ಚಿಂತನಾ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಎಲ್ಲಾ ತತ್ವಗಳ ಹೀರಿಕೊಂಡು”
ಚಿಂತನಾತ್ಮಕ ಬರಹ
ಎಲ್ಲಾ ತತ್ವಗಳ ಹೀರಿಕೊಂಡು
ಅಗೋ ನೋಡಲ್ಲಿ ದೂರದ ಬೆಟ್ಟ ಗುಡ್ಡಗಳು ಉರಿಬಿಸಿಲು, ಚಳಿ ಮಳೆಗೆ ಮೈಯೊಡ್ಡಿಕೊಂಡು ಸದಾ ಕಾಲವು ಧೃಡವಾಗಿದೆ…
ಬೆಟ್ಟದಲ್ಲಿ ಟಿಸಿಲೊಡೆದ ಬೀಜವೊಂದು ಸಸಿಯಾಗಿ ಹೊರ ಹೊಮ್ಮುತ್ತಿದೆ…
ಪ್ರಕೃತಿಯನ್ನು ನೋಡಿದಾಗ ನಾವು ಕಲಿಯಬೇಕಾದದ್ದು ತುಂಬಾನೇ ಇದೆ..!! ಮನುಷ್ಯರಾದ ನಾವು ನಮ್ಮ ನಮ್ಮ ಸಿದ್ಧಾಂತಗಳನ್ನು ತತ್ವಗಳನ್ನು ನಮ್ಮ ನಮ್ಮ ಬರಹಗಳಲ್ಲಿ ತೋರ್ಪಡಿಸುತ್ತಾ, ಒಂದು ಚೌಕಟ್ಟನ್ನು ಹಾಕಿಕೊಂಡು ಅದರಲ್ಲಿಯೇ ಬದುಕುವುದನ್ನು ರೂಢಿ ಮಾಡಿಕೊಂಡುಬಿಟ್ಟಿದ್ದೇವೆ. ಇತ್ತಿಚಿನ ಪಂಥಗಳು, ಜಾತಿಗಳು, ಧರ್ಮಗಳು… ಗಡಿಗಳನ್ನು , ಗೋಡೆಗಳನ್ನು ನಿರ್ಮಾಣ ಮಾಡಿಕೊಂಡು ವಿಲವಿಲನೆ ಒದ್ದಾಡುತ್ತಿವೆ. ಅದರಲ್ಲಿ ನಾವು ಲೀಲಾಜಾಲವಾಗಿ ಈಜುತ್ತಿದ್ದೇವೆ. ಜಾಗತಿಕ ಮಟ್ಟದಿಂದ ಹಿಡಿದು ಸ್ಥಳೀಯ ಗ್ರಾಮದ ಮಟ್ಟದವರೆಗೂ ಮನುಷ್ಯ ಸಂಬಂಧಗಳು ಸೀಮಿತ ಬಾಂಧವ್ಯವನ್ನು ಒಳಗೊಂಡು ಎಲ್ಲವನ್ನು ತಮ್ಮ ಮೂಗಿನ ನೇರದ ದೃಷ್ಟಿಕೋನದಿಂದಲೇ ನೋಡುವ ವಾಡಿಕೆ ಉಂಟಾಗಿದೆ. “ನನಗನಿಸಿದ್ದೆ ಶ್ರೇಷ್ಠ ಕುಳಿತಿದ್ದೆಲ್ಲವೂ ಕನಿಷ್ಠ, ನಾನು ಹೇಳಿದ್ದೆ ಎಲ್ಲವೂ ನಡೆಯಬೇಕು, ನನ್ನ ಸಿದ್ದಾಂತವೇ ಶ್ರೇಷ್ಠ..” ಹೀಗೆ ಹಲವಾರು ಅಡ್ಡಗೋಡೆಗಳು ನಿರ್ಮಾಣವಾಗಿ ಮನಸ್ಸುಗಳು ಮುದುಡಿಕೊಂಡಿವೆ.
ಆದರೆ ಪ್ರಕೃತಿ ಎಲ್ಲವನ್ನು ನೋಡುತ್ತಲೇ ಮೌನವಾಗಿ ಮುಗುಳ್ನಗುತ್ತಾ ಪ್ರೀತಿಯನ್ನು ಸದಾ ಉಣಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಭಾಗ ಮಾತ್ರ. ಮನುಷ್ಯನೇ ಪ್ರಕೃತಿಯಲ್ಲ. ಪ್ರಕೃತಿಯೊಳಗಿನ ಮರವು ನೆಲದೊಳಗೆ ಬಿದ್ದ ತನಗೆ ಸಿಕ್ಕ, ದಕ್ಕಿದ ಗೊಬ್ಬರ, ನೀರು ಎಲ್ಲವನ್ನೂ ಹೀರಿಕೊಂಡು ಫಲವತ್ತಾದ ಹಣ್ಣುಗಳನ್ನು, ಹಚ್ಚಹಸಿರಾದ ಎಲೆಗಳು, ಸೊಗಸಾದ ನೆರಳು, ದಷ್ಟಪುಷ್ಟವಾಗುತ್ತದೆ. ಮನುಷ್ಯನಿಗೆ ಬೇಕಾದ ಸಂಜೀವಿನಿ ‘ಆಮ್ಲಜನಿಕ’ ಕೊಡುತ್ತ ಕೊಡುತ್ತಾ ಅದು ಹಗುರಾಗುತ್ತದೆ ಮತ್ತು ಮನುಷ್ಯನ ಬದುಕಿಗೆ ಬೇಡವಾದ ಕಾರ್ಬನ್ ಡೈಆಕ್ಸೈಡ್ ಅನ್ನು ನುಂಗಿಕೊಂಡು ನಳನಳಿಸುತ್ತದೆ. ಮರಗಳು ಕಲಿಸಿದಷ್ಟು ಪಾಠ ನಮಗೆ ಬೇರೆ ಯಾರು ಕಲಿಸುವುದಿಲ್ಲ ಅಲ್ಲವೇ..? ಆದರೂ ಮರವನ್ನು ನೋಡುತ್ತಾ ನೋಡುತ್ತಾ ನಾವು ಏನೂ ಪಾಠ ಕಲಿಯಲಾರದೆ, ಬರೀ ದ್ವೇಷವನ್ನು ಸಾಧಿಸಿಕೊಂಡು ಮರ ಮರ ಮರುಗುತ್ತೇವೆ. ಕೊರಗುತ್ತೇವೆ. ದ್ವೇಷಿಸುತ್ತೇವೆ. ಅಹಂಕಾರದಿಂದ ವರ್ತಿಸುತ್ತೇವೆ. ಗಾಂಧೀಜಿಯವರು, ಧರ್ಮವನ್ನು ಆಲದ ಮರಕ್ಕೆ ಹೋಲಿಸುತ್ತಾರೆ. “ನಿಜವಾದ ಧರ್ಮ ಎಂದರೆ ಮನುಷ್ಯ ಧರ್ಮ ಅದು ಆಲದ ಮರದ ಬೇರಿದಂತೆ. ಈ ಜಗತ್ತಿನಲ್ಲಿ ಸೃಷ್ಟಿಯಾದ ಅನೇಕ ಧರ್ಮಗಳು ಟೊಂಗೆಯಂತೆ, ಎಲೆಯಂತೆ ಚಿಗಿಯಬಲ್ಲವೂ ಹಚ್ಚಹಸಿರು ನೀಡವಲ್ಲವು. ಹಾಗಾಗಿ ನಮಗೆ ಗೊತ್ತಿಲ್ಲದೆ ಮನುಷ್ಯ ಧರ್ಮದ ಬೇರುಗಳಿಗೆ ಕೈ ಹಾಕಿ ಬುಡ ಸಮೇತ ಕೀಳುವ ದುಸಾಹಸಕ್ಕೆ ಒಳಗಾಗುತ್ತಿದ್ದೇವೆ..” ಎಂದು ತಮ್ಮ ಚಿಂತನೆಯಲ್ಲಿ ತಿಳಿಸಿದ್ದಾರೆ.
ಮನುಷ್ಯರಾದ ನಾವುಗಳು ಎಲ್ಲ ತತ್ವಗಳನ್ನು ಹೀರಿಕೊಳ್ಳಲೇಬೇಕು. ಅದು ಯಾವುದೇ ಪಂಥದ ವಿಚಾರವಿರಲಿ. ಯಾವ ಧರ್ಮವೇ ಇರಲಿ, ಯಾವ ಭಾಷೆಯಿರಲಿ ಅವೆಲ್ಲವನ್ನು ನಾವು ಅರಗಿಸಿಕೊಳ್ಳಬೇಕು. ಒಳ್ಳೆಯದನ್ನು ಸ್ವೀಕರಿಸುತ್ತಾ ಸ್ವೀಕರಿಸುತ್ತಾ ಬೆಳೆಯಬೇಕಾಗಿದೆ. ಒಳ್ಳೆಯ ಅಂಶಗಳು ಉತ್ತಮ ಚಿಂತನೆಗಳು. ಜಗತ್ತಿನ ಎಲ್ಲಾ ಮೂಲೆಗಳಿಂದ ಬರಲಿ ಅವುಗಳನ್ನು ಪ್ರೀತಿಯಿಂದ ನಮ್ಮ ಮನೆಯ ಕಿಟಕಿಗಳಿಂದ ಸ್ವಾಗತಿಸೋಣ. ಜೊತೆ ಜೊತೆಗೆ ಅವುಗಳನ್ನು ಹೃದಯಕ್ಕೆ ಇಳಿಸಿಕೊಳ್ಳೋಣ. ಒಳ್ಳೆಯ ಅಂಶಗಳನ್ನು ಸ್ವೀಕರಿಸುತ್ತಾ ಒಳ್ಳೆಯ ನಡೆ-ನುಡಿಗಳನ್ನು ಅನುಸರಿಸುತ್ತ ಮನುಷ್ಯರಾದ ನಾವುಗಳು ಮನುಷ್ಯರಾಗಿ ಬಾಳೋಣ. ಮನುಷ್ಯ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೊಂದು ಇಲ್ಲ. ಕುವೆಂಪುರವರ ಸರ್ವೋದಯದ ಪರಿಕಲ್ಪನೆ, ವಿಶ್ವ ಭಾತೃತ್ವದ ಪರಿಕಲ್ಪನೆ, ನಮ್ಮೊಳಗೆ ಇಳಿದಾಗ ಮಾತ್ರ ನಾವು ಎಲ್ಲಾ ಒಳ್ಳೆಯ ತತ್ವಗಳನ್ನು ನಮ್ಮೊಳಗೆ ಪಾಲಿಸಲು ಸಾಧ್ಯವಾಗುತ್ತದೆ ಇಲ್ಲದೆ ಹೋದರೆ ಅಡ್ಡಗೋಡೆಗಳಾಗಿಬಿಡುತ್ತವೆ. ಮನಸ್ಸು ಮನಸ್ಸುಗಳ ಕವಾಟುಗಳನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಹೃದಯದ ಕವಾಟುಗಳನ್ನು ಮುಚ್ಚುವುದರ ಬದಲಾಗಿ ಅವುಗಳನ್ನು ತೆರೆದು ಒಳ್ಳೆಯ ಅಂಶಗಳನ್ನು ಸ್ವೀಕರಿಸೋಣ. ಮಾನವ ಮರದಂತೆ ಬದುಕಿದರೆ ಸಾಕು ಜೀವನ ಸಾರ್ಥಕವಾಗಲ್ಲದು.
ಪ್ರಕೃತಿಯಲ್ಲಿ ದೊರೆಯುವ ನೀರು, ಗಾಳಿ, ಬೆಳಕು, ಬೆಂಕಿಗಿಲ್ಲದ ಜಾತಿ ಧರ್ಮ ಮನುಷ್ಯನಿಗೇಕೆ ಬಂತೋ ಗೊತ್ತಿಲ್ಲ. ನಮ್ಮೆದೆಯೊಳಗೆ ಹರಿಯುವ ರಕ್ತ, ಮಾಂಸ ಮಜ್ಜೆಯೂ ಒಂದಾಗಿರುವಾಗ ದ್ವೇಷ ಹೇಗೆ ಹುಟ್ಟಿತ್ತೋ…ಅದನ್ನು ನಾವೆಲ್ಲರೂ ಮೀರಬೇಕಾಗಿದೆ. ಗಡಿಗಳನ್ನು ಒಡೆದು ಮನುಷ್ಯ ಪ್ರೀತಿಯನ್ನು ಹಂಚಬೇಕಾಗಿದೆ. ಅದಕೊಂದಿಷ್ಟು ಮನಸ್ಸು ವಿಶಾಲವಾಗಬೇಕಾಗಿದೆ. ಹೃದಯ ಮೃದುವಾಗಿ ಅರಳಬೇಕಾಗಿದೆ. ಕರುಣೆಯ ತೋರೋ ಕಣ್ಣುಗಳು ಅರಳಬೇಕಾಗಿದೆ. ಅಂತಹ ಮನುಷ್ಯ ಪ್ರೀತಿಯನ್ನು ಹಂಚಿದವರು ದಾಸರು,ವಚನಕಾರರು, ಸಂತರು,ಶರಣರು,ಸೂಫಿಗಳು,ಆರೂಢರು…ಅವರ ಹಾದಿಯ ಜಾಡಿನಲ್ಲಿ ಹೆಜ್ಜೆ ಹಾಕೋಣ…ಎಲ್ಲಾ ತತ್ವವ ಹೀರಿಕೊಳ್ಳುತ್ತಾ…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