ಲೇಖನ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ
ನಾವು ಭಾರತೀಯರೇ ಹೀಗೆ….!!
ಬದುಕಿನಲ್ಲಿ ಅನೇಕ ಸಂದರ್ಭಗಳಲ್ಲಿ ಅತ್ಯಂತ ಮಹತ್ವವಾದ ಅನೇಕ ವಸ್ತುಗಳನ್ನು, ವ್ಯಕ್ತಿಗಳನ್ನು ಕಳೆದುಕೊಂಡು ಬಿಡುತ್ತೇವೆ. ಕಳೆದುಕೊಂಡ ತಕ್ಷಣ ಹಪಾಹಪಿ, ನೋವು ನಮ್ಮನ್ನು ಸದಾ ಕಾಡುತ್ತಾ ಹೋಗುತ್ತದೆ. ಮತ್ತೆ ಮತ್ತೆ ಕಳೆದುಕೊಂಡುದ್ದನ್ನು ಹುಡುಕಲು ಮನಸ್ಸು ತವಕಿಸುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಮನಸ್ಸನ್ನು ಚಂಚಲಗೊಳಿಸುವ ನಾವುಗಳು ಅಂತಹ ಸಂದರ್ಭಗಳನ್ನು ಕಳೆದುಕೊಂಡಾಗ ಛೇ…!! ಎಂದು ಚಿಂತಿತರಾಗುತ್ತೇವೆ.
ಕ್ಷಣಕಾಲ ಮೌನವಾಗುತ್ತೇವೆ ಅದು ಹಣ ಇರಬಹುದು, ಸಂಪತ್ತು ಆಗಿರಬಹುದು, ನಿಸರ್ಗದ ಅನೇಕ ಸೊಗಸಾದ ಕ್ಷಣಗಳಿರಬಹುದು ಕಳೆದುಕೊಂಡಾಗ..ಕ್ಷಣಕಾಲ ಸ್ಮಶಾನ ಮೌನದ ವೈರಾಗ್ಯ ಮೂಡಿಬಿಡುತ್ತದೆ…!! ಅದು ನಮ್ಮ ಮನೋವೈಜ್ಞಾನಿಕ ಸತ್ಯವು ಕೂಡ ಹೌದು. ಈ ರೀತಿ ಇರುವ ಮನಸ್ಸು ಬದುಕಿನಲ್ಲಿ ಅನೇಕ ಸಣ್ಣ ಸಣ್ಣ ವಿಷಯಗಳಿಗೂ ಜಿಗುಪ್ಸೆ ಉಂಟಾಗುತ್ತದೆ.
ಕಳೆದುಕೊಂಡದ್ದನ್ನು ಪಡೆದುಕೊಳ್ಳಲು ಬೇಕು… ಮತ್ತೆ ಮತ್ತೆ ಹಠ. ಆಗ ನಾವುಗಳು ಪ್ರತಿಯೊಂದರಲ್ಲೂ ಜಿಪುಣತನ ತೋರಿಸುತ್ತೇವೆ. ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುವಾಗ ಪದೇ ಪದೇ ಸೋವಿಯಿರುವುದನ್ನು ಹುಡುಕುತ್ತೇವೆ. ಜಿಪುಣತನದ ಗುಣ ನಮ್ಮದಾಗಿ ಬಿಡುತ್ತದೆ.
