ಲಾಕ್ ಡೌನ್ ದುರಿತಗಳು..

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು

Red Metal Padlock

ನಂದಿನಿ ಹೆದ್ದುರ್ಗ

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು..

ಕಳೆದ ವಾರ ನನ್ನ ಮೊಬೈಲ್ಲು ಬೆಂಗಳೂರಿಗರು ಕಳಿಸುತ್ತಿದ್ದ

ಹೂ ಉದುರಿದ ಖಾಲಿ ರಸ್ತೆಗಳಿಂದಲೇ ತುಂಬಿಹೋಯ್ತು.

ಒಂದು ರಸ್ತೆ ಹಳದಿ,ಮತ್ತೊಂದು ನೀಲಿ,ಮಗದೊಂದು ಕಡುಗೆಂಪು…ಇನ್ನೊಂದು ತಿಳಿಗುಲಾಬಿ..

ಆಹಾ…

ಊರಿಗೆ ಊರೇ ಯಾರದೋ ಸ್ವಾಗತಕ್ಕೆ  ಕಾದವರಂತೆ ತೋರಣ ಕಟ್ಟಿಕೊಂಡಿದೆ…

ಯಾವ ರಸ್ತೆಯಲ್ಲಿ ಯಾರು ನಡೆದರೂ ಎಲ್ಲಿ ನಲುಗುತ್ತದೊ ಎಂಬಂಥ ಪಕಳೆಗಳ ಹಾಸು.

ಬೆಂಗಳೂರು ಎನ್ನುವ ಹೆಸರು ಬದಲಿಸಿ ಹೂವೂರು ಎನುವಷ್ಟು  ಹೂಮರಗಳು..

ಯಾರೊ ಇನ್ನೊಂದು ಜೋಕು ಕಳಿಸಿದ್ರು…ಮಹಾನಗರದ ನಾಯಿಗಳೆಲ್ಲಾ ಮೀಟಿಂಗ್ ಸೇರಿ  ಅಲ್ಲಿ ಚರ್ಚೆ ಆಗ್ತಿದೆಯಂತೆ… 

‘ಮನುಷ್ಯರೆಲ್ರನ್ನೂ ಪಾಲಿಕೆಯವರು ಬಂದು ಎತ್ತಾಕೊಂಡು ಹೋಗಿರಬಹುದೇ…!?’

ಒಂಥರ ಸೊಗಸೇ ಇದೆಲ್ಲಾ ಓದಲಿಕ್ಕೆ..

ಅಳಿಲಿನ ಯೋಗಕ್ಷೇಮ ವಿಚಾರಿಸುವ ನೀಳಕತ್ತಿನ ನವಿಲೂ.

ಜಯನಗರ,ಫೋರಮ್, ಕಮರ್ಷಿಯಲ್ಲು ಅಂತ ಶಾಪಿಂಗ್ ಬಂದು ಹೋದ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು..

ಒಂದುಕಾಲದಲ್ಲಿ ಅತಿ ನಿಬಿಡವಾಗಿದ್ದ ದಾರಿ ಮಧ್ಯದಲ್ಲಿ ಹಾಯಾಗಿ ಮಲಗಿ ಮೆಲುಕುತ್ತಿರುವ ದೊಡ್ಡ ಹೊಟ್ಟೆಯ ಹಸುಗಳು..!!

ಮಹಾನಗರದ ಹೃದಯ ಭಾಗದಲ್ಲಿರುವ ಸ್ನೆಹಿತರೊಬ್ಬರು “ನೋಡಿಲ್ಲಿ…‌ಎಂತೆಂತಾ ಹಕ್ಕಿಗಳು ‌ಬಂದಿದಾವೆ ನಮ್ಮೂರಿಗೆ “

ಎನ್ನುತ್ತಾ ಪಕ್ಕದ ಖಾಲಿಸೈಟಿನ ಪೊದೆಯಲ್ಲಿ  ಚಿಲಿಪಿಲಿಗುಡುವ ಹೊಸ ಹಕ್ಕಿಗಳ ಫೋಟೋ ಕಳಿಸಿದ್ದೇ ಕಳಿಸಿದ್ದು…

ಆಹಾ ಓಹೋ ಹೇಳಿ‌ ನಂಗೆ ಆಯಾಸವಾದರೂ ಅವರ ಆಸಕ್ತಿ ಮಾತ್ರ ಕುಂದಲೇ ‌ಇಲ್ಲ..

