
ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ

ಮಧು ವಸ್ತ್ರದ
ಶ್ರಾವಣದ ಸಂಭ್ರಮ..


ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡು ಹತ್ತು ಹಲವಾರು ಸಂಪ್ರದಾಯಗಳನ್ನು ಸಂಭ್ರಮದಿಂದ ಆಚರಿಸುತ್ತ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಮಹಾರಾಷ್ಟ್ರದ
ಎರಡು ಹಬ್ಬಗಳಾಚರಣೆಗಳು ಇಂದು ನಿಮ್ಮ ಮುಂದಿವೆ..
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಸಮೀಪ ಚಂದೋಲಿ ಅಭಯಾರಣ್ಯದ ಮಡಿಲಲ್ಲಿ ಹರಡಿರುವ ಬತ್ತೀಸ್ ಶಿರಾಳ ಗ್ರಾಮದ ಇತಿಹಾಸದೆಡೆಗೆ ಒಮ್ಮೆ
ಕಣ್ಣು ಹಾಯಿಸೋಣ ಬನ್ನಿ..

ಬತ್ತೀಸ್ ಶಿರಾಳ ಗ್ರಾಮದಲ್ಲಿ ಪೂರ್ವಕಾಲದಿಂದಲೂ ಅತ್ಯಂತ ವಿಶಿಷ್ಟವಾಗಿ ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿತ್ತು..
“ನಾಗಭೂಮಿ” ಎಂದೇ ಪ್ರಸಿದ್ಧವಾದ ಈ ಗ್ರಾಮದಲ್ಲಿನ ಜನರಿಗೆಲ್ಲ ನಾಗದೇವತೆಯೆಂದರೆ ಅತ್ಯಂತ ಪ್ರೀತಿ ಮತ್ತು ಭಕ್ತಿ..
ನಾಗಪಂಚಮಿ ಹಬ್ಬಕ್ಕಿಂತ ಒಂದು ತಿಂಗಳು ಮೊದಲಿನಿಂದಲೇ ಇಲ್ಲಿಯ ಜನ ಹಾವುಗಳನ್ನು ಹಿಡಿಯಲು ಆರಂಭಿಸುತ್ತಿದ್ದರು.
೧೦-೧೫ ಯುವಕರ ಗುಂಪು ಹಾವುಗಳನ್ನು ಹಿಡಿಯಲು ಉದ್ದನೆಯ ಕೋಲು ಮತ್ತು ಮಡಕೆ,ಚೀಲಗಳೊಂದಿಗೆ ಅರಣ್ಯದೆಡೆಗೆ ದಂಡಯಾತ್ರೆ ನಡೆಸುತ್ತಿತ್ತು. ಕಾಡಿನಲ್ಲಿ ಸಿಕ್ಕಿದ ಎಲ್ಲ ಪ್ರಕಾರದ ಹಾವುಗಳನ್ನು ಹಿಡಿದು ತಂದು ನಾಗಪಂಚಮಿ ಹಬ್ಬ ಮುಗಿಯುವವರೆಗೆ ಸರಿಯಾಗಿ ಆರೈಕೆ ಮಾಡಲಾಗುತ್ತಿತ್ತು.
ಅವುಗಳಿಗೆ ದಿನ ನಿತ್ಯ ಉತ್ತಮ ಆತಿಥ್ಯ ನೀಡಿ ಪೋಷಿಸಲಾಗುತ್ತಿತ್ತು.ದಿನಗಟ್ಟಲೆ ಹಾವುಗಳು ಊರಿನ ಮನೆ ಮನೆಗಳಲ್ಲಿ ಹರಿದಾಡಿದರೂ ಯಾವುದೇ ರೀತಿಯ ಅಹಿತಕರ ದುರ್ಘಟನೆ ಇಲ್ಲಿ ನಡೆದಿಲ್ಲವೆಂಬುದು ಸೋಜಿಗದ ಸಂಗತಿ..ನಂತರ ನಾಗಪಂಚಮಿಯ ದಿನದಂದು, ವಿಧಿವತ್ತಾಗಿ ಗ್ರಾಮ ದೇವತೆಯನ್ನು ಪೂಜಿಸಿದ ನಂತರ ಕಾಡಿನಿಂದ ಹಿಡಿದು ತಂದ ೧೦೦ ರಿಂದ ೧೫೦ ನಾಗಗಳನ್ನು ಪೂಜಿಸಿ ಗ್ರಾಮದ ತುಂಬ ಸಂಭ್ರಮದಿಂದ ಮೆರವಣಿಗೆ ಮಾಡಲಾಗುತ್ತಿತ್ತು ನಂತರ ಈ ಹಾವುಗಳೊಡನೆ ವಿವಿಧ ಪ್ರಕಾರದ ಆಟಗಳನ್ನು, ಸ್ಪರ್ಧೆಗಳನ್ನು ಆಯೋಜಿಸಿ ಪ್ರದರ್ಶಿಸಲಾಗುತ್ತಿತ್ತು..