ವಿಶೇಷ ಲೇಖನ
ಸುಹೇಚ ಪರಮವಾಡಿ
“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ”
[7:48 pm, 02/01/2025] ಸಂಗಾತಿ ಬ್ಲಾಗ್: (೧೯ ನೇ ಶತಮಾನದಲ್ಲಿ ಸಮಾಜದ ಅಂಧ ಶ್ರದ್ಧೆ, ಅಸ್ಪೃಶ್ಯತೆ, ಮನುವಾದ ತೊಡೆದು ಹಾಕಿ, ಶೋಷಿತ ಜನಾಂಗದ ಮಹಿಳೆಯರ, ಮಕ್ಕಳ ಮತ್ತು ಅನಾಥರ ಬಾಳನ್ನು ಅಕ್ಷರ ಜ್ಯೋತಿಯ ಮೂಲಕ ಬೆಳಗಿದ ಶಿಕ್ಷಕಿ, ಕವಯತ್ರಿ ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನ ಜನವರಿ ೦೩ ಇದ್ದು ಸದರಿ ದಿನ ದೇಶದ ಎಲ್ಲ ಶಾಲಾ ಕಾಲೇಜುಗಳು ಮತ್ತು ಸರಕಾರಿ ಕಛೇರಿಗಳಲ್ಲಿ ಆಚರಿಸಿ ಅವರ ಆದರ್ಶವನ್ನು ಅನುಪಾಲಿಸಕು ನಿರ್ದೇಶಿಸಲಾಗಿದೆ ಆ ನಿಮಿತ್ತ ಮಾಹಿತಿ ಪೂರ್ಣ ಲೇಖನ)
ಆಧುನಿಕ ಭಾರತದ ಪ್ರ ಪ್ರಥಮ ಶಿಕ್ಷಕಿ ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ
ಶತಶತಮಾನಗಳಿಂದ ಪೌರೋಹಿತ್ಯದ ದಬ್ಬಾಳಿಕೆಯ ಮತ್ತು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಗುಲಾಮಗಿರಿಯನ್ನು ಮೂಲನಿವಾಸಿ ಕೆಳಸಮೂದಾಯದ ಜನರ ಜೀವನ ಪ್ರಾಣಿ ಪಕ್ಷಿಗಳಿಗಿಂತಲೂ ಕೀಳಾಗಿತ್ತು. ಮನಃಶಾಸ್ತ್ರದ ಗೊಡ್ಡು ಸಂಪ್ರದಾಯದ ಅನೀತಿಯಿಂದ ಪೇಶ್ವೆಗಳ ದುರಾಡಳಿತ್ಕೊಳಗಾಗಿ, ಮಹಾರ್ ಯೋಧರು ವ್ಯಕ್ತಿ ಗೌರವದಿಂದ ವಂಚಿತರಾಗಿ, ಅವಮಾನವನ್ನು ಸಹಿಸದೆ ಬಂಡೆದ್ದು ೦೧ ಜನವರಿ ೧೮೧೮ರಂದು ಪುಣೆಯ ಭೀಮಾನದಿ ತೀರದಲ್ಲಿ ಯುದ್ಧ ಸಾರಿ, ಅನ್ನ ನೀರು, ವಿಶ್ರಾಂತಿಯ ಪರುವೆ ಇರದೆ ಪರಾಕ್ರಮದಿಂದ ಹೋರಾಡಿ, ಗೆಲುವು ಪಡೆದು ಸಮಾನತೆಗೆ ಮುನ್ನುಡಿ ಬರೆದಿದ್ದಾರೂ ಕುತಂತ್ರಿ ಬ್ರಾಹ್ಮಣರು ತಮಗಾದ ಹೀನಾಯ ಸೋಲನ್ನು ಮುಚ್ಚಿಟ್ಟು ಕೆಳ ವರ್ಗದ ಜನರಿಗೆ ಸಾಮಾಜಿಕ ಸ್ಥಾನ ಮಾನ ಗೌರವದಿಂದ ವಂಚಿಸಿ ಹಿಂಸಿಸುತ್ತಿದ್ದರು. ಇದನ್ನೆಲ್ಲ ಖಂಡಿಸಿದ ಕ್ರಾಂತಿ ಮಾತೆ ಸಾವಿತ್ರಿಬಾಯಿ ಫುಲೆ (೦೧ ಜನವರಿ ೧೮೩೧ – ೧೦ ಮಾರ್ಚ ೧೮೯೭) ವೈಚಾರಿಕ ಶಿಕ್ಷಕಿ, ಸತ್ಯ ಶೋಧಕ ಸಮಾಜದ ಸಂಚಾಲಕಿ, ಮುಖ್ಯೋಪಾಧ್ಯಾಯಿನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ತಳವರ್ಗದವನ್ನು ಉದ್ಧರಿಸಲು ಕಾವ್ಯ ಬರೆದ ಸಮಾನತೆಯ ಮಾತೆ, ಅಕ್ಷರದವ್ವ ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು. ಮನುಮತಿಗಳು ನೀಡಿದ ಎಲ್ಲಾ ವಿಧದ ಹಿಂಸೆ, ಕ್ರೌರ್ಯ, ನಿಂದೆ, ಅಪಮಾನವನ್ನು ಸಹಿಸಿ ಮೆಟ್ಟಿ ನಿಂತು ಗುಲಾಮಗಿರಿಯ ಕತ್ತಲೆಯಲ್ಲಿ ಧ್ವನಿ ಇಲ್ಲದೆ ನರಳುತಿದ್ದ ಜನರ ಬಾಳಿನಲ್ಲಿ ಅಕ್ಷರ ಎಂಬ ಜ್ಯೋತಿ ಮೂಲಕ ಸ್ವರ್ಗದಾನಂದವನ್ನು ತಂದು ಕೊಟ್ಟ ಯಶೋಗಾಥೆ ಅಸಾಮಾನ್ಯ ರೋಚಕ ತಿರುವುಗಳ ಸಂಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನಮಾಡೋಣ.
