
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸ್ನೇಹವೆನ್ನುವುದು
ಅದೊಂದು
ವರ್ಣಿಸಲಾಗದ ಅನುಭೂತಿ

ಸ್ನೇಹ, ಗೆಳೆತನ, ದೋಸ್ತಿ, ಇವೆಲ್ಲವೂ ಗೆಳೆತನದ ಸಮನಾರ್ಥಕ ಪದಗಳು. ಗೆಳತನವೆಂದರೆ ಅದೊಂದು ಸಂಭ್ರಮ. ದೂರದ ಊರಿನಿಂದ ಗೆಳೆಯ ಬರುತ್ತಾನೆಂದರೆ ಎಲ್ಲಿಲ್ಲದ ಸಡಗರ. ತನ್ನ ಬದುಕಿನ ನೋವು ನಲಿವುಗಳನ್ನು, ಸುಖ ದುಃಖಗಳನ್ನು, ಸಂಕಟಗಳನ್ನು ಎಲ್ಲವನ್ನು, ಯಾರಿಗೂ ಹೇಳಲಾರದ ಸಂಗತಿಗಳನ್ನು ಅಷ್ಟೇ ಏಕೆ ಕುಟುಂಬದ ತಂದೆ ತಾಯಿಗಳ ಮುಂದೆ ಹೇಳಿಕೊಳ್ಳಲಾರದ ತೊಳಲಾಟಗಳನ್ನು ಗೆಳೆಯನ ಮುಂದೆ, ಗೆಳತಿಯರ ಮುಂದೆ ಅದೆಷ್ಟು ಮನಸ್ಸು ಬಿಚ್ಚಿ ಹಂಚಿಕೊಳ್ಳುತ್ತದೆ ಸ್ನೇಹ…!
ಸ್ನೇಹವೆಂದರೆ ಹಾಗೆ ಎಲ್ಲವನ್ನು ನಗುನಗುತ್ತಾ ಸ್ವೀಕರಿಸುವ, ಕಷ್ಟಗಳಿಗೆ ಕಣ್ಣೀರು ಒರೆಸುವ, ನೋವುಗಳಿಗೆ ಸಾಂತ್ವನ ಹೇಳುವ, “ನಾನಿದ್ದೇನೆ, ನೀನು ಹೆದರಬೇಡ..” ಎಂದು ಧೈರ್ಯ ನೀಡುವ ಅತ್ಯಂತ ಸ್ಪೂರ್ತಿಯ ಚಿಲುಮೆಯಾಗುವ ಅನುಭೂತಿಯೇ ಗೆಳೆತನ. ಮನುಷ್ಯನು ಎಲ್ಲಾ ಸಂಬಂಧಗಳನ್ನು ಬಿಟ್ಟು ಬದುಕಬಲ್ಲ. ಅದರಲ್ಲೂ ಕುಟುಂಬ ತಂದೆ ತಾಯಿ ಸೋದರತ್ವ ಇವೆಲ್ಲವನ್ನೂ ಇಲ್ಲದಿದ್ದರೂ ಆತ ಉಸಿರಾಡಿಸಬಲ್ಲ. ಆದರೆ ಗೆಳೆಯನ ಗೆಳೆತನವಿಲ್ಲದೆ ಅವನು ಬದುಕಲಾರ.
ಬಾಲ್ಯದ ಗೆಳೆತನದಲ್ಲಿ ರೇಗಿಸುವ, ಕಾಲೆಳೆಯುವ, ತುಂಟಾಟ ಮಾಡುವ, ಹೆಗಲಿಗೆ ಕೈ ಹಾಕಿ ಒಂದಾಗಿ ಹೆಜ್ಜೆ ಹಾಕುವ, ಆಟದಲ್ಲಿ, ಊಟದಲ್ಲಿ, ಪಾಠದಲ್ಲಿ ಕೂಡಿ ಬದುಕಿದ..ಅಂತಹ ಸುಂದರ ಕ್ಷಣಗಳನ್ನು ಕಳೆದ ಬಾಲ್ಯದ ಗೆಳೆತನವೇ ಒಂದು ಅದ್ಭುತ ಅವಿಸ್ಮರಣೀಯ ಸುಂದರ ಕ್ಷಣಗಳು. ಇಂತಹ ಗೆಳೆತನವು ಗೆಳೆಯನ ಬಡತನ, ಸಿರಿತನ, ಜಾತಿ, ಮತ, ಪಂಥ, ಪಂಗಡ ಯಾವುದನ್ನು ಲೆಕ್ಕಿಸುವುದಿಲ್ಲ. ‘ಗೆಳೆತನ’ ಒಂದೇ ಕಾರಣ..! ಇದಕ್ಕೆ ಪುರಾಣ ಇತಿಹಾಸದ ಎಷ್ಟೋ ಪಾತ್ರಗಳು ನಮಗೆ ಉದಾಹರಣೆಯಾಗಿವೆ.

