ಪರಿಚಯ ಸಂಗಾತಿ
ಸುಭಾಷ್ ಹೇಮಣ್ಣಾ ಚವ್ಹಾಣ,
ʼಮುದ್ರಣಕಾಸಿಯ ಶರಣ ಮನದ
ಘನ ಸಾಹಿತಿ ಚಂದ್ರಶೇಖರ ವಸ್ತ್ರದʼ
ಮುದ್ರಣಕಾಶಿಯ ಶರಣ ಮನದ ಘನ ಸಾಹಿತಿ ಚಂದ್ರಶೇಖರ ವಸ್ತ್ರದ
(ವೃತ್ತಿಯಿಂದ ಉಪನ್ಯಾಸಕರಾಗಿ, ಪ್ರವೃತ್ತಿಯಿಂದ ಗದಗ ಪರಿಸರದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೀವಂತವಾಗಿರಿಸಿಕೊಂಡು ಸಾಗಿದ ಬರಹಗಾರರಲ್ಲಿ ಪ್ರೊಫೆಸರ್ ಚಂದ್ರಶೇಖರ ವಸ್ತ್ರದ ರವರು ತುಂಬಾ ಪ್ರಮುಖರು. ಗದಗ ಜಿಲ್ಲ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಪಡೆದಿರುವ ಇವರು ಸಹೃದಯ ವಿಮರ್ಶಕರು, ಸೃಜನಶೀಲ ಲೇಖಕರಾದ ಇವರು ಕಾವ್ಯ, ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ನಾಟಕ, ಚಲನಚಿತ್ರ, ವಚನ, ವಚನ ಸಾಹಿತ್ಯ ಶರಣ ಸಾಹಿತ್ಯ ಸಂಶೋಧನೆ ಸಂಪಾದನೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಗಣನೀಯ ಸೇವೆ ಸಲ್ಲಿಸಿದ್ದಾರೆ. ಚೌಪದಿ ಮಾದರಿಯ ವಚನ ರಚನೆಯಲ್ಲಿ ಸಿದ್ಧ ಹಸ್ತರಾದ ಇವರು ‘ಚಂದ್ರ ಸಾಕ್ಷಿ’ ಎಂಬ ವಚನಾಂಕಿತದಿಂದ ನೂರಾರು ವಚನ ರಚಿಸಿ ಜನಮನ್ನಣೆ ಪಡೆದಿರುವ ಪ್ರೊ. ಚಂದ್ರಶೇಖರ ವಸ್ತ್ರದ ರವರಿಗೆ ‘ಅರಿವು ಅಕ್ಷರದಾಚೆ’, ‘ನಿರ್ವಚನ’, ‘ಬೆಳಗು’, ‘ಸಾಮಾನ್ಯರ ಸ್ವಾಮಿಜಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು’, ‘ಮಾನವತಾವಾದಿ ಬಸವಣ್ಣನವರು’, ‘ಅಲ್ಲಮ ಪ್ರಭುಗಳು’ ಮುಂತಾದ ಕೃತಿಗಳು ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಶರಣ ಸಾಹಿತ್ಯ ಸಂಸ್ಕೃತಿಯ ಸಂವರ್ಧಕರಾಗಿ ಸಮ ಸಮಾಜದ ಕನಸು ನನಸಾಗಿಸುವಲ್ಲಿ ತನು ಮನ ಧನ ಸಹಿತ ಪರಿಶ್ರಮಿಸುತ ಅಮಿತಾನಂದ ಪಡುತಿರುವ ಮಾತೃಹೃದಯದ ಅಪರೂಪದ ಬರಹಗಾರರಾದ ಇವರಿಗೆ ಡಾ. ಡಿ. ಎಸ್.ಕರ್ಕಿ ಕಾವ್ಯ ಪ್ರಶಸ್ತಿ ಮುಡಿಗೆರಿರುವುದು ಆಪ್ತರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ)
ಮುದ್ರಣಕಾಸಿ, ಆಧ್ಯಾತ್ಮದ ನೇಲೆವಿಡು ಗದಗಿನ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆ – ಗರಿಮೆ
ಧರ್ಮ ಸಹಿಷ್ಣುತೆಗೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಜಿಲ್ಲೆ ಗದಗ. ವೈಷ್ಣವ ಸಂಪ್ರದಾಯದ ಶ್ರೀ ವೀರನಾರಾಯಣ ದೇವಾಲಯ, ಶೈವ ಸಂಪ್ರದಾಯದ ಶ್ರೀ ತ್ರಿಕುಟೇಶ್ವರ ದೇವಾಲಯ ಹಾಗೂ ಇಸ್ಲಾಂ ಧರ್ಮದ ಜುಮ್ಮಾಮಸೀದಿ ಈ ಮೂರು ಧಾರ್ಮಿಕ ಸಂಸ್ಥೆ ಸೇರಿ ಒಂದೇ ಟ್ರಸ್ಟ್ ಇರುವುದು ವಿಶ್ವಕ್ಕೆ ಮಾದರಿ. ಶಿರಹಟ್ಟಿಯ ಫಕ್ಕೀರೇಶ್ವರ, ವರವಿಯ ಮೌನೇಶ್ವರ ಹಿಂದೂ-ಇಸ್ಲಾಂ ಎರಡೂ ಧರ್ಮಗಳ ಸಮನ್ವಯ ಸಾಮರಸ್ಯ ಕೇಂದ್ರಗಳು. ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠವಂತೂ ಸರ್ವಧರ್ಮಗಳಿಗೆ ಮುಕ್ತವಾಗಿ ಬಾಗಿಲನ್ನು ತೆರೆದ ಸರ್ವಧರ್ಮೀಯರ ಶ್ರದ್ಧಾಕೇಂದ್ರ. ಲಕ್ಷ್ಮೇಶ್ವರದ ದೂದ ಪೀರಾಂ ಸೂಫೀ ಗದ್ದುಗೆಯು ಹಿಂದೂ ಮುಸ್ಲಿಂಮರಿಗೆ ಸಮಾನ ಪೂಜ್ಯ ಸ್ಥಳ. ತಾವು ಸ್ವತ: ಕುರುಡರಾಗಿದ್ದರೂ ಅನೇಕ ಅಂಧರ ಬದುಕಿಗೆ ಬೆಳಕಾದವರು ಪಂ. ಪಂಚಾಕ್ಷರಿ ಗವಾಯಿಗಳವರು ಹಾಗೂ ಆಸ್ಥಾನ ಸಂಗೀತ ವಿದ್ವಾನ್ ತ್ರಿಭಾಷಾಕವಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು. ಶ್ರೀ ವೀರೇಶ್ವರ ಪುಣ್ಯಾಶ್ರಮವೆಂದೇ ಖ್ಯಾತವಾದ ಗವಾಯಿಗಳ ಆಶ್ರಮ ಸಹಸ್ರಾರು ಅಂಧ ಹಾಗೂ ನಿರ್ಗತಿಕರಿಗೆ ಅನ್ನ, ಅರಿವೆ, ಅರಿವು, ಆಶ್ರಯ ಒದಗಿಸಿ ಸಲುಹಿದೆ.
ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪಂ. ಭೀಮಸೇನ ಜೋಶಿಯವರು ಗದುಗಿನವರು. ಕ್ರಿಕೆಟ್ ತಾರೆ ಸುನೀಲ ಜೋಶಿ ಗದುಗಿನವರು. ಈ ಹಿಂದೆ ಹಾಕಿ ಮಾಂತ್ರಿಕ ಎಂದೇ ಪ್ರಸಿದ್ಧರಾದ ಶ್ರೀ ರಾಜು ಬಾಗಡೆ ಅವರೂ ಸಹ ಗದುಗಿನವರೆ. ಪುಸ್ತಕ ಪ್ರಕಟಣೆಯಲ್ಲಿ
ಕರುನಾಡಿಗೆ ಮಾದರಿಯಾಗಿ, ಮುದ್ರಣ ಕಾಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗದಗ ಆಧ್ಯಾತ್ಮ, ಕಲಾ, ಸಾಹಿತ್ಯ, ಸಂಸ್ಕೃತಿ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಗದಗವು ಹಿಂದಿನಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ.
ಕವಿ ಕುಮಾರವ್ಯಾಸರ ಕರ್ಮಭೂಮಿ, ಕವಿ ಚಾಮರಸರ ಜನ್ಮಭೂಮಿ (ನಾರಾಯಣಪುರ), ಗದಗ ಜಿಲ್ಲೆ. ಅಲ್ಲದೆ ರೋಣ ತಾಲ್ಲೂಕಿನ ಸವಡಿ ಗ್ರಾಮದ ದುರ್ಗಸಿಂಹ, ಮುಳಗುಂದದ ನಯಸೇನ, ಮಲ್ಲಿಸೇನ, ಬಾಲಲೀಲಾ ಮಹಾಂತ ಶಿವಯೋಗಿ, ಲಕ್ಕುಂಡಿಯ ಮುಕ್ತಾಯಕ್ಕ, ಲಕ್ಷ್ಮೇಶ್ವರದ ಆಚಣ್ಣ, ಪರಮಭಕ್ತ ಕವಿ, ಸುರಂಗ ಕವಿ, ಬೆಟಗೇರಿಯ ಸಿದ್ದಮಲ್ಲಾರಾಯ, ದಾನಪ್ರಿಯ, ನರಗುಂದದ ಶ್ರೀಧರಾಚಾರ್ಯ ಮುಂತಾದ ಕವಿಕೋಗಿಲೆಗಳ ಪುಣ್ಯಾಧಾಮವಿದು. ಆಧುನಿಕ ಸಾಹಿತ್ಯ ಕ್ಷೇತ್ರಕ್ಕೂ ಗದಗ ಜಿಲ್ಲೆಯ ಕೊಡುಗೆ ದೊಡ್ಡದು. ಹುಯಿಲಗೋಳ ನಾರಾಯಣರಾಯರು, ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು, ಶಾಂತಕವಿಗಳು, ಸಂಗ್ಯಾ-ಬಾಳ್ಯಾ ಖ್ಯಾತಿಯ ಪತ್ತಾರ ಮಾಸ್ತರ, ರಂ. ಶ್ರೀ. ಮುಗಳಿ, ಡಾ. ಆರ್. ಸಿ. ಹಿರೇಮಠ, ಕವಿ ಸಂ. ಶಿ. ಭೂಸನೂರಮಠ, ಚೆನ್ನವೀರ ಕಣವಿ, ಸೋಮಶೇಖರ ಇಮ್ರಾಪುರ, ಎಂ. ಎಸ್. ಸುಂಕಾಪುರ, ಕೋಡಿಕೊಪ್ಪದ ಬಸವರಾಜ ಶಾಸ್ತ್ರಿ, ಬಿ. ವಿ. ಮಲ್ಲಾಪುರ, ನಾಟಕಕಾರ ಗರೂಡ ಸದಾಶಿವರಾಯರು, ಎಚ್. ಎನ್. ಹೂಗಾರ, ಫ. ಶಿ. ಭಾಂಡಗೆ, ಎನ್ಕೆ ಕುಲಕರ್ಣಿ, ಕೆ. ಬಿ. ಅಂಗಡಿ, ಜಿ. ಎನ್. ಜಾಡಗೌಡರ, ಎಂ. ಜೀವನ ಮುಂತಾದವರೆಲ್ಲ ಕನ್ನಡ ಸಾಹಿತ್ಯಕ್ಕೆ ಗದಗ ಜಿಲ್ಲೆಯಿಂದ ಕರುನಾಡು ಸಾರಸ್ವತ ಲೋಕಕ್ಕೆ ಸೇವೆ ಸಲ್ಲಿಸಿದ ಸಾಹಿತ್ಯ ಸುಮಗಳು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಗಳಿಗೆ ಇದೀಗ ದಶಕದ ಉತ್ಸಾಹದ ಉತ್ಸವ ಪಸರಿತು
ಅವಿಭಜಿತ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು 24-8-1997 ರಂದು ಗದಗ ನೂತನ ಜಿಲ್ಲೆಯಾಯಿತು. ಇದರಿಂದಾಗಿ ಗದಗದ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಪ್ರಸರಣಕ್ಕೆ ಹೆಚ್ಚು ಅವಕಾಶ ದೊರಕಿದಂತಾಯಿತು. ನಂತರ 1998ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬರುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಗದಗ ಜಿಲ್ಲಾ ಕಸಾಪ ಆರಂಭಿಸಿತು. ಗದಗ ಜಿಲ್ಲೆಯ ಕ.ಸಾ.ಪ.ದ ಪ್ರಥಮ ಚುನಾಯಿತ ಅಧ್ಯಕ್ಷರಾಗಿದ್ದ ಪ್ರೊ. ಸಿ. ವಿ. ಕೆರಿಮನಿ ಕಸಾಸಕ್ಕೆ ನಾಂದಿ ಹಾಕಿದರು. ಇವರ ಅವಧಿಯಲ್ಲಿ ಗದಗ ಜಿಲ್ಲಾ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಖ್ಯಾತ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜ ಅವರ ಸರ್ವಾಧ್ಯಕ್ಷತೆಯಲ್ಲಿ ಮುಂಡರಗಿಯ ಬೆಲ್ಲದ ಮಹಾವಿದ್ಯಾಲಯದ ಮೈದಾನದಲ್ಲಿ 2000 ಇಸ್ವಿ ಜನವರಿ 29 ಹಾಗೂ 30ರಂದು 2 ದಿನಗಳ ಕಾಲ ಅರ್ಥಪೂರ್ಣವಾಗಿ ಜರಗಿತು. ಈ ಸಮ್ಮೇಳನದ ಅಂಗವಾಗಿ “ಕಪೋತಗಿರಿ” ಎಂಬ ಸ್ಮರಣ ಸಂಚಿಕೆ (ಸಂ. ಬಿ. ಎಸ್. ಪಾಟೀಲ) ಹೊರ ತರಲಾಯಿತು. ಇದುವರೆಗೂ ಜಿಲ್ಲೆಯ ಹಲವಾರು ತಾಲ್ಲೂಕುಗಳಲ್ಲಿ ಸಂಪನ್ನಗೊಂಡ ೯ ಸಮ್ಮೇಳನಗಳು ಜನಮಾನಸದಲ್ಲಿ ಮನೆಮಾಡಿವೆ.
