ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಧ್ರುವತಾರೆ

ಅವಳು ಮೌನದಲ್ಲಿಯೇ ಮಾತಾಗಿ
ಗುಡಿಯ ಕಟ್ಟಲು ಹೊರಟವಳು
ತನ್ನವರ ಹಿತಕ್ಕಾಗಿ
ಎದೆ ಒಲವ ಬಸಿದು
ತೋಳ ಬಲ ಛಲದಿ
ಗುಡಿಯ ಕಟ್ಟಲು ಬಲ್ಲವಳು

ನೂರಾರು ಬೇಗೆಗಳಿಗೆ
ಇಳಿಸಂಜೆ ದೀಪಹೊತ್ತಿಸಿ
ಬಸವಳಿದ ಮನವ ತಣಿಸುತ
ತುಟಿಯಲ್ಲಿ ಬಿರಿದ ಹೂ
ಮುಗುಳ್ನಗೆಯ ಸೂಸುತ
ತನ್ನ ಗುರಿಯತ್ತ ನಡೆದವಳು

ಅಣಕಿಸುವರ ಎದುರು
ಎದೆ ಉಬ್ಬಿಸಿ ನಿಂತು
ದಿಟ್ಟಹೆಜ್ಜೆಯನ್ನಿಟ್ಟು
ಭಾರತೀಯ ನಾರಿಶಕ್ತಿಯ
ಉಸಿರ ಹಸಿರಾಗಿಸಿ ಹೆಸರಾಗಲು

ದುಷ್ಟರ ಎದುರು ಶಿಷ್ಟರಂತೆ
ಶಿರಬಗ್ಗಿಸಿ ತಪ್ಪು ತಿದ್ದುವಳು
ಬಾಗದ ಮನಕೆ
ರಣಚಂಡಿಯಾಗಿ
ಕಣ್ಣ ಜ್ವಾಲೆಯಲಿ ಭಸ್ಮಮಾಡುವ
ಕೆಚ್ಚೆದೆಯ ನಾರಿಯಾದಳು

ಕೈ ಹಿಡಿದು ಗುರುವಾದಳು
ತನ್ನೆದೆಯ ಹಸುರು ಬಳ್ಳಿಯಲ್ಲಿ
ಅರಳಿದಕ್ಷರ ತೋರಣಕಟ್ಟಿ
ಅಂಧಕಾರದ ಮನಕೆ
ಜ್ಞಾನ ದೀವಿಗೆಯಾದಳು

ಕ್ರೀಡೆ ಸಾಹಿತ್ಯ ಬಲ್ಲವಳು
ವಿಜ್ಞಾನ ತಂತ್ರಜ್ಞಾನ
ಆಚಾರ ವಿಚಾರ ಹಿಡಿದು
ಜಗಸುತ್ತಿ
ನಭದಲ್ಲಿ ಕಾಲಿಟ್ಟು
ವಿಶ್ವಕೆ ಧ್ರುವತಾರೆಯಾದಳು

ದೇಶ ಸೇವೆಗೆ ನಿಂತಾಗ
ಚೇತನ್ಮುಖಿಯಾಗಿ
ರೌದ್ರತೆಯ ಕಿರೀಟ ತೊಟ್ಟು
ಶತ್ರುಪಡೆ ಬಡಿಯಲು
ತನ್ನುಸಿರ ಪಣಕಿಟ್ಟು
ಭಾರತಾಂಬೆಯ ಕೀರ್ತಿ ಪತಾಕೆ
ಎತ್ತಿ ಹಿಡಿಯುವ ವೀರನಾರಿಯಾದಳು…

ಆದರೂ ಹೆಣಗುತಿಹಳು
ತನ್ನ ಉಳಿವ ಉಳಿಸಲು
ನೂರಾರು ಬೇನೆ ಬಚ್ಚಿಟ್ಟು
ತನ್ನ ಹಿರಿಮೆಯ ಬೆಳಸಲು


Leave a Reply

Back To Top