ಮನುಷ್ಯನೇ ಹಾಗಲ್ಲವೇ…?

ತಾನೇ ವಿರೂಪ ‌ಮಾಡಿದ  ಪ್ರಕೃತಿ ಮತ್ತೆ  ಸ್ವರೂಪ ಪಡೆಯುತ್ತಿದೆ ಎನುವಾಗ ಅವನ ಸಂತೋಷ ಉಕ್ಕಿ ಹರಿಯುತ್ತದೆ.

ನಿಮಿತ್ತವಾಗಿ ಮಹಾನಗರದಲ್ಲಿದ್ದರೂ ಮನಸ್ಸು‌ ತನ್ನ ನಾಲ್ಕು ಮನೆಯ ಬಾಲ್ಯದ ಹಳ್ಳಿಯ ಚಿತ್ರಣವನ್ನೇ ಸದಾ ತುಂಬಿಕೊಂಡಿರ್ತದೆ.

ಹಾಗಾಗಿಯೇ ಸಣ್ಣ ಪಲ್ಲಟ,ಪರಿವರ್ತನೆಯಲ್ಲೂ ಮೂಲ ಕಾಣಬಹುದೇ ಎನ್ನುವ ಹುಡುಕಾಟದಲ್ಲೇ ಇರ್ತನೆ.

ಮೂಲದಲ್ಲಿ ಬಹುತ್ವ ಎನುವುದೇ ಮನುಷ್ಯನ ಗುಣ.

ಆದರೆ…ಆಧುನಿಕತೆ,ಜಾಗತೀಕರಣ ಮುಂತಾದ ಅತಿಮಾನುಷ ಪದಗಳು  ಮನುಷ್ಯನ ಮೂಲ ಗುಣವನ್ನು ತಿರುಚಿ  ಏಕಾಂಗಿಯಾಗುವುದೇ ಚಂದ ಎನುವ ಭಾವ ಸೃಷ್ಟಿಸುತ್ತಿವೆ.

ಇರಲಿ.. 

ಅತಿಯೆಲ್ಲಾ ಅವನತಿಗೇ…

ತುಂಬಿಕೊಳುವುದು ಖಾಲಿಯಾಗುವುದಕ್ಕೆ…

ಆರಂಭವೆಲ್ಲಾ ಮುಗಿಯಲಿಕ್ಕೆ..

ಅಟ್ಯಾಚುಗಳೆಲ್ಲಾ ಡೀಟ್ಯಾಚ್ ಆಗುವುದಿಕ್ಕೇ ಎನ್ನುತ್ತದೆ ಕಾಲ ಧರ್ಮ.

‘ಈ ದಾರಿಯಲ್ಲಿ ಒಮ್ಮೆ ನಿನ್ನ ಕಿರುಬೆರಳು ಹಿಡಿದು ನಡೆಯುವಾಸೆ !” ಹೂದಾರಿ ಕ್ಲಿಕ್ಕಿಸಿ ಹೀಗೆ ಮೆಸೇಜಿಸದ ಅವನು…!

ಹಳ್ಳಿಯಲ್ಲಿ ‌ಕುಳಿತು ಲಾಕಿನ ಹೆಚ್ಚಿಗೇನೂ ಎಫೆಕ್ಟಿಲ್ಲದೆ ,ಪ್ರೀತಿಯ ಓದೂ ಸಾಗದೆ /ಆಗದೆ ಒದ್ದಾಡುತ್ತಿದ್ದವಳ‌ ಮುಖಕ್ಕೆ ಒಂದು ಮಂದಸ್ಮಿತ ಮೂಡಲು ಇಷ್ಟು ಸಾಕಾಗದೇ..?

“ಮಾತು ತಪ್ಪಬಾರದು” ಎನ್ನುವ ಮರು ಸಂದೇಶದೊಂದಿಗೆ ಕಡುಗೆಂಪಿನ ಗುಲಾಬಿ ಕಳಿಸಿ ಮತ್ತೆ ಮೌನಕ್ಕೆ ಜಾರಿದೆ..

_

ಬದುಕು ಕೊರೊನಾಮಯವಾಗಿದೆ.

