ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
ಸಾಕ್ಷರತೆ –
ದಮನಿತ ಮಹಿಳೆಯರ
ಸಾಮಾಜಿಕ ಸಮಾನತೆ
ಕನಸಿಗೆ ಮುನ್ನುಡಿಯಾಗಬೇಕು-
ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ತಾನು ಓದಬೇಕು ಅಕ್ಷರಸ್ಥೆಯಾಗಬೇಕು ಎನ್ನುವ ಹಂಬಲ ಆಕೆಯಲ್ಲಿ ಹೆಚ್ಚಾಯಿತು. ತಾಯಿ ಇಲ್ಲದ ಕುಟುಂಬದ ಹಿರಿ ಮಗಳಾಗಿದ್ದ ವನಿತಾ ಅಪ್ಪನಿಗೆ ಹೆಗಲಾಗಿ ತಮ್ಮನಿಗೆ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ಪ್ರಬುದ್ಧವಾಗಿ ನಿಭಾಯಿಸುತ್ತಿದ್ದಳು. ಅಮ್ಮನ ಸಾವಿನ ಕಾರಣಕ್ಕೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದ ಆಕೆ ಈಗ ಪಿಯುಸಿ ಓದಬೇಕಿತ್ತು. ಅಪ್ಪ ಅರೇವಾದ್ಯ ಹಾಗೂ ಅಂಗೈ ಅಗಲದ ಜಮೀನನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಮಗಳ ಓದುವ ತುಡಿತ ಅವರಿಗೂ ಚೆನ್ನಾಗಿಯೇ ಅರ್ಥವಾಗಿತ್ತು. ಅದೇ ಕಾರಣಕ್ಕೆ 10ನೇ ತರಗತಿ ಪರೀಕ್ಷೆ ಕಟ್ಟಿಸಿ ಮನೆಯಲ್ಲಿಯೇ ಓದಲು ಹೇಳಿದರು. ವನಿತಾಳಿಗೆ ಇದು ದೊಡ್ಡ ಹುಮ್ಮಸ್ಸು ನೀಡಿತು. ಆಕೆ ಚೆನ್ನಾಗಿ ಓದಿ 80% ಅಂಕದೊಂದಿಗೆ ಉತ್ತೀರ್ಣಳಾದಳು.
ಇಲ್ಲಿಂದ ಆಕೆಯ ಜೀವನದ ದಿಕ್ಕೇ ಬದಲಾಯಿತು. ಹಳ್ಳಿಯ ತನ್ನ ಸಮುದಾಯದಲ್ಲಿ 10ನೇ ತರಗತಿಯನ್ನು ಮುಗಿಸಿದ ಮೊದಲ ಹುಡುಗಿಯಾಗಿ ವನಿತಾ ಗುರುತಿಸಿಕೊಂಡಳು. ಶಿಕ್ಷಕಿಯಾಗಬೇಕೆಂಬ ಆಕೆಯ ಕನಸಿಗೆ ಈ ಗೆಲುವು ರೆಕ್ಕೆ ನೀಡಿತು. ರಜಾ ದಿನಗಳಲ್ಲಿ ಕೂಲಿ ಮಾಡಿ ಸರ್ಕಾರಿ ಕಾಲೇಜಿನಲ್ಲಿಯೇ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಮುಗಿಸಿದಳು. ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ದೂರದ ನಗರಕ್ಕೆ ಹೋಗಬೇಕಾಗಿ ಬಂದ ಕಾರಣ ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಸ್ನಾತಕೋತ್ತರ ಪದವಿ ಮುಗಿಸಿದಳು. ಎಲ್ಲಾ ಸವಾಲುಗಳ ನಡುವೆಯೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ತನ್ನೂರಿನ ಶಾಲೆಗೆ ಶಿಕ್ಷಕಿಯಾಗಿ ಬಂದಳು.
