ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಹೆಣ್ಣು ಮಕ್ಕಳೇ…
ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”
ಅಯ್ಯೋ! ಮಕ್ಕಳಿನ್ನು ಚಿಕ್ಕವರು, ಮನೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದೆ.. ಹಾಗಾಗಿ ಯಾವುದೇ ರೀತಿ ಎಕ್ಸರ್ಸೈಜ್, ವಾಕಿಂಗ್, ಯೋಗ ಮಾಡೋಕಾಗಲ್ಲ.. ಏನ್ ಮಾಡ್ಲಿ ಫ್ಯಾಮಿಲಿ ಕಮಿಟ್ಮೆಂಟ್ಸ್ ಇದು ಒಬ್ಬಾಕೆಯ ಮಾತಾದರೆ
ನನಗೆ ನಿಜ್ವಾಗ್ಲೂ ದಿನಕ್ಕೆ ಒಂದಿಪ್ಪತ್ತು ನಿಮಿಷ ಆದ್ರೂ ಯೋಗ ವಾಕಿಂಗ್ ಏನಾದರೂ ಮಾಡೋಕೆ ಆಸೆ ಇದೆ ಆದರೆ ನನ್ನ ಕೆಲಸ ನನ್ನ ಜವಾಬ್ದಾರಿಗಳು ನನಗೆ ಅಡ್ಡಗಾಲಾಗಿವೆ., ಐ ಯಾಮ್ ಹೆಲ್ಪ್ ಲೆಸ್… ಇದು ಮತ್ತೊಬ್ಬಾಕೆಯ ಉವಾಚ.
ನನಗೂ ಏನು ಮಾಡೋಕ್ ಆಗ್ತಾ ಇಲ್ಲ ಮಕ್ಕಳಿಗೆ ರಜೆ ಬಿಟ್ಟಿದೆ ಅಲ್ಲಿ ಇಲ್ಲಿ ಅಂತ ಪ್ರವಾಸ, ಮದುವೆ ಮುಂಜಿ ಅಂತ ಓಡಾಡ್ತಾ ಇದ್ವಿ… ಇದೀಗ ನನ್ನ ಸಂಪೂರ್ಣ ದೇಹ ನನಗೆ ಸಹಕರಿಸ್ತಾ ಇಲ್ಲ ಅಂತ ಅನ್ನಿಸ್ತಾ ಇದೆ.
ಚಿಕ್ಕಂದಿನಲ್ಲಿ ನನಗೆ ಹಾಡೋಕೆ, ಡಾನ್ಸ್ ಮಾಡೋಕೆ ತುಂಬಾ ಇಷ್ಟ ಇತ್ತು, ಸಾಕಷ್ಟು ಪ್ರಶಸ್ತಿಗಳನ್ನು ಪಡ್ಕೊಂಡಿದ್ದೆ ಆದರೆ ಏನು ಮಾಡಲಿ ಈಗ ಯಾವುದನ್ನು ಮಾಡಕ್ಕಾಗ್ತಿಲ್ಲ.
ನಿಮಗೇನ್ರಿ ಕೈಗೊಬ್ರು ಕಾಲ್ಗೊಬ್ರು ಆಳು. ಆರಾಮಾಗಿ ನಡೆದು ಹೋಗುತ್ತೆ. ನಮ್ಮ ಮನೆಯಲ್ಲಿ ಕಸ ಗುಡಿಸುವುದು, ಪಾತ್ರೆ ತೊಳಿಯೋದು, ಬಟ್ಟೆ ಒಗೆಯುವುದು ಎಲ್ಲಾ ನಾನೇ ಮಾಡೋದು ಇದರಲ್ಲೇ ನನ್ನ ಎಕ್ಸರ್ಸೈಜ್ ಆಗಿ ಹೋಗುತ್ತೆ, ನನ್ನ ಕಷ್ಟ ನಿಮಗೆ ಅರ್ಥ ಆಗೋದಿಲ್ಲ.