ಮಹಾಭಾರತದಲ್ಲಿ ಬರುವ ಕೃಷ್ಣ – ಕುಚೇಲರು, ದುರ್ಯೋಧನ – ಕರ್ಣರು ಸಂಗ್ಯಾ- ಬಾಳ್ಯಾ ಇವರೆಲ್ಲರೂ ಗೆಳೆತನದಲ್ಲಿ ಮಿತಿ ಮೀರಿದವರು. ಒಬ್ಬರ ನೋವುಗಳನ್ನು ಇನ್ನೊಬ್ಬರು ಅರಿತವರು. ಒಬ್ಬರ ಸಂತೋಷವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದವರು. ಇದು ಗೆಳೆತನದ ಪರಮೋನ್ನತ ಸ್ಥಾಯಿಭಾವ.
ಆದರೆ..
ಗೆಳೆತನದಲ್ಲಿ ‘ಸಂಶಯ’ ಎನ್ನುವ ಮೂರಕ್ಷರ ಸುಳಿಯಬಾರದು. ಗೆಳೆಯನ ಏಳಿಗೆಯನ್ನು ಅತ್ಯಂತ ಮುಕ್ತಕಂಠದಿಂದ ಹೊಗಳಬೇಕು. ಗೆಳೆಯನ ತಪ್ಪುಗಳನ್ನು ಸಾರ್ವಜನಿಕವಾಗಿ ಹೇಳದೆ ಖಾಸಗಿಯಾಗಿ ತಿದ್ದಿ ತೀಡಿ ಸರಿದಾರಿಗೆ ತರಬೇಕು. ಎಲ್ಲರೆದರೂ ಗೆಳೆಯನನ್ನು ಅತ್ಯಂತ ಪ್ರೀತಿಯಿಂದ ಕಕ್ಕುಲತೆಯಿಂದ ಕೊಂಡಾಡಬೇಕು. ಅದೇ ನಿಜವಾದ ಸ್ನೇಹ. ಗೆಳೆಯ ಕಷ್ಟದಲ್ಲಿದ್ದಾನೆಂದು ತಿಳಿದ ಕೂಡಲೇ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕು. ಕಷ್ಟಕಾಗದ ನಂಟಸ್ತಿಕೆ ಇಷ್ಟಿದ್ದರೇನು..? ಇಷ್ಟವಿಲ್ಲದಿದ್ದರೂ ಬದುಕುವ ಸ್ನೇಹ ಎಷ್ಟಿದ್ದರೇನು..? ಸಹಾಯ ಸಹಕಾರವಿಲ್ಲದ ಸಾವಿರಾರು ಸಂಬಂಧಗಳು ಎಷ್ಟಿದ್ದರೇನು..? “ನಾನಿದ್ದೇನೆ ನೀನು ಮುನ್ನುಗ್ಗು, ನಿನ್ನ ಕಷ್ಟಗಳೆನಿದ್ದರೂ ಇಬ್ಬರೂ ಎದುರಿಸೋಣ..” ಎನ್ನುವ ಒಂದೇ ಒಂದು ಸ್ನೇಹ ಸಾವಿರಾರು ಕಷ್ಟಗಳನ್ನು ಅದು ಎದುರು ಹಾಕಿಕೊಂಡು ಬದುಕನ್ನು ಗೆಲ್ಲಬಲ್ಲದು. ಅದೇ ನಿಜವಾದ ಸ್ನೇಹ. ಕಷ್ಟದಿಂದ ಬಂದ ಕುಚೇಲನಿಗೆ ಗೊತ್ತಾಗದಂತೆ ಆತನ ಕಷ್ಟವನ್ನು ತೀರಿಸಿದ ಕೃಷ್ಣ ಗೆಳೆತನಕ್ಕೆ ಅದೆಷ್ಟು ಸಾಕ್ಷಿ ಆಗುತ್ತಾನೆ..! ತುಂಬಿದ ಸಭೆಯಲ್ಲಿ ಇವನಿಗೆ ರಾಜ್ಯವಿಲ್ಲ. ಇವನು ರಾಜನಲ್ಲ. ಇವನೊಬ್ಬ ಮೀನುಗಾರನ ಮಗ ಎಂದು ಹೀಯಾಳಿಸಿದಾಗ, ಅದಾವುದನ್ನು ಲೆಕ್ಕಿಸದೆ ಅಂಗರಾಜ್ಯವನ್ನು ಗೆಳೆಯನ ಅಂಗೈಗೆ ನೀಡಿ, “ನಿನ್ನೊಂದಿಗೆ ನಾನಿದ್ದೇನೆ..” ಎಂದು ಧೈರ್ಯ ನೀಡಿದ ದುರ್ಯೋಧನನ ಗೆಳೆತನ ಮರೆಯುವುದೇ. ಆತನಿಗೂ ಕರ್ಣನು ತನ್ನ ಬದುಕಿನುದ್ದಕ್ಕೂ ಗೆಳೆತನಕ್ಕಾಗಿ ತ್ಯಾಗ ಮಾಡಿದ್ದು ಮರೆಯಲಿಲ್ಲ. ಇದೇ ಅಲ್ಲವೇ ಗೆಳೆತನದ ಅಪ್ಪಟ ಉದಾರಣೆ.
