ವಿಶೇಷ ಸಂಗಾತಿ
ಬದುಕಿನಲ್ಲಿ ಸಂತೃಪ್ತಿ
ಡಾ.ಸುಮತಿ ಪಿ
ಪ್ರಾಣಿ ಜನ್ಮಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದದ್ದು.ಮನುಷ್ಯನ ಜೀವನವು ಅತ್ಯಂತ ಅಮೂಲ್ಯವಾದದ್ದು, ಹಾಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಒಳ್ಳೆಯ ಕೆಲಸಗಳನ್ನು ಮಾಡಬೇಕು.ನಮ್ಮ ಹೆಚ್ಚಿನ ಎಲ್ಲಾ ಧರ್ಮಗಳಲ್ಲೂ ಇದನ್ನೇ ಹೇಳಲಾಗಿದೆ .ಭೂಮಿಯ ಮೇಲೆ ಮನುಷ್ಯ ಮಾಡಿರುವಂತಹ ಪಾಪ ಹಾಗೂ ಪುಣ್ಯ ಕರ್ಮಗಳಿಂದ ಮನುಷ್ಯನಿಗೆ ಸ್ವರ್ಗ ಅಥವಾ ನರಕವು ಪ್ರಾಪ್ತಿಯಾಗುತ್ತದೆ ಎಂಬುದಾಗಿ ಪುರಾಣಗಳಲ್ಲದೆ, ತತ್ವಜ್ಞಾನಿಗಳೂ ಹೇಳಿದ್ದಾರೆ.
*ಬದುಕಿನ ಪ್ರತೀಕ್ಷಣ ಅಮೂಲ್ಯಮನುಷ್ಯನ ಬದುಕೆನ್ನುವುದು ಸುಂದರವಾದ ಅನುಭವ. ಪ್ರತಿದಿನದಲ್ಲಿ ಒಂದೊಂದು ಕ್ಷಣವೂ ಅಮೂಲ್ಯ.ಬದುಕಿನ ಕ್ಷಣಗಳು ಯಾವುದೂ ಹಿಂತಿರುಗಿ ಬರುವುದಿಲ್ಲ.ಒಮ್ಮೆ ಕಳೆದರೆ ಮುಗಿಯಿತು. ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.ಅಂತೆಯೇ ನಮ್ಮ ಬದುಕು ಅನಿಶ್ಚಿತವೂ ಹೌದು .ಮುಂದಿನ ಕ್ಷಣ ಏನೆಂದು ಯಾರಿಗೂ ತಿಳಿಯದು.ಪ್ರತೀ ಕ್ಷಣವನ್ನು ಸಂಪೂರ್ಣ ಅನುಭವಿಸುವುದೇ ಬದುಕು. ಮಾನವ ಬದುಕಿನಲ್ಲಿ ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವುಗಳನ್ನು ಕಡಿಮೆ ಮಾಡುತ್ತಾ ಪ್ರೀತಿ, ಸೌಹಾರ್ದ, ಸಹಾಯ, ಕರುಣೆ ಮತ್ತು ಹಸನ್ಮುಖದ ನಡುವೆ ಬದುಕಿದರೆ ಅದು ಅವನ ಸಾರ್ಥಕ ಜೀವನವಾಗುತ್ತದೆ.ಮನುಷ್ಯನ ಚಿಂತನೆಗಳು ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಬದುಕಿನಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ಕಾಡುವ ನಿರಾಸೆ ಅವನದಾಗುತ್ತದೆ. ಇದನ್ನು ಅರ್ಥೈಸಿಕೊಳ್ಳದಿದ್ದರೆ, ಬದುಕಿಗೆ ಯಾವ ಅರ್ಥವೂ ಇರಲಾರದು
ಮುಗ್ದ ಹೃದಯವನ್ನು, ನಿಷ್ಕಲ್ಮಶ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿ ಇತರರ ನೋವನ್ನು ತಿಳಿಯಬಲ್ಲ. ಇಂತಹ ವ್ಯಕ್ತಿ ಬಡವರಿಗೆ, ದುರ್ಬಲರಿಗೆ ಮತ್ತು ಅಗತ್ಯವಿರುವವರಿಗೆ ನೆರವು ನೀಡಲು ಮುಂದಾಗುತ್ತಾನೆ.ತನ್ನ ಹೃದಯ ಪರರ ನೋವಿಗೂ ಮಿಡಿದರೆ ಮಾತ್ರ ಮನುಷತ್ಯ ವಿಜೃಂಭಿಸುವುದು
