ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಚೈತ್ರದ ಸಿರಿ


ಈ ದಿನ ನನ್ನದು ನಾಳೆಯು ಯಾರದು
ಪ್ರಕೃತಿ ಹಾಡಿಗೆ ಮನಕುಣಿದಿಹುದು
ಬಣ್ಣಗಳೆರೆಚಿದ ಸುಮ ನಗುತಿಹುದು
ಶುಕ-ಪಿಕ ನವಿಲು ಹಕ್ಕಿಗಳಿಂಚರ
ತಂಪಾಗಿರಲು ನಭದಲಿ ದಿನಕರ
ಸ್ವರ್ಗದ ಸಿರಿಯಿದು ಸೌಖ್ಯದ ಆಗರ
ಹಸಿರಿನ ತೋರಣ ಎಲ್ಲೆಡೆ ಹಾಸಿದೆ
ನಡುವಲಿ ಬೋಳು ಮರ ಮೈಚಾಚಿದೆ
ಚೈತ್ರದ ಬೆಡಗಿಗೆ ಈ ಮನ ಹಾಡಿದೆ
ಬಗೆ ಬಗೆ ಬಣ್ಣದಿ ಹೂವರಳಿರಲು
ಕಚಕುಳಿಯಿಡಲು ಪಸರಿದ ಲತೆಗಳು
ನಗು ಚೆಲ್ಲುತಿವೆ ಚಿಗುರಿದ ಮರಗಳು
ಮಿಲನದ ಸಡಗರ ಪ್ರಕೃತಿ ತುಂಬ
ಜೀವಸಂಕುಲಕೆ ಸೃಷ್ಟಿಯ ರಸಕುಂಭ
ಪ್ರೇಮಿಯ ಹೃದಯದಿ ಅಮಿತಾನಂದದ ಹಬ್ಬ
——————————————————————————–
ಶಾಲಿನಿ ಕೆಮ್ಮಣ್ಣು