ಲಾಕಡೌನೆಂಬ ಪದ‌ ಮೊದಲು ಕೇಳಿದಾಗ ಅಷ್ಟೇನೂ ದಿಗಿಲು‌ ಬೀಳದೆ ‘ಮಾಮೂಲು ಬದುಕು ನಮ್ಮದು.ನಾವು ಭೂಮಿ ನಂಬಿರುವವರು.ಉಳುವ ಯೋಗಿಯ ನೋಡಲ್ಲಿ ಅಂತ ರಾಷ್ಟ್ರಕವಿ ಸುಮ್ಮನೇ ಬರೆದದ್ದಲ್ಲ’ ಅಂದುಕೊಂಡಿದ್ದೆ..

ಆದರೆ ಮೂರೇ ದಿನಕ್ಕೆ ನನ್ನ ನೂರು ಮನೆಯ ಊರಿನಲ್ಲೂ ಆರು ಮಂದಿ ಒಟ್ಟಿಗೆ ನಿಂತು ಕೊರೊನಾ ಹಾಡು ಪಾಡು ಮಾತಾಡ್ತಿದ್ದರೆ ಅದೆಲ್ಲಿಂದಲೋ ಪೋಲಿಸರು ಬಂದು ಅವರ ಕೈ ಸೋಲುವವರೆಗೂ ಬಿಗಿದು ಹೋಗುತ್ತಿದ್ದರು…

ನಾಕು ದಿನ ಬಾಯಾಡಲಿಕ್ಕೆ ಆ ಮಾತಾದರೂ ‌ನಡೆದೀತು  ಅಂದುಕೊಂಡರೂ  ಕೇಳಲಿಕ್ಕೆ ಜೋಡಿ ಕಿವಿಯಿಲ್ಲದೆ ಅಕ್ಷರಶಃ ಈ ಲಾಕು ಸಾಕು ಎನಿಸತೊಡಗಿತು.

ನಿಕ್ಕಿಯಾಗಿದ್ದ ಮದುವೆಯೊಂದು ಕೊರೊನಾ ಕಾರಣಕ್ಕೆ  ಅತ್ಯಾಪ್ತರು‌ ಮಾತ್ರ ನಿಂತು‌ ನೆರವೇರಿಸುವ ಹಾಗಾಯ್ತು..

ಯಾಕೋ ಗೊತ್ತಿಲ್ಲ.ಅದರಿಂದ ಒಳಗೊಳಗೆ ಖುಷಿ ಪಟ್ಟವರಲ್ಲಿ ನಾನೂ ಒಬ್ಬಳು.

ನಮ್ಮ ಭಾರತೀಯರಲ್ಲಿ ಮಾತ್ರ ಕಾಣುವ ಈ ಬಿಗ್ ಫ್ಯಾಟ್ ಮದುವೆಗಳು  ಮಗದೊಂದು ಕಾರಣದಲ್ಲಿ ನೇಚರನ್ನು ನುಂಗಿ ನೊಣೆಯುತ್ತಿವೆಯೇನೊ ಅನಿಸ್ತದೆ..

ಒಂದು ಸಾಧಾರಣ ಕುಟುಂಬದ ಮದುವೆಗೂ ಒಂದು ಸಣ್ಣ ಬೆಟ್ಟದಷ್ಟು ಕಸದ ಉತ್ಪಾದನೆ ಆಗ್ತದೆ.

ಅದರಲ್ಲೂ ಹೆಚ್ಚಿನದು ವಿಘಟನೆಯಾಗದ ಕಸ.

ತಮ್ಮ ಸ್ಟೇಟಸ್ಸು ತೋರಿಸಿಕೊಳ್ಳುವ ಸಲುವಾಗಿ ಪ್ರತಿ ಊಟ ತಿಂಡಿಗೂ  ಪ್ಲಾಸ್ಟಿಕ್ ಬಾಟಲಿಯಲ್ಲೇ‌ ನೀರು ಪೂರೈಕೆ..

ಇಟ್ಟ ಬಾಳೆಲೆ ಒರೆಸಿಕೊಳ್ಳಲು ಪುಟ್ಟದೊಂದು ಪ್ಲಾಸ್ಟಿಕ್ ಕುಡಿಕೆ .ಅದರೊಳಗೆ ನೀರು ಹಾಕಿದರೆ ಊದಿಕೊಳ್ಳುವ ಟಿಷ್ಯೂ.

ಮುಕ್ಕಾಲು ಮೂರು ಪಾಲು ಸಕ್ಕರೆ ರೋಗಿಗಳಿರುವ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ನಾಲ್ಕು ನಾಲ್ಕು ಬಗೆಯ ಸಿಹಿ.

