ಪ್ರಬಂಧ ಸಂಗಾತಿ
ಕುಸುಮಾ ಜಿ ಭಟ್
ಮಾರ್ಜಾಲ ದಿನ
‘ಸಿದ್ಧಿ ಬುದ್ಧಿ’
ಸಿದ್ಧಿ ಬುದ್ಧಿ
ಓದುಗರೇ… ಶಿರ ಬರಹ ನೋಡಿ ಇಲ್ಲಿ ಯಾವ್ದೋ ರಾಜರ ಕಾಲದ ಅಸ್ಥಾನದ ದ್ವಾರಪಾಲಕರ ಹೆಸರು ಬರೆದಿದ್ದೀನಿ ಅಂತ ಅಂದುಕೊಂಡರೆ ನಿಮ್ಮ ಊಹೆ ಖಂಡಿತ ತಪ್ಪಾಗುತ್ತೆ.
ಕೇಳಿ ನಾ ಹೇಳಲು ಹೊರಟಿದ್ದು ಸಿದ್ಧಿ ಎಂಬ ಒಂದು ಹೆಣ್ಣು ಬೆಕ್ಕಿನ ಬುದ್ಧಿ ಬಗ್ಗೆ!
ಕೇಳಿ ಮೊದಲೇ ಹೇಳಿಬಿಡುತ್ತೇನೆ ಈ ಸಿದ್ಧಿ ನಾವು ತಂದು ಸಾಕಿದ ಬೆಕ್ಕಂತೂ ಅಲ್ಲವೇ ಅಲ್ಲ
ಆದರೆ ನಮ್ಮ ಮನೆಗೂ ಇದಕ್ಕೂ ಸುಮಾರು ಎಂಟು ವರ್ಷದ ನಂಟು. ಅದು ಮೊದಲ ಬಾರಿ ನಮ್ಮನೆ ಹೊಕ್ಕಿದ ಆ ಕ್ಷಣ ಇನ್ನೂ ಕಣ್ಣಲ್ಲಿದೆ ! ಸಂಜೆ ಆಯಿತು ಎಂದರೆ ನಮ್ಮನೆ ಜಗಲಿಯ ಹೊರಗೆ ಕಿಟಕಿ ಮೇಲೆ ಕೂತು ಗ್ಲಾಸ್ ನಿಂದ ಬೆಕ್ಕೊಂದು ಮಿಕಿ ಮಿಕಿ ಇಣುಕುತಿತ್ತು. ನಮಗೋ ಮರೆಯಲ್ಲಿ ಅಡಗಿ ನಿಂತು ಮೂರು ಬಣ್ಣದಿಂದ ಕೂಡಿದ ಅದರ ಮೈ, ಉದ್ದ ಬಾಲ ನೋಡುವುದೇ ಒಂದು ಖುಷಿ!
ಈ ಚಿತ್ತಾರದ ಬೆಕ್ಕಿನ ರೂಪವ ಹತ್ತಿರದಿಂದ ನೋಡಲೇಬೇಕೆಂಬ ಕುತೂಹಲದಿಂದ ಒಂದಿನ ನಮ್ಮನೆ ಅಪ್ಪಿ ಮಹಡಿ ಮೇಲಿನ ಸಿಟೌಟ್ ಬಾಗಿಲು ತೆಗೆದು ಬಾ ಬಾ ಎಂದು ಕರೆದೇ ಬಿಟ್ಟ.
ಒಂದೆರಡು ಹೆಜ್ಜೆ ಹತ್ತಿರ ಬರೋದು ಮತ್ತೆ ಭಯದಿಂದ ವಾಪಾಸ್ ಓಡುವುದು ಹೀಗೆ ಆಟ ಮಾಡುತ್ತ ಅಂತೂ ಇಂತೂ ಒಂದು ದಿನ ಬೆಕ್ಕು ಒಳಗೆ ಬಂದೇ ಬಿಟ್ಟಿತು.