ಹೀಗೆ ನೆವ ಹೇಳುವ ನಾರಿಯರ ಬಹು ದೊಡ್ಡ ಗುಂಪೆ ಇದೆ.ತಮ್ಮ ಸ್ವಂತಕ್ಕೆ ಸ್ವಲ್ಪವೂ ಸಮಯವನ್ನು ವ್ಯಯಿಸದ ಹೆಣ್ಣು ಮಕ್ಕಳು ನೂರಕ್ಕೆ 98ಕ್ಕೂ ಹೆಚ್ಚು ಜನ ಇರುವರು. ಇನ್ನುಳಿದ ಒಬ್ಬಿಬ್ಬರು ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಬೆಳವಣಿಗೆಯತ್ತ ಮುಖ ಮಾಡಿದ್ದರೆ “ಆಕಿಗೆ ಏನ್ರೀ ಮಕ್ಕಳ, ಮನೆಯ ಕಾಳಜಿನೇ ಇಲ್ಲ ಎಂದು ಹಂಗಿಸುತ್ತ ತಾವೇನೋ ಅತಿ ದೊಡ್ಡ ತ್ಯಾಗ ಮಾಡುತ್ತಿರುವವರಂತೆ ತೋರಿಸಿಕೊಳ್ಳುತ್ತಾರೆ. ಕುಲಕ್ಕೆ ಮೃತ್ಯು ಕೊಡಲಿಯ ಕಾವು ಎಂಬಂತೆ ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳೇ ಶತ್ರು ಎಂಬುದನ್ನು ಸಾಬೀತು ಮಾಡುತ್ತಾರೆ
ಇಂದಿನ ಆಧುನಿಕ ಯುಗದಲ್ಲಿ ಮನೆಯಲ್ಲಿ ಮಾಡಿದ ಅಡುಗೆ ತಿಂಡಿಗಿಂತ ಹೊರಗಿನ ತಿಂಡಿಯ ಆರ್ಭಟ ತುಸು ಹೆಚ್ಚು, ಗಂಡ,ಮಕ್ಕಳು ಕೇಳ್ತಾರೆ ಅನ್ನೋದು ಮತ್ತೊಂದು ಕಾರಣ.
ಬಹುಶಃ ಋತುಚಕ್ರ,ವಿವಾಹದ ನಂತರದ ಬದುಕು, ಹೆರಿಗೆ ಬಾಣಂತನ ಮಕ್ಕಳ ಪಾಲನೆ ಪೋಷಣೆಗಳಲ್ಲಿ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿಗತಿಗಳಲ್ಲಿ ಅಪಾರ ವ್ಯತ್ಯಾಸವಾಗುವುದು ಸಹಜ.
ಆದರೆ ಅಷ್ಟೇ ಸಹಜವಾಗಿ ಅವರು ತಮ್ಮ ಅನಾರೋಗ್ಯವನ್ನು, ಬೊಜ್ಜನ್ನು, ಮೈಕೈ ನೋವುಗಳನ್ನು ಸ್ವೀಕರಿಸುವುದು ತಪ್ಪು ಮಾತ್ರವಲ್ಲ ಅಕ್ಷಮ್ಯ ಅಪರಾಧ, ತಮಗೆ ತಾವೇ ಮಾಡಿಕೊಳ್ಳುವ ಆತ್ಮ ದ್ರೋಹ. ಕೇಳಲು ತುಸು ದೊಡ್ಡ ಪದಗಳೆನಿಸಿದರೂ ಕೂಡ ಇದು ಹೆಣ್ಣು ಮಕ್ಕಳ ಬದುಕಿನ ಹಾರ್ಶ್ ರಿಯಾಲಿಟಿ.
ನೆವಗಳನ್ನು ಹೇಳಲೇಬೇಡಿ… ನಿಮ್ಮ ವೈಯುಕ್ತಿಕ ಆರೋಗ್ಯಕ್ಕಿಂತ ಹೆಚ್ಚಿನದು ಯಾವುದು ಇಲ್ಲ. ಅಟ್ಟ ಮೇಲೆ ಒಲೆ ಉರಿಯಿತು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ವಯಸ್ಸು 30 ದಾಟುತ್ತಿದ್ದಂತೆ ಸಣ್ಣಪುಟ್ಟ ನೋವುಗಳು, ತೊಂದರೆಗಳು, ಬೊಜ್ಜು ಹೆಣ್ಣು ಮಕ್ಕಳನ್ನು ಆವರಿಸಿಕೊಳ್ಳುತ್ತದೆ. ಮನೆ ಮಕ್ಕಳ ಜವಾಬ್ದಾರಿಯಲ್ಲಿ ತನ್ನ ಆರೋಗ್ಯವನ್ನು ಕಡೆಗಣಿಸುವ ಹೆಣ್ಣುಮಕ್ಕಳು ಅನಂತರ ಮಧ್ಯ ವಯಸ್ಸಿನಲ್ಲಿಯೇ ಮುಪ್ಪಿನ ಅವಸ್ಥೆಗೆ ಬಂದು ತಮ್ಮ ದುರಾದೃಷ್ಟವನ್ನು ಹಳಿಯುತ್ತಾರೆ.
