ಅಗಲಿಕೆಯ ನಡುವೆಯೂ ಅಮ್ಮ ಮಕ್ಕಳ ಜೀವನದ ರಥ ಕುಂಟುತ್ತಾ ಸಾಗುತ್ತಿತ್ತು. ಸುಮತಿಯು ಅಪರೂಪಕ್ಕೊಮ್ಮೆ ಮಕ್ಕಳನ್ನು ಭೇಟಿ ಮಾಡಲು ಹೋದಾಗ ತಾಯಿಯ ಮಮತೆ ಹಾಗೂ ವಾತ್ಸಲ್ಯ ಬಹಳವಾಗಿ ಸೆಳೆಯುತ್ತಿತ್ತು. ಎಳೆಯ ವಯಸ್ಸಿನಲ್ಲಿ ತಾಯಿಯ ನೆರಳಲ್ಲಿ ಪ್ರೀತಿ,ವಾತ್ಸಲ್ಯ,ಕಾಳಜಿ ಹಾಗೂ ತಾಯ ಮಮತೆಯನ್ನು ಅನುಭವಿಸಿ ಬೆಳೆಯಬೇಕಿದ್ದ ಮಕ್ಕಳನ್ನು ಬೇರೆ ದಾರಿಕಾಣದೆ ಹೀಗೆ ಪರರ ಆಶ್ರಯದಲ್ಲಿ ಬಿಟ್ಟಿರುವುದು ಅವಳ ಹೃದಯವನ್ನು ಹಿಂಡುತ್ತಿತ್ತು. ಆದರೆ ತನ್ನ ದುಡಿಮೆಯಲ್ಲಿ ಮಕ್ಕಳನ್ನು ಸಾಕಿ ಸಲಹಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವುದು ಅವಳಿಂದ ಸಾಧ್ಯವಿರಲಿಲ್ಲ. ತಾನು ದುಡಿಯಲು ಹೊರಗೆ ಹೋದಾಗ ತನ್ನ ಹೆಣ್ಣುಮಕ್ಕಳ ರಕ್ಷಣೆಯನ್ನು ಮಾಡಲು ಕೂಡಾ ಅವಳಿಂದ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಾಯಿಯ ಮಮತೆ ವಾತ್ಸಲ್ಯ ಎಲ್ಲವನ್ನು ತಡೆ ಹಿಡಿದುಕೊಂಡು ತನ್ನ ಭಾವವುಕತೆಗಿಂತಾ ಹೆಣ್ಣು ಮಕ್ಕಳ ಕ್ಷೇಮ,ರಕ್ಷಣೆ, ವಿದ್ಯಾಭ್ಯಾಸ, ಆಹಾರ, ವಸ್ತ್ರ ಮುಂತಾದ ಮೂಲಭೂತ ಅಗತ್ಯಗಳು ಅವಳಿಗೆ ಅತ್ಯಂತ ಮುಖ್ಯವಾಗಿ ಕಂಡವು. ಮಕ್ಕಳು ಬೆಳೆದಂತೆ ತನ್ನ ಈ ಪರಿಸ್ಥಿತಿಯ ಬಗ್ಗೆ ಅರಿತು ತನ್ನನ್ನು ಕ್ಷಮಿಸುವರು ಎನ್ನುವ ಭರವಸೆ ಅವಳಿಗೆ ಇತ್ತು. ಹಾಗಾಗಿ ತನ್ನ ಮುಗ್ಧ ಮಕ್ಕಳು ಅಲ್ಲಿ ತಮಗೆ ಉಂಟಾಗುವ ತೊಂದರೆಗಳನ್ನು ಹೇಳಿಕೊಂಡರು ಕೂಡಾ ಕಿವುಡಳಂತೆ ನಟಿಸುತ್ತಿದ್ದಳು. ಆದರೆ ಒಳಗೊಳಗೆ ಬಹಳ ನೊಂದುಕೊಳ್ಳುತ್ತಿದ್ದಳು. ಅವಳ ಮಕ್ಕಳು ಅಮ್ಮನ ಸಾನಿಧ್ಯವನ್ನು ಬಯಸುತ್ತಿದ್ದರು. ಆ ಮಕ್ಕಳಿಗೆ ತಾಯಿಯ ಮಡಿಲಿನ ವಾತ್ಸಲ್ಯದ ಅಗತ್ಯವಿತ್ತು. ಅದಕ್ಕಾಗಿ ಆ ಮಕ್ಕಳು ಹಾತೊರೆಯುತ್ತಿದ್ದರು. ಮೂರನೇ ಮಗಳಿಗೀಗ ಮೂರು ವರ್ಷ,ಅವಳಂತೂ ಅಮ್ಮನ ಜೊತೆಗೆ ಬರುತ್ತೇನೆ ಎಂದು ಹಠ ಹಿಡಿಯುತ್ತಿದ್ದಳು. ಅವಳಿಂದ ಬಿಡಿಸಿಕೊಂಡು ಮನೆಯ ಕಡೆಗೆ ಹೆಜ್ಜೆ ಹಾಕುವಾಗ ಒಂದೊಂದು ಹೆಜ್ಜೆಯೂ ಭಾರವಾದಂತೆ ಸುಮತಿಗೆ ಅನಿಸುತ್ತಿತ್ತು. 