ಸಾವಿತ್ರಿಬಾಯಿ ಫುಲೆ ೦೩ ಜನವರಿ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ ‘ನೈಗಾಂನ್’ನಲ್ಲಿ ಹಿಂದುಳಿದ ವರ್ಗ (ಒಬಿಸಿ)ದಲ್ಲಿ ಹುಟ್ಟಿದರು. ಇವರ ತಂದೆ ನೇವಸೆ ಪಾಟೀಲ ಮತ್ತು ತಾಯಿ ಲಕ್ಷ್ಮೀಬಾಯಿ. ೦೮ ನೇ ವರ್ಷದ ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ೧೩ ವರ್ಷದ ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಏಕಂದರೆ ಆಗ ಬಾಲ್ಯವಿವಾಹ ಮುಂಚೂಣಿಯಲ್ಲಿತ್ತು. ಮಾತೆ ಸಾವಿತ್ತಿಬಾಯಿಯವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು.
ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅವರನ್ನು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು.
ಇಂದು ಭಾರತದ ಮಹಿಳೆಯರು ಅನುಭವಿಸುತ್ತಿರುವ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ , ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದ ಅಕ್ಷರಮಾತೆಯಾಗಿದ್ದಾರೆ.
ಜ್ಯೋತಿರಾವ್ ಫುಲೆ ಅವರೊಂದಿಗೆ, ಸಾವಿತ್ರಿಬಾಯಿ ಫುಲೆ ಅವರು 1848 ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಮಹಿಳಾ ಶಾಲೆಯನ್ನು ತೆರೆದರು. ಬುಧ್ವರ್ ಪೇಠ್‌ನಲ್ಲಿರುವ ಭಿಡೆ ವಾಡಾ ಮತ್ತು ಮಹರ್ವಾಡದಲ್ಲಿ ಶಾಲೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಸಾಮಾಜಿಕ ದಬ್ಬಾಳಿಕೆಗೆ ಕಡಿವಾಣ ಹಾಕುವುದು ಮಾತ್ರವಲ್ಲದೆ ಅವರ ಮೂಲಭೂತ ಅಗತ್ಯಗಳಾದ ಆಹಾರ, ಆರೋಗ್ಯ, ಬಟ್ಟೆ ಇತ್ಯಾದಿಗಳನ್ನು ಪರಿಹರಿಸುವ ಕಲ್ಪನೆಯನ್ನು ಅರಿತು ಪ್ರತಿಧ್ವನಿಸಿದರು. ಅವರು ಶಿಕ್ಷಕರ ಶಿಕ್ಷಣದ ಕಲ್ಪನೆಯನ್ನು ಉತ್ತೇಜಿಸಿದರು. ಸಾವಿತ್ರಿಬಾಯಿ ಫುಲೆ ಕೂಡ ಒಬ್ಬ ಕವಯತ್ರಿಯಾಗಿದ್ದು, ಅವರ ಸಾಹಿತ್ಯವನ್ನು ತುಳಿತಕ್ಕೊಳಗಾದವರ ಸಾಹಿತ್ಯವೆಂದು ಪರಿಗಣಿಸಲಾಗಿದೆ. ಅವರ ಪ್ರಮುಖ ಕೃತಿಗಳು ಇಂತಿವೆ:- ಪ್ರಥಮ ಕವನ ಸಂಕಲನ ಕಾವ್ಯಫೂಲೆ (ಕಾವ್ಯ ಅರಳಿದೆ) – ೧೮೫೪, ಭವನಕಾಶಿ ಸುಬೋಧ ರತ್ನಾಕರ್ (ಅಪ್ಪಟ ಮುತ್ತುಗಳ ಸಾಗರ) -೧೮೯೧, ಮಾತುಶ್ರೀ ಸಾವಿತ್ರಿಬಾಯಿ ಫುಲೆಂಚಿ ಭಾಷಣೆ ವಾ ಗಾಣಿ, ಜೋತಿಬಂಚಿ ಭಾಷಣೆ ಸಂಪುಟ. 1 ರಿಂದ 4 – [ಮಹಾತ್ಮ ಫುಲೆಯವರ ಭಾಷಣಗಳ ಸಂಗ್ರಹ, ಸಾವಿತ್ರಿಬಾಯಿ ಫುಲೆಯವರು ಸಂಪಾದಿಸಿದ್ದಾರೆ – ೧೮೯೨], ಸತ್ಯ ಶೋಧಕ ಪರಿಷತ್ತಿನ ಅಧ್ಯಕ್ಷರಾಗಿ ವಿವಿಧ ಸ್ಥಳಗಳಲ್ಲಿ ಅವರು ಮಾಡಿದ ಭಾಷಣಗಳು ಮತ್ತು ಮಹಾತ್ಮ ಫುಲೆ ಅವರಿಗೆ ಬರೆದ ಪತ್ರಗಳು, ಕರ್ಜೆ (ಸಾಲ) ಪ್ರಬಂಧ ಬರೆದಿರುವ ಇವರನ್ನು ಮಹಾರಾಷ್ಟ್ರದ ಅಗ್ರಗಣ್ಯ ಸಾಹಿತಿ ಎಂದು ಪರಿಗಣಿಸಲಾಗಿದೆ. ಜ್ಯೋತಿರಾವ್ ಫುಲೆ ಜೊತೆಗೆ ಸೇರಿ ಅವರು ಗರ್ಭಿಣಿ ಅತ್ಯಾಚಾರ ಸಂತ್ರಸ್ತರಿಗೆ ಆರೈಕೆ ಕೇಂದ್ರವನ್ನು ತೆರೆದು; ಈ ಕೇಂದ್ರವನ್ನು ‘ಬಾಲ್ಹತ್ಯ ಪ್ರತಿಬಂಧಕ ಗೃಹ’ ಎಂದು ಕರೆದ ಇವರು ಫುಲೆಯವರ ನಿಧನದ ನಂತರ ಫುಲೆ ಸತ್ಯ ಶೋಧಕ ಸಮಾಜದ ಕೆಲಸವನ್ನು ಕೈಗೆತ್ತಿಕೊಂಡರು. ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅವರು 1852 ರಲ್ಲಿ ಮಹಿಳಾ ಸೇವಾ ಮಂಡಲವನ್ನು ತೆರೆದರು. ಪುಣೆಯಲ್ಲಿನ ಸ್ಥಳೀಯ ಸ್ತ್ರೀ ಶಾಲೆ ಮತ್ತು ಮಹಾರ್ಸ್, ಮಾಂಗ್ಸ್ ಮತ್ತು ಎಟ್ಸೆಟೆರಾಗಳ ಶಿಕ್ಷಣವನ್ನು ಉತ್ತೇಜಿಸುವ ಸೊಸೈಟಿಯು 1850 ರ ದಶಕದಲ್ಲಿ ಜ್ಯೋತಿರಾವ್ ಫುಲೆ ಅವರೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ತೆರೆದ ಎರಡು ಶೈಕ್ಷಣಿಕ ಟ್ರಸ್ಟ್‌ಗಳಾಗಿವೆ..
ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದುದು.
೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ. ೧೮೬೮ ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು (ಯಶವಂತ) ದತ್ತು ತೆಗೆದುಕೊಳ್ಳುವುದರ ಮೂಲಕ ಸಾಮಾಜಿಕ ಅಂಧ ಶ್ರದ್ಧೆಯನ್ನು ತೊಡೆದು ಹಾಕಲು ಶ್ರಮಿಸಿದ ಇವರ ಸಾಮಾಜಿಕ ಸಂಘಟನೆ ಕೊಡುಗೆಗಳನ್ನು ಗಮನಿಸಿ ಅವರನ್ನು ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದೆ.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಮೊದಲ ದಲಿತ ಮಹಿಳೆ, ವಾಸ್ತವವಾಗಿ ಅವರ ಕವಿತೆಗಳು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗಮನ ಸೆಳೆದ ಮೊದಲ ಮಹಿಳೆ. ಅವರು ತಮ್ಮ ಕವಿತೆಗಳ ಮೂಲಕ ಶಿಕ್ಷಣದ ಅಗತ್ಯ, ಸಮಾನತೆ, ಆತ್ಮಗೌರವವನ್ನು ಒತ್ತಿಹೇಳುವ ಆಧುನಿಕ ಕಾವ್ಯದ ತಾಯಿ. 1854 ರ ಸಾವಿತ್ರಿಬಾಯಿ ಅವರ ಕವನಗಳ ಸಂಗ್ರಹವಾದ “ಕಾವ್ಯಾಫುಲೆ” ಯಿಂದ ಅವರ ಒಂದು ಕವನವನ್ನು ಇಲ್ಲಿ ಉಲ್ಲೇಖಿಸುವುದಾದರೆ:-
.