ಮರುದಿನ ಎಲ್ಲ ಹಾವುಗಳನ್ನು ಕಾಡಿನಲ್ಲಿ ಬಿಟ್ಟು ಬರಲಾಗುತ್ತಿತ್ತು. ನಾಗಪಂಚಮಿಯ ಈ ವಿಶೇಷ ಆಟ, ಪ್ರದರ್ಶನಗಳನ್ನು ವೀಕ್ಷಿಸಲು ರಾಜ್ಯದ ಎಲ್ಲೆಡೆಯಿಂದ ಸಾವಿರಾರು ನಾಗರಿಕರು ಆಗಮಿಸುತ್ತಿದ್ದರು.ಆದರೆ ಈ ರೀತಿಯ ಆಟದಿಂದ, ಹಾವುಗಳಿಗೆ ಆಗುವ ತೊಂದರೆಗಳನ್ನು ಕಂಡು ವನ್ಯಜೀವಿ ಪ್ರೇಮಿ ಸಂಘಗಳು, ಸರ್ಪಸ್ನೇಹಿಗಳು ನೇರವಾಗಿ ಮುಂಬಯಿ ಹೈಕೋರ್ಟ್‌ಗೆ ದೂರು ನೀಡಿ ಈ ಪದ್ಧತಿಯನ್ನು ಬಂದ್ ಮಾಡಿಸಿದರು. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸಡಿಯಲ್ಲಿ 2012ರಲ್ಲಿ ನ್ಯಾಯಾಲಯವು ಹಾವು ಹಿಡಿಯುವುದು, ಕ್ರೀಡೆಗಳು, ಸ್ಪರ್ಧೆಗಳು ಮೆರವಣಿಗೆ,ಪ್ರದರ್ಶನಗಳನ್ನು ನಿಷೇಧಿಸಲಾಯಿತು..
ಅಂದಿನಿಂದ ಅಲ್ಲಿಯ ಜನ ಜೀವಂತ ಹಾವುಗಳ ಒಡನಾಟವನ್ನು ಕಡಿಮೆ ಮಾಡಿದರೂ ತಮ್ಮ ಸಂಪ್ರದಾಯವನ್ನು ಮಾತ್ರ ಬಿಟ್ಟಿಲ್ಲ. ಈಗ ನಾಗ ದೇವತೆಯ ವಿಗ್ರಹದೊಂದಿಗೆ ತಮ್ಮ ಪೂಜೆ, ಪುನಸ್ಕಾರ ಮೆರವಣಿಗೆಗಳನ್ನು ಏರ್ಪಡಿಸಿ, ಈ ಹಬ್ಬವನ್ನು ಸಂತೋಷ ಸಂಭ್ರಮಗಳಿಂದ ಜಾತ್ರೆಯಂತೆ ಆಚರಿಸುತ್ತಾರೆ..
ರು ಬುಟ್ಟಿಯಲ್ಲಿ ಹಾವನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು..ಜನರು ಅವರಿಗೆ ೫೧, ೧೦೧, ರೂಪಾಯಿಗಳನ್ನು ಕೊಟ್ಟು ನಾಗನಿಗೆ ಹಾಲು ಎರೆಯುತ್ತಿದ್ದರು..ಹೀಗೆ ಎರೆದ ಹಾಲು ಆ ಹಾವುಗಳ ಶ್ವಾಸಕೋಶದಲ್ಲಿ ಸೇರಿದ ಪರಿಣಾಮವಾಗಿ ಉಸಿರು ಕಟ್ಟಿ ಎಷ್ಟೋ ಹಾವುಗಳು ಸಾವಿಗೀಡಾಗುತ್ತಿದ್ದವು..ನಾಗಪಂಚಮಿಯ ನಂತರ ರಸ್ತೆಯ ಅಕ್ಕಪಕ್ಕದಲ್ಲಿ, ಗಟಾರಗಳಲ್ಲಿ ನೂರಾರು ಸತ್ತ ಹಾವುಗಳು ಕಾಣಸಿಗುತ್ತಿದ್ದವು..ನಿಷೇಧದ ನಂತರ ಇತ್ತೀಚಿನ ವರ್ಷಗಳಲ್ಲಿ ಮುಂಬಯಿನ ಜನ ಉತ್ತಮ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದಾರೆ.. ನಾಗಪಂಚಮಿಯಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮಂದಿರದ ನಾಗದೇವತೆಯ ವಿಗ್ರಹಕ್ಕೆ ಹಾಲನೆರೆದ ನಂತರ ಮಂದಿರದ ಹೊರಗೆ ಕುಳಿತ ಭಿಕ್ಷುಕರಿಗೆ, ಬಡ ಮಕ್ಕಳಿಗೆ ಹಾಲು ಹಣ್ಣುಗಳನ್ನು ದಾನ ಮಾಡುತ್ತಾರೆ. ನಮ್ಮ ಸಂಸ್ಕೃತಿ ಪರಂಪರೆಗಳನ್ನು ಬಿಡದಂತೆ ಪಾಲಿಸುತ್ತಲೇ ಅದರಲ್ಲಿ ಹೊಸತನವನ್ನು ಒಗ್ಗೂಡಿಸಿ ಸತ್ಕಾರ್ಯಗಳನೆಸಗುವ ಮುಂಬಯಿಕರರ ಈ ಮನೋಭಾವ ನಿಜಕ್ಕೂ ಶ್ಲಾಘನೀಯವಾಗಿದೆ..
ಭಾಗ..೨