ಕೋಟೆನಾಡು ಗಜೆಂದ್ರಗಡದಲ್ಲಿ ಇದು ಎರಡನೇ ಬಾರಿಗೆ ನಡೆದ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಜಿಲ್ಲೆಯಲ್ಲಿ ಕಸಾಪ ಅಸ್ತಿತ್ವಕ್ಕೆ ಬಂದು 28 ವರ್ಷಗಳಾಗುತ್ತಾ ಬರುತ್ತಿದ್ದರೂ ಸದ್ಯ ಗಜೇಂದ್ರಗಡದಲ್ಲಿ 19, 20 ವ 21ರ ಜನವರಿ ೨೦೨೫ರಲ್ಲಿ ನಡೆದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೀಗ ಒಂದು ದಶಕದ ಸಂಭ್ರಮ. ಕನ್ನಡ ಸಾಹಿತ್ಯ ಸಮ್ಮೇಳನಗಳೆಂದರೆ ಅದೊಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಬ್ಬ. ಕನ್ನಡಿಗರ ಜಾತ್ರೆ, ಕಲಾವಿದರ ನಿಬ್ಬಣ, ಕನ್ನಡ ಅಭಿಮಾನಿಗಳಲ್ಲಿ ತುಂಬಾ ಹುರುಪು – ಹುಮ್ಮಸ್ಸು. ಬುದ್ಧಿಜೀವಿಗಳಿಗೆ ಉಪನ್ಯಾಸಕರಿಗೆ, ಪ್ರಬಂಧ ಮಂಡಿಸುವ, ಹಿರಿ-ಕಿರಿಯ ಕವಿಗಳಿಗೆ ತಮ್ಮ ಕವಿತೆ ಓದುವ, ಚಿತ್ರಕಲೆ, ಸಂಗೀತ, ನಾಟಕ ಕ್ಷೇತ್ರದ ಪ್ರತಿಭೆಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸುವ ತವಕ. ಪುಸ್ತಕ ಮಾರಾಟ ಲೋಕ ಅನಾವರಣಗೊಂಡು ತಮ್ಮ ನೆಚ್ವಿನ ಕವಿ – ಸಾಹಿತಿಗಳ ತಮ್ಮಿಷ್ಟದ ಪುಸ್ತಕ ಕೊಳ್ಳುವ, ಓದುವ ಸಂಭ್ರಮ ನೋಡಲು ಎರಡು ಕಣ್ಣು ಸಾಲದಾದವು.
ಜಿಲ್ಲೆಯ ಕನ್ನಡ ಮನಸುಗಳಿಗೆ ನಾಲ್ಕೈದು ವರ್ಷಗಳ ನಂತರ ಕೋಟೆ ನಾಡಾದ ಗಜೇಂದ್ರಗಡ ನಗರದಲ್ಲಿ 15 ವರ್ಷಗಳ ತರುವಾಯ ಮತ್ತೆ ಎರಡನೇ ಬಾರಿಗೆ ೧೦ನೇ ಕನ್ನಡ ನುಡಿ ಜಾತ್ರೆಗೆ ಸಜ್ಜಾಗಿರುವುದು ಅಮಿತಾನಂದ ತಂದಿದೆ. 4 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೋಟೆ ನಾಡು ಗಜೇಂದ್ರಗಡದ ಎಪಿಎಂಸಿ ಎದುರಿನ ಪುರಸಭೆಯ ಬಯಲು ಜಾಗಯಲ್ಲಿ 2011 ಫೆಬ್ರವರಿ 11, 12 ಹಾಗೂ 13 ರಂದು ಮಾಜಿ ಶಾಸಕರು ಸಾಹಿತಿಗಳಾಗಿದ್ದ ಜ್ಞಾನದೇವ ದೊಡ್ಡಮೇಟಿಯವರ ಸರ್ವಾಧ್ಯಕ್ಷತೆಯಲ್ಲಿ ಜರುಗಿತು. ಈ ಅವಧಿಯಲ್ಲಿ ಮುಂಡರಗಿಯ ಎ.ಬಿ ಹಿರೇಮಠರು ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದ ಅಂಗವಾಗಿ “ಬೆಳವಲ ಸಿರಿಗೆಂಪು” (ಸಂ. ಡಾ. ಬಸವರಾಜ ಗೊರವರ) ಎಂಬ ಸ್ಮರಣ ಸಂಚಿಕೆಯನ್ನು, ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನ “ಅಂತರ ಗಂಗೆ “(ಸಂಪಾದಕರು: ಡಾ ರಾಜೇಂದ್ರ ಎಸ್ ಗಡಾದ) ಜಿಲ್ಲೆಯ ಕಥೆಗಾರರ ಪ್ರಾತಿನಿಧಿಕ ಕಥಾ ಸಂಕಲನ “ಕಾಲಕಥಾದೀಪ” (ಸಂ.ಎ ಎಸ್ ಮಕಾನದಾರ) ಶತಮಾನೋತ್ಸವ ಸಾಹಿತಿಗಳ ಕುರಿತಾದ “ಕನ್ನಡ ಕಟ್ಟಿದವರು” (ಸಂ. ರವೀಂದ್ರನಾಥ ದೊಡ್ಡಮೇಟಿ)1896 ರಲ್ಲಿ ಪ್ರಕಟವಾಗಿದ್ದ “ಕನ್ನಡ ಶೌರ್ಯ ಸಾಗರ” (ಲೇ ಗೂಳಪ್ಪ ಕೊ ಅರಳಿ), ಪುಟಾಣಿ ಪೋರರು (ಲೇ. ಎಂ ಪಿ ರಮೇಶ), ಜೇನ ಹನಿ (ಲೇ, ಲಕ್ಷ್ಮಿದೇವಿ ಗವಾಯಿ) ಗ್ರಂಥಗಳನ್ನು ಹೊರ ತರಲಾಗಿತ್ತು.
