ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ?
ನಂದಿನಿ ಹೆದ್ದುರ್ಗ
ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.
‘ರೀಫಿಲ್ ಮಾತ್ರ ಸಾಕು’
ಎಂದೆ..
‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ .
ಇದನ್ನೇ ತಗೋಳಿ ‘
ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ..
ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ
ರಿಫಿಲ್ ಕೇಳ್ತಿರುವುದು..
ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ…
ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು.
ಗೃಹಿಣಿ ಎಂದೆ..
ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು…
ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ?
ಅವರ ಪ್ರಶ್ನೆಗಳು ವಿಚಿತ್ರವೆನಿಸಿತು.
“ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…”
ಅವತ್ತು ಮನೆಯಲ್ಲಿ ಜೋರು ಜಗಳ.
ಅವಳ
ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ.
ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ..
ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ.
ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ
ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು..
ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ…
ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವನಿಗೆ ಅಚ್ಚರಿ.!
ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ.
ಅಗತ್ಯವಿದೆಯೇ ಅದೆಲ್ಲಾ?
ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್.
ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ..
ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ..
ಒಂದು ಕೊಂಡರೆ ಮತ್ತೊಂದೇನೋ ಉಚಿತ…
ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ..
ಚೈನಾ ಮೇಡ್ ಬಹಳ ಚೀಪು.
ಇದೊಂದು ಇರಲಿ ಅಂತ ಅನಿಸುವುದೂ ಸಹಜ.
ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು.
ಮತ್ತೆ ಕಸ..
ಮನೆಯಿಂದ ಹೊರಗೆ ಕಾಲಿಟ್ಟರೆ ಕಸ..
ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ..
ಕಸ ಕಸ ಕಸ..
ಬದುಕೇ ಕಸಮಯವಾದ ಕಾಲ ಇದು.
….
ಈ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು..
ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು..
ಆದರೆ..
ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ.
ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ..
ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ.
ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ.
ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು..
ಹರಿವ ನೀರಿಗೆ ಬಿಡವುದು ಥರವಲ್ಲ.
ಮತ್ತೇನು ಮಾಡಬಹುದು..?
…
ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ ಪರ್ವಕಾಲ ಇದು ಎನಿಸುತ್ತದೆ.
ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ.
ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು..
“ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ”
ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ.
…
ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.?
ದೂರದ ವೂಹಾನ್ ನಲ್ಲಿ ಬಂದ ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ ..
ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ
ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ.
ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ..
ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ..
ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ..
ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ..
ನಾಲ್ಕು ಮಾತಾಡಿ,
ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..?
ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..?
ಒಮ್ಮೆ ಹಿಂದಿರುಗಿ ನೋಡಿದರೆ
ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು.
ಇವೆಲ್ಲವೂ
‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’
ಎನ್ನುವ ನಾಗರಿಕರ ಲೋಕ ಈಗ ನಮ್ಮದು.
…
ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು ಹೇಳುತ್ತಲೇ ಇರುತ್ತವೆ..
ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ.
ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…?
ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..?
ಒಂದು ನದಿ ಅಥವಾ ಹೊಳೆಯ ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..?
…
ಪರಿಸರದಷ್ಟು ನಿಗೂಢ, ನಿಷ್ಠುರ ವಿಷಯ ಬೇರೊಂದಿಲ್ಲ.
ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ..
ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು
ಕಮ್ಮಿಯಾಗುವುದಿಲ್ಲ..
ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ
ತಪ್ಪಿನಿಂದ ನಾವು ಕಲಿಯುವುದಿಲ್ಲ…
ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು…
ಅಗಾಧನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು..
ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!!
ಹಣವೇ..?ಹಸಿವೇ…?ಗೆಲ್ಲುವ ಬಗೆಯೇ?
ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ.
ಹಾವು ಇಲಿಯನ್ನು,ಇಲಿ ಕಪ್ಪೆಯನ್ನು
ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ .
its not by default.. It is by design..
..
ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.?
ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು…
ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.?
_
ನಂದಿನಿ ಹೆದ್ದುರ್ಗ.
ಪ್ರತಿ ನಿತ್ಯ ನನ್ನನ್ನೂ ಬಿಡದೇ ಕಾಡುವ ಸಂಗತಿಯಿದು ನಂದಿನಿ.ಸಕಾಲಿಕ ಅರ್ಥಪೂರ್ಣ ಬರಹ