ಶ್ರಾವಣ ಮಾಸದಲ್ಲಿ ಬರುವ ಎಲ್ಲ ಮಂಗಳವಾರದಂದು ಅತ್ಯಂತ ಶ್ರದ್ಧೆ ಭಕ್ತಿಗಳಿಂದ ಮಂಗಳಗೌರಿ ಪೂಜೆಯನ್ನು ಮಾಡಲಾಗುತ್ತದೆ. ಕೊನೆಯ ಮಂಗಳವಾರದಂದು ಉದ್ಯಾಪನೆ ಮಾಡುತ್ತಾರೆ.ನವ ವಿವಾಹಿತೆಯರು ಸರ್ವಾಲಂಕಾರಭೂಷಿತರಾಗಿ ಷೋಡಶೋಪಚಾರಗಳಿಂದ ಶಿವ ಮತ್ತು ಗೌರಿಯರನ್ನು ಪೂಜಿಸುತ್ತಾರೆ. ಶಿವ-ಗೌರಿಯರು ತ್ರಿಲೋಕಗಳಲ್ಲಿನ ಆದರ್ಶ ದಂಪತಿಗಳಾಗಿದ್ದು, ಅತ್ಯುತ್ತಮ ಗೃಹಸ್ಥಾಶ್ರಮದ ಸಂಕೇತವಾಗಿರುವರು. ಈ ಶಿವ-ಶಕ್ತಿ ತತ್ವವನ್ನು ಆರಾಧಿಸಿ ಪೂಜೆ ಮಾಡುವುದರಿಂದ ತಮ್ಮ ಜೀವನ ಕಲ್ಯಾಣವಾಗುವುದು
ಎಂಬ ಸದ್ಭಾವನೆಯಿಂದ,
ಹದಿನಾರು ದೀಪಗಳನ್ನು ಹಚ್ಚಿ ಪೂಜಿಸುತ್ತಾರೆ. ಮಂಗಳಗೌರಿ ಕಥಾ ವಾಚನೆಯ ನಂತರ ಬಂದ ಮುತ್ತೈದೆಯರಿಗೆ ಬಾಗಿನ ಅರ್ಪಿಸಿ, ಆರತಿ ಮಾಡಿ, ಉಡುಗೊರೆ ನೀಡಿ, ಊಟೋಪಚಾರಗಳಿಂದ ಸತ್ಕರಿಸುತ್ತಾರೆ..ಪ್ರತಿ ಮುತ್ತೈದೆಯನ್ನು ದೇವಿ ಮಂಗಳಗೌರಿಯ ಪ್ರತಿರೂಪವೆಂದೇ ಭಾವಿಸಿ ಪ್ರೀತ್ಯಾದರಗಳಿಂದ ಉಡಿ ತುಂಬುತ್ತಾರೆ..