ಉಂಡದ್ದಕ್ಕಿಂತ ಒಗೆದದ್ದೇ ಹೆಚ್ಚು..

ಸಾಯಲಿ ,ನಾಯಿ ನರಿಯಾದರೂ ತಿಂದುಕೊಳ್ತವೆ ಅಂದುಕೊಂಡರೆ ಪ್ರತಿ ಸಿಹಿಗೂ ಪ್ರತ್ಯೇಕ ಪ್ಲಾಸ್ಟಿಕ್ ಬಟ್ಟಲು.ಜೊತೆಗೆ ಚಮಚ.

ಬರೆಯುತ್ತಾ ಹೋದರೆ ಸಂ ವಿಧಾನವೇ ಆಗಬಹುದು…

ಕೊರೊನಾದ ಪಾಸಿಟಿವ್ ಪರಿಣಾಮವಾಗಿ ಪ್ರಮುಖವಾಗಿ ಊರಲ್ಲಿ ನಡೆದ ಸರಳ ಮದುವೆ ಹೆಸರಿಸಬಹುದು.

ನೆಲ ,ಮುಗಿಲು ನೀರು,ನಿಡಿ  ತಿಳಿಯಾಗಿದ್ದು,

ಮನಸ್ಸುಗಳು ತಿಳಿದದ್ದು,

ವೃದ್ದಾಶ್ರಮಗಳಾಗಿದ್ದ ಹಳ್ಳಿಗಳೆಲ್ಲಾ ಸಂಜೆ ಮುಂಜಾನೆ ಲಕಲಕಿಸಿದ್ದು.

ಕ್ರಿಕೆಟ್ಟು ,ಶಟಲ್ಲುಗಳು ನಮ್ಮ ಸಗಣಿಸಾರಿಸಿದ ಅಂಗಳಕ್ಕೂ ಬಂದು  ನಮ್ಮ ಹೊಲ ತೋಟಗಳು ದಿಗಿಲಾಗಿದ್ದು..

ಓದು ವೃತ್ತಿಯ ಕಾರಣಕ್ಕಾಗಿ ವರ್ಷಾನುಗಟ್ಟಲೆ ಮನೆಯಿಂದ ಹೊರಗಿದ್ದು,ಬಂದರೂ ನೆಂಟರ ಹಾಗೆ ಬಂದು ಹೋಗುತ್ತಿದ್ದ ಮಕ್ಕಳೇ ಅಪ್ಪ ಅಮ್ಮನಿಗೆ ಹೊಸದಾಗಿ ಕಂಡದ್ದು..

ಊರಿನಲ್ಲಿ ಜೊತೆಗಿರುವ ಸೊಸೆಗಿಂತ  ನಗರ ಸೇರಿ ವಾರಕ್ಕೊಮ್ಮೆ ವಿಡಿಯೊ ಕಾಲು ಮಾಡಿ 

‘ಆರೋಗ್ಯ ನೋಡಿಕೊಳ್ಳಿ,ನಾವಿದ್ದೆವೆ ಜೊತೆಗೆ ‘

ಎನ್ನುವ  ಸೊಸೆಯೇ ಬಲು ಪ್ರೀತಿಸುವುದು ತಮ್ಮನ್ನು ಎಂದುಕೊಂಡಿದ್ದ ಅತ್ತೆಮಾವನಿಗೆ‌ ಸತ್ಯ ದರ್ಶನವಾಗಿ ಬೆಸ್ತು‌ಬಿದ್ದಿದ್ದು.

ಊರ ಕಾಲುಹಾದಿಗಳಲ್ಲೂ ವಾಕಿಂಗ ಹೋಗುವವರು ಹೆಚ್ಚಾಗಿದ್ದು…

ಇನ್ನೂ ಮುಂತಾದವು ಕೊರೊನಾ ಕಾಲದ ಕೊಡುಗೆ ಎನಬಹುದು.

ನಿಜ.. ಸಾಮಾಜಿಕವಾಗಿ,ರಾಜಕೀಯವಾಗಿ,ಸಾಂಸ್ಕ್ರತಿಕವಾಗಿ ಇದು ಇತಿಹಾಸದ ಪುಟ ಸೇರಿದ ವರ್ಷ.ನಾವಿದಕ್ಕೆ ಸಾಕ್ಷಿಯಾಗಿದ್ದೇವೆ.

