ಕಾವ್ಯ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
‘ಕವಿತೆಬದುಕಲು ಬಿಡಿ’
ಇದು ನಮಗೆ ಪ್ರಕೃತಿ
ಕರುಣಿಸಿದ ವಿಕೃತಿ
ಅನಿವಾರ್ಯದ ಸ್ವೀಕೃತಿ
ನಮ್ಮದಲ್ಲದ ತಪ್ಪಿಗೆ
ಒಪ್ಪದಿಹ ಒಪ್ಪಿಗೆ
ಗಂಡೂ ಅಲ್ಲದ ಹೆಣ್ಣೂ ಅಲ್ಲದ
ತ್ರಿಶಂಕು ಸ್ಥಿತಿ ನಮ್ಮದು
ನೋಡುವ ಸ್ಥಿತಿ ನಿಮ್ಮದು
ಅರ್ಧನಾರೀಶ್ವರನ ಪೂಜಿಸುವ
ಆದರೆಮ್ಮನು ನಿರಾಕರಿಸುವ
ಮನಸ್ಥಿತಿ ನಿಮ್ಮದು
ಕೈತಟ್ಟಿ ಅಣಕಿಸುವಿರಿ
ನೋಡಿ ನೀವು ನಮ್ಮನು
ಕೈತಟ್ಟದೆ ಕರೆದರೆ
ಗಮನಿಸುವಿರೇ ನಮ್ಮನು
ಕಂಡರೆ ನಮ್ಮ ಮುಖ
ಸಿಂಡರಿಸುವಿರಿ
ನಿಮ್ಮ ಮುಖ
ಹೇಸಿಗೆಯಂತೆ ಕಾಣುವಿರಿ
ಪ್ರಾಣಿಗಳ ಮುದ್ದಾಡುವಿರಿ
ಪ್ರಾಣಿಗಿಂತ ಕೀಳೆ ನಾವು
ಇದು ನಿಮಗೆ ಸಮ್ಮತವೇ
ನಾವು ಬಯಸದಿದ್ದರೂ
ಪಡೆದ ಭಾಗ್ಯವಿದಾದರೂ
ಕೊಡದಿದ್ದರೂ ಪ್ರೀತ್ಯಾದರ
ತೋರಬೇಡಿ ಅನಾದರ
ಇರಬಹುದು ದೇಹದಲ್ಲಿ ಊನ
ಆದ್ರೂ ನಮಗಿದೆ ಹೂವಿನಂತ ಮನ
ನೂಕಾ೯ಲ ಸುಖವಾಗಿ ಬಾಳಿ ನೀವು
ಬಿಟ್ಟುಬಿಡಿ ನಮ್ಮ ಪಾಡಿಗೆ
ನೆಮ್ಮದಿಯಾಗಿರಲು ನಾವು
ಬೇಕಿಲ್ಲ ನಮಗೂ ಲಜ್ಜೆಗಟ್ಟ ಜೀವನ
ಸಿಗ್ನಲ್ಗಳಲ್ಲಿ ನಿಲ್ಲುವ
ಪೀಡಿಸುವ ಭಿಕ್ಷೆ ಬೇಡುವ
ಮುಜುರೆ ಮಾಡುವ
ಈ ಹೊಲಸು ಜೀವನ
ಆದರೆ ಹಾಳಾದ ಜನುಮ
ಹೆತ್ತವರಿಗೆ ನಾವು ಬೇಕಿಲ್ಲ
ಪಾಲಿಸುವವರು ಯಾರಿಲ್ಲ
ನಮಗೆ ನಾವೇ ಜೊತೆ
ನಮ್ಮಂತವರೇ ನಮ್ಮ ಸಂಸಾರ
ಉಳಿದೆಲ್ಲರಿಗೂ ನಾವು ಸಸಾರ
ಹೊಟ್ಟೆಗೆ ಹಿಡಿ ಅನ್ನವಿರೋಲ್ಲ
ಬಾಡಿಗೆಗೆ ಮನೆ ಕೊಡೋದಿಲ್ಲ
ಮಾಡ್ತೀನಿ ಅಂದ್ರು ಕೆಲ್ಸವಿರಲ್ಲ
ಆದರೂ ಬದುಕಬೇಕೆಂಬ ಆಸೆಗೆ
ಎಲ್ಲರ ತಿರಸ್ಕಾರಕ್ಕೂ ಹೊಡಿತೀವಿ ಸಡ್ಡು
ಒಕ್ಕೊರಲಿನಿಂದ ಕೇಳುವುದಿಷ್ಟೇ
ನಮ್ಮನ್ನು ಪ್ರೀತಿಸಲ್ವಾ ಬೇಕಾಗಿಲ್ಲ
ಆದ್ರೆ ಅಸಹ್ಯ ಪಟ್ಕೋಬೇಡಿ
ನಮ್ಮ ದೇಹದ ಗಾಯ ಕಾಣದಿರೋ ನೀವು
ನಮ್ಮ ಮನಸ್ಸು ಹೇಗೆ ಅರಿತೀರಿ
ದಯಮಾಡಿ ನಮ್ಮ ಪಾಡಿಗೆ
ಬಿಟ್ಟುಬಿಡಿ ನಮ್ಮನ್ನು
ಬೇಡುವೆವು ಇದನ್ನೇ ನಿಮ್ಮನ್ನು
ವೀಣಾ ಹೇಮಂತ್ ಗೌಡ ಪಾಟೀಲ್