ಸ್ಪರ್ಧಾತ್ಮಕ ಜಗತ್ತು
ಇದು ಪೈಪೋಟಿಯ ಯುಗ. ಬೆಳಗ್ಗೆ ಎದ್ದೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಎಲ್ಲಾ ರೀತಿಯಲ್ಲಿಯೂ ಸ್ಪರ್ಧೆ ಎದುರಿಸಬೇಕಾಗುತ್ತದೆ.ಸ್ಪರ್ಧೆ ಎಂದಾಗ ಮನುಷ್ಯನ ಮನಸ್ಸಿನಲ್ಲಿ ಒತ್ತಡ ಉಂಟಾಗುತ್ತದೆ.ತಾನು ಸೋತರೆ ಎಂಬ ಭಯ ಮೂಡುತ್ತದೆ. ಸೋಲನ್ನು ತಪ್ಪಿಸಲು ಏನಾದರೂ ಮಾಡಬೇಕು ಗೆಲುವನ್ನು ಸಾಧಿಸಲು ದಾರಿಯನ್ನು ಹುಡುಕಬೇಕು ಎಂಬ ನಿಟ್ಟಿನಲ್ಲಿ ಮನಸ್ಸು ಚಿಂತಿಸುತ್ತಿರುತ್ತದೆ. ಗೆಲುವಿಗೆ ನಿಯತ್ತಿನ ದಾರಿ ಗೋಚರಿಸದೆ ಇದ್ದಾಗ, ಅಧರ್ಮದ ಅನ್ಯಾಯದ ದಾರಿಯತ್ತ ಮನಸು ವಾಲುತ್ತದೆ. ಇತರರಿಗೆ ಏನಾದರೂ ಸರಿ,ತಾನು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವ ಉದ್ದೇಶ ಒಂದೇ ಅವನ ಕಣ್ಣೆದುಗಿರುತ್ತದೆ.
ಅತಿಯಾಸೆಯಿಂದ ಅಸೂಯೆ
ಜೀವನದಲ್ಲಿ ಅತಿಯಾಸೆಪಟ್ಟು, ಅಸೂಯೆ ಮತ್ತು ಅಹಂಕಾರದಿಂದ ತಮ್ಮ ಹಾಗೂ ತಮ್ಮನ್ನು ನಂಬಿದವರ ಜೀವನವನ್ನು ಹಾಳುಮಾಡಿದ ಎಷ್ಟೋ ದೃಷ್ಟಾಂತಗಳು ಇಂದು ನಮಗೆ ನೋಡಲು ಸಿಗುತ್ತಿವೆ.ಮನುಷ್ಯ ಆಸೆಪಟ್ಟು ತನಗೆ ಸಿಗದಿದ್ದನ್ನು ಮತ್ತೆ ಮತ್ತೆ ನೆನೆದು, ಅದು ಬೇರೆಯವರಿಗೆ ಸಿಕ್ಕಿದರೆ ಕಂಡು ಅಸೂಯೆ ಪಡುವುದರಿಂದಲೇ ಅವನ ಬದುಕು ಹಾಳಾಗುವುದು,ತಪ್ಪು ದಾರಿ ಹಿಡಿಯುವುದು. ಈ ಅಸೂಯೆ ಎನ್ನುವ ಬೆಂಕಿ ಅಸೂಯೆ ಪಡುವವನನ್ನು ಒಳಗೊಳಗೇ ಸುಡುತ್ತಲೇ ಇರುತ್ತದೆ.ಈ ಬೆಂಕಿಯನ್ನು ಆರಿಸುವುದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದರೂ, ಸಮಾಧಾನ ಸಿಗದು. ಅಸೂಯೆ ಎನ್ನುವಂತಹ ಕಿಚ್ಚು ತನ್ನನ್ನು ಮಾತ್ರ ಸುಡುವುದಲ್ಲದೆ ತನ್ನ ಕುಟುಂಬದವರನ್ನು ಸಮಾಜದ ಜನರನ್ನು ಸುಟ್ಟು ಕರಕಲಾಗಿಸುತ್ತದೆ. ಅಸೂಯೆ ಎಂಬುದು ಮನುಷ್ಯತ್ವವನ್ನು ಸುಟ್ಟು ಹಾಕಿದೆ ವೈರತ್ವ, ದ್ವೇಷ ರೋಷವನ್ನು ಕೆರಳಿಸಿ ಅಮಾನವೀಯ ಕೃತ್ಯಗಳಿಗೆ ಇಳಿಸಿ ಸೋಲನ್ನು ಅನುಭವಿಸಿ, ದುಃಖದಲ್ಲಿ ಅಂತ್ಯವನ್ನು ಹಾಡುತ್ತದೆ ಎಂಬುವುದು ಸಹಜವಾದರೂ ಮನುಷ್ಯ ಅಸೂಯೆಯನ್ನು ಬಿಟ್ಟುಬಿಡದೆ ಇರುವುದೇ ಅವನ ಅತೃಪ್ತಿಗೆ ಕಾರಣವಾಗುತ್ತಿದೆ.