ತನ್ನ ತಮ್ಮನನ್ನು ಓದಿಸಿ ಒಳ್ಳೆಯ ಪ್ರಜೆ ಹಾಗೂ ಉದ್ಯಮಿಯನ್ನಾಗಿ ಮಾಡಿದಳು. ಇಷ್ಟೆಲ್ಲಾ ಸಾಧಿಸಿದ ವನಿತಾಳಿಗೆ ಇನ್ನೂ ಒಂದು ದೊಡ್ಡ ಕನಸಿದೆ. ಅದೇನೆಂದರೆ ತನ್ನೂರಿನ ತನ್ನದೇ ಸಮುದಾಯದ ಎಲ್ಲಾ ಹೆಣ್ಣು ಮಕ್ಕಳು ಪದವೀಧರರಾಗಬೇಕು ಮತ್ತು ಉದ್ಯೋಗಸ್ಥರಾಗಬೇಕು ಆಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎಂದು ಅವಳು ದೃಢವಾಗಿ ನಂಬಿದ್ದಳು. ಶಿಕ್ಷಣವೇ ಸಾಮಾಜಿಕ ಅಸಮಾನತೆ ಒಡೆದು ಹಾಕುವ ದೊಡ್ಡ ಅಸ್ತ್ರ ಎಂದು ಆಕೆಗೆ ಅರಿವಿತ್ತು. ಆಕೆ ತನ್ನ ಶಿಕ್ಷಕಿ ವೃತಿಯನ್ನು ಈ ಕೆಲಸಕ್ಕಾಗಿಯೇ ಮೀಸಲಿರಿಸಿ ಈಗ ತನ್ನೂರಿನ ಎಲ್ಲಾ ಹೆಣ್ಣು ಮಕ್ಕಳನ್ನು ಅಕ್ಷರಸ್ಥರನ್ನಾಗಿ ರೂಪಿಸುತ್ತಿದ್ದಾಳೆ.
ಈ ಕತೆಯ ನಾಯಕಿ ವನಿತಾ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಅದರಲ್ಲಿಯೂ ಸಮಾಜದಲ್ಲಿ ಅಸಮಾನತೆಯ ಕೂಪದಲ್ಲಿ ಬೆಂದು ನಲುಗುತ್ತಿರುವ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಅತ್ಯಗತ್ಯ. ಈ ಸಮುದಾಯದ ಎಲ್ಲಾ ಹೆಣ್ಣು ಮಗುವಿಗೂ ಪದವಿ ಮಟ್ಟದವರೆಗಿನ ಪ್ರಗತಿಪರ ಶಿಕ್ಷಣ ದೊರೆತು, ಆಕೆ ಸಾಮಾಜಿಕವಾಗಿ ಅರಿಯಲು, ಬೆರೆಯಲು, ಗುರುತಿಸಿಕೊಳ್ಳಲು ಆರಂಭಿಸಿದಾಗ ಬಹುಶಃ ಅಸಮಾನತೆಯು ಮಾನಸಿಕವಾಗಿ ಹೋಗದಿದ್ದರೂ ಕ್ರಿಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಈ ಸಮಯದಲ್ಲಿ ವಂಚಿತ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಶಿಕ್ಷಣದ ಜೊತೆಗೆ ಆತ್ಮಸ್ಥೈರ್ಯವನ್ನು ತುಂಬಿದರೆ ಈ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಜಾತಿಯ ಕಾರಣಕ್ಕೆ ಆಗುತ್ತಿರುವ ದಬ್ಬಾಳಿಕೆಗಳು ಈ ಎಲ್ಲವನ್ನೂ ಎದುರಿಸುವ ಶಕ್ತಿ ಆಕೆಗೆ ಬರಬಹುದಾಗಿದೆ.
ಸ್ವಾತಂತ್ರದ ನಂತರದಿಂದ ದಲಿತ ಹೆಣ್ಣು ಮಕ್ಕಳ ಸಾಕ್ಷರತಾ ಪ್ರಮಾಣ ಏರಿಕೆಯಾಗಿರುವುದು ಗಮನಾರ್ಹ. ಆದರೆ 100% ರಷ್ಟು ಇನ್ನೂ ಸಾಧ್ಯವಾಗಿಲ್ಲ. 2011ರ ಜನಗಣತಿ ವರದಿಯ ಪ್ರಕಾರ ಪ್ರಸ್ತುತ ಈ ಸಮುದಾಯದ ಸಾಕ್ಷರತಾ ಪ್ರಮಾಣ 66% ನಷ್ಟಿದೆ. ಅದರಲ್ಲಿ 13.8% ರಷ್ಟು ಮಹಿಳೆಯರು ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ ಮತ್ತು 1.7% ರಷ್ಟು ಮಹಿಳೆಯರು ಮಾತ್ರ ಪದವಿ ಶಿಕ್ಷಣ ಪಡೆದಿದ್ದಾರೆ. ಈ ಪದವಿ ಶಿಕ್ಷಣದ ಮಟ್ಟ ಹೆಚ್ಚಾಗಬೇಕಿದೆ. ಆದರೆ ದಲಿತ ಮಹಿಳೆಯರ ಸಾಕ್ಷರತೆ ಮಟ್ಟ ದಲಿತ ಪುರುಷರಿಗಿಂತ ಕಡಿಮೆ ಇರುವುದನ್ನು ನಾವು ಗಮನಸಿಸಬೇಕಿದೆ. ಈ ಎಲ್ಲವನ್ನೂ ಗಮನಿಸಿದಾಗ ದಲಿತ ಮಹಿಳೆಯರ ಶಿಕ್ಷಣ ಪಡೆಯುವ ಹಂಬಲಕ್ಕೆ ಇನ್ನೂ ಸಾಕಷ್ಟು ಅಡೆತಡೆ ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಕೊನೆಯದಾಗಿ ಯಾರು ಈ ಎಲ್ಲಾ ಸವಾಲುಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಾರೆಯೋ ಅವರು ಗೆಲ್ಲುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತಹ ಒಂದು ವಿಷಯ ಇಟ್ಟುಕೊಂಡು ಈ ವರ್ಷದ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ” Promoting multilingual education – literacy for mutual understanding and peace ” ಎಂಬುದು ಈ ವರ್ಷದ ಥೀಮ್. ಬಹುಭಾಷಾ ಶಿಕ್ಷವನ್ನು ಉತ್ತೇಜಿಸುವ ಮೂಲಕ ಸಾಮಾಜಿಕ ನೆಲೆಗಟ್ಟಿನ ಎಲ್ಲಾ ಸಮುದಾಯಗಳು ಪರಸ್ಪರ ಅರ್ಥೈಸಿಕೊಳ್ಳುವ ಮೂಲಕ ಶಾಂತಿ ಕಾಪಾಡುವಲ್ಲಿ ಸಹಕಾರಿಯಾಗುವುದು. ಇದು ದಲಿತ ಮಹಿಳೆಯ ಶಿಕ್ಷಣ ಹಾಗೂ ಉದ್ಯೋಗದ ವಿಷಯಕ್ಕೆ ನೇರವಾಗಿ ಸಂಬಂಧ ಪಟ್ಟಿದೆ. ಬಹು ಮುಖ್ಯವಾಗಿ ಗ್ರಾಮೀಣ ದಲಿತ ಹೆಣ್ಣು ಮಕ್ಕಳಲ್ಲಿ 80ರಷ್ಟು ಮಂದಿ ಸರ್ಕಾರಿ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸುತ್ತಾರೆ. ಅಲ್ಲಿ ಅವರಿಗೆ ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ದೊರೆಯುತ್ತದೆ. ನಂತರ ಪದವಿ ಪೂರ್ವ ಶಿಕ್ಷಣಕ್ಕೆ ನಗರಕ್ಕೆ ಹೋದಾಗ ಇಂಗ್ಲಿಷ್ ನ ಪ್ರಭಾವ ಹೆಚ್ಚಾಗಿ ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದನ್ನು ಕಾಣುತ್ತೇವೆ.
ಪ್ರಾಥಮಿಕ ಶಿಕ್ಷಣದಿಂದಲೇ ಬಹುಭಾಷ ಶಿಕ್ಷಣವನ್ನು ಬಹಳ ಪರಿಣಾಮಕಾರಿಯಾಗಿ ಉತ್ತೇಜಿಸಿದರೆ ಬಹುಶಃ ಮತ್ತಷ್ಟು ಹೆಣ್ಣು ಮಕ್ಕಳು ಪದವಿ ಮುಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಸಾಮಾಜಿಕವಾಗಿ ದಲಿತ ಹೆಣ್ಣು ಮಕ್ಕಳಿಗಿರುವ ತಡೆಗಳನ್ನು ತೊಡೆದು ಹಾಕುವುದರಲ್ಲಿ ಸಮಾಜವಾಗಿ ನಾವು ಜೊತೆಗೂಡಿ ಕೆಲಸ ಮಾಡುವ ಅಗತ್ಯವಿದೆ. ಪ್ರತೀ ಹಳ್ಳಿಗೂ ವನಿತಾಳಂತಹ ಹೆಣ್ಣು ಮಕ್ಕಳ ಅಗತ್ಯವಿದೆ. ಆಗ ಅನಕ್ಷರತೆಯ ಜೊತೆಗೆ ಸಾಮಾಜಿಕ ಅಸಮಾನತೆಯನ್ನು ನಾಶ ಮಾಡುವ ಎಲ್ಲಾ ಸಾಧ್ಯತೆಗಳನ್ನು ಕಾಣಬಹುದಾಗಿದೆ.
—————————————————-
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು, ಹೊಂಬಾಳೆ ಟ್ರಸ್ಟ್,
ಗುಳಿಗೇನಹಳ್ಳಿ, ಸಿರಾ (ತಾ), ತುಮಕೂರು.