ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
‘ಬಾಲ್ಯದ ನೆನಪು’
ನಮ್ಮ ಹಳೆಯ ಮನೆಯ ನೋಟ ಅದೆಷ್ಟು ಮಾಟ
ಮಂದಿ ಮಕ್ಕಳು ಅಪ್ಪ ಅಮ್ಮಂದಿರ ಕೂಟ
ಮಕ್ಕಳಾಟ ಮುದ್ದು ಮಕ್ಕಳ ತುಂಟಾಟ
ಎಲ್ಲರೊಡನಾಟ ಸುಂದರ ಕೂಟ
ಮನೆಹಾಕಿ ಚಕ್ಕದಾಟ ಹುಡುಗಾಟ
ಬೆದಿಂಗಳಿನ್ಯಾಗ ಹಾಸಕಲ್ಲಮ್ಯಾಲ ಮಲಗಿ
ಚೆಂದ್ರನ ನೋಡಿ ಬೆರಗಾಗಿ ಚುಕ್ಕಿ ತಾರೆ ಎಣಿಸಿ ಗುಣಿಸಿ
ಗುಡಿಕಟ್ಟಿ ಸಾಲೀ ಕಟ್ಟಿ ಮ್ಯಾಲ ಬೆಳದಿಂಗಳೂಟ
ಅಂಗಳದಾಗ ಚುಕ್ಕಿಟ್ಟ ರಂಗೋಲಿ ಸುಣ್ಣದ ಚಿತ್ತಾರ//
ಅಜ್ಜ ಅಪ್ಪ ಟಕ್ಕೇಕ ಆಧಾರಾಗಿ ಕಟ್ಟಿಮ್ಯಾಲ
ಅಮ್ಮ ಅತ್ತೆ ಕಾಳ ಹಸನ ಕೌದಿ ಹೋಲೆಯುತ
ಮೊಮ್ಮಕ್ಕಳನ್ನ ಆಡಿಸುತ ಇನ್ನೊಂದ ಕಟ್ಟಿಮ್ಯಾಲ
ಊರ ಮಂದೆಲ್ಲ ನಗನಗದ ನಮಸ್ಕಾರ ಕುಶಲೋಪಚಾರ
ಹಬ್ಬ ಹುಣ್ಣಿಮ್ಯಾಗ ಹೋಳಿಗೆ ಹುಗ್ಗಿ ಬಸದ ಸ್ಯಾವೀಗಿ
ಹಾಲ ತುಪ್ಪ ಹಾಕಿ ಉಂಡಾರ ಅಮೃತದ ರುಚಿ
ಸಗಣಿಯ ಪಾಂಡೋರ ಉತ್ರಾಣಿ ಕಡಿ ಚುಚ್ಚಿ ಹೂವ ಹಚ್ಚಿ//
ಹಿತ್ತಲದಾಗ ನನ್ನವ್ವ ಹಚ್ಚಿದ ಹಣ್ಣಿನ ಗಿಡಗೊಳ
ಬದನೆ ಟೊಮೆಟೊ ಅವರೇ ತೊಂಡಿಕಾಯಿ ಹೀರೆ ಬಳ್ಳಿ
ನೆಲ್ಲಿ ಹುಣಸೆ ಗಿಡ ಪಂಚಮಿ ಬಂದರ ಆ ಗಿಡಕ್ಕೆಲ್ಲಾ ಜೋಕಾಲಿ
ಕಟ್ಟಿಗೆ ತೊಟ್ಟಿಲ ಕೂಸು ಕುಲಾಯಿ ಸದಾಕಾಲ ಜೋಲಾಲಿ
ಅಟ್ಟದ ಮ್ಯಾಲ ಗಳಿಗ್ಯಾಗ ಬೂದಿ ಹಾಕಿದ ಹುಳ್ಳಿ ಬೆಂಡಿ ಪುಂಡಿ ಕಾಳ
ಎಣೆದ ಬುಟ್ಟಿ ತಟ್ಟಿ ಮರ ಮ್ಯಾನ ಮಾಡಿ ಕಾಳ ಕಡಿ ತುಂಬಿ
ಅಂಗಳದಾಗ ಕಾಳಿನ ಹಗೆ ತುಂಬಿಸಿ ಏನದರ ಸಂಭ್ರಮ
ಸಂತಸ ಸಡಗರ ಪ್ರತಿನಿತ್ಯ ಅದೆಷ್ಟ ಗಮಗಮ
ಊರ ಜಾತರಿ ತೇರ ಬಯಲಾಟ ಪಾರಿಜಾತ ನಾಟಕ
ನಡಮನಿ ಪಡಸಾಲಿ ಹತ್ತಿಯ ಕೊನೆ
ಹುಸಿ ಹಕ್ಕಿ ಹತ್ತೆಂಟ ದನಕರು
ದೇವರ ಮನಿ ಅಡಗಿ ಮನಿ ತಿಳಿ ಬಚ್ಚಲ
