಪದಗಳಿವೆ
ಈ ಕಪಾಟಿನಲ್ಲಿ
ಅಭಿಧಮನಿಯೋ…
ಅಪಧಮನಿಯೋ…
ವ್ಯತ್ಯಾಸ ಗೊತ್ತಿಲ್ಲ
ಗೊತ್ತಿರುವುದು ನೀನು ಮಾತ್ರ..
ನೆರಳ ನೇವರಿಕೆಯಲ್ಲಿ
ಒರಗಿದ ಎದೆಯ ಸದ್ದು
ಮೌನವಾಗಿ ಮಾತಿಗಿಳಿಯಿತು
ಇಲ್ಲಿಯವರೆಗೂ ಕಾದಿದ್ದೇ ಹೆಚ್ಚು
ನಾವಿಬ್ಬರು ನೋಡುತ್ತಲೇ ಇದ್ದೇವೆ
ಸ್ವಚ್ಛಂದ ಹಕ್ಕಿಗಳ
ಎಲ್ಲೆ ಮೀರಿದ ಆಟ
ನೆಟ್ಟಿಗರು ನಗರದಲ್ಲಿದ್ದಾರೆ
ಹಳ್ಳಿ ಸೊಗಸು ಅರಳಿ ನಿಂತಿದೆ
ಇಂಚಿಂಚಾಗಿ ಇಳಿಯುವ
ಸಂಜೆ ಸೂರ್ಯ
ಜಿನುಗುವ ತುಟಿಯರಂಗನ್ನು
ತಾಕಲೆಂದೇ ರೆಕ್ಕೆಬಡಿದು
ಹೊಳೆಗಿಳಿದು ತೇಲುತಿದ್ದಾನೆ
ಹೊನ್ನೀರ ತೀರ
ಹರವಿಕೊಂಡ ಎದೆಯಲ್ಲಿ
ಹದ ಮಾಡಿದ ಆಸೆಗಳ ಎಣಿಸಲಾಗದೆ
ಸುರುವಿದ್ದಾನೆ
ಆಯ್ದುಕೊಳ್ಳುವ ಸರದಿ ನನ್ನದೇ
ಒಂದೊಂದಕ್ಕೂ ಒಂದು ಕೈ ಚಳಕ
ಕುಂಚದ ಕಲೆ ಕಸೂತಿಯ ಕಲಾವಿದ
ಹೊಸ ಹೂವಿನ ಒಲವು
ಮೈತುಂಬ ಪೋಣಿಸಿದ ಅವನದೇ ಬಣ್ಣ
ಕಾಮನಬಿಲ್ಲಾಗಿ ಕೈಚಾಚಿದೆ
ಕೈ ನೀಡಿ ಹತ್ತಿರವಾದೆ
ಆಲಿಂಗನದಿ ಖೈದಿಯಾದೆ
ಗೀತಾಮಂಜು ಬೆಣ್ಣೆಹಳ್ಳಿ
ಮನದ ಭಾವನೆ ತುಂಬಾ ಚೆನ್ನಾಗಿದೆ ಮೇಡಂ.
ಅಭಿನಂದನೆಗಳು
ಮನಮಿಡಿಯುವಂತೆ ನೆನಪುಗಳು ಮರುಕಳಿಸುವಂತೆ ಮನೋಜ್ಞವಾಗಿ ಕವಿತೆ ಮೂಡಿದೆ.ಶುಭರಾತ್ರಿ ಮೇಡಂ
Super medam
ತುಂಬಾ ಚೆನ್ನಾಗಿದೆ ಗೆಳತಿ.