ಉದಾಹರಣೆಗೆ ತರಕಾರಿ ತೆಗೆದುಕೊಳ್ಳುವಾಗ ವ್ಯಾಪಾರಿ, “ನೀವು ಮೊದಲಿನಿಂದಲೂ ನಮ್ಮ ಗಿರಾಕಿ ಎಂದೇ ನಾನು ತರಕಾರಿಯನ್ನು ಕಡಿಮೆ ದರಕ್ಕೆ ಕೊಡುತ್ತಿದ್ದೇನೆ ತೆಗೆದುಕೊಳ್ಳಿ” ಎಂದು ಪ್ರೀತಿಯಿಂದ ಹೇಳಿದರೂ ನಾವು ಮತ್ತೆ ಆದರದಲ್ಲಿಯೂ ಇನ್ನಷ್ಟೂ ಹಣದ ದರವನ್ನು ಬಿಡಿಸಿಕೊಳ್ಳುವ ಧಾವಂತಕ್ಕೆ ಒಳಗಾಗಿ ಬಿಡುತ್ತೇವೆ. ಒಂದೀಷ್ಟು ಕೆ. ಜಿ ತರಕಾರಿಯನ್ನು ತೂಗಿಕೊಂಡಾಗಲೂ ಮೇಲೊಂದಿಷ್ಟು ತರಕಾರಿಯನ್ನು ಹಾಕಿಕೊಳ್ಳುವ ವ್ಯಾವಹಾರಿಕ ಜಿಪುಣತನ ನಮ್ಮಲ್ಲಿ ಬರುತ್ತದೆ. ಅದು ಎಲ್ಲರಲ್ಲಿಯೂ ಇರಬೇಕಾದದ್ದೆ ಆದರೆ ಇನ್ನೊಂದಿಷ್ಟು ನಮ್ಮ ಚಟುವಟಿಕೆಗಳು ವಿಚಿತ್ರವೆನಿಸಿದರೂ ಸತ್ಯ..!!
ಬಾತ್ರೂಮಿನಲ್ಲಿರುವ ನಾವು ಸ್ನಾನಕ್ಕೆಂದು ತಂದ ಸಾಬೂನು ಮುಗಿದು ಹೋದರೂ, ಇನ್ನೇನು ಕೈಗೆ ಸಿಗಲಾರದಷ್ಟು ಸಣ್ಣದಾದರೂ ಕೂಡ ಅದನ್ನು ಎಸೆಯುವ ಮನಸ್ಸು ಮಾಡುವುದಿಲ್ಲ..!! ಮತ್ತೆ ಮತ್ತೆ ಅದನ್ನು ತಿಕ್ಕಿ ಹೊಸಕಿ ಹಾಕಿ ಬಿಡುತ್ತೇವೆ. ಎಂತಹ ಮಜಾ ಅಲ್ವಾ ಸ್ನೇಹಿತರೇ..!! ಬೆಳಿಗ್ಗೆ ಎದ್ದು ಬ್ರಷ್ ಮಾಡುವ ಪೇಸ್ಟಿನ ಗತಿಯೂ ಅದೇ ರೀತಿಯಾಗಿರುತ್ತದೆ…! ಮತ್ತೆ ಅದನ್ನು ಕೊರೆದು ಬ್ರಷ್ ಅನ್ನು ಅದ್ದಿ ಅದ್ದಿ ಪೇಸ್ಟನ್ನು ಖಾಲಿ ಮಾಡಿಬಿಡುತ್ತೇವೆ, ಖಾಲಿಯಾದ ಪೇಸ್ಟಿನ ಡಬ್ಬವನ್ನು ಎಸೆಯಲು ಮನಸ್ಸು ಯಾಕೋ ಹಿಂಜರಿಯುತ್ತದೆ…!! ಹೀಗೆ ಮಾಡುವಾಗ ಫ್ರಿಜ್ಜಿನಲ್ಲಿರುವ ಸಾಮಾನುಗಳು, ಹಣ್ಣುಗಳು, ತರಕಾರಿಗಳು… ಕೆಟ್ಟು ಹೋದಾಗಲೂ ನಮಗೇನು ಅನಿಸುವುದಿಲ್ಲ ಆದರೆ ಇಂತಹ ಸಣ್ಣ ಸಣ್ಣ ಸಂಗತಿಗಳಿಗೆ ನಾವು ಹೆಚ್ಚು ಗಮನ ಕೊಡುತ್ತೇವೆ.
