ಭಾಷೆ

ಕನ್ನಡದ ಕಲಿಸುವಿಕೆಯ ಒಂದು ಅನುಭವ

ದಾಕ್ಷಾಯಣಿ ನಾಗರಾಜ್

           ಭಾಷೆಯೂ ಮಾನವನಿಗೆ ಒದಗಿಬಂದ ಅತ್ಯಾದ್ಭುತವಾದ ಶಕ್ತಿಯಾಗಿದೆ.ಅದನ್ನು ಬಳಸಿ ರೂಢಿಸಿಕೊಂಡು ಸಿದ್ದಿಸಿದರೆ ಅದು ಮಾಂತ್ರಿಕ ಶಕ್ತಿಯಾಗಿ ಪರಿವರ್ತಿನೆಯಾಗಿ ಅವನಿಗೆ ಜೀವಂತಿಕೆಯನ್ನು ತಂದುಕೊಡುತ್ತದೆ. ಭಾಷಾ ಕಲಿಕೆಯನ್ನು ಕಲಿಸುವ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ.

         ಮಗುವಿನ ಸರ್ವತೋಮುಖ ಬೆಳೆವಣಿಗೆಯಲ್ಲಿ ಮಾತೃಭಾಷೆಯ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಬೇಕು.

           ಮಗು,ಮನೆ ,ಪರಿಸರ ,ಕೌಟುಂಬಿಕ ಸದಸ್ಯರು, ಸಹಪಾಠಿಗಳು ಸಮಾಜದ ಇತರರೊಂದಿಗೆ ಎಳವೆಯಿಂದಲೇ ಹಲವಾರು ಭಾಷಿಕ ಸಾಮರ್ಥಗಳನ್ನು ಸ್ವಾಭಾವಿಕವಾಗಿ ರೂಢಿಸಿಕೊಂಡೇ ಶಾಲೆಗೆ ಬಂದಿರುತ್ತದೆ.

                  ವಸ್ತುಗಳನ್ನು ಗುರುತಿಸುವ,ಗ್ರಹಿಸುವ,ಸಂಬಂಧಕಲ್ಪಿಸುವ,ನೆನಪಿಟ್ಟುಕೊಂಡು ಅರ್ಥೈಸುವ,ವಿಶ್ಲೇಷಿಸುವ,ಬಳಸುವ,ಹೊಂದಾಣಿಕೆ ಮಾಡುವ,ಕಲ್ಪಿಸುವ ಕಲ್ಪನೆಯಾಚೆಗೆ ಯೋಚಿಸುವ,ತನ್ನ ಅಗತ್ಯತೆಗೆ ತಕ್ಕಂತೆ ಬಳಸುವ ,ಹೋಲಿಕೆ ಮಾಡುವ, ವ್ಯತ್ಯಾಸೀಕರಿಸುವ,ಸಮಗ್ರವಾಗಿ ನೋಡಿ ಗ್ರಹಿಸುವ ,ದಿಕ್ಕು ಬಣ್ಣ ಗಾತ್ರ ಗುರುತಿಸುವ ಇನ್ನೂ ಮುಂತಾದ ಭಾಷಾ ಸಾಮರ್ಥಗಳನ್ನು ಮಾತೃಭಾಷೆಯಲ್ಲಿ ಸ್ವಾಭಾವಿಕವಾಗಿ ಕಲಿತಿರುತ್ತದೆ.ಆದ್ದರಿಂದ ಕನ್ನಡಭಾಷೆಯ ಕಲಿಕೆಯಿಂದಲೇ ಈ ಎಲ್ಲಾ ಸಾಮರ್ಥಗಳು ಹೊರತರಲು ಸಾಧ್ಯ.

          ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಾನು ನನ್ನ ವೃತ್ತಿಯಲ್ಲಿ ಗಮನಿಸಿದ ಒಂದು ಅಂಶವೆಂದರೆ ಯಾವ ಮಗು ಕನ್ನಡ(ಮಾತೃಭಾಷೆ)ವನ್ನು ಸ್ಪಷ್ಟವಾಗಿ ಓದುತ್ತಾ,ತಪ್ಪಿಲ್ಲದಂತೆ ಬರೆಯುತ್ತದೆಯೋ ಆ ಮಗು ಇತರ ವಿಷಯಗಳ ಮತ್ತು ಭಾಷೆಗಳ ಕಲಿಕೆಯಲ್ಲಿ ಸಕಾರಾತ್ಮಕವಾಗಿರುತ್ತದೆ.ಒಬ್ಬ ಒಳ್ಳೆಯ ಕನ್ನಡ ಶಿಕ್ಷಕ ಮಗುವಿನಲ್ಲಿ ಓದುವ ರುಚಿಯನ್ನು,ಪ್ರಶ್ನೆ ಮಾಡುವ ಬಾಯಿಯನ್ನು,ಮತ್ತು ಸೃಜನಾತ್ಮಕತೆಯನ್ನು ಬೆಳೆಸಬಲ್ಲ.ನಮ್ಮ ಯೋಚನೆಯ ಲಹರಿ ಮೂಡುವುದು ಮಾತೃಭಾಷೆಯಲ್ಲಿ.ಆದ್ದರಿಂದ ಕನ್ನಡದ ಕಲಿಕೆಯೂ ಗುಣಮಟ್ಟದ್ದಾಗಿರಬೇಕು.

