ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ಹೆಸರನ್ನು ಯಾರು ಕೇಳಿಲ್ಲ.. ಆತ ಮರ್ಸಿಡಿಸ್ ಬರ್ಚಾಳನ್ನು ಭೇಟಿಯಾದಾಗ ಆತನಿಗೆ ಕೇವಲ ಹದಿಮೂರು ವರ್ಷ. ಆಕೆಯನ್ನು ನೋಡಿದ ಕ್ಷಣ ಆತನಿಗೆ ತೋಚಿದ್ದು ಈಕೆ ತನ್ನ ಜೀವಿತದ ಕೊನೆಯವರೆಗೂ ಜೊತೆಯಾಗಿರುತ್ತಾಳೆ ಎಂದು. ಯಾವುದೇ ಹಿಂಜರಿಕೆ ಇಲ್ಲದೆ ಶಾಲೆಯ ಆವರಣದಲ್ಲಿಯೇ ಮಾರ್ಕ್ವೆಜ್ ಆಕೆಗೆ ಸ್ನೇಹದ, ಪ್ರೀತಿಯ ಪ್ರಸ್ತಾಪವನ್ನು ಇಟ್ಟ.

 ನಸುನಕ್ಕ ಮರ್ಸಿಡಿಸ್ ಆತನ ಆಹ್ವಾನವನ್ನು ತಿರಸ್ಕರಿಸಲಿಲ್ಲ… ಆದರೆ ಅವಸರದಿಂದ ಒಪ್ಪಿಕೊಳ್ಳಲೂ ಇಲ್ಲ. ಚಿಕ್ಕವಳಾದರೂ ಆಕೆಗೆ ಅರಿವಿತ್ತು ಕಾಲ ತಮ್ಮ ಪ್ರೀತಿಯನ್ನು ಪರೀಕ್ಷಿಸುತ್ತದೆ ಮತ್ತು   ಸಾಬೀತುಪಡಿಸುತ್ತದೆ ಎಂದು.

 ಮುಂದೆ 18 ವರ್ಷಗಳ ನಂತರ ತನ್ನ 31ನೇ ವಯಸ್ಸಿನಲ್ಲಿ ತನ್ನ ಹದಿಹರೆಯದ ಪ್ರೀತಿಯನ್ನು ಅರಿತಿದ್ದ ಮಾರ್ಕ್ ಅದನ್ನು ನಿಜವಾಗಿಸಲು ಮತ್ತೊಮ್ಮೆ ಮರ್ಸಿಡಿಸ್ ಳ ಸಾಂಗತ್ಯಕ್ಕಾಗಿ ಕೋರಿದ ಈ ಬಾರಿ ಮರ್ಸಿಡಿಸ್ ಒಪ್ಪಿಗೆ ನೀಡಿದಳು. ತಾವಿಬ್ಬರೂ ಬದುಕಿನ ಕೊನೆಯವರೆಗೂ ಒಟ್ಟಿಗೆ ಸಾಗುತ್ತೇವೆ ಎಂದು ಆಕೆ ಬಲವಾಗಿ ನಂಬಿದ್ದಳು.

ಅವರಿಬ್ಬರೂ ಮದುವೆಯಾದರು. ಅವರ ಪ್ರೀತಿಯ ದ್ಯೋತಕವಾಗಿ ಎರಡು ಗಂಡು ಮಕ್ಕಳಾದರು. ತಾರುಣ್ಯದ ಪ್ರೀತಿ ಗಟ್ಟಿಗೊಂಡಿತು. ಸಮಾಧಾನ ಶಾಂತಿಯ ಸಮಯದಲ್ಲಿ ಪ್ರೀತಿಯು ಪೋಷಿಸಲ್ಪಡುವುದಿಲ್ಲ.