ಲಘುವಾಗಿ ತೆಗೆದುಕೊಳ್ಳುವ ವಿಚಾರ ಅಲ್ಲವೇ ಅಲ್ಲ.

ಕೊರೊನಾ ಕಾಲವನ್ನು ಹಿಂದೂಡಿದೆ.

ನಷ್ಟ ವಾಗಿರುವ ಆರ್ಥಿಕತೆಯ ರಿಪೇರಿಗೆ ಯಾವ ಸೂತ್ರವೂ ಏನು ಮಾಡಲಾರದಂತಾಗಿದೆ. 

ಕಲಿತ ಮಕ್ಕಳನ್ನು ಕನಲುವಂತೆ ಮಾಡಿದೆ.

ಬೆಳೆದ ಬೆಳೆಗೆ ತಗುಲಿದಷ್ಟೂ ಬೆಲೆ ಸಿಗದೆ ರೈತ ಹೈರಾಣಾಗಿದ್ದಾನೆ..

ಒಮ್ಮೆ ಕೆಮ್ಮಿದರೂ  ಸಾಕು.ಮನೆಯವರೇ ಮುಖ ಸಿಂಡರಿಸುತ್ತಾರೆ.

ಇನ್ನೇನು ಮರೆಯಾಗುತ್ತಿದೆ ಎಂದುಕೊಂಡಿದ್ದ ಅಸ್ಪರ್ಶ್ಯತೆ ಹೊಸ ಫ್ಯಾಷನ್ ಆಗಿ  ಜಗವನ್ನಾಳತೊಡಗಿದೆ.

ನಮ್ಮ ಸಂಸ್ಕೃತಿಯ ಮೇರುವೆನಿಸಿದ್ದ ಅತಿಥಿ ದೇವೋಭವ ಇನ್ನೂ ಅರ್ಥ‌ಕಳೆದುಕೊಳ್ಳಬಹುದೆನಿಸುತ್ತಿದೆ..

ಮೊದಲೆ ಮುಖ ತಪ್ಪಿಸಿ ಓಡಾಡುತ್ತಿದ್ದ ‌ಮಂದಿಗೆ ಕೇವಲ ಕಣ್ಣು‌ಮಾತ್ರ ಕಾಣುವಂತೆ ಬಂದ ಮಾಸ್ಕಿನ ಯುಗ ವರದಾನವಾಗಿದೆ.

ಮಾದ್ಯಮಗಳ ಬೇಳೆಬೇಯಿಸಿಕೊಳ್ಳುವ ಗುಣದಿಂದ ಧರ್ಮ ಧರ್ಮಗಳ ನಡುವೆ ಶೀತಲ ಸಮರ ನಡೆಯುತಿದೆ.

ಯಾರೋ ಹತ್ತು ‌ಕಿಡಿಗೇಡಿಗಳ ಕೊಳಕು ಮನ ಸ್ಥಿತಿಯಿಂದಾಗಿ ಒಂದು ವರ್ಗದ ಮನುಷ್ಯರನ್ನೇ ಜಗತ್ತು ಸಂದೇಹದ ಕನ್ನಡಕ ದಿಂದ ನೋಡುವ ವಾತವರಣ ಸೃಷಿಯಾಗಿದೆ.

ದುಡಿದು ನಿತ್ಯದ ಅನ್ನ ಉಣ್ಣುತ್ತಿದ್ದ ಶ್ರಮಜೀವಿ ನಿತ್ಯದ ಕೂಳಿಗೆ ಸ್ವಾಭಿಮಾನ ಬದಿಗಿಟ್ಟು ದಾನಿಗಳ ಕೈ ನೋಡುತ್ತಿದ್ದಾನೆ.

ಮೂರು ಟೊಮ್ಯಾಟೊ ,ಎರಡು ಆಲೂಗೆಡ್ಡೆ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಒಳಗಿನ ಮನ್ನಣೆಯ ದಾಹಕ್ಕೆ ನೀರೆರುಯುವವರ ಸಂಖ್ಯೆ ಅತಿಯಾಗುತ್ತಿದೆ.

ಆದರೆ..

ಇವೆಲ್ಲದರ ನಡುವೆ ನಮ್ಮ ನೇಗಿಲಯೋಗಿ,ಭಾರತದ ಬೆನ್ನೆಲುಬು ಮಾತ್ರ ಎಂದಿನಂತೆ  ಉತ್ತಿಬಿತ್ತುತ್ತಿದ್ದಾನೆ..