ಈಗ ಗಜೇಂದ್ರಗಡದಲ್ಲಿ ಆಯೋಜನೆಯಾಗಿರುವ ೧೦ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯರನ್ನಾಗಿ ಶರಣ ಮನನದ ಘನ ಸಾಹಿತಿ ಪ್ರೋ. ಚಂದ್ರಶೇಖರ ವಸ್ತ್ರದ ರವನ್ನು ನಿಯೋಜನೆ ಮಾಡಿಲಾಗಿದೆ. ಆ ಪ್ರಯುಕ್ತ ವೈಚಾರಿಕ ಸಾಹಿತಿ ಚಂದ್ರಶೇಖರ ವಸ್ತ್ರದರವರ ಬದುಕು ಬರಹದ ಕೀರು ನೋಟವನ್ನಿಲ್ಲಿ ಅವಲೋಕಿಸೋಣ. ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಬಹುರೂಪಿ ಬರಹಗಾರ ಚಂದ್ರಶೇಖರ ವಸ್ತ್ರದ ರವರ ಪೂರ್ವಾಶ್ರಮ
ಜಿಲ್ಲೆಯಲ್ಲಿ ಕಸಾಪ ಅಸ್ತಿತ್ವಕ್ಕೆ ಬಂದು 28 ವರ್ಷಗಳಾಗುತ್ತಾ ಬರುತ್ತಿದ್ದರೂ ಸದ್ಯ ಗಜೇಂದ್ರಗಡದಲ್ಲಿ 19, 20 ವ 21ರ ಜನವರಿ ೨೦೨೫ರಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೀಗ ಒಂದು ದಶಕದ ಸಂಭ್ರಮ. ಇತ್ತೀಚೆಗೆ ಗಜೇಂದ್ರಗಡದಲ್ಲಿ ಆಯೋಜನೆಯಾಗಿದ್ದ ೧೦ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯರನ್ನಾಗಿ ಶರಣ ಮನನದ ಘನ ಸಾಹಿತಿ ಪ್ರೋ. ಚಂದ್ರಶೇಖರ ವಸ್ತ್ರದ ರವನ್ನು ನಿಯೋಜನೆ ಮಾಡಲಾಗಿತ್ತು. ಆ ಪ್ರಯುಕ್ತ ವೈಚಾರಿಕ ಸಾಹಿತಿ ಚಂದ್ರಶೇಖರ ವಸ್ತ್ರದರವರ ಬದುಕು ಬರಹದ ಕಿರು ನೋಟವನ್ನಿಲ್ಲಿ ಅವಲೋಕಿಸೋಣ. ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ೨೦ ಮೇ ೧೯೫೭ರಲ್ಲಿ ಜನಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು; ಗದಗಿನ ಆನಂದಾಶ್ರಮ ರಸ್ತೆಯಲ್ಲಿ ಬರುವ ‘ಬೆಳಗು’ ನಿವಾಸದಲ್ಲಿ ವಾಸವಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಬಹುರೂಪಿ ಬರಹಗಾರ ಚಂದ್ರಶೇಖರ ವಸ್ತ್ರದ ರವರ ವೈವಿಧ್ಯಮಯ ಸಾಹಿತ್ಯಕ ಕೃತಿಗಳ ನೋಟ
ಮಾನವತವಾದಿ ಬಸವಣ್ಣನವರು – ವ್ಯಕ್ತಿ ಚಿತ್ರ (ಇಂಗ್ಲಿಷ್, ಮರಾಠಿ ಭಾಷೆಗಳಿಗೆ ಅನುವಾದ), ಕುಲಕ್ಕೆ ತಿಲಕ ಮಾದರ ಚೆನ್ನಯ್ಯ- ವ್ಯಕ್ತಿಚಿತ್ರ, ಬೆಳಗು – ವೈಚಾರಿಕ ಲೇಖನಗಳ ಸಂಗ್ರಹ, ಹರಿದಾವ ನೆನಪು – ಲಲಿತ ಪ್ರಬಂಧಗಳ ಸಂಕಲನ, ಕನ್ನಡ ಜಗದ್ಗುರು – ಗದುಗಿನ ತೋಟದ ಶ್ರೀಗಳ ವ್ಯಕ್ತಿಚಿತ್ರ, ಸೀರಿಯನಿತ್ತಡೆ ಒಲ್ಲೆ – ಗಂಗಮ್ಮ ಸೋ. ಬೊಮ್ಮಾಯಿ ಆತ್ಮಕಥೆ ನಿರೂಪಣೆ, ಎಚ್. ಎನ್. ಹೂಗಾರ – ಜೀವನ ಚರಿತ್ರೆ (ಕರ್ನಾಟಕ ಅಕಾಡೆಮಿ ಪ್ರಕಟಣೆ), ಪ್ರೀತಿಯೆಂದರೆ… ಕವಿತಾ ಸಂಕಲನ, ಸಿಂದಗಿ ಪಟ್ಟಾಧ್ಯಕ್ಷರು – ವ್ಯಕ್ತಿ ಚಿತ್ರ, ಮೌನದ ಮಾತುಗಳು – ಚಿಂತನ ಸಂಗ್ರಹ, ಶಿ. ಶಿ. ಬಸವನಾಳ ಕೇಂದ್ರ ಸಾಹಿತ್ಯ ಅಕಾಡೆಮಿ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯ ಕೃತಿ, ಪಂಚಾಕ್ಷರ ಗವಾಯಿಗಳು – ವ್ಯಕ್ತಿ ಚಿತ್ರ, ಅಭಿನವ ದುಶ್ಯಾಸನ – ಬೀದಿ ನಾಟಕ, ಒಂದು ಪ್ರಸಂಗ – ಮೂರುನಾಟಕ, ನೀಲಾಂಬಿಕೆ – ಚೆನ್ನವೀರ ಕಣವಿಯವರ ಕವಿತೆಯ ವಿಮರ್ಶೆ – ಕಿರು ಹೊತ್ತಗೆ, ಶಂಕರ ದಾಸಿಮಯ್ಯ – ವ್ಯಕ್ತಿ ಚಿತ್ರ – ಕಿರು ಹೊತ್ತಗೆ, ನಾದಲೀಲೆಯ ನಾಡು – ಬೇಂದ್ರೆ ಕವಿತೆಗಳ ವಿಮರ್ಶೆ, ದಾಂಪತ್ಯ ಗೀತೆಗಳು – ದಾಂಪತ್ಯ ಕುರಿತ ಪ್ರಾತಿನಿಧಿಕ ಕವಿತೆಗಳ ಸಂಗ್ರಹ, ಬ್ಯಾರಿಸ್ಟರ್ ಎಂ. ಎಸ್. ಸರದಾರರು – ವ್ಯಕ್ತಿ ಚಿತ್ರ, ಮಾತನಾಡುವ ಕಲ್ಲು – ನಾಟಕ, ಅರಿವು ಅಕ್ಷರದಾಚೆ – ವಚನ ಚೌಪದಿ, ಶ್ರೀ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ – ಅವಲೋಕನ, ಅಲ್ಲಮಪ್ರಭು – ಲೇಖನ ಗ್ರಂಥ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು – ವ್ಯಕ್ತಿ ಚಿತ್ರ, ಸಮಗ್ರ ಎಸ್. ಜಿ. ಸ್ವಾಮಿ – ಸಮಗ್ರ ಕವಿತೆಗಳು, ಸಂಕಲ್ಪ – ಶ್ರೀ ಎಸ್. ಬಿ. ಸಂಕಣ್ಣವರ – ಅಭಿನಂದನ ಗ್ರಂಥ.
