ಮಾಲಾ ಹೆಗಡೆ ಅವರ ಕವಿತೆ-ಸೋಜಿಗದ ಸೊಗಸು

ಅಸ್ತಮಕೆ ಜಾರುತಿರುವ
ಆ ದಿನಕರ,
ಆಗಸದಿ ವರ್ಣ ಚಿತ್ತಾರ
ಮೂಡಿಸಿಹ ಕಲಾಕಾರ,
ರವಿಯ ರಂಗೆಲ್ಲವ
ನುಂಗಿದಂತಿದೆ ಸಾಗರ,
ಜಲಧಿಯೊಳು ಜಳಕಕ್ಕಿಳಿದಂತೆ
ತೋರ್ವ ಭಾಸ್ಕರ.

ಪ್ರಖರ ಕಿರಣವ ಹೊತ್ತು ನಿತ್ಯ
ಬೆಳಕು ತರುವ,
ಕೆಂಪು ತಂಪನು ಬೀರಿ
ಸಂಜೆಗೆ ಮನಸೆಳೆವ,
ದಿನದ ಉಸ್ತುವಾರಿಯನೀಗ
ಗಗನದಿ ಮುಗಿಸಿರುವ,
ಅದಾಗಲೇ ಶಶಿಯ ನೇಮಿಸಿ
ತಾ ಹೊರಟಿರುವ.

ಕತ್ತಲಾವರಿಸೋ ಮುನ್ನ
ಅಂಬರಕೆ ಬಳಿಯೋ ಬಣ್ಣ,
ನಿತ್ಯ ನೂತನ ನೋಟ
ಸೂರೆಗೊಳುವುದು ಕಣ್ಣ,
ಬಣ್ಣಿಸಲೋದರೆ ದೃಶ್ಯವ
ಪದಗಳಾಗುವವು ಸಣ್ಣ,
ಸೋಜಿಗದ ಸೊಗಸನೊಮ್ಮೆ
ನಯನದಿ ಸೆರೆಯಾಗಿಸೋಣ.


2 thoughts on “ಮಾಲಾ ಹೆಗಡೆ ಅವರ ಕವಿತೆ-ಸೋಜಿಗದ ಸೊಗಸು

Leave a Reply

Back To Top