ವಾಣಿ ಯಡಹಳ್ಳಿಮಠ ಅವರ ಕವಿತೆ-ನಿಜ ಸಂಗಾತಿ

ಬದಲಾಗುವ ಜಗದಲಿ
ಬದಲಾಗುವ ಜನರೊಂದಿಗೆ
ಬದಲಾಗದೇ ನೀ ಬಾಳುವೆ ಹೇಗೆ ?
ನಿಂತ ನೀರಾದರೆ ನೀ ಅರಳುವೆ ಹೇಗೆ?

ಎಲ್ಲರೂ ಕೈಯಲಿ ಕಲ್ಲಗಳೇ ಹಿಡಿದಿರುವಾಗ
ಎಲ್ಲರ ಗುರಿಯು ನಿನ್ನೆಡೆಗೆಯೇ ಇರುವಾಗ
ಕನ್ನಡಿಯಂತಹ ಮನ ಕಾಯುವೆ ಹೇಗೆ ?
ನಿನ್ನನು ನೀ ಕಾಯ್ದುಕೊಳ್ಳುವೆ ಹೇಗೆ ?

ಜೊತೆ ನಡೆದವರನು ಜೊತೆಗಾರರೆನ್ನಬೇಡ
ನಗುತ ಮಾತಾಡುವವರನು ನಿನ್ನವರೆನ್ನಬೇಡ
ಎಲ್ಲರಿಗೂ ಎರಡೆರಡು ಮುಖವಾಡಗಳಿಲ್ಲಿ
ಹಾಕಿರುವ ವೇಷವನು ನಂಬಬೇಡ
ಮುಳ್ಳುಗಳ ಹಾಸಿಗೆಯೇ ಹಾಸಿಬಿಡುವರು
ಮನ ಮುನ್ನುಗ್ಗದಂತೆ ಮಣಿಸಿಬಿಡುವರು

ನಕ್ಕು , ನಗಿಸಿ
ಜೊತೆ ನಡೆದು, ದಾರಿ ಬದಲಿಸಿ
ಒಂಟಿತನದ ಉಡುಗೊರೆಯನಷ್ಟೇ ನೀಡಿ ಹೋಗುವರು
ಮಾಯದ ಹೊಸದೊಂದು ಗಾಯ ಮಾಡಿ ಹೋಗುವರು

ನಿನ್ನೊಂದಿಗಿನ ನಿನ್ನ ಸ್ನೇಹವೇ,
ನಿನ್ನ ಉಸಿರಿರೋವರೆಗೂ ನೋಡು
ನಿನ್ನ ನೀ ಪ್ರೀತಿಸುವುದೇ ಒಳಿತು ನೋಡು
ನಿನಗೆ ನೀ ಸಂಗಾತಿಯಾಗುವುದೇ ಲೇಸು ನೋಡು

————————————

Leave a Reply

Back To Top