ಹೋಗಿ, ಶಿಕ್ಷಣ ಪಡೆಯಿರಿ
ಸ್ವಾವಲಂಬಿಗಳಾಗಿರಿ, ಶ್ರಮಶೀಲರಾಗಿರಿ
ಕೆಲಸ ಮಾಡಿ, ಬುದ್ಧಿವಂತಿಕೆ ಮತ್ತು ಸಂಪತ್ತನ್ನು ಸಂಗ್ರಹಿಸಿ,
ಜ್ಞಾನವಿಲ್ಲದೆ ಎಲ್ಲವೂ ಕಳೆದುಹೋಗುತ್ತದೆ
ನಾವು ಬುದ್ಧಿವಂತಿಕೆ ಇಲ್ಲದೆ ಪ್ರಾಣಿಗಳಾಗುತ್ತೇವೆ,
ಇನ್ನು ಸುಮ್ಮನೆ ಕುಳಿತುಕೊಳ್ಳಬೇಡಿ, ಹೋಗಿ, ಶಿಕ್ಷಣ ಪಡೆಯಿರಿ
ತುಳಿತಕ್ಕೊಳಗಾದ ಮತ್ತು ತ್ಯಜಿಸಲ್ಪಟ್ಟವರ ದುಃಖವನ್ನು ಕೊನೆಗೊಳಿಸಿ,
ಕಲಿಯಲು ನಿಮಗೆ ಸುವರ್ಣಾವಕಾಶವಿದೆ
ಆದ್ದರಿಂದ ಕಲಿಯಿರಿ ಮತ್ತು ಜಾತಿಯ ಸರಪಳಿಗಳನ್ನು ಮುರಿಯಿರಿ
ಎಂದು ಕಾವ್ಯದ ಮೂಲಕ ದಮನಿತರಲ್ಲಿ ಜಾಗೃತಿ ಮೂಡಿಸುತ, ದಾಸ್ಯದ ಕೊಂಡಿ ಮುರಿದು ಸ್ವಾಭಿಮಾನದ ಬಾಳು ಬಾಳಲು ಅಕ್ಷರವಂತರಾಗಿ, ನಿಮ್ಮ ಮುಂದೆ ಇರುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳಲು ಮಾರ್ಗದರ್ಶಿಸಿದ ತಾಯಿ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಅವರ ಭಾವಚಿತ್ರ ಸಹಿತ ಕೇಂದ್ರ ಸರ್ಕಾರ ಅಂಚೆ ಇಲಾಖೆ ಸಹಯೋಗದೊಂದಿಗೆ ೦೨₹ ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿ ಅವರಿಗೆ ಯುಕ್ತ ಗೌರವ ಅರ್ಪಿಸಿರುವುದನ್ನು ಸ್ಮರಿಸಬಹುದು. ತನಗೆ ಮಕ್ಕಳಿಲ್ಕದಿದ್ದರೂ ಅನಾಥರ ಸೇವೆ, ಹೆಣ್ಣು ಮಕ್ಕಳ ಸಬಲಿಕರಣದ ಹೋರಾಟದಲ್ಲಿಯೇ, ಅಕ್ಷರ ಸೇವೆಯಲ್ಲಿಯೇ ಮಕ್ಕಳನ್ನು ಕಂಡ ಮಹಾತಾಯಿ ಇವರ ಎಲ್ಲಾ ಸಾಧನೆಗೆ ಜೊತೆಯಾಗಿ ನಿಂತ ಫಾತಿಮಾ ಶೇಖರ ಯೋಗದಾನವನ್ನು ನೆನೆಯದಿರೆ ತಪ್ಪಾದಿತು. ೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಆರೈಕೆ ಮತ್ತು ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತಮ್ಮ ಅಮೂಲ್ಯ ಬಾಳನ್ನೇ ಸಮರ್ಪಿಸಿಕೊಂಡ ಸಂಗತಿ ಸಹೃದಯ ತಾಯಿಗರುಳಿನ ಯಾರ ಕಣ್ಣಲ್ಲಾದರೂ ಹನಿಯೊಡೆಯದಿರದು.
ಸುಹೇಚ ಪರಮವಾಡಿ ಸುಭಾಷ್ ಹೇಮಣ್ಣಾ ಚವ್ಹಾಣ,
–