ಕಣ್ಣೀರಿನಿಂದ ಒದ್ದೆಯಾದ ತನ್ನ ಮುಖವು ಮಕ್ಕಳಿಗೆ ಕಾಣದಿರಲೆಂದು ಸೆರಗನ್ನು ಮುಚ್ಚಿಕೊಂಡು ಅಷ್ಟು ದೂರ ನಡೆದು ಹೋಗಿ ತಿರುಗಿ ನೋಡುವಳು. ಅಷ್ಟು ಹೊತ್ತಿಗೆಲ್ಲ ಹಾಸ್ಟೆಲ್ ಮೇಲ್ವಿಚಾರಕಿ ಅವರನ್ನು ಒಳಗೆ ಕರೆದುಕೊಂಡು ಹೋಗಿರುತ್ತಿದ್ದರು. ಒಳಗೆ ಹೋದ ಮಕ್ಕಳು ಮೂವರೂ ಒಬ್ಬರನ್ನೊಬ್ಬರು ಅಪ್ಪಿ ಹಿಡಿದು ಆಳುತ್ತಿದ್ದರು. ವಾರ್ಡನ್ ಗದರಿದಾಗ ಸುಮ್ಮನಾಗುತ್ತಿದ್ದರು. ಒಮ್ಮೆಯಂತೂ ಎರಡನೆಯ ಹಾಗೂ ಮೂರನೆಯ ಮಗಳಿಬ್ಬರಿಗೂ ಚಿಕನ್ ಪೋಕ್ಸ್ ಕಾಣಿಸಿಕೊಂಡಿತು. ಆಗ ಅವರಿಬ್ಬರನ್ನೂ ಇತರ ಮಕ್ಕಳಿಂದ ಪ್ರತ್ಯೇಕಿಸಿ ಒಣ ಉರುವಲನ್ನು ತುಂಬಿಡುವ ಕತ್ತಲು ತುಂಬಿದ ಕೊಟ್ಟಿಗೆಯಲ್ಲಿ ಒಂದು ಗೋಣಿ ಚೀಲವನ್ನು ಹಾಸಿ ಇಬ್ಬರನ್ನೂ ಅದರ ಮೇಲೆ ಮಲಗುವಂತೆ ಹಾಗೂ ತಮ್ಮ ಅನುಮತಿ ಇಲ್ಲದೇ ಹೊರಗೆ ಬಾರದಂತೆ ಅನಾಥಾಶ್ರಮದ ವಾರ್ಡನ್ ತಾಕೀತು ಮಾಡಿದರು. ಇಬ್ಬರೂ ಮಕ್ಕಳು ವಾರ್ಡನ್ ಹೊಡೆಯುತ್ತಾರೆ ಎಂದು ಹೆದರಿ ಒಲ್ಲದ ಮನಸ್ಸಿನಿಂದ ಹಿರಿಯ ಅಕ್ಕನ ಮುಖವನ್ನು ದಯನೀಯವಾಗಿ ನೋಡುತ್ತಾ ಆ ಕೋಣೆಗೆ ಹೋದರು. ಹಿರಿಯವಳಿಗೆ ಚಿಕನ್ ಪೋಕ್ಸ್ ಇಲ್ಲದಿದ್ದುದರಿಂದ ಇತರ ಮಕ್ಕಳ ಜೊತೆ ಇರುವಂತೆ ಹೇಳಿದ್ದರು. ಇಬ್ಬರೂ ಪುಟ್ಟ ತಂಗಿಯರ ದೈನ್ಯತೆಯ ನೋಟವನ್ನು ಕಂಡು ಅವಳಿಗೆ ಅಳು ಬಂದರೂ ಮೌನವಾಗಿ ವಾರ್ಡನ್ ನ ಆಜ್ಞೆಯನ್ನು ಅನುಸರಿಸಿದಳು. ಕತ್ತಲ ಕೋಣೆಯೊಳಗೆ ಹೋದ ಮಕ್ಕಳಿಬ್ಬರೂ ಹೆದರಿ ಸುತ್ತ ನೋಡಿದರು. ಬೆಳಕೇ ಹರಿಯದ ಆ ಕೋಣೆಯೊಳಗೆ ಹೋದಾಗ ಅಲ್ಲಿ ಸೌದೆಯ(ಕಟ್ಟಿಗೆ) ಮೇಲೆ ಒಣಹಾಕಿದ್ದ ಗೋಣಿ ಚೀಲವನ್ನು ಕಂಡು ಬೆರಳು ತೋರಿಸುತ್ತಾ…”ಅಕ್ಕಾ…ಅಲ್ಲಿ ನೋಡು…ಏನೋ ಇದೆ…ನನಗೆ ಭಯವಾಗುತ್ತಿದೆ” ಎಂದು ಆ ಮೂರು ವರ್ಷದ ಹುಡುಗಿ ನಡುಗುತ್ತಾ ತನ್ನ ಪುಟ್ಟ ಅಕ್ಕನನ್ನು ಅಪ್ಪಿ ಹಿಡಿದು ಅತ್ತಳು. 

ತಂಗಿಯು ಭಯದಿಂದ ಅಳುತ್ತಾ ತನ್ನನ್ನು ಅಪ್ಪಿದಾಗ ಆ ಐದು ವರ್ಷದ ಪುಟ್ಟ ಅಕ್ಕ, ತಂಗಿಯ ತಲೆಯನ್ನು ನೇವರಿಸುತ್ತಾ…ನಿನ್ನ ಅಕ್ಕ ನಿನ್ನ ಜೊತೆ ಇದ್ದಾಳೆ ಅಲ್ಲವೇ? ಅಲ್ಲಿ ಏನೂ ಇಲ್ಲ…ಹೆದರಬೇಡ…ಹೆದರಿಕೆಯಾದರೆ ಕಣ್ಣು ಮುಚ್ಚಿಕೊಂಡು ಈ ಅಕ್ಕನನ್ನು ಅಪ್ಪಿಕೋ”… ಎಂದು ಹೇಳುತ್ತಾ ಅವಳ ತಲೆಯನ್ನು ನೇವರಿಸಿ ತಾನು ಬಹಳ ಧೈರ್ಯವಂತಳಂತೆ ಅವಳಿಗೆ ಸಾಂತ್ವನ ನೀಡಿದಳು. ಅವಳಿಗೂ ಒಳಗೊಳಗೇ ಹೆದರಿಕೆ. ಆಟವಾಡುತ್ತಿದ್ದಾಗ ಇತರೇ ಹಿರಿಯ ಮಕ್ಕಳು ಭೂತ ಪ್ರೇತದ ಬಗ್ಗೆ ಹೇಳಿದ ಕಥೆಗಳ ನೆನಪಾಗಿ ತಂಗಿಯನ್ನು ಅಪ್ಪಿ ಹಿಡಿದು ಅವಳೂ ನಡುಗಿದಳು. ಆದರೆ ಬೇರೆ ದಾರಿಯಿರಲಿಲ್ಲ. ತಮಗೆ ಏನಾಗಿದೆ ಎಂದು ಆ ಪುಟ್ಟ ಮಕ್ಕಳಿಗೂ ತಿಳಿದಿರಲಿಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ವಾರ್ಡನ್ ಊಟ ತಂದು ಸಣ್ಣದಾಗಿ ಬಾಗಿಲು ತೆರೆದು ಒಳಗೆ ತಳ್ಳುತ್ತಿದ್ದರು. ಆಗ ಮಾತ್ರ ಸ್ವಲ್ಪ ಬೆಳಕು ಆ ಕೋಣೆಯ ಒಳಗೆ ಬರುತ್ತಿತ್ತು. 

