ʼಹಾಡಿದೊಡೆ ಎನ್ನೊಡೆಯನ ಹಾಡುವೆ’ ಅಂಜಲೀನಾ ಗ್ರೇಗರಿ ಧಾರವಾಡ ಅವರ ಸಣ್ಣಕಥೆ

ಅಂದು ಬೆಳಿಗ್ಗೆ ನನ್ನ ವಿಭಾಗದ ಕೆಲಸದ ನಿಮಿತ್ತ ದಾವಣಗೆರೆಗೆ ಹೋದವಳು ಮಧ್ಯಾಹ್ನದ ಹಾಗೆ ಕೆಲಸ ಮುಗಿಸಿ, ಅದೇ ದಿನ ಸಂಜೆ ದಾರವಾಡಕ್ಕೆ ಹಿಂದಿರುಗಿ ಬರಲು ಸಿದ್ಧಗಂಗಾ ಎಕ್ಸಪ್ರೆಸ್‌ ರೈಲುಗಾಡಿಗೆ ಕಾಯುತ್ತ ಕುಳಿತಿದ್ದೆ.  ಸುಮಾರು ಮುಕ್ಕಾಲು ತಾಸು ತಡವಾಗಿ ಬಂದ ರೈಲನ್ನು ಇತರ ಪ್ರಯಾಣಿಕರ ಜೊತೆಗೆ ಅವಸರದಿಂದಲೇ ಏರಿ  ಕಿಟಕಿಯ ಪಕ್ಕ ಸಿಕ್ಕ ಆಸನದಲ್ಲಿ ಕುಳಿತುಕೊಂಡೆ. ಅದು ಜನರಲ್‌ ಬೋಗಿಯಾಗಿತ್ತು. ಹೊರಗೆ ನೋಡುತ್ತಕಿಟಕಿಯಿಂದ ಬೀಸಿ ಬರುವ ಗಾಳಿಯನ್ನು ಆನಂದಿಸತೊಡಗಿದೆ.  ಜೊತೆಗೆ ಆಕಸ್ಮಿಕವಾಗಿ ಸುರಿಯುತ್ತಿದ್ದ ಮಳೆಯ ತುಂತುರು ಹನಿಗಳ ಸ್ಪರ್ಶ  ಮನಸ್ಸನ್ನು ತಣಿಸುತ್ತಿತ್ತು. ನನ್ನಷ್ಟಕ್ಕೇ ಮೌನವಾಗಿ ಪ್ರಕೃತಿಯ ಆನಂದ ಸವಿಯುತ್ತಿದ್ದವಳಿಗೆ ರೈಲು ಹರಿಹರ ರೇಲ್ವೆ ನಿಲ್ದಾಣಕ್ಕೆ ಬಂದು ತಲುಪಿದ್ದು ಗೊತ್ತೇ ಆಗಿರಲಿಲ್ಲ.  “ಚಾಯ್‌ ! ಚಾಯ್‌! “ ಎಂಬ ಧ್ವನಿಗೆ ಎಚ್ಚೆತ್ತವಳಂತೆ ತಿರುಗಿ  ನೋಡಿದೆ. ಕೆಲವರು ಚಾಯ್ ಕುಡಿಯುತ್ತಿದ್ದರು. ನನ್ನ ಎಡ ಪಕ್ಕದಲ್ಲಿ ಸುಮಾರು ಮೊವತ್ತು ಮೊವತ್ತೈದರ ವಯೋಮಾನದ ತರುಣ ಕುಳಿತಿದ್ದ. ಆತ  ಬಹುಶ: ಹರಿಹರದಲ್ಲಿ ರೈಲು ಹತ್ತಿರಬೇಕು. ಮುಖದಲ್ಲಿ ಏನೋ ದುಗುಡವಿದ್ದಂತಿತ್ತು.  ಆತ ಕೊಳೆಯಾದ ಬಟ್ಟೆ ಧರಿಸಿದ್ದರೂ ನೋಡಲು ಆಕಷ೯ಕನಾಗಿದ್ದ. ತನ್ನಷ್ಟಕ್ಕೆ ತಾನೆ ಏನೋ ಮೆಲ್ಲನೆ ಬಡಬಡಿಸುತ್ತಿದ್ದ. ಆತನ ಬಳಿ ಹಸಿರು ಬಣ್ಣದ ಬಟ್ಟೆಯಲ್ಲಿ ಕಟ್ಟಿದ್ದ  ಒಂದು ಚಿಕ್ಕ ಮೂಟೆಯಿತ್ತು.ಆ ಮೂಟೆಗೆ ಇನ್ನೊಂದು ಕೇಸರಿ ಬಣ್ಣದ ಶಾಲನ್ನು ಗಂಟು ಹಾಕಿ ಮೂಟೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದ್ದ. ನನಗೆ ಕುತೂಹಲ ಉಂಟಾಗಿ ಆ ಮೂಟೆಯನ್ನು ಗಮನಿಸಿದೆ.  ಮೂಟೆಯ  ಪಕ್ಕದಿಂದ ಬಿಳಿಯ ಪಂಚೆ ಮತ್ತು  ಅಂಗಿ ತರಹ  ಕಂಡು ಬಂತ್ತು.  ಆದರೆ ಅವನಲ್ಲಿದ್ದ ಆ ಮೂಟೆ ಮತ್ತು ಅವನ ರೂಪಕ್ಕೆ ಏನೇನೂ ಹೊಂದುತ್ತಿರಲಿಲ್ಲ.