ಒಂದು ಸಮೀಕ್ಷೆಯ ಪ್ರಕಾರ ಕೊರೊನಾ ಕಾಲಕ್ಕೆ ಭಾರತದಲ್ಲಿ ತರಕಾರಿ ಸೊಪ್ಪು ಗಳ ಅವಕ ಮಾರುಕಟ್ಟೆಯಲ್ಲಿ ಅತಿಯೆನಿಸುವಷ್ಟೇ ಆಗಿದೆ.

ಆದರೆ

ವ್ಯವಸ್ಥೆ ಇಲ್ಲೂ ಒಂದು ತಪ್ಪೆಸಗಿದೆ..ರೈತನ ಸರಕನ್ನು ಎಪಿಎಮ್ ಸಿಯ ಒಳ ತರಿಸಿಕೊಂಡ ಅಧಿಕಾರಿಗಳು ಕೇವಲ ವ್ಯಾಪಾರಿ ವರ್ಗವನ್ನು ಮಾತ್ರ ಒಳಬಿಟ್ಟುಕೊಂಡಿದೆ.

ರೈತರಿಂದ ನೇರ ಗ್ರಾಹಕ ವ್ಯವಸ್ಥೆ ಮಾತ್ರ ಇಂದಿನ ಕಂಗೆಟ್ಟ ಕೃಷಿಕನ ಬದುಕನ್ನು ನೇರೂಪು‌ ಮಾಡಬಲ್ಲದು ಎನುವುದು ಗೊತ್ತಿದ್ದರೂ ಜಾಣಗುರುಡು ತೋರಿದೆ.

ಯಾರೊ ಹುಸಿದೈರ್ಯ ಇರುವ ರೈತಾಪಿ ಮಂದಿ ಇದನ್ನು ಪ್ರಶ್ನಿಸಿದ್ದಾರೆ.

ಎಲ್ಲೊ ನಾಲ್ಕು ಮಂದಿಗೆ ನ್ಯಾಯ ಸಿಕ್ಕಿದೆ..

ಉಳಿದವರು ಮತ್ತದೆ‌ ಮಹಾನಗರದ  ತಮ್ಮ ಬಾಂಧವರು ಅಪ್ಲೋಡಿಸಿದ ತಮ್ಮದೆ ಹೊಲಗದ್ದೆಗಳಿಂದ ಹೋದ ತರಕಾರಿ ಹಣ್ಣುಗಳ ಬಗೆಬಗೆಯ ಅಡುಗೆಗಳನ್ನು ನೋಡಿ ಉಗುಳು ನುಂಗಿಕೊಳ್ಳುತ್ತಿದ್ದಾರೆ.‌

ಯಾಕೋ  ಇದೆಲ್ಲವನ್ನೂ ನೋಡುವಾಗ ಇನ್ನು ಕೃಷಿ ಕ್ಷೇತ್ರಕ್ಕೆ ಯಾವುದೇ ಭವಿಷ್ಯ ವಿಲ್ಲ ಎನುವುದು ಖಚಿತವಾಗುತ್ತದೆ.

ಆದರೆ.. ಈ ಸಮಾಜದ ಅಥವಾ ಈ ವ್ಯವಸ್ಥೆಯ ಒಂದು ವೃತ್ತದಲ್ಲಿ ಮೂಲದಲ್ಲಿ ರೈತನಿದ್ದರೆ ಕೊನೆಯಲ್ಲಿ ಟೆಕ್ನಾಲಜಿ ಇದೆ ಎನುವುದು ಎಲ್ಲರಿಗೂ ತಿಳಿದ ವಿಚಾರವೇ.

ಮೂಲದ ಬೇರನ್ನೇ ಗೆದ್ದಲು ಹಿಡಿಸಿದರೆ ವೃತ್ತ ಪೂರ್ತಿಯಾಗುವುದಾದರೂ ಹೇಗೆ.?

ತೆರಿಗೆ ಕೇಂದ್ರೀಕೃತ ದೃಷ್ಟಿಯಿಂದ ನೋಡುವ  ಎಲ್ಲಾ ಸರ್ಕಾರಗಳು ರೈತನ ಬಾಯಿಗೆ ಬೆಣ್ಣೆ ಹಚ್ಚುವಂತೆ ಆಡುವ ನಾಟಕಗಳನ್ನು ಇನ್ನಾದರೂ ನಿಲ್ಲಿಸಬೇಕು.