ಅಂದಿನಿಂದ ತಪ್ಪದೇ ದಿನಕ್ಕೆರಡು ಬಾರಿ ಆಸ್ಪತ್ರೆಯ ಡಾಕ್ಟರ್ ರೌಂಡ್ಸ್ ಗೆ ಬರುವಂತೆ ವಿಸಿಟ್ ಕೊಡುವುದು, ಗೋಡೆ ಮೇಲಿನ ಹಲ್ಲಿಗಳ ಭೇಟೆ ಆಡುವುದು ಇಡೀ ಮನೆ ಸುತ್ತಾಡೋದು ಮನೆ ಒಳಗಿನ ಅದರ ದಿನಚರಿ. ಅಷ್ಟೇ ಅಲ್ಲದೆ ಮನೆ ಹೊರಗೆ ಕೊಟ್ಟಿಗೆ, ಗೋಡನ್ನುಗಳಲ್ಲಿ ಇಲಿ ಹೆಗ್ಗಣ ಇವೆಯೇ ಎಂದು ತನ್ನ ರೇಡಿಯಂ ಕಣ್ಣುಗಳಿಂದ ಸರ್ಚ್ ಮಾಡಿ ಸಿಕ್ಕಿದ ಹುಳ ಹುಪ್ಪಡಿಗಳ ಹಿಡಿದು ಗಬಕ್ ಅಂತ ತಿಂದು ಡ್ಯೂಟಿ ಮುಗಿಸಿ ಹಾಗೆ ಬಂದ ದಾರಿಯಲ್ಲೇ ತನ್ನ ಪಾಡಿಗೆ ತಾ ನಡೆದು ಬಿಡೋದು ದಿನದ ವಾಡಿಕೆಯಾಯಿತು.
ಬೆಕ್ಕು ನಾಯಿಗಳ ಜೊತೆಗೂ ಮನುಷ್ಯರಂತೆ ಮಾತಾಡುವ ನಮ್ಮ ಮನೆಯ ವಿಶೇಷ ಪರಿಸರಕ್ಕೆ ಎಲ್ಲಾ ಸಾಕು ಪ್ರಾಣಿಗಳು ಸಲುಗೆ ಬೆಳೆಸಿಕೊಳ್ಳೋದು ಬೇಗ. ಇದು ಕೂಡಾ ಕಾಲ ಬಳಿ ಬಂದು ರೋಮದ ಗುಂಜು ಬಾಲ ಹೊಸೆಯುತ್ತ ಎಲ್ಲರನ್ನೂ ಇಂಪ್ರೆಸ್ ಮಾಡತೊಡಗಿತು.ಅಲ್ಲದೇ ಆ ಬೆಕ್ಕಿಗೆ ಸಿದ್ದಿ ಎಂಬ ಮುದ್ದಾದ ನಾಮಕರಣವೂ ಆಯಿತು.( ನಾವು ಸಾಕಿದ ಇದೇ ಹೆಸರಿನ ಮುದ್ದಿನ ಬೆಕ್ಕೊಂದು ಕಾಡು ಪ್ರಾಣಿ ತಿಂದು ಸತ್ತು ಹೋಗಿತ್ತು. ಅದರ ನೆನಪಲ್ಲಿ ಇಟ್ಟಿದ್ದು )
ದಿನ ಬರುವಾಗ ತಾ ಬಂದೇ ಎಂದು ಸಿಗ್ನಲ್ ಕೊಡಲು ಮ್ಯಾವ್… ಮ್ಯಾವ್ ಅಂತ ತನ್ನ ಭಾಷೆಯಲ್ಲೇ ಕೂಗಿ ಹೇಳುವ ಇದರ ಗುಣ ನನಗೆ ಬಹಳ ಮೆಚ್ಚುಗೆ ಆಗಿದ್ದು .ಇದಲ್ಲದೆ
ಯಾವ ರೂಮ್ ನಲ್ಲಿ ಮಕ್ಕಳು ಇದ್ದಾರೋ ಅದೇ ಕೋಣೆ ಬಾಗಿಲಲ್ಲಿ ಮಾತ್ರ ಕೂತು ರಾಗದಿಂದ ಬಾಗಿಲು ತೆಗಿ ಎಂದು ಒದರುವುದು ಕೇಳಿದರೆ ನೀವೂ ಅಚ್ಚರಿ ಪಡುವಂತಾದ್ದೆ!