ಬಂಡವಾಳ ಹಾಕಿದ ವ್ಯಾಪಾರಿ ನಷ್ಟ ಸಂಭವಿಸಿದಾಗ ಮನಸ್ಸು ನೋವಿನಿಂದ ಬಳಲುತ್ತದೆ ಆತನದು. ಆಗ ಮತ್ತೊಂದು ರೀತಿಯಿಂದ ಬರುವ ಆದಾಯಕ್ಕಾಗಿ ಆ ವ್ಯಾಪಾರಿ ಧಾವಂತದಿಂದ ಓಡುತ್ತಾನೆ. ಹಾಗೆಯೇ ಹೆಚ್ಚು ಬಂಡವಾಳ ಹೂಡಿ ಶೇರುಗಳನ್ನು ಖರೀದಿಸಿದ ಶೇರುದಾರ ದಿಢೀರನೆ ಶೇರುಗಳ ಮೌಲ್ಯ ಕುಸಿದರೆ ಆತ ಸಂಕಟಪಡುತ್ತಾನೆ..!! ಹಾಕಿದ ಬಂಡವಾಳ ಹೋಯಿತಲ್ಲ ಎಂದು ಮರುಗುತ್ತಾನೆ. ಮತ್ತೆ ಮತ್ತೆ ಆ ಷೇರುಗಳ ಮೌಲ್ಯ ಹೆಚ್ಚಾಗಲು ಆತ ಸದಾ ಬಯಸುತ್ತಾನೆ. ದುಡಿದ ಬೆವರಿನ ದುಡ್ಡಾದರಂತೂ ಅವರ ನೋವು ಹೇಳತೀರದು.
ಇದರಿಂದಾಗಿ ಕೆಲವರು ಅಡ್ಡದಾರಿಯಲ್ಲಿ ದುಡ್ಡು ಮಾಡುವುದಕ್ಕಾಗಿ ಚೀಟಿಯ ಹೆಸರಿನಲ್ಲಿ, ಗುಂಪು ಸಾಲದ ಹೆಸರಿನಲ್ಲಿ, ಹೆಚ್ಚು ಬಡ್ಡಿಯನ್ನು ನೀಡುವ ಆಮಿಷದಲ್ಲಿ ಜನರನ್ನು ಮರುಳು ಮಾಡುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮೆದುರು ನೋಡುತ್ತೇವೆ. ಆದರೂ ಮತ್ತೆ ಮತ್ತೆ ಮೋಸದ ಜಾಲಕ್ಕೆ ಬೀಳುತ್ತೇವೆ.
ಕಳೆದುಕೊಂಡಿರುವುದನ್ನು ಪಡೆದುಕೊಳ್ಳುವುದಕ್ಕಾಗಿ ಎನ್ನೆಲ್ಲವನ್ನೂ ಮಾಡುತ್ತೇವೆ. ನಾವು ಯಾವುದನ್ನೆ ಆಗಲಿ ಕಳೆದುಕೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಕಳೆದುಕೊಂಡು ಹಪಾಹಪಿಸಿ , ಕೈ ಕೈಹಿಚ್ಚುಕೊಂಡರೆ ಲಾಭವಿಲ್ಲ…!! ಪಡೆದುಕೊಳ್ಳುವ, ಉಳಿಸಿಕೊಳ್ಳುವ ದೊಡ್ಡ ಮನಸ್ಸು ನಮ್ಮದಾದರೂ ಪರವಾಗಿಲ್ಲ..!! ಸುಂದರವಾದ ನಮ್ಮ ಬಾಳಿಗೆ ಇಂತಹ ಸಣ್ಣ ಸಣ್ಣ ಸಂಗತಿಗಳು ಪಾಠವಾಗಬಲ್ಲವೆಂದು ಅರಿಯೋಣ.
ರಮೇಶ ಸಿ ಬನ್ನಿಕೊಪ್ಪ