 ಸಾವಿರ ರೈತರ ಬದುಕು ಹಸನಾಗುವುದಕ್ಕೆ ಕೊಡಬಲ್ಲ  ಒಂದು ಬೆಂಬಲ ಬೆಲೆಯ ಮೊತ್ತವನ್ನು  ಹೊಟ್ಟೆ ತುಂಬಿದ ಉದ್ಯಮಿಯೊಬ್ಬನ ಬ್ಯಾಂಕ್ ಸಾಲ ಮನ್ನಾ ಮಾಡುವುದಕ್ಕೆ ಬಳಸುವುದನ್ನು ಸರ್ಕಾರಗಳು ನಿಲ್ಲಿಸಬೇಕು.

ಕಾಲಕಾಲಕ್ಕೆ ರೈತೋಪಯೋಗಿ ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಗ್ರಾಮೀಣ ಬದುಕಿನ ಹಿತಕಾಯಬೇಕು.

Photo of Person on Green Grass Field

ವೈಯಕ್ತಿಕ ಆದಾಯವನ್ನು ಇಲ್ಲೂ ಹೆಚ್ಚಿಸುವ,ವೃತ್ತಿ ಘನತೆ ಎತ್ತಿಹಿಡಿಯುವ ಮನಸ್ಥಿತಿ ಅಧಿಕಾರಿಗಳಲ್ಲೂ ಬರಬೇಕು. 

ಬೀಜ ಗೊಬ್ಬರ ನೀರಾವರಿಗೆ ಪ್ರಾದೇಶಿಕವಾಗಿ ಭಿನ್ನ ರೂಪುರೇಷೆಗಳನ್ನು ಕೈಗೊಂಡು  ರೈತರ ಗೌರವದ ಬದುಕಿಗೆ ಅನುವು ಮಾಡಬೇಕು.

ಬ್ಯಾಂಕುಗಳು,ಅಧಿಕಾರಿಗಳು ರೈತನನ್ನು ಕೇವಲ ನೆಪಮಾತ್ರಕ್ಕೆ ಎತ್ತರದಲ್ಲಿರಿಸದೆ ವಾಸ್ತವದಲ್ಲೂ ಹಾಗೇ ನಡೆದುಕೊಳ್ಳಬೇಕು

ಕೊರೊನಾ ಕಾಲದಲ್ಲಿ ಜಗತ್ತಿಗೊಂದು ಹೊಸ ಪಾಠ ದೊರಕಿದೆ.

ಮಹಾನಗರದ ಮೋಹ ತುಸುವಾದರೂ ಕಡಿಮೆಯಾಗಿದೆ.

ಹಳ್ಳಿಗಳೂ ಬದುಕಲು ಅರ್ಹ ಎನುವುದನ್ನು ಮಂದಿ ತಿಳಿದುಕೊಳ್ತಿದ್ದಾರೆ.

ಅಯ್ಯೋ..ಊರಲ್ಲೊಂದು‌ ಮನೆಯಿದ್ದಿದ್ದರೆ,ತುಂಡು ನೆಲವಿದ್ದಿದ್ದರೆ ಎನ್ನುವ ಜನ ಹೆಚ್ಚಾಗ್ತಿದ್ದಾರೆ..

ಸರ್ಕಾರ ಇಂತಹ ಸನ್ನಿವೇಶಗಳ ಉಪಯೋಗ ಪಡೆಯಬೇಕು..

“ಕೆಟ್ಟಡುಗೆ ಅಟ್ಟವಳೇ ಜಾಣೆ’

ಎನ್ನುವ ಮಾತಿದೆ.

ಗುಣಮಟ್ಟದ ಬದುಕನ್ನು ರೂಪಿಸುವಲ್ಲಿ ,

ಹಳ್ಳಿಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವ್ಯವಸ್ಥೆ ಗಮನ ಹರಿಸಲೇಬೇಕಾದ ದುರಿತ ಕಾಲ ಇದಾಗಿದೆಯಲ್ಲವೇ.?

************

Minimalist Photography of Two Closed Wooden Doors

One thought on “ಲಾಕ್ ಡೌನ್ ದುರಿತಗಳು..

Leave a Reply

Back To Top