ಇದರ ಮತ್ತೊಂದು ಒಳ್ಳೆ ಬುದ್ದಿ ಎಂದರೆ ನಾವು ಇದುವರೆಗೂ ಅದಕ್ಕೆ ಹಾಲು ತುಂಬಿದ ತಟ್ಟೆ ಇಟ್ಟು ಉಪಚಾರ ಮಾಡಿಲ್ಲ ಅದು ಕೂಡಾ ಹಾಲು, ಮೊಸರಿನ ಪಾತ್ರೆ ಕಣ್ಣೆದುರೇ ಇದ್ದರೂ ಒಮ್ಮೆ ಕೂಡಾ ಬಾಯಿ ಹಾಕಿದ ದಾಖಲೆ ಇಲ್ಲ!
ಹೀಗೆ ಬೆಕ್ಕಿನ ಚೇಷ್ಟೆ ಯಲಿ ತಿಂಗಳುಗಳು ಸಾಗುತ್ತಿರಲು ಸಿದ್ದಿಯ ಹೊಟ್ಟೆ ದಿನ ದಿನಕ್ಕೂ ದೊಡ್ಡ ಆಗ್ತಾ ಬಂತು. ಹೋ ಇದು ಇನ್ನು ಗಬ್ಬ ( ಗರ್ಭಿಣಿ ) ಎಂದು ಮನೆ ಮಂದಿಯೆಲ್ಲ ಮಾತಾಡಿಕೊಳ್ಳುತ್ತಿರುವಾಗ, ಸಿದ್ದಿ ಮನೆಯ ಸಂದಿ ಮೂಲೆಗಳ, ಬೆಚ್ಚಗಿನ ಜಾಗಗಳ ಹುಡುಕಾಟ ಶುರು ಮಾಡಿತ್ತು. ಮತ್ತೆ ಡೆಲವರಿಗೆ ನರ್ಸಿಂಗ್ ಹೋಮ್ ಬೇಕಲ್ವೇ?
ಅದೊಂದು ರಾತ್ರಿ ಇದ್ದಕ್ಕಿದ್ದಂತೆ ಮನೆಯ ಮೂಲೆ ಬದಿಗೆ ಛಿಯಾವ್ ಪಯ್ಯಾ ಎಂಬ ಪಕ್ಷಿಗಳ ಕಲರವದಂತೆ ಸೌಂಡು. ಅದೇ ಸ್ವಲ್ಪ ಹೊತ್ತಲ್ಲಿ ಸಿದ್ಧಿ ನಮ್ಮ ಮನೆಯ ಅಸ್ತ್ರ ಒಲೆಯ ಬೂದಿ ಕಂಡಿ ಇಂದ ಕಷ್ಟಪಟ್ಟು ಹೊರಗೆ ಬಂತು ಹೊಟ್ಟೆ ಅಪ್ಪಚ್ಚಿ ಆಗಿದ್ದು ನೋಡಿ ಆಗಲೇ ಅಂದಾಜಾಯಿತು ಒಲೆ ಒಳಗೆ ಸಿದ್ದಿಯ ಹೆರಿಗೆ ಕಾರ್ಯ ಮುಗಿದಿದೆ ಎಂದು.
“ಅಯ್ಯೋ ದೇವರೇ ಬೆಳಗಾದರೆ ಮಾವನವರ ತಿಥಿ. ಈ ಒಲೆಯಲ್ಲೇ ಮಡಿಯಿಂದ ಅಡುಗೆ ಮಾಡಿ ಭಟ್ಟರಿಗೆ ಬಡಿಸಬೇಕು.ಇದು ನೋಡಿದ್ರೆ ಇಲ್ಲೇ ಮರಿ ಹಾಕಿ ಮೈಲಿಗೆ ಮಾಡಿತಲ್ಲ” ಅತ್ತೆ ಹತ್ತಿರ ಬೈಸಿಕೊಳ್ಳಬೇಕಲ್ಲ ಎಂಬ ದೊಡ್ಡ ಚಿಂತೆ ನಮಗೆಲ್ಲ.