ಮಾರ್ಕ್ವೆಜ್ ಬರವಣಿಗೆಯನ್ನು ಆರಂಭಿಸಿದಾಗ ಆತನ ಕುಟುಂಬಕ್ಕೆ ಹಣದ ಅವಶ್ಯಕತೆ ತುಸು ಹೆಚ್ಛೇ ಇತ್ತು. ಗೃಹ ಕೃತ್ಯದ ಖರ್ಚು ವೆಚ್ಚಗಳನ್ನು ನೀಗಿಸಲು ಹಣ ಇಲ್ಲದೆ ಹೋದಾಗಲೂ ಕೂಡ ಆತ ಸಂಪೂರ್ಣವಾಗಿ ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳಬಯಸಿದ. ಇದಕ್ಕೆ ಮರ್ಸಿಡಿಸಳ ಸಂಪೂರ್ಣ ಸಹಮತವಿತ್ತು.

 ಅತ್ಯಂತ ಪ್ರೀತಿ ಮತ್ತು ಸಮಾಧಾನದಿಂದ ಪತಿಯನ್ನು ಪ್ರೋತ್ಸಾಹಿಸಿದ ಆಕೆ ಮನೆಯ ಎಲ್ಲಾ ಜವಾಬ್ದಾರಿಗಳಿಗೆ ಹೆಗಲು ಕೊಟ್ಟಳು. ಕೆಲವೊಮ್ಮೆ ಆಹಾರ ತಯಾರಿಸಲು ಬೇಕಾಗುವ ದಿನಸಿ ಪದಾರ್ಥಗಳನ್ನು ಖರೀದಿಸಲು ಕೂಡ ಅವರ ಬಳಿ ಹಣ ಇರುತ್ತಿರಲಿಲ್ಲ. ಹಸಿವಿನಿಂದ ಬಳಲುವ ಸುಧೀರ್ಘ ರಾತ್ರಿಗಳಲ್ಲಿಯೂ ಕೂಡ ಆಕೆಯಲ್ಲಿ ಇದ್ದ ಒಂದೇ ಒಂದು ನಂಬಿಕೆ ಆತ ಬರೆಯುವ ಪುಸ್ತಕಗಳು ಮುಂದೊಂದು ದಿನ ತಮ್ಮ ಬದುಕಿನ ಗತಿಯನ್ನು ಬದಲಿಸಬಹುದು ಎಂದು.

 ತೀರ ತೊಂದರೆ ಆದಾಗ ಮಾರ್ಕ ತನ್ನ ಕಾರನ್ನು ಕೂಡ ಮಾರಿ ಮನೆಯ ಖರ್ಚಿಗೆ ಹಣ ನೀಡಿದ ಮತ್ತು ತಾನು ಬರವಣಿಗೆಯಲ್ಲಿ ತೊಡಗಿಕೊಂಡ. 18 ತಿಂಗಳುಗಳ ನಂತರ ಆತನ ಬರವಣಿಗೆಯ ಕಾರ್ಯ ಮುಗಿಯಿತೇನೋ ನಿಜ, ಆದರೆ ಬರವಣಿಗೆಯ ಹಸ್ತ ಪ್ರತಿಯನ್ನು ಪ್ರಕಟಣೆಗೆ ಕಳುಹಿಸಲು ಕೂಡ ಆತನ ಬಳಿ ಹಣ ಇರಲಿಲ್ಲ.

 ಎದೆಗುಂದದ ಮರ್ಸಿಡಿಸ್ ಮನೆಯಲ್ಲಿನ ತನ್ನ ಹೇರ್ ಡ್ರೈಯರ್ ಸಮೇತ ಮಾರಬಹುದಾದ ಎಲ್ಲಾ ವಸ್ತುಗಳನ್ನು ಕೊಟ್ಟು ಬಂದ ಹಣವನ್ನು ಮಾರ್ಕ್ ನ ಕೈಗಿಟ್ಟಳು.