ನನ್ನ ಮನೆ, ಗಂಡ, ಮಕ್ಕಳು, ಅತ್ತೆ-ಮಾವ, ಸಂಬಂಧಿಕರು ದೈನಂದಿನ ಆಗುಹೋಗುಗಳು… ಇವೆಲ್ಲ ಕೇವಲ ನಿಮ್ಮೊಬ್ಬರ ಜವಾಬ್ದಾರಿಯಲ್ಲ. ಬೇರೆಯವರ ಎಲ್ಲ ಕೆಲಸಗಳನ್ನು ಮಾಡುತ್ತಾ ನೀವು ಅವರಿಗೆ ಉಪಕಾರ ಮಾಡುತ್ತಿದ್ದೀರಿ ಎಂದು ನೀವು ಭಾವಿಸುವುದಾದರೆ ಅದು ಶುದ್ಧ ಸುಳ್ಳು,ಅವರಿಗೆ ಮಾಡಿಕೊಳ್ಳಲಾಗದೆ ಹೋದ ಪಕ್ಷದಲ್ಲಿ ಮಾತ್ರ ಸಹಾಯವಾಗುತ್ತದೆಯೇ ಹೊರತು ನಿಜದಲ್ಲಿ ನೀವು ಅವರನ್ನು ಪರಾವಲಂಬಿಗಳಾಗಿಸುತ್ತಿದ್ದೀರಿ ಎಂದರ್ಥ. ನಿಜವಾಗಿಯೂ ನಿಮ್ಮವರನ್ನು ನೀವು ಪ್ರೀತಿಸುತ್ತೀರಾದರೆ ಅವರವರ ಸಣ್ಣ ಪುಟ್ಟ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಮನವೊಲಿಸಿ.ಇದರಿಂದ ಅವರು ನಿಮ್ಮ ಮೇಲೆ ಅವಲಂಬಿಸುವುದು ತಪ್ಪು ವುದಲ್ಲದೆ ಪ್ರತಿ ಸಾರಿ ಯಾವುದೇ ವಸ್ತುವಿಗಾಗಿ ನಿಮ್ಮನ್ನು ಕರೆಯುವುದು ಕೂಡ ತಪ್ಪುತ್ತದೆ, ಜೊತೆಗೆ ತಮ್ಮ ಕೆಲಸಗಳನ್ನು ಮಾಡುವ ಮೂಲಕ ಹಿರಿಯರಾದರೆ ತುಸು ಆತ್ಮ ಸಂತೃಪ್ತಿಯನ್ನು ಹೊಂದುತ್ತಾರೆ,ಮಕ್ಕಳಾದರೆ ಸ್ವಾವಲಂಬನೆಯ ಪಾಠವನ್ನು ಕಲಿಯುತ್ತಾರೆ.
ಮನೆಯಲ್ಲಿ ಹಿರಿಯರಾದ ಅತ್ತೆ ಮಾವ ಇದ್ದು ಅವರು ತುಸು ಗಟ್ಟಿಮುಟ್ಟಾಗಿದ್ದು, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಸಾಧ್ಯವಿದ್ದರೆ ಅವರಿಗೆ ಕುಳಿತಲ್ಲಿಯೇ ಎಲ್ಲವನ್ನು ಸರಬರಾಜು ಮಾಡಬೇಡಿ. ನಡೆದಾಡಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡಾಗ ಅವರ ಕಾಲುಗಳ ಗಂಟುಗಳು ಸಡಿಲವಾಗುತ್ತದೆ. ಹೊಟ್ಟೆಯ ನೀರು ಅಲುಗಾಡದಂತೆ ಕುಳಿತಲ್ಲೇ ಕುಳಿತರೆ ಅವರ ದೇಹಾರೋಗ್ಯದ ಗತಿ ಏನು??
ಇನ್ನು ಗಂಡ ಮತ್ತು ಮಕ್ಕಳು ನಿಮ್ಮ ಮೇಲೆ ಪ್ರತಿಯೊಂದು ವಿಷಯಕ್ಕೂ ಅವಲಂಬಿಸುವುದು ಖುಷಿ ಕೊಡುತ್ತದಾದರೂ, ದೀರ್ಘಾವಧಿಯ ಸಮಯದಲ್ಲಿ ತುಸು ಕಿರಿಕಿರಿ ಮತ್ತು ಬೇಸರವನ್ನು ಉಂಟುಮಾಡುತ್ತದೆ.