ರೈಲು ಆಗಲೇ ಹರಿಹರ ನಿಲ್ದಾಣ ಬಿಟ್ಟು ವೇಗ ಹೆಚ್ಚಿಸಿಕೊಂಡಾಗಿತ್ತು.  ನಾನು ಮತ್ತೆ ಕಿಟಕಿಯಿಂದ ಹೊರಗೆ ನೋಡತೊಡಗಿದೆ. ಹೊರಗೆ ಮಳೆ ನಿಂತಿತ್ತು.
ಈ ಹುಡುಗ ಯಾಕೆ ಹೀಗೆ ? ಎಂದು ಮನದಲ್ಲಿ ಪ್ರಶ್ನೆ ಮೂಡತೊಡಗಿತು. ಮೆಲ್ಲನೆ ತಿರುಗಿ ನೋಡಿದೆ.  ಕಣ್ಣು ಮುಚ್ಚಿ ಕುಳಿತಂತೆ ಕಂಡು ಬಂದ.  ನಾನು ನೋಡುವುದನ್ನು ಗಮನಿಸಿದಂತೆ ನನ್ನತ್ತ ನೋಟ ಬೀರಿದ.  ಕುತೂಹಲ ತಡೆಯಲಾಗದೆ,  ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಿಯಾ? ಎಂದು ಕೇಳಿಯೇ ಬಿಟ್ಟೆ. ಅದಕ್ಕೆ ಆತ ತುಸು ತಡೆದು, ಹುಬ್ಬಳ್ಳಿಗೆ ಎಂದ. ನಾನು ಹೌದಾ ಎಂಬಂತೆ ನೋಡಿದೆ. ಆತ, ಮುಂದುವರಿಸಿ,   “ಮಮತಾ ಅಕ್ಕಳನ್ನು ಭೇಟಿ ಮಾಡಲು KMC ಆಸ್ಪತ್ರೆ ಹೋಗುತ್ತಿದ್ದೇನೆ” ಎಂದ ಅವನ ಮಾತು ಕೇಳಿ ಖುಷಿ ಆಯಿತು. ನಿನ್ನ ಅಕ್ಕ ಅಲ್ಲಿ ಏನು ಕೆಲಸ ಮಾಡುತ್ತಾರೆ? ಎಂದು ಮರು ಪ್ರಶ್ನೆ ಮಾಡಿದೆ. ಅದಕ್ಕೆ ಆತ, “ನಸ್‌೯ ಕೆಲಸ” ಎಂದ. ಅವನನ್ನು ಇನ್ನಷ್ಟು ತಿಳಿದುಕೊಳ್ಳುವ ಎಂದು, ನಿನ್ನ ಹೆಸರೇನಪ್ಪ? ಎಂದು ಕೇಳಿದೆ.  ಆತ ಏನೂ ಉತ್ತರಿಸದೆ ಸುಮ್ಮನೆ ಕುಳಿತಿದ್ದ. ಅವನ ಮುಖದಲ್ಲಿ ಏನೋ ವಿಷಾದದ ಛಾಯೆ.  ಏನಾದರೂ ತೊಂದರೆಯಲ್ಲಿ ಇರುವೆಯಾ? ಅಂತ ಕೇಳಿದೆ.  “ ಇಲ್ಲ” ಅಂದವ,  “ಸಧ್ಯಕ್ಕೆ  ಕೋಟ್ರೇಶ ನನ್ನ ಹೆಸರು” ಎಂದ. ನನಗಿದು ಆಶ್ಚರ್ಯವುಂಟು ಮಾಡಿತು. ಅಂದರೆ…. ? ಎಂದು ಮರು ಪ್ರಶ್ನಿಸಿದೆ. ಅದಕ್ಕೆ ಆತ, “ ನನ್ನ ಮೂಲ ಹೆಸರು ಕೃಷ್ಣ . ಆದರೆ ಈಗ ಕೊಟ್ರೇಶ, ನಾಳೆ ಏನೋ ಗೊತ್ತಿಲ್ಲ “ ಎಂದ. ಇದು ನನಗೆ ಸ್ವಲ್ಪ ವಿಚಿತ್ರ ಅನ್ನಿಸಿತು.  ಬೇಜಾರು ಮಾಡಿಕೊಳ್ಳಬೇಡ. ನಿನ್ನ ಮಾತು ನನಗೆ ಅರ್ಥ ಆಗಲಿಲ್ಲ. ಯಾಕೆ ಹೀಗೆ ? ಎಂದು ಕೇಳಿದೆ. “ ನನ್ನ ಕಥೆ ಏನ್‌ ಕೇಳುತ್ತೀ ಬಿಡು ಅಕ್ಕ” ಎಂದ.  ಅವನು ಅಕ್ಕ ಅಂತ ಸಂಬೋಧಿಸಿದ್ದು ಖುಷಿ ಕೊಟ್ಟಿತು. ಪರವಾಗಿಲ್ಲ ಏನಾಯಿತು ಹೇಳು ಎಂದೆ. ನನಗೂ ಕೂಡ ಅವನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿಯಾಗಿತ್ತು.