ಒಳಗೆ ಕೈ ಹಾಕಿ ತೆಗೆಯಲು ಬರುತ್ತಿಲ್ಲ, ಒಲೆಗೆ ಬೆಂಕಿ ಹಾಕಿದ್ರೆ ಕಾವಿಗೆ ಮರಿ ಪೂರ್ತಿ ಸುಟ್ಟು ಸಾಯುತ್ತವೆ ಏನು ಮಾಡೋದಪ್ಪ ದೇವ್ರೇ ಎಂದು ತಲೆ ಬಿಸಿಯಲ್ಲೇ ಆ ರಾತ್ರಿ ನಾವು ಮಲಗಿದ್ದಾಗಿತ್ತು.
ಸಿದ್ದಿಗೆ ಏನು ಸುಳಿವು ಸಿಕ್ಕಿತೋ,ಮರಿಗಳ ಪಾರು ಮಾಡುವ ಮಾಸ್ಟರ್ ಪ್ಲಾನ್ ಹೊಳೆಯಿತೋ… ಬೆಳಗಾಗುವಾಗ ಮರಿಗಳೆಲ್ಲ ಮಂಗ ಮಾಯ!
ಪಾಪ ಸಿದ್ದಿ ಹಿಂದಿನ ರಾತ್ರಿ ಇಡೀ ತನ್ನ ಒಂದೊಂದೇ ಮರಿಗಳ ಬಾಯಲ್ಲಿ ಕಚ್ಚಿಕೊಂಡು ಮತ್ತೊಂದು ಸ್ಥಳಕ್ಕೆ ಸಾಗಿಸುವ ಸಾಹಸ ಕಾರ್ಯದಲ್ಲೇ ತೊಡಗಿತ್ತು ಅನ್ಸುತ್ತೆ.
ಒಟ್ಟಿನಲ್ಲಿ ಅಂದಿನ ಶ್ರಾದ್ಧದ ಊಟವೂ ನಿವಿಘ್ನವಾಗಿ ನೆರವೇರಿತು ಎನ್ನಿ.
ನಂತರದ ನಾಲ್ಕು ದಿನ ಸಿದ್ದಿಯ ಸುಳಿವೇ ಇರಲಿಲ್ಲ. ಏನೋ ಕಳೆದು ಕೊಂಡಂತೆ ಭಾಸ.ಎಲ್ಲರ ಮನಸಿಗೆ ಒಂಥರ ಬೇಜಾರು. ಮರಿಗಳ ಜೊತೆ ತಾಯಿ ಎಲ್ಲಿ ಹೋಯಿತು? ಬದುಕಿದೆಯಾ ಇಲ್ಲವಾ? ಹೇಗಾದರೂ ಪತ್ತೆ ಹಚ್ಚಲೇ ಬೇಕೆಂಬ ದೃಢ ನಿಶ್ಚಯದಿಂದ ನಮ್ಮ ಕಡೆ ಇಂದ ಖುದ್ದು ಶೋಧನಾ ಕಾರ್ಯ ಶುರುವಾಯಿತು. ಅಕ್ಕ ಪಕ್ಕದ ಮನೆ ಎಲ್ಲಾ ವಿಚಾರಿಸಲು, ಆಚೆ ಕೇರಿಯ ತುದಿ ಮನೆಯವರು ಸಿದ್ದಿಯ ವಾರಸುದಾರರು ಅವರು ಸಿದ್ದಿಯನ್ನು ಚೆನ್ನಾಗಿ ಸಾಕಿದ್ದಾರೆ ಎಂದು ಸ್ಪಷ್ಟ ಮಾಹಿತಿ ಸಿಕ್ಕಾಗ ಅಲ್ಲೇ ಸುಖವಾಗಿ, ಸೇಫ್ ಆಗಿದೆ ಎಂದು ನಿಟ್ಟಿಸಿರು ನಮಗೆ.