ತಿಳಿದು ಬದುಕುವವರಿಗಿಂತ ತುಳಿದು ಬದುಕುವವರೇ ಹೆಚ್ಚು.
ಮನುಷ್ಯ ತನ್ನಿಷ್ಟದಂತೆ ಬದುಕುವುದೇ ಜೀವನದ ಪರಮೋದ್ದೇಶ ಆಗಬಾರದು. ಶ್ರಮ, ಹೋರಾಟ, ಸಂಭ್ರಮ ಇದೆಲ್ಲವೂ ಬದುಕಿನ ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವ ಸನ್ನಿವೇಶಗಳು. ತನ್ನ ಬದುಕಿನ ಹೋರಾಟದಲ್ಲಿ ಯಾವಾಗಲೂ ತಾನಾಗೇ ಯಶಸ್ಸು ಸಿಗಬೇಕೆಂಬ ಇಚ್ಛೆ ಹೊಂದಿರುವವನು, ಹೇಗಾದರೂ ಮಾಡಿ ತನ್ನ ಮೇಲಾಟವನ್ನು ಸಾಧಿಸಲು ಪ್ರಯತ್ನಿಸುತ್ತಾನೆ.ಅದು ಇನ್ನೊಬ್ಬರನ್ನು ತುಳಿದಾದರೂ ಸರಿಯೆ ,ತನಗೇ ಗೆಲುವು ಸಿಗಬೇಕೆಂಬುವುದೇ ಅವನಿಗೆ ಮುಖ್ಯವಾಗಿರುತ್ತದೆ.ಆದರೆ ಇದು ಕೇವಲ ತಾತ್ಕಾಲಿಕವಾಗಿ ಸಿಗುವ ಗೆಲುವು. ತುಳಿತಕ್ಕೊಳಗಾದವನು ಶ್ರಮಪಟ್ಟು ಪ್ರಯತ್ನ ಮಾಡಿದಾಗ ತುಳಿದು ಸಂಪಾದಿಸಿದ ಗೆಲುವನ್ನು ಮೆಟ್ಟಿ ನಿಲ್ಲುವುದು ಖಂಡಿತ.ಹಾಗಾಗಿ ಇತರರನ್ನು ತುಳಿದು ಬದುಕುವುದಕ್ಕಿಂತ ತಿಳಿದು,ಅವರ ಸಾಧನೆಯ ಹಿಂದಿನ ಶ್ರಮವನ್ನು ಅರಿತು,ಗೌರವಿಸಿ,ತಾನೂ ಶ್ರಮಿಸಿ ಯಶಸ್ಸು ಕಾಣುವುದರಲ್ಲಿ ಬದುಕಿನ ಸಾರ್ಥಕ್ಯ ಪಡೆಯುವುದು ಮನುಜನ ವ್ಯಕ್ತಿತ್ದದ ಶ್ರೇಷ್ಠತೆಯನ್ನು ಸಾರುತ್ತದೆ.