ಕೃಷ್ಣ ಹೇಳಿದ ಪ್ರಕಾರ, ಆತನ ಊರು ಕರಾವಳಿಯ ಒಂದು ಪುಟ್ಟ ಹಳ್ಳಿ. ಆತನ ತಂದೆ ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ತಾಯಿ ಹೊಲಗದ್ದೆಯ ಕೆಲಸ ಮಾಡುತ್ತ ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಆತನಿಗೆ ಒಂದು ತಂಗಿ ಇದ್ದಾಳೆ. ಅವಳಿಗೀಗಾಲೇ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ. ಕೊಟ್ರೇಶ್‌ ಉಪ್‌೯ ಕೃಷ್ಣ ಕಂಪ್ಯೂಟರ್‌ ಸೈನ್ಸ್‌ ಎರಡು ವರ್ಷಗಳ ಕಾಲ ಓದಿದ್ದಾನೆ.   ಮುಂದೆ ಅವನು ಹೇಳಿದ ನೋವಿನ ನೈಜ ಕಥೆಯಿಂದ ನನ್ನ ಕಣ್ಣಲ್ಲಿ ಹನಿಗೂಡಿತು.
ಆತನ ಮನಸ್ಸು ಮೃದು, ಮೈಯೂ ಸಹ ! ಅವನಿಗರಿವಿಲ್ಲದೆ ಅವನ ಬುದ್ಧಿಭಾವಗಳು ಹೊಯ್ದಾಡುತ್ತಿರುತ್ತವೆ. ಯಾಕೋ ಅಳುಕು, ಅಧೈರ್ಯದಿಂದ ಯಾರಲ್ಲೂ ಹೇಳಿಕೊಳ್ಳದೆ ಚಡಪಡಿಸುತ್ತಿದ್ದ ದಿನಗಳು. ಎಂಜಿನಿಯರಿಂಗ್‌ ಎರಡನೇ ವರುಷದಲ್ಲಿ ಇದ್ದಾಗ ಒಂದು ನಸುಗತ್ತಲ ಸಮಯ ಯಾರಿಗೂ ಕಾಣದ ಗಿಡಗಳ ಮಧ್ಯೆ ಮೂರು ಜನ ಕಾಲೇಜಿನ ಸ್ನೇಹಿತರೇ ಅವನ ಮೇಲೆ ಅತ್ಯಾಚಾರ ಮಾಡ್ತಾರೆ.  ಆತ ಊಹಿಸಲೂ ಸಾಧ್ಯವಾಗದ ಆಘಾತವುಂಟಾಯಿತು. ಅಸಹ್ಯ ನೋವಿನಿಂದ ಆತ ಮನೆಗೆ ಹೋದಾಗ, ಅವನಿಗೆ ನೋವಿಗೆ ಕರುಣೆಯಿಂದ ಸ್ಪಂದಿಸುವ ಬದಲು ಮನೆಯವರ ನಿಂದನೆ ಇನ್ನೊಂದು ಬಗೆಯ ಹಿಂಸೆವುಂಟು ಮಾಡಿತ್ತು. ಆತನ ತಂದೆಯೇ, “  ನೀನು ಗಂಡಾಗಿದ್ದರೂ ಹೆಣ್ಣು ಹುಡುಗಿಯ ತರಹ ವತಿ೯ಸುತ್ತೀಯಾ. ಅದಕ್ಕೆ ನಿನಗೆ ಹೀಗೆ ಮಾಡಿದ್ದಾರೆ” ಎಂದು ಮತ್ತಷ್ಟು ಅವಮಾನಿಸುತ್ತಾನೆ. ತಾಯಿಯ ಕರುಳು ಚುರ್‌ ಅಂದರೂ ಏನು ತಾನೆ ಮಾಡಿಯಾಳು? ತಂಗಿ ಅಣ್ಣನ ಸ್ಥಿತಿ ನೋಡಿ ಕನಿಕರಿಸಿ ಅವನನ್ನು ದವಾಖಾನೆಗೆ ತಾಯಿ ಕರೆದುಕೊಂಡು ಹೋಗುತ್ತಾಳೆ.  ತಂದೆ ತಾಯಿಯರು ಈ ಸುದ್ದಿ ಹೊರಗೆ ಬಾರದ ಹಾಗೆ ನೋಡಿಕೊಳ್ಳುತ್ತಾರೆ.