          ನಮ್ಮ ಕರುನಾಡು ವಿಭಿನ್ನ ಕನ್ನಡಗಳ ಆಮೂಲ್ಯ ಸಂಗಮ.ಆ ನೆಲದ ಸೊಗಡಿನಂತೆ ಕನ್ನಡ ಅಲ್ಲಿನವರ ಜೀವನಾಡಿಯಾಗುತ್ತಾ ಹೋಗುತ್ತದೆ.

        ನಾನು ವೃತ್ತಿಯ ಪ್ರಾರಂಭದ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಗಡಿನಾಡ ಒಂದು ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಅಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲೂ ಹರಸಾಹಸ ಪಡಬೇಕಾಯಿತು. ಕಾರಣವೆಂದರೆ ಅಲ್ಲಿ ಇಡೀ ಊರಿನ ತುಂಬಾ ಅವರ ಮಾತೃ ಭಾಷೆ ಮಠಾಠಿ ಆಗಿತ್ತು.ಕೆಲವೇ ಕುಟುಂಬಗಳ ಮಾತೃಭಾಷೆ ಮಾತ್ರ ಕನ್ನಡ‌.ಅಂಥಾ ಮಕ್ಕಳು ಮಾತ್ರ ನಮ್ಮ ಕನ್ನಡ ಶಾಲೆಗೆ ದಾಖಲಾಗುತ್ತಿದ್ದರು. ಅಲ್ಲಿ ಕೆಲಸ ನಿರ್ವಹಿಸಲು ಹೋದ ಶಿಕ್ಷಕರು ತಾವೇ ಮಠಾಠಿ ಕಲಿತು ಮಕ್ಕಳಿಗೆ ಕನ್ನಡ ಅರ್ಥ ಮಾಡಿಸಬೇಕಾದ ಪರಿಸ್ಥಿತಿ.

     ಆದರೆ ನನಗೆ ಬರುತ್ತಿದ್ದು ಕನ್ನಡ ಮಾತ್ರ!

       -ನಮ್ಮ ಮಕ್ಕಳಿಗೆ ಕನ್ನಡವನ್ನು ಕೇಳಿಸಿಕೊಳ್ಳುವ ಕೌಶಲ‌ ಗೊತ್ತಿದ್ದರೂ ಅದನ್ನು ಸಮರ್ಥವಾಗಿ ಬಳಸಲು ಗೊತ್ತಿರಲಿಲ್ಲ. ಅಂತಹ ವಾತಾವರಣದ ಕೊರತೆ ಕಂಡುಬರುತ್ತಿತ್ತು.

       -ನಮ್ಮ ಮಕ್ಕಳಿಗೆ ಒಂದೆರಡು ವಾಕ್ಯಗಳ ಅರ್ಥ ಗೊತ್ತಿದರೂ,ಒಂದು ಇಡೀ ಪ್ಯಾರದ ಭಾವಾರ್ಥ ಅವರಿಗೆ ಆಗುತ್ತಿರಲಿಲ್ಲ.

       -ಮಾತನಾಡಲು ಹಿಂಜರಿತ ಇರುವುದರ ಜೊತೆಗೆ ಕೆಲವರು ಮಾತನಾಡಿದರೂ ಬರೀ ತುಂಡು ವಾಕ್ಯಗಳನ್ನು ಮಾತನಾಡುತ್ತಿದ್ದರು.ಪೂರ್ತಿ ವಾಕ್ಯ ಬಳಸಲು ಗೊತ್ತಿರಲಿಲ್ಲ.

      ಹಾಗಾಗಿ ಮಕ್ಕಳಿಗೆ ನಾನು ಹೊಸಶಿಕ್ಷಕಿಯಾಗಿದ್ದರಿಂದ ಮಾತನಾಡಿಸುವ ತವಕ ಬಹಳಷ್ಟು ಇದ್ದರು ಭಾಷೆ ಬರದೆ ಒದ್ದಾಡುತ್ತಿದ್ದವು. ನನ್ನ ಪರಿಸ್ಥಿತಿ ಅವರಿಗಿಂತ ಭಿನ್ನವಾಗಿರಲಿಲ್ಲ. ಪ್ರಾರಂಭದ ದಿನಗಳಲ್ಲಿ ನಾನು ಹೇಳಿದ ಮಾತುಗಳನ್ನು ನಮ್ಮ ಮುಖ್ಯ ಶಿಕ್ಷಕರು ಮಕ್ಕಳಿಗೆ ಮರಾಠಿಯಲ್ಲಿ ತರ್ಜುಮೆ ಮಾಡಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು ನನಗೆ. ಕನ್ನಡ ಮಾತುಗಳು ಕೇಳದೆ ನಮಗೆ ಏನೋ ಕಳೆದುಕೊಂಡ ಭಾವ. ಆದ್ದರಿಂದ ಕನ್ನಡವನ್ನು ಕನ್ನಡದಲ್ಲಿ ಹೇಳಲೇಬೇಕು ಅನ್ನುವ ಮನಸ್ಸು ಮಾಡಿದೆ.

    ಕೊನೆಗೆ ಅವರಿಗೆ ಎಷ್ಟು ಅರ್ಥ ಆಗುತ್ತೋ ಅಷ್ಟೇ ಆಗಲಿ ಅಂತ ಆ ಮಕ್ಕಳ ಜೊತೆ ಬರೀ ಕನ್ನಡ ಮಾತ್ರ ಮಾತನಾಡಲು ಶುರು ಮಾಡಿದೆ.

      ಕೆಲವೊಮ್ಮೆ ಸನ್ನೆಗಳ ಮೂಲಕ ಪದಗಳನ್ನು ಉಚ್ಚರಿಸುತ್ತಾ ಕಲಿಸಲು ಶುರುವಿಟ್ಟುಕೊಂಡೆ.

        ಅವರ ಪೋಷಕರನ್ನು ಕರೆಸಿ ಮನೆಯಲ್ಲಿ ಹೆಚ್ಚಾನುಹೆಚ್ಚು ಕನ್ನಡ ಮಾತನಾಡಲು ತಿಳಿಸಿದೆ.

       ಮಕ್ಕಳಿಗೆ ಕನ್ನಡದಲ್ಲೇ ಸಣ್ಣ ಸಣ್ಣ ಸಂಭಾಷಣೆಗಳ ಇರುವ ನಾಟಕ ಮಾಡಿಸಿದೆವು.

          ಶಿಶುಗೀತೆ,ಪದಗಳ ಆಟ,ಕನ್ನಡದಲ್ಲೇ ಮಾತುಕತೆ, ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದೆವು.

       ಅವರು ನಿತ್ಯ ಜೀವನದ ಘಟನೆಗಳನ್ನು ಕನ್ನಡದಲ್ಲಿ ಹೇಳಲು ಪ್ರೇರೆಪಿಸಿದೆವು. ಉದಾಹರಣೆಗೆ ಸಂತೆಗೆ ಹೋದಾಗ ಅವರ ಅನುಭವ,ಅವರ ಮನೆಯಲ್ಲಿ ಆಚರಿಸುವ ಹಬ್ಬ, ದಿನಸಿ ಅಂಗಡಿಯಲ್ಲಿನ ಅನುಭವ,, ಹೀಗೆ ಹಲವಾರು. ಮೊದಮೊದಲು ಅವರ ಮಾತುಗಳ ಇಪ್ಪತ್ತು ಶಬ್ದಗಳಲ್ಲಿ ಹತ್ತಕ್ಕಿಂತ ಹೆಚ್ಚು ಮರಾಠಿ ಪದಗಳು ನುಸುಳಿದ್ದವು. ಹಲವಾರು ಚಟುವಟಿಕೆಗಳ ಮೂಲಕ ಅವರನ್ನು ಪ್ರೇರೆಪಿಸಿದ ಬರುಬರುತ್ತಾ ಅವುಗಳ ಸಂಖ್ಯೆ ಇಳಿಕೆಯಾಗಿತ್ತು.

ಅಂತೂ ನಮ್ಮ ಮಕ್ಕಳು ನನ್ನ ಜೊತೆ ಮಾತ್ರ ಕನ್ನಡ ಮಾತನಾಡಲು ಶುರು ಮಾಡಿದರು,,ಮುದ್ದಾಗಿ ,,ಕನ್ನಡ್ ಟೀಚರ್ ಅನ್ನುತ್ತಾ. ಕನ್ನಡ ಅಂದರೆ ಸಾಕು “ಮಲ ಕಾಯ್ ಸಮಜಲೆ ನಹೀ”(ನನಗೆ ಅರ್ಥ ಆಗುತ್ತಿಲ್ಲ) ಅನ್ನುತ್ತಿಲ್ಲ ನಮ್ಮ ಮಕ್ಕಳು “ಕನ್ನಡ್ ಮಲ ಯೇತೆ” (ಕನ್ನಡ ನನಗೆ ಬರುತ್ತೆ) ಅನ್ನುವಂತದರು.