ಬಹುತೇಕ ಹೆಣ್ಣು ಮಕ್ಕಳು ತಮ್ಮ ಮಕ್ಕಳನ್ನು ಕೂಗಿ ಎಬ್ಬಿಸಿ ಅವರಿಗೆ ಬ್ರಶ್ ಮಾಡುವಲ್ಲಿಂದ ಹಿಡಿದು ಶಾಲೆಗೆ ಹೋಗುವವರೆಗಿನ ಎಲ್ಲಾ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಾರೆ. ಬೆಳಗಿನ ತಿಂಡಿ ಚಹಾ ಕಾಫಿ ತಯಾರಿಯಂತಹ ಮನೆ ಕೆಲಸಗಳ ಜೊತೆಗೆ ಮಕ್ಕಳ ಎಲ್ಲ ಕೆಲಸಗಳ ಜವಾಬ್ದಾರಿ ತಲೆಯ ಮೇಲೆ ಹೊತ್ತು ಕೊಂಡಾಗ ನಿಮಗರಿವಿಲ್ಲದೆ ನಿಮ್ಮಲ್ಲಿ ಒಂದು ಒತ್ತಡ ಸೃಷ್ಟಿಯಾಗುತ್ತದೆ… ಈ ಒತ್ತಡ ದಿನಗಳೆದಂತೆ ಮಾನಸಿಕ ಉದ್ವೇಗ, ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಸ್ವಾವಲಂಬನೆಯ ತರಬೇತಿಯನ್ನು ಚಿಕ್ಕಂದಿನಿಂದಲೇ ನೀಡಿ. ಐದು ವರ್ಷಕ್ಕಿಂತ ದೊಡ್ಡ ಮಕ್ಕಳು ತಮ್ಮ ಪಾಡಿಗೆ ತಾವೇ ನಿಗದಿತ ಸಮಯಕ್ಕೆ ಎದ್ದು ಬ್ರಷ್ ಮಾಡಿ, ಮುಖ ತೊಳೆದು, ದೈನಂದಿನ ಕರ್ಮಗಳನ್ನು ಮುಗಿಸಿಕೊಂಡರೆ ಬಹಳ ಅನುಕೂಲ. ಇದರ ಜೊತೆಗೆ ಮಕ್ಕಳು ತಮ್ಮ ನೀರಿನ ಬಾಟಲಿ, ಪುಸ್ತಕಗಳು, ನೋಟ ಬುಕ್ಕುಗಳು ಪೆನ್ನು ಪೆನ್ಸಿಲ್ ಎಲ್ಲವನ್ನು ತಾವೇ ಹೊಂದಿಸಿಕೊಂಡು ಶಾಲೆಗೆ ತಯಾರಾಗಲಿ. ಅಂತಿಮವಾಗಿ ನೀವು ಒಮ್ಮೆ ಕಣ್ಣು ಹಾಯಿಸಿದರೆ ಸಾಕು. ತಮ್ಮ ಕೈಯಾರೆ ತಾವೇ ತಿಂಡಿ ತಿಂದು ನೀರು ಕುಡಿದು ಸಾಕ್ಸ ಮತ್ತು ಶೂ ಹಾಕಿಕೊಂಡು ಮಕ್ಕಳು ಶಾಲೆಗೆ ಹೊರಟರೆ ನಿಮಗೆ ನಿರಾಳವಾದೀತು.
ಬಹಳಷ್ಟು ಸಮಯ ನಮ್ಮನ್ನು ನಾವು ಬಿಜಿ ಎಂದು ಹೇಳಿಕೊಳ್ಳಲು ಕಾರಣ ಚಿಕ್ಕಂದಿನಿಂದಲೇ ನಾವು ಸತತವಾಗಿ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಮ್ಮ ಮನಸ್ಸಿಗೆ ನಾವು ಕೊಟ್ಟುಕೊಂಡ ತರಬೇತಿಯಾಗಿದೆ. ನಾವು ಹೆಚ್ಚು ಕೆಲಸ ಮಾಡುತ್ತೇವೆ ಎಂಬ ಪೊಳ್ಳು ಪ್ರತಿಷ್ಠೆಯನ್ನು ತೋರಿಸಲು ಬಹಳಷ್ಟು ಬಾರಿ ಬಿಜಿ ಎಂಬ ಪದವನ್ನು ನಾವು ಬಳಸುತ್ತೇವೆ.
