
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ

“ಅಂಗವಿಕಾರ ಸಂಗವ ಮರೆದು ಲಿಂಗವನೊಡಗೂಡುತಿಪ್ಪರ ತೋರಾ ಎನಗೆ
ಕಾಮವಿಕಾರ ಕತ್ತಲೆಯಳಿದು
ಭಕ್ತಿಪ್ರಾಣವಾಗಿಪ್ಪರ ತೋರಾ ಎನಗೆ,ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ
ಸದ್ಭಕ್ತರ ತೋರ ಎನಗೆ ಚೆನ್ನ ಮಲ್ಲಿಕಾರ್ಜುನ
12 ನೇ ಶತಮಾನದ ಶ್ರೇಷ್ಠ ವೀರ ವೀರಾಗಿನಿ ಅಕ್ಕಮಹಾದೇವಿಯರು,
ಅಂಗವೇ ಲಿಂಗವಾಗಿ . ಅರಿವೇ ಜ್ಞಾನ ಮಾರ್ಗವಾಗಿ ,ಅರಿವೇ ಲಿಂಗ ವಾಗಿ ,ಅರಿವೇ ಚೆನ್ನಮಲ್ಲಿಕಾರ್ಜುನ ಪತಿ ಎಂದು, ಅರಿತು ನಡೆದ ಸತಿ ಶರಣೆ, ಅಕ್ಕನವರ ಲಿಂಗಾಂಗ ಸಾಮರಸ್ಯದ ಅನುಭಾವದ ಅಮೃತದ ಸವಿಯನ್ನು ನಾವಿಲ್ಲಿ ಸವಿಯಬಹುದು .
“ಅಂಗವಿಕಾರ ಸಂಗವ ಮರೆದು ಲಿಂಗವನೊಡಗೂಡುತಿಪ್ಪರ ತೋರಾ ಎನಗೆ
ಅಕ್ಕಮಹಾದೇವಿಯವರು ಅತ್ಯಂತ ಸುಂದರವಾಗಿದ್ದರು. ಈ ಸೌಂದರ್ಯವೇ ! ಕೌಶಿಕ ಮಹಾರಾಜರ ಕಣ್ಣನ್ನು ಕುಕ್ಕಿದ್ದು, ವಲ್ಲದ ಗಂಡನೊಂದಿಗೆ, ಶರತ್ತಿಗೆ ಬದ್ದರಾಗಿ ಸೆರಗಕ್ಕೆ ಮೂರು ಗಂಟು ಹಾಕಿದ ಕೌಶಿಕ ಮಹಾರಾಜ .ಅಕ್ಕನವರ
ಸೌಂದರ್ಯಕ್ಕೆ ಮಾರು ಹೋಗಿ, ಹಾಕಿದ ಶರತ್ತುಗಳನ್ನು ಮೀರಿ ನಡೆದವನನ್ನು ದಿಕ್ಕರಿಸಿ ನಡೆದ, ಅಕ್ಕನವರ ಅಂತರಂಗದ ಆತ್ಮ ಕುದಿ ಎಸರಿನಲಿ ಬೆಂದು ಹೋಗಿತ್ತು .
ಹೇ ಚೆನ್ನಮಲ್ಲಿಕಾರ್ಜುನಾ, ಈ ಅಂಗವಿಕಾರದ ಸಂಗ ಹರಿದು, ನಿನ್ನಡಿಗೆ ಬರುತ್ತಿರುವೆ .ಲಿಂಗವೇ ನೀನಾದ ಪರಿ ನಿಜಕ್ಕೂ ಸೋಜಿಗ.
ಇಂಥಹ ಲಿಂಗ ಸಂಗಿಗಳ ಸಂಗಜೀವಿಗಳ ಮೊಗವು ತೋರಿಸು ಎನ್ನುವರು ಅಕ್ಕ.
ಕಾಮವಿಕಾರ ಕತ್ತಲೆಯಳಿದು
ಭಕ್ತಿಪ್ರಾಣವಾಗಿಪ್ಪರ ತೋರಾ ಎನಗೆ,
ಕಾಮವೆಂಬ ಕತ್ತಲೆ ಕಳಿದು ನಿನ್ನಡಿಗೆ ಬರುತ್ತಿರುವೆ ಪರಮಾತ್ಮ. ಭಕ್ತಿಯೇ ಪ್ರಾಣ. ಈ ಪ್ರಾಣ ಜೀವವೇ! ನೀನಾದೆ ನನಗಿಂದು ಚೆನ್ನಮಲ್ಲಿಕಾರ್ಜುನಾ .
ಅರಿತಿರುವೆ ಕಾಮವಿಕಾರವ ತೊಡೆದು ಮೋಹ ವಿಕಾರವ ತೊರೆದು ನಗೆಯು ಹೊಗೆಯಾಗಿ ,ಕತ್ತಲೆಯ ಗೂಡಿನಲಿ ಒಂಟಿಯಾದೆ ಪರಮಾತ್ಮ.
ಈ ಕಾಮವೆಂಬ ಕತ್ತಲೆಯನ್ನು ದೂಡಿ ಬೆಳಕು ತೋರಿ ನಡೆಸು ಎನ್ನೊಡೆಯ ಎನ್ನುವರು ಅಕ್ಕ.
ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ ಸಧ್ಬಕ್ತರ ತೋರ ಎನಗೆ ಚೆನ್ನಮಲ್ಲಿಕಾರ್ಜುನ
ಈ ನನ್ನ ಕಾಯ ,ಮಾತು ಮತ್ತು ,ಮನಸ್ಸು ತ್ರಿಕರಣ ಶುದ್ಧವಾಗಿ ಎದ್ದು ಬಿದ್ದು ಗೆದ್ದು ಬಂದಿರುವೆ ನಿನ್ನ ಅಡಿಗೆ .ಭಕ್ತೆಯಂತಾದರೂ ನಂಬು ಯುಕ್ತಿಯಿಂದ ಹರಸೆನ್ನನು ದೇವಾ. ನೆರೆ ನಂಬಿ ಬಂದಿರುವೆ ನೆರಳಂತೆ ನೆರವಾಗು ಪರಮಾತ್ಮ.
ನನ್ನಂತೆ ನಾನಾಗಿರುವೆ. ನನ್ನಂತೆ ನಾನಾದ ಬಗೆ ತೋರಿ ನಡೆಸು .
ಕಾಯದಲಿ ಕಾಯಕ ಅರಿತು, ಮಾತಿನಲಿ ಮದುರತೆ ಅರಿತು ,ಮನಸ್ಸಿನಲಿ ಮನವ ಬೆರೆತು, ಅರಿತು ನಡೆಯುವವರ ಸದ್ಭಕ್ತರ ಮೊಗವ ತೋರಿ ನಡೆಸು ಚೆನ್ನಮಲ್ಲಿಕಾರ್ಜುನಾ
ಡಾ ಸಾವಿತ್ರಿ ಕಮಲಾಪೂರ