ಕೃಷ್ಣನ ಮನಸ್ಸಿನ ಮೇಲೆ ಈ ಘಟನೆ  ಆಗಾಧವಾದ ಪರಿಣಾಮ ಬೀರುತ್ತದೆ. ಕಾಲೇಜು ಅಂದರೆ ಭಯದಿಂದ ನಡಗುತ್ತಾನೆ. ಅವನಿಗೆ ಮನೆಯಿಂದ ಹೊರಗೆ ಹೋಗಲೂ ಅಸಾಧ್ಯ ಎನಿಸುತ್ತದೆ.  ಅವನನ್ನು ಅರ್ಥ ಮಾಡಿಕೊಳ್ಳುವವರಿಲ್ಲದೆ ಹತಾಶನಾಗಿ ಒಂದು ದಿನ ಯಾರಿಗೂ ಹೇಳದೆಯೇ ಬರಿಗೈಯಲ್ಲಿ ಮನೆಬಿಟ್ಟು ದೂರದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. ಪಾಲಕರಿಗೆ ತಮ್ಮ ಮಗ ಇರುವ ಸುಳಿ ಸಿಕ್ಕಿದ್ದರೂ ಅವನನ್ನು ಮನವೊಲಿಸಿ ಮನೆಗೆ ವಾಪಸ್‌ ಕರೆಯಿಸಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಮಂದಿರದಲ್ಲಿ ಸಣ್ಣ ಪುಟ್ಟ ಎಲ್ಲ ಕೆಲಸಗಳೊಂದಿಗೆ ನಿದಾನ ಆಫೀಸಿನ ಕಂಪ್ಯೂಟರ್‌ ಕೆಲಸ ಕೂಡ ಮಾಡತೊಡಗುತ್ತಾನೆ.  ಪ್ರಸಾದ ರೂಪದಲ್ಲಿ ಸಿಗುವ ಊಟ, ಪಡಸಾಲೆಯ ಮೂಲೆಯೊಂದರಲ್ಲಿ ಮಲಗಿ ರಾತ್ರಿ ಕಳೆದು ಬೆಳಿಗ್ಗೆ ನಸುಕಿನಲ್ಲೇ ಏಳುವುದು ಅಭ್ಯಾಸವಾಯಿತು.  ದೇವಸ್ಥಾನದ  ಆಡಳಿತ ಮಂಡಳಿಯವರಿಗೆ ಈತನ ಕಾಯಕ ಶೃದ್ಧೆಯಿಂದ  ವಿಶ್ವಾಸ ಮೂಡತೊಡಗಿತು.  ಪೂಜಾಪಾಠ, ಅರ್ಚನೆ, ವಿಧಿವಿಧಾನಗಳನ್ನು ಮಗ್ನನಾಗಿ ಗಮನಿಸುವನು.   ಹಲವು ಸ್ತ್ರೋತ್ರ, ಮಂತ್ರಗಳು ಕಂಠಪಾಠವಾಗಿ ಶುಶ್ರಾವ್ಯವಾಗಿ ಹಾಡವುದನ್ನು ಗಮನಿಸಿದ ಹಿರಿಯ ಅರ್ಚಕರು ಶಹಬ್ಭಾಸಿಯನ್ನೂ ಕೊಟ್ಟಿದ್ದರು. ಒಮ್ಮೊಮ್ಮೆ ಸಹಾಯಕ ಅಚ೯ಕರು ಇಲ್ಲದಾಗ ಅವರ ಕೆಲಸಗಳನ್ನೂ ತುಟಿ ಬಿಚ್ಚದೆ ಹೆಚ್ಚುವರಿಯಾಗಿ ಮಾಡುತ್ತಾನೆ.   ಕೆಲಸವೆಲ್ಲ ಮುಗಿಸಿ ತಾಸುಗಟ್ಟಲೆ ಧ್ಯಾನಸ್ತನಾಗಿ ಬಿಡುವುದೂ ಇದೆ. ಹೀಗೆ ಹೊಸ ವಾತಾವರಣ, ಜೀವನ ವಿಧಾನದಲ್ಲಿ ಹಳೇ ನೋವನ್ನು ಆದಷ್ಟು ಮರೆಯಲು ಪ್ರಯತ್ನಿಸುವನು.
ಒಂದು ದಿನ ಆಡಳಿತ ಮಂಡಳಿಗೆ ದೇವಸ್ಥಾನದಲ್ಲಿ  ಭಕ್ತರು ನೀಡುವ  ಕಾಣಿಕೆಯ ರೂಪದ ಚಿನ್ನಾಭರಣದ ಹುಂಡಿಯಿಂದ  ಕಳುವು ಆಗುತ್ತಿರುವ ಸಂಶಯ ಉಂಟಾಗುತ್ತದೆ.  ನಿಖರವಾಗಿ ಯಾರಂತ ಗೊತ್ತಾಗದಿದ್ದರೂ ಅನುಮಾನಕ್ಕೆ ಗುರಿಯಾದದ್ದು ಈ ಕೃಷ್ಣ.  ಸದಾ ಮೌನವಾಗಿ ತನ್ನಷ್ಟಕ್ಕೆ ತಾನಿರುವ  ಕೃಷ್ಣ ತಪ್ಪು ಅಪಾದನೆಗೆ ಗುರಿಯಾದರೂ ಯಾರೂ ಆತನ ನೆರವಾಗಿ ಬರುವುದಿಲ್ಲ. ಪೋಲಿಸರಿಗೆ ನೀಡಿದ ದೂರಿನ ಪ್ರಕಾರ ಆತನನ್ನು ಜೈಲಿಗೆ ಹಾಕುತ್ತಾರೆ.  ಅಸಹಾಯಕ ಕೃಷ್ಣನನ್ನು ಬಿಡಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ.  ಯಕಶ್ಚಿತ ಅನಾಥ  ಕೈದಿಯಾಗಿ ಜೈಲಿನಲ್ಲಿ  ಬಂಧಿಯಾಗಿರುತ್ತಾನೆ. ಇಷ್ಟು ಸಾಲದೆಂಬಂತೆ,  ಅಲ್ಲಿಯೂ ಕೂಡ ಈತನ ಮೇಲೆ ಇತರ ಕೈದಿಗಳಿಂದ ಮತ್ತೊಬ್ಬ ಜೈಲಿನ ಸಿಬ್ಬಂದಿಯಿಂದಲೇ ಲೈಂಗಿಕ ಅತ್ಯಾಚಾರಗಳು ನಡೆಯುತ್ತವೆ.