ಆಧ್ಯಾತ್ಮಿಕವಾದಿ, ವಚನಪ್ರೇಮಿ, ಚಂದ್ರಶೇಖರ ವಸ್ತ್ರದರವರ ಸಂಪಾದಿತ ಕೃತಿಗಳ ತೋರಣ
ಹರಿಹರನ ಕಥಾ ಕುಸುಮಗಳು – ಸಂ. ರಗಳೆಗಳ ಸರಳಗನ್ನಡ ಅನುವಾದ, ನಿರ್ವಚನ – ವಚನ ವಿಮರ್ಶೆ, ರತ್ನಾಕರವರ್ಣಿ – ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಮುತ್ತಿನ ಮಾಲೆ’ಯ ಪ್ರಕಟಣೆ, ಬಸವತತ್ವ ರತ್ನಾಕರ – ಪಂ. ಚಂದ್ರಶೇಖರ ಶಾಸ್ತ್ರಿಗಳು ಹಿರೇಮಠ ಅವರ ಕೃತಿಯ ಪರಿಷ್ಕೃತ ಸಂಪಾದನೆ, ಬಾಲಲೀಲಾ ಮಹಾಂತಶಿವಯೋಗಿಗಳ ಪುರಾಣ – ದ್ವಾಂಪುರ ಚೆನ್ನಕವಿಗಳ ಕೃತಿಯ ಸಂಪಾದನೆ, ಸಾಮಾನ್ಯರ ಸ್ವಾಮೀಜಿ – ಗದುಗಿನ ತೋಂಟದಾರ್ಯ ಶ್ರೀಗಳ ಅಭಿನಂದನ ಗ್ರಂಥ, ಲಿಂಗಾರಾಧ್ಯರು – ಅಭಿನಂದನ ಗ್ರಂಥ,ಸ್ವರಗುರು – ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಅಭಿನಂದನ ಗ್ರಂಥ, ಸಮರ್ಪಿತ – ಶಿವಮೊಗ್ಗಯ ಬೆಕ್ಕಿನ ಕಲ್ಮಠದ ಜಗದ್ಗುರು ಮ. ನಿ. ಮಲ್ಲಿಕಾರ್ಜುನ್ ಮಹಾಸ್ವಾಮಿಗಳ ಅಭಿನಂದನ ಗ್ರಂಥ, ಆರೋಗ್ಯ ಭಾಗ್ಯ – ಡಾ. ಆರ್. ಟಿ. ಕುಲಕರ್ಣಿ ಲೇಖನಗಳ ಸಂಪಾದನೆ, ಬಿಸಿಲೊಳಗಣ ಬೆಳದಿಂಗಳು, ಕಾಲೇಜುಗಳು ಅಧ್ಯಾಪಕರ ಕವಿತೆಗಳ ಸಂಪಾದನೆ, ಸಮೀಕ್ಷೆ- ಗದಗ ಜಿಲ್ಲೆಯ ಸಾಹಿತ್ಯ ಸಂಸ್ಕೃತಿಗಳ ಪರಿಚಯ ಪುಸ್ತಕ, ಸ್ವಯಂ ಶಿಲ್ಪಿ – ಡಾ. ಬಿ. ಎಂ. ಆಲೂರು ಅಭಿನಂದನ ಗ್ರಂಥ ಸಹಸಂಪಾದನೆ, ವಚನವಾರಿಧಿ – ವಚನ ಸಾಹಿತ್ಯ ಪ್ರವಚನ, ಕೃತಪುರ – ಗದಗ ಜಿಲ್ಲೆಯ ಪ್ರವಾಸಿ ಸ್ಥಳಗಳ ಹೊತ್ತಿಗೆ, ವಚನ ಕಲ್ಯಾಣ – ಅ. ಭಾ 7ನೇ ಶರಣ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ, ಲೊಕ್ಕಿಗುಂಡಿ – ಲಕ್ಕುಂಡಿ ಉತ್ಸವದ ಸ್ಮರಣ ಸಂಚಿಕೆ, ಅವ್ವ ನನ್ನವ್ವ – ಪ್ರಾತಿನಿಧಿಕ ಕವಿತಾ ಸಂಕಲನ, ಡಾ. ಎಸ್. ಬಿ. ಪಾಟೀಲ – ಅಭಿನಂದನಾ ಗ್ರಂಥ, ಶೃತಾರ್ಥ – ಅಭಿನಂದನ ಗ್ರಂಥ
ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್‌ನ ‘ಅವ್ವ’ – ಪುಸ್ತಕ ಮಾಲಿಕೆಯಲ್ಲಿ ವಸ್ತ್ರದ ರವರ ಸಂಪಾದಿತ ಕೃತಿಗಳು
ಕವಿತೆಗಳಲ್ಲಿ ಅವ್ವ, ಕಥೆಗಳಲ್ಲಿ ಅವ್ವ, ಆತ್ಮ ಕಥೆಗಳಲ್ಲಿ ಅವ್ವ ಭಾಗ-೧, ಆತ್ಮ ಕಥೆಗಳಲ್ಲಿ ಅವ್ವ ಭಾಗ-೨, ಜಾನಪದ ಸಾಹಿತ್ಯದಲ್ಲಿ ಆವ್ವ, ನಾಟಕಗಳಲ್ಲಿ – ಅವ್ವ. ತಾಯಿಗರುಳಿನ ಲೇಖಕ ವಸ್ತ್ರದ ರವರು ತಾಯಿ ಮಮತೆ, ತ್ಯಾಗ, ಕರುಣೆ, ತಾಳ್ಮೆ, ಬೇನೆ, ಬೇಗುದಿ ಮಹತ್ವ ಮಹಿಮೆಯನ್ನು ಬಹುರೂಪಿಯಾಗಿ ಕೃತಿಗಳಲ್ಲಿ ಕಟ್ಟುಕೊಡುವಲ್ಲಿ ಕರುನಾಡಿನ ವಿರಳಾತಿ ವಿರಳ ಬರಹಗಾರರಲ್ಲಿ ಅಗ್ರ ಪಂಕ್ತಿಯ ಲೇಖಕರಲ್ಲಿ ಇವರು ಒಬ್ಬರು ಎಂಬುದು ಬಹು ಆನಂದದ ವಿಚಾರ.
ವಚನ ಸಾಹಿತ್ಯ ವ ಶರಣ ಸಾಹಿತ್ಯಕ್ಕೆ ಚಂದ್ರಶೇಖರ ವಸ್ತ್ರದ ರವರ ಗ್ರಂಥ ಕೊಡುಗೆಗಳು
(ಸಂವೇದನಾಶೀಲ ಶರಣಶ್ರೀ ವಸ್ತ್ರದ ರವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಡಾ. ತೊಂಟದ ಸಿದ್ಧಲಿಂಗ ಶ್ರೀಗಳ ಪೀಠಾರೋಹಣ ರಜತ ಸಂಪುಟ ಮಾಲಿಕೆ) ಭಾಗ -೧
ವಚನ ವಾಹಿನಿ -೧ -ಸಂ. ಮ. ನ. ಜವರಯ್ಯ, ವಚನ ವಾಹಿನಿ -೨- ಸಂ. ಓ. ಎಲ್. ನಾಗಭೂಷಣ ಸ್ವಾಮಿ, ವಚನ ವಾಹಿನಿ -೩-ಸಂ. ಟಿ. ಆರ್ ಚಂದ್ರಶೇಖರ, ವಚನ ವಾಹಿನಿ -೪- ಸಂ. ಜಯಶ್ರೀ ದಂಡೆ, ವಚನ ವಾಹಿನಿ -೫- ಸಂ: ಗಂಗಮ್ಮ ಸತ್ಯಂಪೇಟೆ, ವಚನ ವಾಹಿನಿ – ೬-ಸಂ: ಜಿ.ಎಂ ಹೆಗಡೆ, ವಚನ ವಾಹಿನಿ -೭- ಸಂ: ಬಿ. ಕೆ. ಹಿರೇಮಠ, ವಚನ ವಾಹಿನಿ – ೮- ಸಂ: ಎಸ್. ಬಿ. ಕೊಪ್ಪ, ಸಿ.ವಿ. ಪ್ರಭುಸ್ವಾಮಿಮಠ, ವಚನ ವಾಹಿನಿ- ೯- ಸಂ: ಚಂದ್ರಶೇಖರ ವಸ್ತ್ರದ, ವಚನ ವಾಹಿನಿ-೧೦- ಸಂ: ಬಸವಲಿಂಗ ಸೊಪ್ಪಿಮಠ, ವಚನ ವಾಹಿನಿ- ೧೧- ಸಂ: ಮೃತ್ಯುಂಜಯ ರುಮಾಲೆ, ವಚನ ವಾಹಿನಿ-೧೨- ಸಂ: ಚಂದ್ರಶೇಖರ ವಸ್ತ್ರದ, ವಚನ ವಾಹಿನಿ- ೧೩- ಸಂ: ಗುರುಪಾದ ಮರಿಗುದ್ದಿ, ಶ್ರೀನಿವಾಸ ಕುಲಕರ್ಣಿ
ಭಾಗ-೨
ಕೊಂಡಗುಳಿ ಕೇಶಿರಾಜನ ಕೃತಿಗಳು- ಸಂ: ಎಂ.ಎಂ.ಕಲಬುರ್ಗಿ, ಹೊಸ ಪದ್ಧತಿಯ ಬಸವಣ್ಣನವರ ವಚನಗಳು – ಸಂ: ಫ.ಗು.ಹಳಕಟ್ಟಿ, ಸಿದ್ದರಾಮ ಚಾರಿತ್ರ -ಸಂ: ಎಂ.ಬಿ. ನೇಗಿನಹಾಳ,| ಪ್ರಭುಲಿಂಗಲೀಲೆ- ಸಂ: ಬಿ.ವಿ. ಮಲ್ಲಾಪುರ, ಷಟ್‌ಸ್ಥಲ ಜ್ಞಾನಸಾರಾಮೃತ- ಸಂ: ಆರ್. ಸಿ. ಹಿರೇಮಠ, ಷಟ್ ಸ್ಥಲ ಶಿವಾಯಣ- ಸಂ: ಎಂ.ಎಂ ಕಲಬುರ್ಗಿ, ಕಿತ್ತೂರು ಸಂಸ್ಥಾನ ಸಾಹಿತ್ಯ- ಸಂ: ಎಂ. ಎಂ ಕಲಬುರ್ಗಿ, ವಚನಶಾಸ್ತ್ರಸಾರ ಭಾಗ-೧ – ಸಂ: ಫ.ಗು.ಹಳಕಟ್ಟಿ, ವಚನಶಾಸ್ತ್ರಸಾರ ಭಾಗ-೨ – ಸಂ: ಫ.ಗು.ಹಳಕಟ್ಟಿ, ನಿರ್ವಚನ- ಸಂ: ಚಂದ್ರಶೇಖರ ವಸ್ತ್ರದ, ಶಂಕರ ದಾಸಿಮಯ್ಯ (ಪಿ. ಎಚ್. ಡಿ ಪ್ರಬಂಧ), ಡಾ. ಅನ್ನಪೂರ್ಣ ಜಾಲವಾದಿ, ಹರಿಹರನ ರಗಳೆಗಳು: ಒಂದು ಸಾಂಸ್ಕೃತಿಕ ಅಧ್ಯಯನ ( ಪಿ. ಎಚ್.ಡಿ ಪ್ರಬಂಧ) ಡಾ. ಸದಾನಂದ ಪಾಟೀಲ