ಮರಿಗಳು ಬೆಳೆದು ಸ್ವಲ್ಪ ದೊಡ್ಡಕ್ಕಾಗುತ್ತಿದ್ದ ಹಾಗೆ ಸಿದ್ದಿ ಚಳ್ಳೆ ಪಿಳ್ಳೆ ಮರಿಗಳ ಜೊತೆ ದೊಡ್ಡ ಕಾಡು ದಾಟಿ ಬರುತಿತ್ತು. ಇದನ್ನೆಲ್ಲಾ ನೋಡುತ್ತಿದ್ರೆ…. ಬಾಲ್ಯದಲ್ಲಿ ನಾವೆಲ್ಲ ಬೇಸಿಗೆ ರಜೆಗೆ ಅಮ್ಮನ ಜೊತೆ ಅಜ್ಜಿ ಮನೆಗೆ ಹೋಗುವ ಸೀನ್ ನೆನಪಾಗಿ ನಗುವೇ ನಗು.
ಆ ಮರಿಗಳ ಕಾಟ ತಡೆಯಲಾಗದೆ ಎಷ್ಟೋ ಸಾರಿ ಚೀಲ ತುಂಬಿ ಒಂದು ರಸ್ತೆಯಲ್ಲಿ ಅದರ ಮೂಲ ಮನೆಗೆ ಕೊಟ್ಟು ಬಂದರೆ ಅದೇ ಸ್ವಲ್ಪ ಹೊತ್ತಿಗೆ ಮತ್ತೊಂದು ದಾರಿಯಲ್ಲಿ ತಾಯಿ ಸಮೇತ ಮಕ್ಕಳು ಪ್ರತ್ಯಕ್ಷ! ನಗುವುದೋ ಅಳುವುದೋ ಇದಕ್ಕೆ ಏನ್ ಹೇಳ್ತೀರಾ??
ಮೊದ್ಲೇ ಹೇಳಿದ್ದೆ ಅಲ್ವಾ ನಮ್ಮನೆಯೊಂದಿಗೆ ಸಿದ್ದಿಯ ನೆಂಟಸ್ತನ ಶುರುವಾಗಿ ದೀರ್ಘ ಕಾಲ ಆಯ್ತು ಅಂತ. ಪ್ರತಿ ಮೂರು ತಿಂಗಳಿಗೊಮ್ಮೆ ಬೆಕ್ಕು ಮರಿ ಹಾಕುವುದಂತೆ ಗೊತ್ತೇ? ಈ ಸಿದ್ದಿಯೇನು ಮಕ್ಕಳ ಹೆರುವುದರಲ್ಲಿ ಕಡಿಮೆ ಗಟ್ಟಿ ಗಿತ್ತಿಯೇ??ಅದೆಷ್ಟು ಜೆನರೇಷನ್ ಕಳೆದವೋ ಲೆಕ್ಕವಿಲ್ಲ ಪ್ರತಿ ಬಾರಿ ಕಡಿಮೆ ಮೂರು ಮರಿಗಳ ಮಹಾ ತಾಯಿ. ಹಾಗೆ ಒಂದು ಅವಧಿಯವರೆಗೂ ಅವಕ್ಕೆ ತಪ್ಪದೇ ಹೊತ್ತು ಹೊತ್ತಿಗೆ ಊಟ ತಿಂಡಿ, ಬೇಕರಿ ಫುಡ್ ತಂದು ತಿನ್ನಿಸಿ, ಚೂರು ದೊಡ್ಡಕ್ಕಾದರೆ ಸ್ವಂತ ಭೇಟೆ ಯಾಡಲು ಟ್ರೈನಿಂಗ್ ಕೊಡುತ್ತ ಅವುಳ ಜೋಪಾನವಾಗಿ ಸಾಕಿ ಸಲಹುತ್ತಾ ಬಂದಿದೆ. ಅಪ್ಪಿ ತಪ್ಪಿ ನಮ್ಮ ರಾಜು ನಾಯಿ ಮರಿಗಳ ಹತ್ರ ಏನಾದ್ರು ಹೋಯಿತೋ ಗ್ರಹಚಾರ ತಪ್ಪಿದ್ದಲ್ಲ. ತನ್ನ ಚೂಪಾದ ಉಗುರುಗಳಿಂದ ಅದರ ಮುಖ ಮುಸುಡು ನೋಡದೆ ಗಿಬರಿ ಗಾಯ ಮಾಡಿ ಹಾಕದಿದ್ದರೆ ಅದು ಸಿದ್ದಿಯೇ ಅಲ್ಲ. ಒಂದಷ್ಟು ಮರಿಗಳು ದೊಡ್ಡಕ್ಕಾಗಿ ದೂರದ ಊರಿಗೆ ಮದುವೆಯಾಗಿ ಹೋಗಿವೆ, ಮತ್ತೆ ಕೆಲವು ಗೊತ್ತಿಲ್ಲದ ಹಾಗೇ ರಾತ್ರೋ ರಾತ್ರಿ ಸತ್ತೂ ಹೋಗಿವೆ ಬಿಡಿ. ಪಾಪ ಏನ್ ಮಾಡೋದು.