ಚಿಕ್ಕಂದಿನಿಂದಲೂ ನಾವು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಲು, ಒಳ್ಳೆಯ ಉದ್ಯೋಗ ಹಿಡಿಯಲು ಮದುವೆಯಾಗಿ ಮಕ್ಕಳನ್ನು ಪಡೆದು ಜೀವನದಲ್ಲಿ ಸೆಟಲ್ ಆಗಲು ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಒತ್ತಾಯಿಸಲ್ಪಡುತ್ತೇವೆ. ಮುಂದೆ ಮದುವೆ ಮಕ್ಕಳು ಆಚೆ ಮಾವ ಮನೆಯ ಜವಾಬ್ದಾರಿ ಕೂಡ ನಮ್ಮಲ್ಲಿ ಒತ್ತಡವನ್ನು ಸೃಷ್ಟಿಸುತ್ತವೆ. ಒಳ್ಳೆಯ ಅಂಕ ಗಳಿಕೆ, ಉನ್ನತ ಉದ್ಯೋಗಾವಕಾಶ ನಮ್ಮ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕಾಗಿ ನಮ್ಮನ್ನು ಒತ್ತಾಯಿಸಲಾಗುತ್ತದೆ.ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ವಯಸ್ಸು ನಲವತ್ತು ಸಮೀಪಿಸುತ್ತಿರುವಾಗ ನಮ್ಮ ಅರಿವಿಗೆ ಬರುವುದು ಜೀವನ ನಾವು ಅಂದುಕೊಂಡಂತೆ ಇರುವುದಿಲ್ಲ ಎಂದು.
ಒಳ್ಳೆಯ ಉದ್ಯೋಗ,ಕೌಟುಂಬಿಕ ಬದುಕು ಆರ್ಥಿಕ ಸ್ಥಿತಿಗತಿಗಳನ್ನು ಹೊಂದಿದಾಗ್ಯೂ ಕೂಡ ಮನದಲ್ಲಿ ಅತೃಪ್ತಿ,ಅಸಂತೋಷ ಕಾಡುತ್ತವೆ. ಸಂಬಂಧಗಳನ್ನು ಪೋಷಿಸುವಲ್ಲಿ ನಾವು ವಿಫಲವಾಗಿ ಅಸಮಾಧಾನ ಹೊಗೆಯಾಡುತ್ತದೆ. ಇವೆಲ್ಲದರ ಪರಿಣಾಮವಾಗಿ 40 ಸಮೀಪಿಸುತ್ತಿದ್ದಂತೆ ದೇಹದ ತೊಂದರೆಗಳು ತಮ್ಮ ಇರುವನ್ನು ಸಾರುತ್ತವೆ.
ಸ್ನೇಹಿತರೆ ಈಗಲಾದರೂ ಎಚ್ಚೆತ್ತುಕೊಳ್ಳಿ… ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ನಿಮ್ಮನ್ನು ನೀವು ಕಾಳಜಿ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ, ನಿಮ್ಮದೇ ಜೀವನದಲ್ಲಿನ ಸ್ವಲ್ಪ ಸಮಯವನ್ನು ನಿಮಗಾಗಿ ವ್ಯಯಿಸಿ ನಿಮ್ಮ ವೈಯುಕ್ತಿಕ ಜೀವನದ ಸವಿಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ, ಸಂಬಂಧಗಳಲ್ಲಿ ಮಾರ್ದವತೆ ತನ್ನಿ ಮತ್ತು ಮುಖ್ಯವಾಗಿ ವಿಶ್ರಾಂತಿಯನ್ನು ಪಡೆಯಿರಿ.
ಸಂತೃಪ್ತಿಕರ ಜೀವನವನ್ನು ರೂಪಿಸಿಕೊಳ್ಳಲು ನಿಮಗೆ ಬೇಕಾಗುವ ಸಮಯವನ್ನು ಹೊಂದಿಸಿಕೊಳ್ಳುವ ವ್ಯಕ್ತಿ ನೀವಾಗಿ.
ಯಶಸ್ವಿ ಮತ್ತು ಸಂತೃಪ್ತಿಯುತ ಜೀವನವನ್ನು ನಡೆಸುವತ್ತ ನಿಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಮುಂದಿನ ಪೀಳಿಗೆಗೆ ಅರ್ಥಪೂರ್ಣ ಜೀವನ ನಡೆಸುವ ಪಾಠ ಕಲಿಸಿ. ನಿಮ್ಮ ತಪ್ಪುಗಳನ್ನು ನಿಮ್ಮ ಮಕ್ಕಳು ಪುನರಾವರ್ತಿಸದಂತೆ ಬದುಕಲು ಪ್ರೇರೇಪಿಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್
ಉತ್ತಮ ಬರಹ