ಸಾವಧಾನ’ ಪತ್ರಿಕೆಯ ಸಹ ಸಂಪಾದಕರಾದ ವಸ್ತ್ರದ ರವರು ನಿರ್ವಹಿಸಿದ, ನಿರ್ವಹಿಸುತ್ತಿರುವ ಗೌರವಯುತ ಹುದ್ದೆಗಳು
ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾಚಾರ್ಯ, ಸರಕಾರಿ ಪದವಿಪೂರ್ವ ಕಾಲೇಜ ಗಗದ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ (೨೦೦೭ ರಿಂದ ೨೦೧೧), ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ (೧೯೯೩-೧೯೯೫), ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಸಗಟು ಖರೀದಿ ಆಯ್ಕೆ ಸಮಿತಿಯ ಸದಸ್ಯರ (೨೦೦೮ ರಿಂದ ೨೦೧೧), ಕರ್ನಾಟಕ ಚಲನಚಿತ್ರ ಮಂಡಳಿ- ಗದಗ ಜಿಲ್ಲಾ ‘ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ,ಕರ್ನಾಟಕ ಗಮಕ ಕಲಾ ಪರಿಷತ್ತು – ಗದಗ ಜಿಲ್ಲಾ ಅಧ್ಯಕ್ಷ, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತು – ಗದಗ ಜಿಲ್ಲಾ ಸದಸ್ಯ ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ಗದಗ – ನಿರ್ದೇಶಕ, ಬಸವ ಕಲಾಬಳಗ, ತೋಂಟದಾರ್ಯ ಮಠ, ಗದಗ ನಿರ್ದೇಶಕ, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ – ಸಂಸ್ಥಾಪಕ ಸದಸ್ಯ, ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ- ಗದಗ ಜಿಲ್ಲಾ ಗ್ರಾಮಚರಿತಕೋಶ ಸಂಪಾದಕ, ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸದಸ್ಯರು
ಶರಣ ಸಾಹಿತಿ ವಸ್ತ್ರದರವರ ಬಹುಮುಖ ಪ್ರತಿಭಾ ದರ್ಶನ
ಬೆಹ್ರೆನ್ ನಲ್ಲಿ ಜರುಗಿದ ಪ್ರಥಮ ಅಂತರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕವಿತಾ ವಾಚನ, ಸೊಲ್ಲಾಪುರದಲ್ಲಿ ಜರುಗಿದ ಗಡಿನಾಡ ಕನ್ನಡ ಸಮ್ಮೇಳನದಲ್ಲಿ ಕವಿತಾ ವಾಚನ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ವಿಜಯಪುರ ಗೋಷ್ಠಿಯ ಅಧ್ಯಕ್ಷತೆ, ಡಾ. ಬಿ. ವಿ. ಕಾರಂತರ ನಿರ್ದೇಶನದ ‘ಕಿಂಗ್ ಲಿಯರ್’ ನಾಟಕದಲ್ಲಿ’ ಪಾತ್ರ ನಿರ್ವಹಣೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಾಹಿತ್ಯಕ – ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೋಷ್ಠಿಯ ಅಧ್ಯಕ್ಷತೆ, ಉಪನ್ಯಾಸ, ಪ್ರಬಂಧ ಮಂಡನೆ. ದೂರದರ್ಶನದಲ್ಲಿ ‘ಬೇಂದ್ರೆ ಮಾಸ್ತರರಿಗೆ ನಮಸ್ಕಾರ’ (ಜಯಂತ ಕಾಯ್ಕಿಣಿ- ಸಂದರ್ಶಕ) ಉತ್ತರ ಕರ್ನಾಟಕದ ಅಡ್ಡ ಹೆಸರುಗಳು ಡಾ. ಎಂ. ಎಂ ಕಲಬುರ್ಗಿ ಅವರೊಂದಿಗೆ ಸಂದರ್ಶನ, ಆಕಾಶವಾಣಿಯ ಬಹುತೇಕ ಕೇಂದ್ರಗಳಲ್ಲಿ ‘ಚಿಂತನ’, ಲಘು ಭಾಷಣ ಕಾವ್ಯವಾಚನಗಳ ಪ್ರಸಾರ. ‘ನುಲಿಯ ಚಂದಯ್ಯ’ – ಪ್ರಸಂಗದ ರಚನೆ, ನಿರ್ದೇಶನ, ಅರ್ಥದಾರಿ,
ಸಂಘಟನಾ ರೂವಾರಿ ಚಂದ್ರಶೇಖರವರು ಸಂಘಟಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಉತ್ತರ ಕರ್ನಾಟಕದ ಜಾನಪದ ಕಲಾಮೇಳ, ನವಲಗುಂದ, ಗುರುಜಾಡ ಅಪ್ಪಾರಾವ್ ನಾಟಕೋತ್ಸವ, ಹುಬ್ಬಳ್ಳಿ, ಡಾ. ಮಲ್ಲಿಕಾರ್ಜುನ ಮನ್ಸೂರ ಸಂಗೀತ ಸಮಾರೋಹ, ಧಾರವಾಡ, ಅಂಬಿಕಾತನಯದತ್ತ ರಾಷ್ಟ್ರೀಯ ಕವಿ ಸಮ್ಮೇಳನ, ಧಾರವಾಡ, ಲೋಕಕಲಾ ಯಾತ್ರೆ- ಹಾವೇರಿ, ಗದಗ ಹುಬ್ಬಳ್ಳಿ (ನಾಲ್ಕು ರಾಜ್ಯಗಳ ಜಾನಪದ ಕಲಾವಿದರ ಸಮಾವೇಶ), ಶಿ. ಶಿ. ಬಸವನಾಳ ಜನ್ಮಶತಮಾನೋತ್ಸವ ಹಾವೇರಿ, ರಾಜ್ಯ ಮಟ್ಟದ ಮಕ್ಕಳ ಮೇಳ ಧಾರವಾಡ, ದೇವಾಲಯ ನಗರೋತ್ಸವ ಕನಕಗಿರಿ, ರಾಯಚೂರು ಜಿಲ್ಲೆ, ವೃಂದಗಾನ ಭಾರತ ಭಾರತಿ, ರಾಯಚೂರು ಕನಕಪುರಂದರ ಉತ್ಸವ, ಹುಬ್ಬಳ್ಳಿ, ಪ್ರಥಮ ಲಕ್ಕುಂಡಿ ಉತ್ಸವ, ಧಾರವಾಡ, ಪ್ರಥಮ ಕರಾವಳಿ ಉತ್ಸವ, ಕಾರವಾರ, ಪ್ರಥಮ ಕಾವ್ಯಕುಂಚ, ಧಾರವಾಡ, ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ‘ಡಿಸೆಂಬರ್- ೧’ ಸಂಭಾಷಣೆ ಹಾಗೂ ಗೀತ ರಚನೆ ಮಾಡಿರುವ
ಸಾಹಿತಿ ಚಂದ್ರಶೇಖರ ವಸ್ತ್ರದ ಅವರ ‘ಅರಿವು ಅಕ್ಷರದಾಚೆ’ ವಚನ ಚೌಪದಿ ಕೃತಿಗೆ 2019ನೇ ಸಾಲಿನ ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಲಭಿಸಿದೆ.
ವಸ್ತ್ರದ ದಂಪತಿಗಳಿರ್ವರ ಸಾಹಿತ್ಯ ಸಂಸ್ಕತಿಗೆ ಅನನ್ಯ ಕೊಡುಗೆ ಅವಿಸ್ಮರಣೀಯ
ಚೆನ್ನವ್ವ ಇವರು ಚಂದ್ರಶೇಖರ ವಸ್ತ್ರದರವರ ಧರ್ಮ ಪತ್ನಿ. ಚನ್ನವ್ವರವರು ಅಣ್ಣಿಗೇರಿಯ ಎಸ್. ಎ. ಪಿ. ಯು. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಶಾಂತಿನಾಥ ದೆಸಾಯಿಯವರ Bhabani Bhattacharya ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಹೊಮೆನ್ ಬೊರ್ಗೊಹೈನ್ ಅವರ The Sunset ಕೃತಿಯನ್ನು ಸೂರ್ಯಾಸ್ತ ಎಂಬ ಶಿರೋನಾಮೆಯಲ್ಲಿ ಅನುವಾದಿಸಿದ್ದಾರೆ. ಡಾ. ಎಸ್. ಎಂ. ಹುಣಶ್ಯಾಳರ The Lingayat Movement ಕೃತಿಯನ್ನು ಅವರು ಅನುವಾದಿಸಿದ್ದು, ‘ಲಿಂಗಾಯತ ಚಳುವಳಿ’ ಎಂಬ ಶಿರೋನಾಮೆಯಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಪೀಠ, ಗದಗದಿಂದ ಪ್ರಕಟವಾಗಿದೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥಾ -ಜೇಡರ ದಾಸಿಮಯ್ಯ ಎಂಬ ವಚನದ ಸಾರದ ಒಂದನೆ ಸಾಲಿಗೆ ಅನ್ವರ್ಥಕ್ಕೆ ಸಮನಾದ ಸಮಾನ ಮನದ ವಸ್ತ್ರದ ದಂಪತೊಗಳು ಕರುನಾಡಿಗೆ ಹಿತವಾದ ಜೀವನ ಸಾಹಿತ್ಯ ಸಂದೇಶ ನೀಡಿದ್ದಾರೆ.
ಪ್ರಸ್ತುತ ಹತ್ತನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೋಟೆನಾಡಾದ ಗಜೇಂದ್ರಗಡ ನಗರದ ಸಿ. ಬಿ. ಎಸ್. ಸಿ ಶಾಲೆಯ ಆವರಣದಲ್ಲಿ 2025 ಜನವರಿ 19, 20 ಹಾಗೂ 21ರಂದು ಖ್ಯಾತ ಕವಿಗಳು ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಸರ್ವಾಧ್ಯಕ್ಷತೆಯಲ್ಲಿ ಬುಹ ವೈಶಿಷ್ಟ್ಯ ವಾಗಿ ಜರುಗಿತು. ಕನ್ನಡಮಾತೆ ಭುವನೇಶ್ವರಿ ರಥಯಾತ್ರೆ ಕನ್ನಡ ಜ್ಯೋತಿ ಮೆರವಣಿಗೆ ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚಾರಿಸಿ, ಜಕ್ಕಲಿಯಲ್ಲಿ ಉದ್ಘಾಟನೆ : ನರೇಗಲ್- ನಿಡಗುಂದಿಕೊಪ್ಪ – ನಿಡಗುಂದಿ ಮಾರ್ಗವಾಗಿ ಗಜೇಂದ್ರಗಡಕ್ಕೆ ಆಗಮಿಸಿ ಸಂಜೆ ೭ ಗಂಟೆ : ಮಕ್ಕಳಿಂದ ಸಾಸ್ಕೃತಿಕ ಕಾರ್ಯಕ್ರಮಗಳು ನೆರವೆರಿದವು. ಪ್ರಧಾನ ವೇದಿಕೆ : ಅಂದಾನಪ್ಪ ದೊಡ್ಡಮೇಟಿ – ಅಬ್ಬಿಗೇರಿ ವಿರೂಪಾಕ್ಷಪ್ಪ ಮಹಾಮಂಟಪ : ಪೂಜ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು – ಪೂಜ್ಯ ಅನ್ನದಾನ ಮಹಾಸ್ವಾಮಿಗಳು – ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಗಳು, ಮಹಾದ್ವಾರ : ಹುಯಿಲಗೋಳ ನಾರಾಯಣರಾಯ- ಪಂ. ಭೀಮಸೇನ ಜೋಶಿ, ಪ್ರವೇಶ ದ್ವಾರ : ಈಶ್ವರಪ್ಪ ಅಂದಾನಪ್ಪ ರೇವಡಿ, ದ್ವಾರಗಳು : ಚಾಮರಸ, ಕುಮಾರವ್ಯಾಸ, ದುರ್ಗಸಿಂಹ, ಪುಟ್ಟರಾಜ ಗವಾಯಿಗಳು ಸಂ. ಶಿ. ಭೂಸನೂರಮಠ, ಎಂ. ಡಿ. ಗೋಗೇರಿ, ಗೂಳಪ್ಪ ಕೊಟ್ರಪ್ಪ ಅರಳಿ, ಮುದೇನೂರ ಶಂಕ್ರಪ್ಪ, ಶ್ರೀ ಆಲೂರು ವೆಂಕಟರಾಯರು, ಗಿರಡ್ಡಿ ಗೋವಿಂದರಾಜ, ಆರ್. ಸಿ. ಹಿರೇಮಠ,
