ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-‘ನೀ ಹಚ್ಚಿಟ್ಟೆ ದೀಪವ’

ಕತ್ತಲೆಯ ಮೂಲೆಯಲಿ
ನೀ ಹಚ್ಚಿಟ್ಟೆ ದೀಪವ
ಸುತ್ತಲೂ ಪಸರಿಸಿದೆ ಅದು
ಜ್ಞಾನದ ಪ್ರಕಾಶವ//೧//

ಒಲವಿಂದ ಕಲಿಸಿದ ಸಂಸ್ಕಾರ
ಬಾಳಲಿ ಬತ್ತದ ಸೆಲೆಯು
ನೋವಿನಲು ನಿನ್ನ ಆ ನಗುವು
ಬರಡಲಿ ಚಿಮ್ಮುವ ಸ್ಪೂರ್ತಿಯು//೨//

ಕಷ್ಟಗಳ ಸಹಿಸುತ್ತ ದುಡಿಮೆಯ ಮಾಡುತ್ತ
ನೀನಾದೆ ಅಪ್ಪಟ ಬಂಗಾರ
ಗುರಿಯೆಡೆಗೆ ಸಾಗುವ ದಾರಿಯನು ತೋರುತ್ತ
ನೀನಾದೆ ಬದುಕಿಗೆ ಶೃಂಗಾರ//೩//

ಮನದ ಕೊಳಕನು ದಹಿಸುವ
ಜ್ವಾಲೆಯು ನೀನಾದೆ
ಹೃದಯದ ಬಾಗಿಲು ತೆರೆಸುವ
ಜ್ಯೋತಿಯು ನೀನಾದೆ//೪//

ತಪ್ಪುಗಳು ನಡೆದಾಗ ತಿಳಿಯನ್ನು ಹೇಳುತ್ತ
ಕಾಣಿಸಿದೆ ಸರಿದಾರಿಯ
ಒಪ್ಪುಗಳು ಆದಾಗ ಬೆನ್ನನ್ನು ತಟ್ಟುತ್ತ
ತೋರಿಸಿದೆ ಬಾಳಗುರಿಯ//೫//

ನೀನು ಅರುಹಿರುವ ಬೋಧೆಗಳ ಆಲಿಸುತ
ಸಾಗುವೆನು ಬಾಳ ದಾರಿಯ
ನಿನ್ನ ನಡೆ ನುಡಿಯ ಸುಂದರ ಮೆಲುಕಲ್ಲಿ
ಗುನುಗುವೆನು ಬದುಕ ಗೀತೆಯ//೬//

2 thoughts on “ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-‘ನೀ ಹಚ್ಚಿಟ್ಟೆ ದೀಪವ’

  1. ಕವಿತೆ ಭಾವಪೂರ್ಣವಾಗಿದೆ. ದೀಪದ ಬೆಳಕಿಗೆ ಕತ್ತಲೆಯ ಗೆದ್ದು ನಿಲ್ಲುವ ಶಕ್ತಿಯಿದೆ. ಮಾಡುವ ಕೆಲಸಗಳೆಲ್ಲವೂ ಉತ್ತಮವಾದರೆ ಅಲ್ಲೊಂದು ಒಳಿತಿನ ಜೀವಂತಿಕೆ ಉಳಿದು ಬಿಡುತ್ತದೆ ಎನ್ನುವ ಕವನದ ಸಾಲುಗಳ ಸೂಕ್ಷ್ಮತೆ ಎನಿಸುತ್ತದೆ…… ಚೆನ್ನಾಗಿದೆ ಕವಿತೆಯ ಆಶಯ…….

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ……

Leave a Reply

Back To Top