“ಅಡವಿಯೊಳಿರುವ ಮೃಗಕೆ ಮತ್ತೆ ಹಿಡಿದು ಹೆರಿಸಿದವರು ಯಾರು?” ಎಂಬ ದಾಸರ ಪದ ಎಷ್ಟು ಸತ್ಯ ನೋಡಿ. ಪ್ರತಿ ಬಾರಿ ಹೆರಿಗೆ ಸಮಯಕ್ಕೂ ತಾನೇ ಸುರಕ್ಷಿತ ಜಾಗವನ್ನು ಹುಡುಕಿಕೊಂಡರೂ ಬಾಳಂತಿಗೆ ಆಶ್ರಯ ಕೊಟ್ಟಿದ್ದಕ್ಕೆ ಋಣ ತೀರಿಸುವುದಕ್ಕೋಸ್ಕರ ನಮ್ಮ ಆಚೆ, ಈಚೆಯ ಒಟ್ಟು ಮೂರು ಮನೆಗೂ ಒಂದೊಂದು ತಲೆಮಾರಿನ ಒಂದು ಮರಿಯನ್ನು ಗಿಫ್ಟ್ ಕೊಟ್ಟಿದೆ ಹೇಗೆ ನಮ್ ಸಿದ್ದಿ ಬುದ್ದಿ!
ಈ ಸಾರಿ ಕೂಡಾ ಯಾರ ಮನೆಯಲ್ಲೋ ಮರಿ ಹಾಕಿ ಸುಮಾರು ಎರಡು ವಾರದ ನಂತರ ಬೆಳಿ, ಕಪ್ಪು, ಹಂಡ, ಬೂದು ಹೀಗೆ ತರ ತರದ ಮೂರು ಮರಿ ಕಚ್ಚಿಕೊಂಡು ನಮ್ಮ ಮಹಡಿ ಏರಿ ಮಂಚದ ಸಂಧಿಯಲ್ಲಿ ಮುಚ್ಚಿಟ್ಟಿತ್ತು ಕಣ್ರೀ. ಪ್ರತಿದಿನ ಚಿಕ್ಕ ಮಕ್ಕಳ ಥರ ಅವುಗಳ ಫೋಟೋ, ವಿಡಿಯೋ ಮಾಡೋದೇ ಕೆಲಸ ಆಗಿತ್ತು ನನಗೆ. ಹೀಗೆ ಬಿಟ್ಟರೆ ಆಗೋದಲ್ಲ ಹೋಗೋದಲ್ಲ ಅಂತ ಅರಿವಾಯಿತು.ದಿನ ದಿನಕ್ಕೂ ಕೊಳಕು ಮಾಡಿದ್ದನ್ನ ಕ್ಲೀನ್ ಮಾಡೋದು ಕಷ್ಟ ಅಂತ ಹೊರಗೆ ಕಷ್ಟ ಪಟ್ಟು ಎತ್ತಿಕೊಂಡು ಒಂದು ದೊಡ್ಡ ಬಾಕ್ಸ್ ಲ್ಲಿ ತುಂಬಿ ಬಾಲ್ಕನಿಯಲ್ಲಿ ಇಟ್ಟೆ.