ಬೇರೆಯವರಿರಲಿ ಸ್ವತಹ ಮಾರ್ಕಗೆ ಕೂಡ ತನ್ನ ಪುಸ್ತಕ ಮಾರಾಟವಾಗುತ್ತದೆ ಎಂಬ ಯಾವ ಭರವಸೆ ಇಲ್ಲದ ಸಮಯದಲ್ಲಿ ಆಕೆ ಮಾರ್ಕ್ ನ ಮೇಲೆ ಅತೀವ ನಂಬಿಕೆಯನ್ನು ಇಟ್ಟಿದ್ದಳು ಮತ್ತು ಅವರು ತಮ್ಮೆಲ್ಲ ಭರವಸೆಗಳನ್ನು ಆ ಹಸ್ತಪ್ರತಿಯ ಮೇಲೆ ಇಟ್ಟು ಅದನ್ನು ಪ್ರಕಾಶಕರಿಗೆ ಕಳುಹಿಸಿ ಖಾಲಿ ಕೈಗಳಲ್ಲಿ ಕಾಯುತ್ತಾ ಕುಳಿತರು.

ಯಶಸ್ಸು ಹಲವಾರು ಅದ್ಭುತಗಳನ್ನು ಹೊತ್ತು ತರುತ್ತದೆ. “ಹಂಡ್ರೆಡ್ ಇಯರ್ಸ್ ಆಫ್ ಲೋನ್ಲಿನೆಸ್” ಎಂಬ ಹೆಸರನ್ನು ಹೊತ್ತ ಆ ಕೃತಿ ತಕ್ಷಣವೇ ಪ್ರಕಾಶಕರಿಂದ ಗುರುತಿಸಲ್ಪಟ್ಟು ಪುಸ್ತಕ ಪ್ರಕಟಣೆಯಾಗಿ ಜಾಗತಿಕವಾಗಿ ಅತ್ಯದ್ಭುತ ಪುಸ್ತಕ ಎಂಬ ಹಿರಿಮೆಯನ್ನು ಗಳಿಸಿತು.
 ಮಾರ್ಕ್ವೆಜ್ ಹಲವಾರು ಪ್ರಶಸ್ತಿಗಳನ್ನು ಗಳಿಸಿದ… ಸಾಹಿತ್ಯಕ್ಕಾಗಿ ದೊರೆಯುವ ನೊಬೆಲ್ ಪ್ರಶಸ್ತಿ ಕೂಡ ಆತನ ಮಡಿಲಿಗೆ ಬಂದು ಬಿತ್ತು.

 ಆದರೆ ಈ ಎಲ್ಲಾ ಪ್ರಶಸ್ತಿಗಳಿಗಿಂತ ಮುಖ್ಯವಾದುದನ್ನು ಮಾರ್ಕ್ ಗಳಿಸಿದ್ದ, ಅದು ಆತನ ಪತ್ನಿಯ ಅಚಲವಾದ ನಂಬಿಕೆ. ಆತನ ಕುರಿತು ಇಡೀ ಜಗತ್ತಿಗೆ ಗೊತ್ತೇ ಇರದ
ಕಾಲದಲ್ಲಿಯೂ ಕೂಡ ತನ್ನೆಲ್ಲವನ್ನು ಆತನ ಒಂದು ಉನ್ನತಿಗಾಗಿ ಯಾವುದೇ ಆಣೆ ಪ್ರಮಾಣಗಳಿಲ್ಲದೆ ಆಕೆ ಸಮರ್ಪಿಸಿದ್ದಳು.

 ಮರ್ಸಿಡಿಸ್ ಓರ್ವ ಅಪಾರ ಜಾಣ್ಮೆಯ ಲೇಖಕನ ಪತ್ನಿಯಾಗಿ ಇರಲಿಲ್ಲ ಆತನ ಯಶಸ್ವಿ ಉಡ್ಡಯನಕ್ಕೆ ಬೇಕಾದ ರೆಕ್ಕೆ ಆಗಿದ್ದಳು ಆಕೆ. ತನ್ನ ಬದುಕಿನಲ್ಲಿ ಆತ ಯಶಸ್ವಿಯಾಗಲು ಬೇಕಾದ ಧೈರ್ಯ, ಸಾಹಸಗಳನ್ನು ಖುದ್ದು ತನ್ನಿಂದಲೇ ಪಡೆಯಲಾಗದ ಸ್ಥಿತಿಯಲ್ಲಿ ಆಕೆ ಆತನ ಆಧಾರ ಸ್ತಂಭವಾಗಿದ್ದಳು.