ಚಿನ್ನಾಭರಣಗಳು ಕಳವಾದುದರ ಬಗ್ಗೆ ಮತ್ತು   ಕೃಷ್ಣನೇ  ಕದ್ದದ್ದು ಎಂಬ ದೂರಿಗೆ ಯಾವುದೇ ನಿಖರ ಪುರಾವೆ ಮತ್ತು ಸಾಕ್ಷಿ ಇಲ್ಲವಾದ್ದರಿಂದ, ಕೃಷ್ಣ ಮೂರು ವರುಷಗಳ ನಂತರ ಜೈಲಿನಿಂದ ಬಿಡುಗಡೆಯಾಗುತ್ತಾನೆ.  ಜೈಲಿನಲ್ಲಿ ಕೃಷ್ಣ ಸಣಕಲು ಕಡ್ಡಿಯಂತಾಗಿದ್ದ.  ಜೈಲಿನಿಂದ ಹೊರಗೆ ಬಂದದ್ದೇನೊ ಹೌದು. ಆದರೆ ಹೋಗೋದು ಎಲ್ಲಿಗೆ ?  ಅವನ ಮನೆಯವರಿಗೆ ಇವನ ವಿಷಯ ತಿಳಿದಿದೆಯೋ ಇಲ್ಲವೋ ಅದೂ ಗೊತ್ತಿಲ್ಲ.   ಮರಳಿ ಮನೆಗಾಗಲಿ ಆ ದೇವಸ್ಥಾನಕ್ಕಾಗಲಿ ಹೋಗಲು ಮನಸ್ಸಾಗದೇ ಆತ ಸಿಕ್ಕ ದಾರಿಯಲ್ಲಿ ನಡೆಯುತ್ತ ಕೇರಳವನ್ನು ತಲುಪುತ್ತಾನೆ. ನದಿ, ಹಳ್ಳ ಕಂಡಲ್ಲಿ ತಂಗಿ ಸ್ನಾನಾದಿ ಕಾರ್ಯ ಮಾಡುತ್ತಿದ್ದ.   ಬಾಯಾರಿಕೆ ತೀರಿಸಿಕೊಳ್ಳಲು ಬಸ್ಸು, ರೈಲು ನಿಲ್ದಾಣ ಹುಡುಕುತ್ತಿದ್ದ.  ಹಸಿವಿಗೆ ಪ್ರಸಾದದ ಊಟ ಲಭ್ಯವಿರುವ ದೇವಸ್ಥಾನ, ಚರ್ಚು, ಮಸಿದಿಗಳ ಸರದಿಯಲ್ಲಿ ನಿಲ್ಲುತ್ತಿದ್ದ. ಒಮ್ಮೊಮ್ಮೆ  ಹಸಿವನ್ನು ಮರೆತವನಂತೆ ಏನೂ ತಿನ್ನದೆಯೂ ಕಳೆಯುತ್ತಿದ್ದ. ಒಂದೇ ಕಡೆ ಹೆಚ್ಚು ಸಮಯ ನಿಲ್ಲದೆ ಅಲೆಮಾರಿತನಕ್ಕೆ ಒಗ್ಗಿಕೊಂಡ.  ಹೀಗೆ ಅಲೆಯುತ್ತ ತಮಿಳುನಾಡನ್ನು ಸೇರುತ್ತಾನೆ.  ಅಲ್ಲಿನ ಅನೇಕ ಗುಡಿ, ಮಂದಿರಗಳನ್ನು ಸುತ್ತುತ್ತಾನೆ.  ಸರಿಕಂಡ ಮಂದಿರಗಳಲ್ಲಿ ಸ್ವಲ್ಪ ಸಮಯ ಸ್ವಯಂ ಸೇವೆಯನ್ನು ಮಾಡುತ್ತ ಮತ್ತೆ ಅಲ್ಲಿಂದ ಇನ್ನೊಂದು ಕಡೆಗೆ ಪಯಣಿಸುತ್ತಿದ್ದ.  ಹೀಗೆ  ಗೊತ್ತು ಗುರಿ ಇಲ್ಲದೆ ಮನಸ್ಸಿಗೆ ತೋಚಿದ ಊರುಗಳಿಗೆ ಆ ಒಂದು ಮೂಟೆಯನ್ನು ಎತ್ತಿಕೊಂಡು ನಡೆಯುತ್ತಾನೆ.  ಜೈಲಿನಿಂದ ಹೊರಬಂದ ಮೇಲೆ ಕೇಳಿದವರಿಗೆ ಮಂಜು, ಹನುಮ, ಕೊಟ್ರೇಶ,  ಒಂದೊಂದು ಕಡೆ ಒಂದೊಂದು ಮನಸ್ಸಿಗೆ ತೋಚಿದ ಹೆಸರನ್ನು ಹೇಳುತ್ತಿದ್ದ.  ಕೃಷ್ಣ ನಿದಾನವಾಗಿ ಕಥೆ ಬಿಚ್ಚಿಡುತ್ತಿದ್ದಂತೆ ಕೇಳುತ್ತಿದ್ದವಳ ಮನಸ್ಸು ಮುದುಡಿ ಹೋಗಿತ್ತು. ಛೇಛೇ ! ಎಳೆ ತರುಣನ ಎಂಥಾ ಗೋಳಿನ ಬದುಕಪ್ಪಾ !