ಸಿದ್ದಿ ಮರುದಿನವೇ ಮರಿಗಳ ಮತ್ತೆ ಎಲ್ಲೋ ಸಾಗಿಸಿ ನಾಪತ್ತೆ ಆಗಿತ್ತು. ಇದ್ದಕಿದ್ದಂತೆ ನಿನ್ನೆ ರಾತ್ರಿ ಮತ್ತೆ ಎರಡು ಬಾಯ್ ಫ್ರೆಂಡ್ ಗಳ ಜೊತೆಗೂಡಿ ಮತ್ತೆ ನಮ್ಮನೆ ಕಡೆ ಹಾಜರ್ ಯಂಗ್ ಲೇಡಿ ಸಿದ್ದಿ!
ಹೀಗೆ ಈ ಸಿದ್ದಿ ಬಗ್ಗೆ ಬರೆದಷ್ಟೂ ಮುಗಿಯದು. ತಮಗೂ ಪುರಾಣ ಓದಿ ಸುಸ್ತಾಗಬಾರದು ಅಂತ ಇಲ್ಲಿಗೆ ಸಮಾಪ್ತಿಗೊಳಿಸುತ್ತಿದ್ದೇನೆ ಎಲ್ಲರ ಅನಿಸಿಕೆಯನ್ನ ನಿರೀಕ್ಷೆಸುತ್ತ!!
ಕುಸುಮಾ. ಜಿ. ಭಟ್
ಬಲು ಚಂದ ಬರಹ .ಬರಹದ ಶೈಲಿಗೆ ವಿಷೇಶ ಮೆಚ್ಚುಗೆ
Siddhi ya kathe sogasaagide..Abhinandanegalu Kusuma..
ನಿಮ್ಮ ಸಿದ್ಧಿಯ ಕಥೆ ಕೇಳಿ ಸಂತೋಷವಾಯ್ತು. ಮಾರ್ಜಾಲ ಯಾರೂ ಇಲ್ಲದಾಗ ಮನೆಗೆ ನುಗ್ಗಿ ಕದ್ದು ಹಾಲು ಕುಡಿಯುವುದರಿಂದಲೇ, ಮಿಯಾಂವ್ ಮಿಯಾಂವ್ ಬೆಕ್ಕೇ ಕದ್ದು ಹಾಲು ನೆಕ್ಕೆ ಎಂದು ಶಿಶುಗೀತೆಯನ್ನು ಹೆಣೆಯಲಾಗಿದೆ. ನಿಮ್ಮ ಮನೆಗೆ ಬಂದಬೆಕ್ಕು ಹರಿಶ್ಚಂದ್ರನ ವಂಶಸ್ಥರ ಮನೆಯಿಂದ ತಪ್ಪಿಸಿಕೊಂಡು ಬಂದಿತ್ತೇನೋ?
ನಿಮ್ಮ ಅನುಭವದಂತೆ ನಮಗೂ ಆಗಿದೆ. ನಾವು ನಾಯಿ ಸಾಕಿದ್ದೇವೆ. ನಾಯಿಗೆ ಊಟ ಇಡುವ ಸಮಯಕ್ಕೆ ಆತಿಥ್ಯ ಪಡೆದವರಂತೆ ಬೆಕ್ಕು ಬಂದುಬಿಡುತ್ತಿತ್ತು. ಅದಕ್ಕೂ ಹಾಲನ್ನ. ತಿಂದ ನಂತರ ನಮಗೊಂದು ಪ್ರದಕ್ಷಿಣೆ ಹಾಕಿ ಓಟ ಕೀಳುತ್ತಿತ್ತು. ನಿಮ್ಮ ಬೆಕ್ಕಿನ ಕಥೆಯನ್ನು ಓದಿ ನಮ್ಮ ಅನುಭವ ನೆನೆಪಿಸಿಕೊಳ್ಳುವಂತಾಯ್ತು. ಬಹಳ ಸುಂದರವಾಗಿ ಸಿದ್ಧಿಯ ಬುದ್ಧಿಯನ್ನು ಕಥನವಾಗಿಸಿದ್ದೀರಿ. ಅಭಿನಂದನೆಗಳು ಕುಸುಮಾಭಟ್ ರವರೆ.