ಉದಯೋನ್ಮುಖ ಕವಿ ಲೇಖಕರ ಪುಸ್ತಕಗಳನ್ನು ಮುಖ್ಯ ವೇದಿಕೆಯಲ್ಲಿ ಲೋಕಾರ್ಪಣೆಗೊಂಡು ಓದುಗರು ಕೈ ಸೇರಿದವು. ಅವುಗಳೆಂದರೆ ಶ್ರೀ ರಮೇಶ ಮರಾಠಿ ಅವರ ‘ಚೇತನಾ’ ಕವನ ಸಂಕಲನ, ಶ್ರೀಮತಿ ಭುವನೇಶ್ವರಿ ಅಂಗಡಿ ಅವರ ‘ನಾವೇ ದೇವು’ ಕವನ ಸಂಕಲನ, ಹಾಗೂ ‘ಸಾಲಿಗುಡಿ’ ಲೇಖನ ಸಂಗ್ರಹ, ಶ್ರೀ ಶ್ರೀಧರ ದೊಡಮನಿ ಅವರ ‘ಹೃದಯದರಸಿ’ ಕವನ ಸಂಕಲನ, ಶ್ರೀ ಶಿವಾನಂದ ಹೊಂಬಳ ಅವರ ‘ಗಾಳಿಪಟ’ ಮಕ್ಕಳ ಕಥಾ ಸಂಕಲನ ‘ಗೊಣ್ಣೆ ಗೋಪಾಲ ಇತರ ಕತೆಗಳು. ‘ಸಿರಿಹೊನಲು’ (ಝನ್ ಕತೆಗಳು)
ಕೋಟೆನಾಡು ಗಜೇಂದ್ರಗಡದಲ್ಲಿ ೧೦ ನೇ ಕಸಾಸ ನಿಮಿತ್ತ ವಿಷೇಶ ಚಿತ್ರಕಲಾ ಪ್ರದರ್ಶನದಲಗಲ್ಲಿ ಶ್ರೀ ಪುಂಡಲೀಕ ಕಲ್ಲಿಗನೂರ ಅವರ ‘ವಚನ ಚಿತ್ರ ಸಂಗಮ’: ಶರಣರ ವಚನಗಳಿಗೆ ಚಿತ್ರವ್ಯಾಖ್ಯೆ, ಹಾಗೂ ‘ಗಜೇಂದ್ರಗಡ ಐತಿಹಾಸಿಕ ಪರಿಸರ’ ಕುರಿತ ಛಾಯಾ ಚಿತ್ರಗಳ ಪ್ರದರ್ಶನ ಜೆ. ಎನ್. ಕಲಾ ಶಾಲೆ ಹಾಗೂ ವಿಜಯ ಕಲಾ ಮಹಾವಿದ್ಯಾಲಯ ಗದಗ ಇವರಿಂದ ವಿಶೇಷ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ “ಅಂತರಗಂಗೆ” ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಹಾಗೂ ಶಾಸಕರು ಹಾಗೂ ಸಮ್ಮೇಳನವು ಸ್ವಾಗತ ಸಮಿತಿ ಅಧ್ಯಕ್ಷರಾದ ಜೆ. ಎಸ್. ಪಾಟೀಲರ ನೇತೃತ್ವದಲ್ಲಿ ಜರುಗಿದ್ದು ವಿಶೇಷ. ಬನ್ನಿ ಎಲ್ಲ ಕಡೆಗೆ ಪಸರಿಸೋಣ. ಎಲ್ಲರೂ ಕನ್ನಡ ಸಾಹಿತ್ಯದ ಘಮಲನ್ನು ಆನಂದಿಸೋಣ. ಜಿಮಸಾಪ ಅಧ್ಯಕ್ಷರು, ಲೇಖಕರು ಸನ್ಮಿತ್ರರಾದ ಡಾ. ರಾಜೇಂದ್ರ ಎಸ್. ಗಡಾದರು ಬರೆದ “ಗದಗ ಜಿಲ್ಲೆಯಲ್ಲಿ ೧೦ ಕಸಾಸಗಳು ನಡೆದು ಬಂದ ದಾರಿ” ಸತ್ವಯುತ ಲೇಖದ ಮಹತ್ವವನ್ನು ಸ್ಮರಿಸದೆ ಇರಲಾರೆ.
ಕವಿ ಸಾಹಿತಿ ಚಂದ್ರಶೇಖರ ವಸ್ತ್ರದ ರವರ ಘನ ವ್ಯಕ್ತಿತ್ವ
“ಚಂದ್ರಶೇಖರ್ ವಸ್ತ್ರದ ವಾಸ್ತವದಲ್ಲಿ ಅಂದರೆ ಲೌಕಿಕದಲ್ಲಿ ಒಬ್ಬ ಗ್ರಹಸ್ಥ, ಸಾಹಿತ್ಯದ ವಿದ್ಯಾರ್ಥಿ, ವೃತ್ತಿಯಿಂದ ಅಧ್ಯಾಪಕ ಆದರೆ ಒಳಗೊಳಗೆ ಬೆಳೆದಿದ್ದು ಶರಣ ಪರಂಪರೆಯಲ್ಲಿ ಶರಣ ಪರಂಪರೆ ಎಂದರೆ ಲೌಕಿಕದಲ್ಲಿದ್ದು ಲೌಕಿಕವನ್ನು ಮೀರಿದ ಒಂದು ಸಾಧನ ಪಥ” ಈ ಚಾಪನ್ನು ಅವರ ಬಹಳಷ್ಟು ಬರವಣಿಗೆಗಳಲ್ಲಿ ನಾವು ಕಾಣಬಹುದಾಗಿದೆ”. ಎಂಬ ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆಯವರ ಮಾತಿನಂತೆ ವಸ್ತ್ರದ ರವರ ಸಾಹಿತ್ಯ ಸೇವೆಯಲ್ಲಿ ಸಿಂಹಪಾಲು ವಚನ ವ ಶರಣ ಸಾಹಿತ್ಯಕ್ಕಿದೆ ಎಂಬುದು ಅಪೂರ್ವ ಮಾತು. ಹಲವಾರು ವಚನ ಮತ್ತು ಶರಣ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಅಹರ್ನಿಶಿ ದುಡಿದಿದ್ದಾರೆ. ತಾಯಿಯನ್ನು ಬಹು ಆಯಾಮಗಳಲ್ಲಿ ಕಟ್ಟಿಕೊಡುವಲ್ಲಿಯೂ ಯಶಸ್ವಿ ಬರಹಗಾರರಾಗಿ, ಮಾತೃಹೃದಯಿ ‘ಚಂದ್ರಸಾಕ್ಷಿ’ ವಚನಾಂಕಿತದ ಸಂವೇದನಾಶೀಲ ಲೇಖಕರಾಗಿರುವ ಮಹನೀಯರಿಗೆ ಗದಗ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಸ್ಥಾನ ಒಲಿದು ಬಂದಿರುವುದು ನ್ಯಾಯೋಚಿತವಾಗಿದೆ. ವಸ್ತ್ರದ ರವರ ಘನಮನದ ಶರಣ ಗುಣದ ಸಮಸಮಾಜ ಸಾಹಿತ್ಯ ಸೇವೆಗೆ ಇನ್ನೂ ಉನ್ನತೊನ್ನತವಾದ ಸ್ಥಾನ – ಮಾನ, ಘನತೆ – ಗೌರವ ಅರಸಿ ಬರಲೆಂದು ಶುಭ ಕೋರುವೆನು.
ಸುಭಾಷ್ ಹೇಮಣ್ಣಾ ಚವ್ಹಾಣ,