ಮುಚ್ಚಿಯ ಕಟ್ಟಿ ಹಿತ್ತಲ ಕಟ್ಟಿ ಸುತ್ತೆಲ್ಲ ಗಿಡಗಂಟಿ
ತಲೆ ಮ್ಮಾಲ ಹಂಚ ರವಿ ಬಂದರ ಬೆಳಕ ಕೊಂಚ
ಸಗಣಿ ಸಾರಿಸೋ ನೆಲ ಹಸನಾದ ಬೆಳೆ ಹೊಲ
ಉಡಿಕಟ್ಟಿ ತಣೆ ಕಾಯಿ ಹರಿದು ಕೊಯ್ದು ತುಂಬಿ
ಗೊಂಜಾಳ ಉದರಿಸಿ ಶೆಂಗಾ ಕೊಯ್ದು ಒಡೆದು
ಕೋಲಿ ಕಟ್ಟಿಗೆ ಕುಳ್ಳು ಉರವಲು ಮಾಡಿ//
ನೀರೊಳಿ ಹಳ್ಳದ ತುಂಬಿ ತರೊ ನೀರ
ಸೇದೋ ಬಾವಿಯ ನೀರು ಸೇದಿ ತರುವ ನೀರ
ಕೈ ಪಂಪ ಹೊಡೆದು ಎತ್ತಿ ತರುವ ನೀರ
ಯಾದಕ್ಕೂ ಇಲ್ಲ ಬಿಂಕ ಬಿಗುಮಾನ ಚೂರ
ಸಂಜೆಯಾತಂದ್ರ ಕಣ್ಣಕಟ್ಟಿ ಆಟ ಜೋರ ಪಾರ
ಕಿಡಬುಡಿಕ್ಯಾರಾಟ ಡೊಂಬರಾಟ ಕೋಲಾಟ
ಕರಡಿ ಆಡಿಸಾಂವ ಹಾವಾಡಿಗ ಆಗಾಗ
ಜಾತಿಗ್ಯಾರ ಸೋಗ ರಾಮಾಯಣ ಮಹಾಭಾರತ
ಹಾಡಿ ಕುಣದ ಹೇಳಿ ತಿಳಸತಿದ್ರ ಹಾಂಗ//
ನಡಮನ್ಯಾಗ ಬೆಳಗಿನ ಸಾಮೋಹಿಕ ಪ್ರಾಥ೯ನೆ
ಅಲ್ಲೇ ಪಂತಿಚಾಪಿ ಹಾಸಿ ಕುಂತ ಊಟ ಉಪಚಾರ
ರಾತ್ರಿಗೆ ಕೌದಿ ಹಾಸಿ ಹೊದ್ದು ಅಲ್ಲೇ ಸುಖನಿದ್ರೆ
ಬಿದ್ದರ ತುರಬಿ ತಪ್ಪಲ ಗೊಳಗೊಳಕಿ ಹಾಲ ಹಚ್ಚಿ
ಪಾಠ ಪ್ರವಚನ ಬಾಟಲಿ ಚುಮಣಿ ಹಚ್ಚಿ
ನವರಾತ್ರ್ಯಾಗ ದೇವಿ ಅಮ್ಮನ ಪಾರಾಯಣ
ವರ್ಷಕ್ಕೊಮ್ಮೆ ಪ್ರಸ್ತಾ ಪ್ರವಚನ ಭಜನೆ ಆಚರಣೆ//
ಬರಿಗಾಲಲ್ಲಿ ಹರದಾರಿ ನಡೆದ ಸಾಲಿ ಗೀಲಿ
ಮಳೆ ಬಂದರ ಗೊಂಗಡಗೊಂಜಿಗಿ
ಈರಣ್ಣನ ಗುಡಿಕಟ್ಟಿಮ್ಯಾಲ ಹಂಚಿ ಹಲಪಿ
ಉಪ್ಪು ಕಾರ ಎಲಿ ಹುಣಸೆ ಹಣ್ಣ ತಂದ ಚಿಗಳಿ ಕುಟ್ಟಿ
ದಂಟಿಗೆ ಹಚ್ಚಿ ಬಾಯಚೆಪ್ಪರಿಸಿ ತಿಂದರ ಲೊಚ ಲೊಚ
ಮಣ್ಣೆತ್ತಿನ ಅಮವಾಸಿ ಬಂದರ ಹಳ್ಳದ ಅರಲ ತಂದ
ಗುಳ್ಳವ್ವನ ಬಸವಣ್ಣನ ಮಾಡಿ ಹಾಡಿ ಪಾಡಿ ಪಳಾರ ತಿಂದ
ಎಷ್ಟು ಹೇಳಿದರೂ ತೀರದ ಬಂಧ ಸಂಬಂಧ ಅನುಬಂಧ//
ಡಾ ಅನ್ನಪೂರ್ಣ ಹಿರೇಮಠ
One thought on “ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’”