ರಾತ್ರಿ ಎರಡನೆ ಪೂಜೆ ಮತ್ತು ಆರತಿಯ ನಂತರ ಎಲ್ಲ ಹೆಂಗೆಳೆಯರು ಒಂದೆಡೆ ಸೇರಿ ಹಾಡು, ನೃತ್ಯಗಳೊಡನೆ ಮಂಗಳಗೌರಿಯ ವಿಶೇಷ ಆಟಗಳನ್ನು ಆಡುತ್ತ ಆನಂದದಿಂದ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ..
ಜಾಗರಣೆ ಮಾಡುವಾಗ ಇಲ್ಲಿನ ಹೆಂಗೆಳೆಯರು ಆಡುವ “ಮಂಗಳಗೌರಿ ಖೇಳ್” ಹೆಸರಿನ ಈ ಸಾಂಪ್ರದಾಯಿಕ ಆಟಗಳು ಅತ್ಯಂತ ಮನರಂಜಕವಾಗಿರುತ್ತವೆ.
ಅತ್ತಿಗೆ ನಾದಿನಿಯರನ್ನು,ಅತ್ತೆ ಸೊಸೆಯರನ್ನು ಛೇಡಿಸುವ, ಕಾಡಿಸುವ, ಲಘುಹಾಸ್ಯದಿಂದ ತುಂಬಿದ ಈ ಗೀತ ಕುಣಿತದಲ್ಲಿ ಅಡುಗೆ ಮನೆಯಲ್ಲಿನ ನಿತ್ಯ ಬಳಕೆಯ ಲಟ್ಟಣಿಗೆ, ಮೊರ, ತಂಬಿಗೆ, ಬಿಂದಿಗೆ, ತಟ್ಟೆ, ಲೋಟ ಮುಂತಾದ ವಸ್ತುಗಳನ್ನು ಬಳಸುತ್ತಾರೆ..ಫುಗಡಿ ಎಂಬ ಆಟ ಒಂದರಲ್ಲೇ ೧೮-೨೦ ಪ್ರಕಾರಗಳಿವೆ..ಝಿಮ್ಮಾ, ನಾಚ್ ಗ ಘುಮಾ,ಕುರ್ಚಿ ಕ ಮಿರ್ಚಿ, ಆಳುಂಕಿ- ಸಾಳುಂಕಿ, ಈ ರೀತಿಯ ಹೆಸರಿನ ಹತ್ತು ಹಲವಾರು ಆಟಗಳನ್ನು ಆಡುತ್ತಾರೆ..
ಮಹಾರಾಷ್ಟ್ರದ ಸಾಂಪ್ರದಾಯಿಕ ಒಂಭತ್ತು ಮೊಳದ ಸೀರೆ, ಮೂಗಿನಲ್ಲಿ ಹೊಳೆವ ನತ್ತು, ಧರಿಸಿ ಸಾಲಂಕೃತರಾಗಿ ಮಂಗಳಗೌರಿ ಹಬ್ಬದ ಆಟಗಳನ್ನು ಆಚರಿಸುವ ಈ ಮಹಿಳೆಯರ ಸಂಭ್ರಮವನ್ನು ನೋಡಲು ಬಹಳ ಸಂತೋಷ ಎನಿಸುತ್ತದೆ..

ಮುಂಬಯಿ ಮಹಾನಗರದಲ್ಲಿ ಈ ಸಂಪ್ರದಾಯಕ್ಕೆ ಸ್ವಲ್ಪ ಹೊಸರೂಪ ನೀಡಿ ಅತ್ಯಂತ ಉತ್ಸಾಹ ಉಲ್ಲಾಸಗಳಿಂದ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ..ಈಸಂಪ್ರದಾಯ ಮುಂಬಯಿನ ಯುವ ಪೀಳಿಗೆಯನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿದೆ.ಸೊಸೈಟಿಯ ಕ್ಲಬ್ ಹೌಸ್ ಗಳಲ್ಲಿ, ನಾಟ್ಯಗೃಹಗಳಲ್ಲಿ, ನಗರದ ಪ್ರತಿಷ್ಠಿತ ಆಡಿಟೋರಿಯಂಗಳಲ್ಲಿ ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ..ಮರಾಠಿ ಚಿತ್ರರಂಗದ ಸುಪ್ರಸಿದ್ಧ ನಾಯಕಿಯರು, ಟಿವಿ ತಾರೆಯರು ಈ ಮಂಗಳಗೌರಿ ಆಟದಲ್ಲಿ ಭಾಗವಹಿಸುತ್ತಾರೆ.ಇದರಿಂದ ಯುವಪೀಳಿಗೆಯ ಹೆಣ್ಣು ಮಕ್ಕಳಲ್ಲಿಯೂ ತಮ್ಮ ಧರ್ಮ, ಸಾಂಪ್ರದಾಯಿಕ ಆಚರಣೆಗಳಲ್ಲಿ ಉತ್ಸಾಹ ಮೂಡುವಂತಾಗಿದೆ..

ಮಧು ವಸ್ತ್ರದ

ಅತ್ಯುತ್ತಮ