ಕಾವ್ಯ ಸಂಗಾತಿ
ಶಮಾ. ಜಮಾದಾರ
ಕನಸುಗಳ ದಾಗೀಣ ತೊಟ್ಟವಳು

ಸೃಷ್ಟಿಕರ್ತನಾ ಅದ್ಭುತ ಸೃಷ್ಟಿ
ತನ್ನದೇ ರೂಪದ ಪ್ರತಿಕೃತಿ
ಅವ್ವಾ, ನೀಡಿದೆ ನನಗೆ ಜೀವಾ
ನನ್ನ ನೋಡಿ ಮರೆತೆ ನೀ ನೋವಾ
ಅಮವಾಸೆ ಕತ್ತಲ ಪತ್ತಲವನುಟ್ಟು
ಹುಣ್ಣಿಮೆಯ ಹೂವಮುಡಿದೆ .
ಅಳುವನುಂಡು ಅಗುಳ ಉಣಿಸಿದೆ
ಕೈ ನೇವರಿಸಿ ದುಃಖ ತಣಿಸಿದೆ
ಹೆಜ್ಜೆ ಹೆಜ್ಜೆಗೂ ಕೆಂಡವನೆ ತುಳಿದರೂ
ನನ್ನ ಹಾದಿಗೆ ಪ್ರೀತಿಯ ಹೂ ಹಾಸಿದೆ.
ಕಷ್ಟಗಳನೇ ಹಾಸಿ ಹೊದ್ದೆ
ನನ್ನ ನಗುವಲಿ ನಲಿವ ಹುಡುಕಿದೆ
ಎದೆಯ ಗೂಡಲಿ ಬಚ್ಚಿಟ್ಟು ಬೆಳಿಸಿ
ನಡುರಾತ್ರಿಯಲು ಅಮ್ಮ ಎನಲು ಓ..ಎಂದೆ.
ನನ್ನ ಕನಸುಗಳೇ ದಾಗೀಣವೆಂದೆ
ನನಸಾಗಿಸಲು ನೀ ಹೋರಾಡಿದೆ
ನಿನ್ನ ಬಯಕೆಗಳನು ಗಡಿಪಾರು ಮಾಡಿ
ನನ್ನ ಗೆಲುವನೆ ಬದುಕಾಗಿಸಿ ಬಾಳಿದೆ.
ಅದೆಷ್ಟೋ ರಾತ್ರಿಗಳ ನಿದ್ದೆ ಮರೆತೆ
ಅರೆಹೊಟ್ಟೆಯ ಧಗೆಗೆ ನೀರು ಕುಡಿದೆ
ರಾತ್ರಿ ನೀರವತೆಗೆ ನಿಟ್ಟುಸಿರ ಕೊಟ್ಟೆ
ಎರಡು ಬಣ್ಣದ ಸೀರೆ ಒಂದು ಮಾಡಿ ಉಟ್ಟೆ.
ಒಲೆಯ ಜ್ವಾಲೆಗೆ ನೋಟ ನೆಟ್ಟೆ
ಆ ಪಂದ್ಯದಲಿ ನೀನೇ ಗೆದ್ದು ಬಿಟ್ಟೆ
ಅವ್ವ, ನಿನ್ನ ಮೊಗ ಕೆಂಡಕಿಂತಲೂ ಕೆಂಪಗೆ
ನಿನ್ನ ಉಸಿರಲಿವೆ ಸಾವಿರ ಸಂಪಿಗೆ.
ನೀನುಣದ ಸುಖ ನನಗೆ ಬಡಿಸಿದೆ
ಬಂದ ಸುಖವನು ನನ್ನ ಮಡಿಲಿಗೆಂದೆ
ಅವ್ವ, ನೀ ಕೇವಲ ನನಗಾಗಿ ಬದುಕಿದೆ
ಗಂಧದಂತೆ ಜೀವವನು ನನಗಾಗಿ ತೇಯ್ದೆ.
ತಲೆದಿಂಬಿನ ಕಲೆಯದು ಕಥೆ ಹೇಳಿದೆ
ನಿಶಬ್ದವಾಗಿ ಅತ್ತ ವ್ಯಥ್ಯೆಯನು ತೋರುತಿದೆ
ನನ್ನ ಜನುಮವೆ ಮರುಹುಟ್ಟು ನಿನಗೆ
ನನ್ನ ಭವಿಷ್ಯವೇ ವರ್ತಮಾನ ನಿನಗೆ.
ಶಮಾ. ಜಮಾದಾರ.