ಆ ಮೂಟೆಯಲ್ಲಿ ಏನಿದೆ? ಆದಷ್ಟು ಕನಿಕರ ದನಿಯಲ್ಲಿ ನಾ ಕೇಳಿದೆ. ಮೆಲ್ಲನೆ ಮೂಟೆಯನ್ನು ಬಿಚ್ಚುತ್ತಾನೆ.  ಅದರಲ್ಲಿ ಬಿಳಿಯ ಬಟ್ಟೆಯಲ್ಲಿ ಸುತ್ತಿದ ಬುದ್ಧನ ಮೂತಿ೯, ಕ್ರೈಸ್ತ ಧಮ೯ದವರು ಉಪಯೋಗಿಸುವ ಜಪಮಾಲೆ, ಬಸವಣ್ಣನವರ ಒಂದು ಫೋಟೋ, ಒಂದು ಪುಟ್ಟ ಮೂಟೆಯಲ್ಲಿ ಕಕಿ೯, ಐದಾರು ರುದ್ರಾಕ್ಷಿಗಳು, ಒಡೆದು ಎರಡು ಭಾಗವಾದ  ಕನ್ನಡಕ,  ಪುಟ್ಟ ಕನ್ನಡಿ, ಹಲ್ಲುಜ್ಜಲು ಬ್ರಶ್‌, ಪುಟ್ಟ ಕೋಲ್ಗೇಟ್‌ ಪೇಸ್ಟ ಟ್ಯೂಬ್. ಒಂದು ಪ್ಯಾಂಟ್‌, ಬಿಳಿ ಪಂಚೆ, ಎರಡು ಅಂಗಿ, ಸಣ್ಣ ಚಡ್ಡಿ.  ಹಾಗೇ ಮೌನವಾಗಿ ಮೂಟೆಯನ್ನು ಕಟ್ಟುತ್ತಾನೆ.
ನಿನ್ನ ಮನೆಗೆ ಹೋಗಬಹುದಿತ್ತಲ್ಲ ನೀನು. ಅವರು ಬದಲಾಗಿದ್ದಿರಲೂಬಹುದಲ್ಲ ಎಂದೆ.  ಆತ,  “ *ಹಾಡಿದೊಡೆ ಎನ್ನೋಡೆಯನ ಹಾಡುವೆ , ಬೇಡಿದೊಡೆ ಎನ್ನೊಡೆಯನ ಬೇಡುವೆ” ಎಂದು ವಚನದ ಸಾಲನ್ನು ಹೇಳಿದ. ನಿನ್ನ ಅಕ್ಕನ ಮನೆ ಕಡೆ ಹೋಗಬಹುದಲ್ಲ? ಆಕೆ ಖಂಡಿತಾ ನಿನಗೊಂದು ಆಸರೆ ನೀಡುತ್ತಿದ್ದಳೇನೊ ಎಂದು ನಾನು ಹೇಳಿದಾಗ, “ ಹೌದು ನನ್ನ ಅಕ್ಕ ಬಹಳ ಒಳ್ಳೆಯವಳು. ಆದರೆ ಅವಳಿಗೆ ನನ್ನಿಂದ ಯಾವ ತೊಂದರೆಯೂ ಆಗಬಾರದು.  ಹೀಗೇ ಪ್ರಯಾಣ ಮಾಡುವಾಗ ಒಮ್ಮೆ ಮಮತಾ ಎಂಬಾಕೆಯ ಪರಿಚಯವಾಯಿತು.  ಅವಳು ನಸ್‌೯ ಆಗಿ KMC ಹುಬ್ಬಳ್ಳಿಯಲ್ಲಿ ಕೆಲಸ ಮಾಡುವುದಾಗಿ ಹೇಳಿರುತ್ತಾಳೆ. ಆಕೆಯಲ್ಲಿ ನಾನು ಅಕ್ಕನ ಪ್ರೀತಿ ಕಂಡೆ. ಆದಕಾರಣ ಒಮ್ಮೆ ಸಿಕ್ಕಿ ಮಾತಾಡಬೇಕೆಂಬ ಇಚ್ಛೆ ಉಂಟಾಗಿ ಅತ್ತ ಹೊರಟಿರುವೆ. ಅಲ್ಲದೆ ಅಲ್ಲೇ ಹತ್ತಿರ ಇರುವ ಸಿದ್ಧಾರೂಢ ಮಠಕ್ಕೂ ಭೇಟಿ ನೀಡಬೇಕು.  ಮೋಬೈಲ್‌ ಅಥವಾ ತನ್ನ ಗುರುತಿನ ಆಧಾರ್ ಕಾಡ‌೯ ಇತ್ಯಾದಿ ಯಾವುದನ್ನೂ ಇಟ್ಟುಕೊಳ್ಳದೆಯೇ ಆತ ʼಜಗತ್ತೇ ನನ್ನ ಮನೆ ʼಎಂದು ತಿರುಗುತ್ತಿರುವ ಪರಿಸ್ಥಿತಿಯ ಕೈಗೊಂಬೆ.
ಕೃಷ್ಣನ ಕರುಣಾಜನಕ ಬಾಳಿಗೆ ಮನಕರಗಿ ಆತನಿಗೆ ಐನೂರು ರೂಪಾಯಿಗಳನ್ನು ಕೊಡಲು ಮುಂದಾದೆ.  ಆದರೆ ಆತ  ತೆಗೆದುಕೊಳ್ಳದೆ, “ನನಗೆ ಹಣದ ಮೋಹ ಇಲ್ಲ” ಅಂದ. ಸರಿ, ರೈಲಿನೊಳಗೆ ಮಾರಲು ಬಂದ ಇಡ್ಲಿ ವಡಾ ತರಿಸಿ, ತಿನ್ನು ಅಥವಾ ಕಟ್ಟಿಕೊಂಡು ಹೋಗು. ಹಸಿವಾದಾಗ ತಿನ್ನು ಅಂದೆ.      “ ಅಕ್ಕ ನಿನ್ನ ದುಡ್ಡು ಅಥವಾ ತಿನ್ನಲು ಏನೂ ಬೇಕಿಲ್ಲ” ಅಂತ ನಯವಾಗಿ ಹೇಳತ್ತಾನೆ.