 ಪ್ರೀತಿ ಎಂಬುದು ಮೊದಲ ನೋಟದಲ್ಲಿ ಹುಟ್ಟಿ ಎರಡನೇ ಭೇಟಿಯಲ್ಲಿ ಜೊತೆಗೂಡಿ ಮೂರನೇ ಭೇಟಿಯಲ್ಲಿ ಮುಕ್ತಾಯವಾಗುವಂತದ್ದಲ್ಲ. ಅದೊಂದು ನಿರಂತರ ಪಯಣ.
 ಕೇವಲ ಸುಖದಲ್ಲಿ ಸಂತಸದಲ್ಲಿ ಯಶಸ್ಸಿನ ಪಾಲುಗಾರಿಕೆ ಪ್ರೀತಿಯಲ್ಲ… ಕಷ್ಟದಲ್ಲಿ, ಅತ್ಯಂತ ನೋವಿನ ಘಳಿಗೆಗಳಲ್ಲಿ, ಅಪಮಾನದ ಕಡು ಬಿಸಿಲಿನಲ್ಲಿ ಜೀವ ಭಾವಗಳಿಗೆ ತಂಪನ್ನೆರೆಯುವ ಅದ್ಭುತ ಸಂಜೀವಿನಿ ಪ್ರೀತಿ.

 ತಂಪಾದ ನೆರಳಿನಲ್ಲಿ ಅದು ಅಗೋಚರವಾದರೂ ಕಡುಬಿಸಿಲಿನಲ್ಲಿ ನಮ್ಮನ್ನು ಬೆಂಬಿಡದೆ ಜೊತೆಗಿರುವ ಸಂಗಾತಿಯ ಪ್ರೀತಿ ಎಲ್ಲರಿಗೂ ದಕ್ಕುವುದಿಲ್ಲ.ಒಂದೆರಡು ಪ್ರೀತಿಯ ಮಾತುಗಳು, ಗ್ರೀಟಿಂಗ್ ಕಾರ್ಡ್ ಗಳು ಎಮೋಜಿಗಳು ಒಳ್ಳೊಳ್ಳೆಯ ಗಿಫ್ಟ್ ಗಳು ತೋರಿಕೆಯ ಪ್ರೀತಿಯಾದರೆ, ಪ್ರೀತಿಯ ನಿಜವಾದ ಪರಿಭಾಷೆ ನಾವು ಬಯಸದೆ ನೀಡುವ ಸಾಂಗತ್ಯದಲ್ಲಿ, ಕೇಳದೆ ನೀಡುವ ಸಾಂತ್ವನದಲ್ಲಿ,ಅನಿವಾರ್ಯವಾದರೂ ಮಾಡುವ ತ್ಯಾಗದಲ್ಲಿ ಕಾಣಬಹುದು.

 ಎಲ್ಲವೂ ಸರಿ ಇದ್ದಾಗ ಪ್ರೀತಿ ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಬಹುದು, ಆದರೆ ಏನೂ ಸರಿ ಇಲ್ಲದಿದ್ದಾಗಲೂ ಕೂಡ ತನ್ನ ಗಟ್ಟಿತನವನ್ನು ಉಳಿಸಿಕೊಳ್ಳುವ ಶಕ್ತಿಯನ್ನು ತೋರುವುದೇ ಪ್ರೀತಿ.ಅಂತಹ ಪ್ರೀತಿ ನಮ್ಮ ನಿಮ್ಮೆಲ್ಲರಿಗೂ ದೊರೆಯಲಿ ಎಂಬ ಆಶಯದೊಂದಿಗೆ


Leave a Reply

Back To Top