ಬೆಳಗ್ಗೆ ಕೊಡುತ್ತಿದ್ದ ಚಪ್ಪೆ ಇಡ್ಲಿ ಹಾಗೂ ಮಧ್ಯಾಹ್ನ,ರಾತ್ರಿ ಕೊಡುತ್ತಿದ್ದ ಮಜ್ಜಿಗೆ ಅನ್ನವನ್ನು ತಿನ್ನಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಜ್ವರದಿಂದ ಬಳಲಿ ಬೆಂಡಾದ ನಾಲಗೆಗೆ ಊಟ ತಿಂಡಿ ರುಚಿಸುತ್ತಿರಲಿಲ್ಲ. ಆದರೂ ತಿನ್ನುವುದಿಲ್ಲವೆಂದು ಹಠ ಹಿಡಿಯುತ್ತಿದ್ದ ತಂಗಿಯನ್ನು ಪುಸಲಾಯಿಸಿ ತಿನ್ನಿಸಿ ತಾನು ಉಳಿದದ್ದನ್ನು ತಿನ್ನುತ್ತಿದ್ದಳು ಪುಟ್ಟ ಅಕ್ಕ. ಜ್ವರದ ಜೊತೆಗೆ ಮೈಯೆಲ್ಲಾ ಗುಳ್ಳೆಗಳು ಎದ್ದಿದ್ದವು. ನವೆ ತಡೆಯಲಾರದೆ ಮಕ್ಕಳಿಬ್ಬರೂ ಮೈಯನ್ನು ಕೆರೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಒಣ ಕಟ್ಟಿಗೆಯಲ್ಲಿ ಇರುವ ಹುಳಹುಪ್ಪಟೆಗಳು ಮೈ ಮೇಲೆ ಹರಿದಾಡುತ್ತಿದ್ದವು. ಆಗೆಲ್ಲಾ ಮಕ್ಕಳು ಹೆದರಿ ಕಿಟಾರನೆ ಕಿರುಚಿಕೊಳ್ಳುತ್ತಿದ್ದರು. ನವೆಯಿಂದ ಮೈ ಕೆರೆದುಕೊಳ್ಳುತ್ತಿದ್ದ ಮಕ್ಕಳನ್ನು ನಡುವೆ ಬಂದು ಇಣುಕುವ ವಾರ್ಡನ್ ಗಮನಿಸಿ, ಅಡುಗೆಯವರನ್ನು ಕರೆದು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಡುಗೆಯವರು ವಾರ್ಡನ್ ಅಪ್ಪಣೆಯಂತೆ ಮಕ್ಕಳಿಬ್ಬರನ್ನೂ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆದುಕೊಂಡು ಹೋದರು. 

ವೈದ್ಯರು ಎರಡು ಶೀಷೆಯಲ್ಲಿ ಔಷಧಿಯನ್ನು ಕೊಟ್ಟು ಒಂದನ್ನು ಕುಡಿಯಲು ಹಾಗೂ ಮತ್ತೊಂದನ್ನು ಮೈಯಲ್ಲಿ ಎದ್ದ ಗುಳ್ಳೆಗಳ ಮೇಲೆ ಹಚ್ಚಲು ಹೇಳಿದರು. ಕೆಲವು ದಿನಗಳ ಕತ್ತಲೆ ಕೋಣೆಯ ವಾಸದ ನಂತರ ಅಕ್ಕ ತಂಗಿ ಇಬ್ಬರೂ ಉಳಿದ ಮಕ್ಕಳೊಂದಿಗೆ ಮತ್ತೊಮ್ಮೆ ಬೆರೆತರು. ನವೆ ಬಂದಾಗ ಕೆರೆದುಕೊಂಡಿದ್ದರಿಂದ ಅಲ್ಲಲ್ಲಿ ಗಾಯದ ಗುರುತುಗಳು ಮುಖದ ಮೇಲೆ ಇದ್ದವು. ಸುಮತಿಯು ಮಕ್ಕಳನ್ನು ಭೇಟಿ ಮಾಡಲು ಬಂದಾಗ ಮಕ್ಕಳ ಸ್ಥಿತಿಯನ್ನು ನೋಡಿ ಏನಾಯಿತೆಂದು ಕೇಳಲು, ಮೂರನೇ ಮಗಳು ತನ್ನ ಬಾಲ ಭಾಷೆಯಲ್ಲಿ ತನಗೆ ತಿಳಿದ ಹಾಗೆ ಒಂದಿಷ್ಟು ಪುಕಾರು ಹೇಳುತ್ತಾ ಅಮ್ಮನನ್ನು ಅಪ್ಪಿ ಜೋರಾಗಿ ಅತ್ತುಬಿಟ್ಟಳು.


Leave a Reply

Back To Top