ಸಂತೃಪ್ತ ಬದುಕು
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿಯೇ ಇಲ್ಲವಾಗಿದೆ.ಸಂತೃಪ್ತಿ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮೂಡುವ ಸುಖದ ಭಾವನೆ. ಪಾಲಿಗೆ ಬಂದದ್ದು ಪಂಚಾಮೃತ’ ಎಂದುಕೊಂಡು ತಾನು ಎಷ್ಟು ಶ್ರಮಿಸುತ್ತೇನೊ ಅಷ್ಟನ್ನು ಪಡೆದು ತೃಪ್ತಿಯಿಂದಲೇ ಜೀವನ ಸಾಗಿಸುವುದರಲ್ಲಿ ಹಿರಿತನವಿದೆ.
‘ ಆಸೆಯೇ ದುಃಖಕ್ಕೆ ಮೂಲ ಕಾರಣ’ ಎಂಬಂತೆ ಅತಿಯಾಸೆ ಯಿಂದ ಮಾನವ ಇತರರನ್ನು ನೋಡಿ ತಾನು ಅವರಂತೆ ಆಗಬೇಕು ಎಂದೆಣಿಸಿ,ತನಗಾಗದ ಸಾಹಸಕ್ಕಿಳಿದು,ಇರುವ ಸುಖ, ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾನೆ. ಪ್ರತಿಯೊಬ್ಬರೂ ತಮಗಿಂತಲೂ ಬೇರೆಯವರ ಸುಖವನ್ನು ಅಳೆಯುವುದೇ ಹೆಚ್ಚು.ಆ ಸುಖದ ಹಿಂದೆ ಅಡಗಿರುವ ಶ್ರಮದ ನೋವೆಷ್ಟು ಎಂಬುದನ್ನು ಅರಿಯರು.ಬಡವನೊಬ್ಬ ಶ್ರೀಮಂತನನ್ನು ನೋಡಿ ಅವನ್ನೆಷ್ಟು ಸುಖಿಯಾಗಿದ್ದಾನೆ ಎಂದು ತನ್ನ ಬಡತನದ ಬಗ್ಗೆ ದುಃಖಿಸುತ್ತಾನೆ. ಶ್ರೀಮಂತನಿಗೂ ಅನೇಕ ಚಿಂತೆಗಳಿರುತ್ತವೆ ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ಆತನು ವಿಫಲಗೊಳ್ಳುತ್ತಾನೆ.ಈ ರೀತಿಯಾಗಿ ಕಣ್ಣಿಗೆ ಕಾಣದ ಸಮಸ್ಯೆಗಳನ್ನು ಮುನ್ನೋಟಕ್ಕೆ ಗುರುತಿಸಲಾಗದ ನಾವು ಈ ಜಗತ್ತಿನಲ್ಲಿ ನಾವೇ ನತದೃಷ್ಟರು ಎಂಬ ಚಿಂತೆಯಲ್ಲಿ ಬದುಕು ಸಾಗಿಸುತ್ತಿರುತ್ತೇವೆ.
ಧಾರಾವಾಹಿಗಳಲ್ಲಿ ತೋರಿಸುವ ಶ್ರೀಮಂತಿಕೆಯ ಜೀವನ ನಿಜ ಜೀವನವಾಗಿಸಲು ಹವಣಿಸಿ, ಬದುಕನ್ನೇ ಹಾಳುಮಾಡಿಕೊಂಡು ಬಿಡುವವರೂ ನಾವಿದ್ದೇವೆ.
ಅರಿವಿಲ್ಲದೆ ಸ್ವರ್ಗಸುಖಃವೆಂಬ ಬಿಸಿಲು ಕುದುರೆಯ ಬೆನ್ನಟ್ಟಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು ನಾವೇ ಸುಖಿಗಳು ಎಂದು ಬದುಕುವುದು ಸಂತೃಪ್ತಿಯ ಬದುಕಲ್ಲವೇ!!!