       ಶಾಲೆಗಳಲ್ಲಿ ಕೆಲವು ಮಕ್ಕಳ ಮಾತೃಭಾಷೆ ಬೇರೆಯದೇ ಆಗಿರುತ್ತದೆ.ಆದ್ದರಿಂದ ಅಂಥಾ ಮಕ್ಕಳ ಕನ್ನಡ ಕಲಿಕೆಯಲ್ಲಿ ನಾವು ಹೆಚ್ಚಿನ ಗಮನ ನೀಡಬೇಕಾಗುತ್ತದೆ.

      ಕನ್ನಡದ ಉಚ್ಚಾರಣೆಯನ್ನು ಮೊದಲು ನಾವು ಸರಿಯಾಗಿ ಮಾಡಬೇಕು.ಅಂತೆಯೇ  ಮಕ್ಕಳಿಗೆ ಸರಿಯಾದ ಉಚ್ಚಾರಣೆ ಕಲಿಸಬೇಕು.

      ಇನ್ನು ಕೆಲವು ಮಕ್ಕಳು ವ್ಯಾಕರಣವನ್ನು ಬಳಸುವಲ್ಲಿ ಎಡವುತ್ತಾರೆ.ಉದಾಹರಣೆಗೆ ವಾಕ್ಯಗಳಲ್ಲಿ ಏಕವಚನ ಬಹುವಚನಗಳನ್ನು,ಲಿಂಗಗಳನ್ನು  ಬಳಸುವಲ್ಲಿ‌ ಗೊಂದಲಕ್ಕೀಡಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಈ ಕ್ರಿಯಾತ್ಮಕ ವ್ಯಾಕರಣದ ಚಟುವಟಿಕೆಗಳ ಮೂಲಕ ನಾವು ಅರಿವು ಮೂಡಿಸಬಹುದು.

     ಆಲಿಸುವಿಕೆ,ಮಾತನಾಡುವುದು,ಓದುವುದು, ಬರೆಯುವುದು ಮತ್ತು ಕ್ರಿಯಾತ್ಮಕ ವ್ಯಾಕರಣದ  ಕೌಶಲಗಳು ಸಮರ್ಪಕವಾಗಿ ಮಕ್ಕಳಿಂದ ಬಳಕೆ ಆಗಬೇಕು.

        ಇಂಗ್ಲಿಷ್ ನಲ್ಲಿ ಕಲಿತ ಮಕ್ಕಳು ಬರೆಯಲು ಓದಲು ಶಕ್ತರಾಗಿರುತ್ತಾರೆ.ಆದರೆ ಆಲಿಸಿದ್ದನ್ನು ಅರ್ಥ   ಅರ್ಥಮಾಡಿಕೊಳ್ಳುವಲ್ಲಿ ಮತ್ತು   ಸನ್ನಿವೇಷಕ್ಕೆ ತಕ್ಕಂತೆ ಕನ್ನಡವನ್ನು ಬಳಸಿ ಮಾತನಾಡುವಲ್ಲಿ ಸೋಲುತ್ತಾರೆ.

    ಇಂಥ ಸನ್ನಿವೇಶಗಳಲ್ಲಿ ಮಕ್ಕಳಿಗೆ ಅಗತ್ಯ ಪೂರಕ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಅವರು ಸಹಜವಾಗಿ ಆಲಿಸಿ ಅರ್ಥೈಸಿಕೊಳ್ಳಲು,ಮಾತನಾಡಲೂ ಸಹಾಯ ಮಾಡಬೇಕಾಗುತ್ತದೆ.

    ಹೀಗೆ ಬೊಧನೆಯಲ್ಲಿ ಹಲವಾರು ಎಡರತೊಡರುಗಳು ಬಂದೇ ಬರುತ್ತವೆ.ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರೊಂದಿಗೆ ಮಾತೃಭಾಷೆಯನ್ನು ಕಲಿಸಬೇಕಾಗಿದೆ.

     ಒಟ್ಟಾರೆ ಕನ್ನಡ ಶಿಕ್ಷಕರ ಜವಾಬ್ದಾರಿ ಕನ್ನಡ ಕಲಿಸುವಲ್ಲಿ ಬಹಳಷ್ಟು ಇದೆ ಎಂದರೆ ತಪ್ಪಾಗಲಾರದು.ಇಂದಿನ ಅಗತ್ಯ ಕೂಡ ಇದು.

===================

2 thoughts on “ಭಾಷೆ

Leave a Reply

Back To Top