ಹಾಗಾಗಿ ಗೆಳೆತನವೆಂದರೆ ಒಬ್ಬರಿಗೊಬ್ಬರಾಗುವ, ಒಬ್ಬರ ನೋವು ಇನ್ನೊಬ್ಬರಿಗೆ ನೋವುತರಿಸುವ, ಒಬ್ಬರ ಸಂತೋಷ ಇನ್ನೊಬ್ಬರಿಗೆ ಸಂಭ್ರಮ ತರಿಸಿ, ಪರಸ್ಪರ ಪ್ರೀತಿ ಸ್ನೇಹ ಸಂಭ್ರಮದಿಂದ ಬದುಕುವ ನಿಜವಾದ ಸಂಬಂಧವೆಂದರೆ ಅದು ಸ್ನೇಹ.
ಗೆಳೆತನವೆಂದರೆ, ಬಯಸುವುದಲ್ಲ : ಬಯಸಿದ್ದು ಕೊಡುವುದು. ಸ್ವಾರ್ಥಕ್ಕಾಗಿ ಮಾಡುವ ಗೆಳೆತನವು ಯಾವತ್ತಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಗೆಳೆತನದಲ್ಲಿ ಸಣ್ಣ ಸಂಶಯವು ಬಂದರೆ ಅದು ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಎಂತಹದೇ ಸಂಶಯ ಸುಳಿದರೂ ಅದನ್ನು ಚರ್ಚೆ ಸಂವಾದದ ಮೂಲಕ ತಿಳಿಗೊಳಿಸಿಕೊಂಡು ಗೆಳೆತನ ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಗೆಳೆಯರ ಬಳಿ ಇದೆ.

ಇಲ್ಲದೆ ಹೋದರೆ ಗೆಳೆತನ ಒಡೆದು ಹೋಗುತ್ತದೆ. ನಮ್ಮ ಹಿರಿಯರು ಗೆಳೆತನವನ್ನು ಕನ್ನಡಿಗೆ ಹೋಲಿಸುತ್ತಾರೆ. ನಮ್ಮ ಕಷ್ಟಗಳನ್ನು ನಮ್ಮ ಸಂಕಟಗಳನ್ನು ನಮ್ಮ ಏರುಪೇರುಗಳನ್ನು ಗೆಳೆತನ ಎನ್ನುವ ಕನ್ನಡಿಯಲ್ಲಿ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಏನಾದರೂ ಲೋಪ ದೋಷಗಳನ್ನು ಕಂಡುಕೊಂಡರೆ, ಅದನ್ನು ಸರಿಯಾದ ಸಮಯಕ್ಕೆ ತಿದ್ದಿ ತೀಡಿಕೊಂಡು ಮತ್ತೆ ಬದುಕನ್ನು ಸುಂದರವಾಗಿ ಮಾಡಿಕೊಳ್ಳಬೇಕು. ಒಂದು ವೇಳೆ ಅದನ್ನು ತಿದ್ದಿ ತೀಡಿಕೊಳ್ಳುವ ಸಂದರ್ಭದಲ್ಲಿ ಗೊತ್ತಾಗಿಯೋ ಗೊತ್ತಾಗದಂತೆಯೋ ಗೆಳೆತನ ಎನ್ನುವ ಕನ್ನಡಿಯನ್ನು ಬೀಳಿಸಿದರೆ ಅದು ಒಡೆದು ಹೋಗುತ್ತದೆ. ಒಡೆದು ಹೋದ ಕನ್ನಡಿ ಚೂರು ಚೂರಾಗುತ್ತದೆ. ಗೆಳೆತನದಲ್ಲಿಯೂ ಹೃದಯ ಚೂರು ಚೂರಾಗುವುದು. ಗೆಳೆತನದ ಅಂತಿಮ ಘಟ್ಟ ಎನ್ನುವ ಗೆಳೆತನದಲ್ಲಿ ಯಾವತ್ತಿಗೂ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಒಂದು ಸಲ ಆತನು ಸೋತರೆ ಇನ್ನೊಂದು ಸಲ ನೀವು ಸೋಲಬೇಕು. ಇಬ್ಬರು ಸೋತಾಗಲೇ ಬದುಕಿಗೆ ಗೆಲುವಾಗುವುದು. ಬದುಕಿನಲ್ಲಿ ಸೋಲಾಗದವನು ಗೆಳೆತನದಲ್ಲಿ ಎಂದಿಗೂ ಗೆಲ್ಲಲಾರೆ. ಗೆಳೆತನದಲ್ಲಿಯೂ ಹಾಗೆ ಗೆಳೆತನದಲ್ಲಿ ಸೋತಷ್ಟು ಗೆಳೆಯ ಗೆಲ್ಲುತ್ತಾ ಹೋಗುತ್ತಾನೆ. ಇಲ್ಲದೆ ಹೋದರೆ Adjust ಸ್ಪರ್ಧಿಯಾಗುತ್ತದೆ. ಯಾವತ್ತಿಗೂ ಅದು ಸಂತೋಷವನ್ನು ತಂದು ಕೊಡುವುದಿಲ್ಲ. ಸ್ಪರ್ಧೆಯು ಯಾವತ್ತಿಗೂ ಉತ್ಕಟ ಇಚ್ಛೆಯನ್ನು ಬಯಸುತ್ತದೆ. ಹಾಗಾಗಿ ಗೆಳೆತನದಲ್ಲಿ ಸ್ಪರ್ಧೆಗಿಂತ ಸಹೃದಯತೆ ಇರಬೇಕು. ಅಂದಾಗ ಮಾತ್ರ ಗೆಳೆತನ ಗೆಲ್ಲುತ್ತದೆ. ಗೆಳತನ ಎನ್ನುವುದು ಒಂದು ಅದ್ಭುತ ಸುಂದರ ಅನುಭೂತಿ. ಅದನ್ನು ಅನುಭವಿಸಿದಾಗಲೇ ಮನಸ್ಸನ್ನು ಹಗರು ಮಾಡುವ ಗೆಳೆತನವೇ ನಿಜವಾದ ಸಂಭ್ರಮ ನೀಡಬಲ್ಲದು. ಅಂತಹ ಸಂಭ್ರಮದ ಗೆಳೆತನಕ್ಕೆ ನಾವು ನೀವೆಲ್ಲರೂ ಸಾಕ್ಷಿಯಾಗುವ ಸಾಧ್ಯವಾದರೆ. ಬದುಕಿನಲ್ಲಿ ಒಬ್ಬ ಆಪ್ತ ಗೆಳೆಯನನ್ನು ನಿಮ್ಮ ಹೃದಯದೊಳಗೆ ಬಚ್ಚಿಟ್ಟುಕೊಂಡುಬಿಡಿ. ಇರಲಿ, ಸಂಭಾಷಣೆ ಮಾಡಿ, ಪ್ರೀತಿಸಿ, ರಮಿಸಿ, ಸಾಂತ್ವನ ಮಾಡಿರಿ, ತಪ್ಪು ಮಾಡಿದಾಗ ಪ್ರೀತಿಯಿಂದ ತಿದ್ದಿಬಿಡಿ. ಹೃದಯದೊಳಗೆ ಆತನ ಗೆಳೆತನ ಬೆಚ್ಚುಗಿರಲಿ. ಆತನ ಹೃದಯದೊಳಗೂ ನಿಮ್ಮ ಗೆಳೆತನ ಬೆಚ್ಚಗಿರಲಿ. ನಾವು ನೀವು ಗೆಳೆತನದ ಸವಿ ನೆನಪುಗಳನ್ನು ಸವಿಯೋಣ
————
ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಗೆಳೆತನದ ಬಗ್ಗೆ ತುಂಬಾ ಅರ್ಥಪೂರ್ಣವಾದ ಸವಿವರವಾದ ಲೇಖನ. ಲೇಖನಗಳ ಸರದಾರರಿಗೆ ಮನದುಂಬಿದ ಅಭಿನಂದನೆಗಳು.
Super sir