ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಪಂಚ ಪಂಚುಗಳು…


1. ಪರಿಪಾಟಲು.!
ಇಂದಿನ ಹುಡುಗಿಯರಿಗೇಕೋ
ಬೇಡವೇ ಬೇಡಂತೆ ಮದುವೆ.!
ಬ್ರಹ್ಮಚಾರಿ ಬದುಕಿನ ಗೊಡವೆ
ಸಾಕಾಗಿ ಹುಡುಗರು ಹೂಡಿಹರು
ಆ ದೇವರ ಮೇಲೆಯೇ ದಾವೆ.!
******
2. ಸ್ವಯಂಕೃತ.!
ಬೇಡ ಬೇಡವೆಂದು ಅಂದು
ಹೊಸಕಿದರು ಹೆಣ್ಣು ಭ್ರೂಣ
ಬೇಕು ಬೇಕೆಂದರೂ ಇಂದು
ಸಿಗುತಿಲ್ಲ ಮನೆ ಗಂಡುಗಳಿಗೆ
ಒಂದೇ ಒಂದು ಹೆಣ್ಣು ಕಾಣ.!
*******
3. ವಧುವಿನ ಷರತ್ತುಗಳು
ಇರಬೇಕು ವರಮಾನದ ಭಾರಿ ಪ್ಯಾಕೇಜು
ಇರಬಾರದು ಅಪ್ಪ-ಅಮ್ಮನೆಂಬ ಲಗೇಜು
ಸ್ವಂತ ಮನೆಯಿರಬೇಕು ಸಿಟಿ ಆಜುಬಾಜು
ಮಾಡಿಸಬೇಕು ವಾರಾಂತ್ಯಕೆ ಮಸ್ತಿಮೋಜು
ಇಷ್ಟಿದ್ದರೆ ಮಾಡಿಕೊಳ್ಳುವೆ ನಿನ್ನ ಮ್ಯಾರೇಜು.!
*****
4. ಬರಗಾಲ
ಈಗೀಗ ವಧು-ವರ ವಿನಿಮಯಯ ಕೇಂದ್ರ
ಆಗಿಹುದು ಬಿಕರಿಯಾಗದ ವರಗಳದ್ದೇ ಚತ್ರ
ನಿತ್ಯವೂ ನಡೆದರೂ ಅದೆಷ್ಟೆಷ್ಟೇ ಸ್ವಯಂವರ
ವಧುಗಳು ಹಿಡಿಯುತಲೇ ಇಲ್ಲ ವರಗಳ ಕರ
ಹೆಣ್ಣುಗಳಿಲ್ಲದೆ ಎಲ್ಲೆಡೆ ಕಂಕಣಭಾಗ್ಯದ ಬರ.!
******
5. ಕಾರಣ.!
ಮಾಡರ್ನ್ ವಧುಗಳ ಷರತ್ತುಗಳು ವಿಪರೀತ
ಮದುವೆಯಿಲ್ಲದೆ ಗಂಡುಗಳೆಲ್ಲ ಕೊತ ಕೊತ
ಹೆಣ್ಣುಗಳ ಸಂಖ್ಯೆಯೇ ಆಗಿಹುದು ಖೋತಾ
ಏರುಪೇರಾಗಿದೆ ಗಂಡು ಹೆಣ್ಣಿನ ಅನುಪಾತ
ಇದು ಹಿಂದಿನ ಗರ್ಭಾಪಾತದ ಮರ್ಮಾಘಾತ.!
********
ಲಾಸ್ಟ್ ಪಂಚ್..
ಹುಡುಗರಿಗೆ ಮದುವೆಗೆ ಓದದ ಹುಡುಗಿಯರು ಬೇಡ
ಆದರೆ.. ಓದಿದ ಹುಡುಗಿಯರಿಗೆ ಮದುವೆಯೇ ಬೇಡ..!
———————
ಎ.ಎನ್.ರಮೇಶ್.ಗುಬ್ಬಿ.