ಜೀವನದಲ್ಲಿ ಸಾಧನೆಯ ಮೂಲಕ ಯಶಸ್ಸು ಕಂಡು,ಸಂತೃಪ್ತಿ ಹೊಂದಬಹುದು. ಸಂತೃಪ್ತಿಯು ಜೀವನದಲ್ಲಿ ಯಶಸ್ಸಿನ ಒಂದು ಭಾಗ ಅಷ್ಟೇ. ಕಂಡ ಕನಸನ್ನು, ಸಾಧಿಸಿದಾಗ ,ಗಳಿಸಿದ ಯಶಸ್ಸು, ಸಾಧನೆ, ಸಂತೃಪ್ತಿಯನ್ನು ನೀಡಬಹುದು. ಇತರರನ್ನು ತುಳಿದು
ಯಶಸ್ವಿಯಾಗಿ ಇತರರ ಎದುರಿಗೆ ನಿಲ್ಲುವದಕ್ಕಿಂತ,ಇತರರನ್ನು ತಿಳಿದು ಸಂತೃಪ್ತಿಯ ಮನೋಭಾವನೆಯಿಂದ, ನಮ್ಮಲ್ಲಿ ನಾವೇ ಆನಂದ ಪಡುವ ಭಾವವೆಂಬುದು ನಮ್ಮ ಬದುಕಿನಲ್ಲಿ ಅತ್ಯಂತ ಮಹತ್ವಪೂರ್ಣ ಅನಿಸಬೇಕು. ಎಲ್ಲರಿಗೂ ಸಂತೃಪ್ತಿ ಯ ಭಾವದ ಅನುಭವದಿಂದ ಧನ್ಯತೆ ಸಿಗಬೇಕು.ಬದುಕೆಂಬುದು ಅನಿಶ್ಚಿತವಾಗಿದೆ. ನಾಳೆ ಹೇಗೆ ಏನು ನಡೆಯುತ್ತದೆ ?ಎಂಬುದು ನಮಗೆ ತಿಳಿಯದು. ಹೀಗಿರುವಾಗ ಇವತ್ತಿನ ಕ್ಷಣವನ್ನು ನಾವು ಸುಂದರವಾಗಿ ಕಳೆಯಬೇಕು,ಅದುವೇ ಜೀವನ.ಮನುಷ್ಯರಾದ ನಾವು ಕಣ್ಣುಗಳನ್ನು ತೆರೆದ ಕ್ಷಣದಿಂದ, ಸಮಾಜವು ನಮಗೆ ಯಶಸ್ಸು, ಸೌಂದರ್ಯ ಮತ್ತು ಸಾಧನೆಯ ಆದರ್ಶಗಳನ್ನು ನೀಡುತ್ತದೆ. ನಾವು ಬದುಕಿನಲ್ಲಿ ಎಂದಿಗೂ ಮುಗಿಯದ ಓಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇತರರನ್ನು ನೋಡುತ್ತೇವೆ ಅವರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಸಿ ಅಳೆಯುತ್ತೇವೆ. ಅವರ ಜೀವನವೇ ಬೇರೆ, ನಮ್ಮ ಜೀವನವೇ ಬೇರೆ ಎಂಬುದನ್ನು ಮರೆತುಬಿಡುತ್ತೇವೆ. ಇದನ್ನು ಅರಿತುಕೊಂಡಾಗ ಮಾತ್ರ ಸಂತೃಪ್ತಿ ಉಂಟಾಗುತ್ತದೆ. ಬದುಕೆಂಬುವುದು “ನೀರ ಮೇಲಿನ ಗುಳ್ಳೆ.” ಈ ಗುಳ್ಳೆ ಉಳಿಯುವಷ್ಟು ಕಾಲ ಎಲ್ಲರ ಮನಸ್ಸನ್ನು ಸೆಳೆದು ಬೆಳೆದು,ನಾಲ್ಕು ಜನರಿಗೆ ಒಳ್ಳೆಯದನ್ನು ಬಯಸುವುದರಲ್ಲಿ ಜೀವನವನ್ನು ಯಶಸ್ವಿಗೊಳಿಸುವುದು ಬದುಕಿಗೆ ಸಂತೃಪ್ತಿ ನೀಡುವಂತಾದರೆ ಅಂತಹ ಬದುಕು ಧನ್ಯವೂ ಹೌದು, ವಿಶ್ವಮಾನ್ಯವೂ ಆಗುವುದು.
————————
ಡಾ.ಸುಮತಿ ಪಿ
ವೈಚಾರಿಕ ಲೇಖನ