ಎಲಾ ! ಹುಬ್ಬಳ್ಳಿ ರೇಲ್ವೆ ಶ್ಟೇಷನ್‌ ಬಂದಿದ್ದೇ ತಿಳಿಯದಾಯಿತು! ಇನ್ನೂ ಅದೆಷ್ಟು ನೋವು ಸಂಕಟದ  ವಿಷಯಗಳನ್ನು ಬಚ್ಚಿಟ್ಟಿಕೊಂಡಿರುವನೋ ಏನೋ. ನನಗಂತೂ  ಕೇಳಸಿಕೊಳ್ಳಬೇಕು ಅನ್ನಿಸಿತ್ತು. ಆದರೆ ನನ್ನ ಮತ್ತು ಕೃಷ್ಣನ ಭೇಟಿ ಕೆಲ ಗಂಟೆಗಳ ಪಯಣಕ್ಕೆ ಮಾತ್ರ ಸೀಮಿತವಾಗಿತ್ತು. ರೈಲಿನಿಂದ ಇಳಿದು ಹೋಗುವುದಕ್ಕಿಂತ ಮುನ್ನ ನನ್ನನ್ನು ಅಕ್ಕರೆಯಿಂದ ನೋಡಿ, “ನನ್ನ ಎಲ್ಲಾ ನೋವುಗಳನ್ನು ತಾಳ್ಮೆಯಿಂದ ಕೇಳಿದಕ್ಕೆ ವಂದನೆ ಅಕ್ಕ.  ನನ್ನ ಮನಸ್ಸು ಹಗುರಾದದ್ದು ಹೌದು.” ಎಂದು ಹೇಳಿ ಹಿಂದರುಗಿ ನೋಡದೆ ನಡೆದೇ ಬಿಟ್ಟ. ಅವನು ಹೋಗುವುದನ್ನೆ  ನೋಡುತ್ತಿದ್ದವಳ  ಕಣ್ಣಲ್ಲಿ ನನಗರಿವಿಲ್ಲದೆಯೇ ನೀರು ಹರಿಯುತ್ತದೆ.‌
ಈ ಘಟನೆ ನಡೆದು ವರಷುಗಳೇ ಕಳೆದರೂ ಕೃಷ್ಣ ಅಂದು ಹಂಚಿಕೊಂಡ ಮನದ ಮಾತುಗಳು ಮತ್ತೆ ಮತ್ತೆ ಮನಸ್ಸನ್ನು ಘಾಸಿಗೊಳಿಸುತ್ತವೆ.  “Akķ̧̧a I am a girl within. I meant to say that  I am a THIRD GENDER . Yet want to be identified as a boy. However Men use me and molest me. I  suffer a lot due to this.,” ಮನಸ್ಸಿನಲ್ಲೆ ‘ಸರ್ವಶಕ್ತ ಭಗವಂತಾ ಕೃಷ್ಣನ ಮೇಲೆ ಇನ್ನಾದರೂ ಕರುಣೆ ತೋರು’ ಎಂದು ಪ್ರಾರ್ಥಿಸುತ್ತೇನೆ.
ಹೌದಲ್ಲ, ಕೃಷ್ಣನಂತಹ ಅನೇಕರು ನಮ್ಮ ಸುತ್ತಲೂ  ಇದ್ದಾರೆ. ಅವರಿಗೆ ಬೇಕಾಗಿರುವುದು ರಕ್ಷಣೆ, ಸ್ವೀಕಾರ ಮನೋಭಾವ ಮತ್ತು ಸ್ವಲ್ಪ ಪ್ರೀತಿ. ಪಾಲಕರು, ಪೋಷಕರು ಮತ್ತು ಸಮಾಜ ತೃತೀಯ ಲಿಂಗದ ವ್ಯಕ್ತಿಗಳನ್ನು ನೋಡುವ ಪರಿಪಾಟ ಬದಲಾಗಬೇಕು. ಕೃಷ್ಣನಂತಹವರದ್ದು ಏನು ತಪ್ಪು? ಇರೋದನ್ನು ಇದ್ದ ಹಾಗೆ ಸ್ವೀಕಾರ ಮಾಡುವ ಮನೋಭಾವ ನಮ್ಮಲ್ಲಿ ಬರುವುದು ಯಾವಾಗ? ಇಂತಹ ಮಕ್ಕಳು ಯಾಕೆ ಬೇಡವಾಗಿದ್ದಾರೆ? ಅವರು ಹೇಗೆ ಬದುಕಬೇಕು?  ಇಂತಹ ಅನೇಕ ಪ್ರಶ್ನೆಗಳು ನನ್ನನ್ನು ಪದೇ ಪದೇ ಕಾಡುತ್ತವೆ.  


