ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
‘ಹೊಂಗೆಯ ಮರದ ನೆರಳು.’
ಬೇಸಿಗೆ ಕಾಲದ
ಬಿಸಿಲಿನ ತಾಪಕೆ,
ಬೆವರುವ ದೇಹದ
ದಣಿವನು ತಣಿಸಲು,
ಹೊಂಗೆಯ ಮರದ
ಆಶ್ರಯ ಪಡೆಯಲು,
‘ಹಾಯ್ ‘ ಎನಿಸದಿರದೆ!
ಹೊಂಗೆ ಮರ ನೆರಳು.
ಮೇಲ್ಗಡೆ ಅಂದರ
ಹಸಿರಿನ ಚಪ್ಪರ,
ಸುಯ್ಯನೆ ಗಾಳಿಯು
ತಣ್ಣನೆ ಬೀಸಲು,
ಬೆವರಿನ ಕಣಗಳು
ದೇಹದಿ ಇಂಗಲು,
ಏನದೋ ಆಹ್ಲಾದ!
ಹೊಂಗೆ ಮರ ನೆರಳು
ಚೈತ್ರದ ಚಿಗುರಲಿ
ಹಸಿರೆಲೆಯೆಡೆಯಲಿ,
ಟೊಂಗೆ ಟೊಂಗೆಯೊಳು
ಬಿಳಿ ಹೂ ಗೊಂಚಲು,
ಗತಿಸುವೆನೆ? ತವಕ!
ಕಾಯಾಗುವ ತನಕ,
ನಿರಂತರ ಸುರಿಯೆ!
ಪುಷ್ಪಾಭಿಷೇಕ.
ಸೌಮ್ಯ ಸುಗಂಧದ
ಪರಿಮಳ ಮರದಡಿ,
ಮಧುವನು ಹೀರಲು
ದುಂಬಿಯ ದಾಂಗುಡಿ,
ಸೌಖ್ಯವೆನಿಸುತಿದೆ
ಸೆಖೆಯಲಿ ದೇಹಕೆ,
ಅನಂತ ವಂದನೆ!
ಹೊಂಗೆಯ ನೆರಳಿಗೆ.
ಪಿ.ವೆಂಕಟಾಚಲಯ್ಯ