15 thoughts on “ʼಹಾಡಿದೊಡೆ ಎನ್ನೊಡೆಯನ ಹಾಡುವೆ’ ಅಂಜಲೀನಾ ಗ್ರೇಗರಿ ಧಾರವಾಡ ಅವರ ಸಣ್ಣಕಥೆ

  1. ನಿಜವಾಗಲೂ ಇದು ಒಂದು ಕರುಣಾಜನಕ ಕಥೆ ಧನ್ಯವಾದಗಳು ಮೇಡಂ ಇದನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಕ್ಕೆ

  2. Prathi obba manushyanige uthama samaj kattalikkee olleya anubavada or antaralada matu idu jivanavannu rupishikollalu uttama moullayada matu mam

  3. ಈ ನೈಜ ಜೀವನದ ಕಥೆಯನ್ನು ಸಮಾಜಕ್ಕೆ ಪರಿಚಯಿಸಿ, ಕೃಷ್ಣ ಎಂಬ ವ್ಯಕ್ತಿಯ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ತೋರಿಸಿದ್ದೀರಿ, ತಮ್ಮ ಈ ಅದ್ಭುತವಾದ ಪದಗಳ ಜೋಡಣೆ ಮುಂದುವರೆಯಲಿ.
    ಧನ್ಯವಾದಗಳು

  4. ನೀವು ಸಮಾಜ ಸೇವಕಿ, ಉತ್ತಮ ಹಾಡುಗಾರ್ತಿ ಎಂಬುದು‌‌ ಗೊತ್ತಿತ್ತು. ಒಳ್ಳೆಯ ಲೇಖಕಿ ಕೂಡ ಎಂದು ಇವತ್ತು ತಿಳಿಯಿತು. ಮನಕಲಕುವಂತೆ‌ ಬರೆದಿದ್ದೀರಿ. ಅದ್ಭುತ!

  5. Listening is so important! You listened to krishna and you made sure you shared this story. Thank you so much Maa

  6. ಉತ್ತಮ ಗಾಯಕಿಯ ಮನದಿಂದ ಮೂಡಿದ ಒಳ್ಳೆಯ ಕಥೆ…ಲೇಖನ ಮುಂದುವರಿಸಿ ಅಂಜೆಲಿನಾ…ಅಭಿನಂದನೆಗಳು.

  7. Hinta janaru namma hattira ,helidaga help madalikke aagilla andru paravagilla, avaru heluvudu navu kelabeku avaru depression nalli iruttare avarige navu support madbeku. Well done madam you given time to him that all story you heard, these days no bothered anyone’s feelings. Good job Madam

  8. ಪ್ರಯಾಣದ ಸಮಯದಲ್ಲಿ. ಇನ್ನೊಬ್ಬರನ್ನು ಸ್ನೇಹ ಭಾವದಿಂದ ಕಂಡು ಅವರ ದುಃಖಗಳನ್ನು ಕೇಳುತ್ತಾ ಅವರಿಗೆ ಸಾಂತ್ವವನ್ನು ಹೇಳುವ ಮನೋಭಾವನೆ ಎಲ್ಲರಿಗೂ ಇರುವುದಿಲ್ಲ. ಇಂಥ ಒಂದು ಕರುಣಾಜನಕ ಕಥೆಯನ್ನು ಕೇಳಿ ಆ ಹುಡುಗನಿಗೆ ಸಾಂತ್ವನ ಹೇಳಿದ ಗಳಿಗೆಯನ್ನು ನೆನೆಸಿಕೊಂಡರೆ ನಿಜವಾಗಿಯೂ ಮನಸ್ಸು ತುಂಬಿ ಬರುತ್ತದೆ. ಈ ನೋವಿನ ಕಥೆ ಮನಸ್ಸು ಮುಟ್ಟುವಂಥದ್ದು. ನೀವು ಬರೆಯುವ, ಮುಂದಿನ ಎಲ್ಲಾ ಕಥೆ ಕೃತಿಗಳಿಗೆ ದೇವರು ಧಾರಾಳವಾಗಿ ಆಶೀರ್ವಾದ ನೀಡಲಿ ಎಂದು ಹರಿಸುತ್ತೇನೆ.

  9. ಮೇಡಂ, ನಿಮ್ಮ ಮೊದಲನೇ ಕಥೆಯಲ್ಲಿಯೇ ನೀವು ಓದುಗರ ಮನಸ್ಸನ್ನು ಗೆದ್ದಿದ್ದೀರಿ ಎಂದರೆ ತಪ್ಪಿಲ್ಲ.ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥೆ, ಪ್ರಾರಂಭದಿಂದಲೂ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮುಂದಿನ ದಿನಗಳಲ್ಲಿ ಸಹ ತಮ್ಮಿಂದ ಹತ್ತು ಹಲವಾರು ಸಮಾಜಮುಖಿ ಕತೆ ಕೃತಿಗಳು ಮೂಡಿಬರಲಿ ನನಗೆ ತಮ್ಮ ಕಥೆಯ ತಲೆಬರಹ ತುಂಬಾ ಇಷ್ಟವಾಯಿತು ಜೊತೆಗೆ ನಮ್ಮ ಅಕ್ಷರ ಪ್ರತಿಷ್ಠಾನದಲ್ಲಿ ಕೆಲಸ ನಿರ್ವಹಿಸಿದ ಅಕ್ಕರೆಯ ಕೊಟ್ರೇಶನ ನೆನಪು ಸಹ ಬಂದು ಹೋಯಿತು well done mam

Leave a Reply

Back To Top