ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಮತ್ತೆ ಬನ್ನಿ ಪೊಪ್ಪ

ಅಮ್ಮನ ಆತ್ಮೀಯತೆಯ ಮುಂದೆ ಅಪ್ಪನ ಮಮಕಾರ ಮಸುಕಾಯಿತು.
ಅಮ್ಮನ ಮೇಲಿನ ಅತಿ ಮೋಹದಿಂದ ಅಪ್ಪ ಅನ್ನುವ ಆಕಾಶವೇ ಕಾಣಿಸಲಿಲ್ಲ.
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನೇ ತಾನೆ ಅಂತಿದ್ದೆ
ಅಮ್ಮನಿಂದ ದೂರಾಗುವ ಕನಸು ಕೂಡ ಬೆಚ್ಚಿ ಬೇಳಿಸುತಿತ್ತೇನೋ
ಅಪ್ಪನ ಆಗಮನದ ಗಂಭೀರತೆಗೆ ಎಲ್ಲರೂ ಮೂಲೆ ಸೇರಿ  ಮನೆಯೇ ಮೌನ ತಾಳುತ್ತಿತ್ತು
ಅಪ್ಪ ಅಕ್ಕರೆಯ ಆಗರ ಭರವಸೆಯ ಮಹಾಪೂರ
ಧೈರ್ಯದ ಹೆಮ್ಮರವನ್ನೆ ನಾವು ಮನಸಾರೆ ಸ್ವೀಕರಿಸಲಿಲ್ಲ.

ಮಡದಿ ಮಕ್ಕಳನ್ನು ಚಪ್ಪರದಂತೆ ಸದಾ ಕಾಳಜಿಯಿಂದ ಕಾಯುತ್ತಿದ್ದ ಕಷ್ಟ ಜೀವಿ ನನ್ನ ಪೊಪ್ಪ
ಹಸಿವು ನೋವುಗಳಿಗೆ ಕಂಗೆಡದೆ ದಿನವಿಡೀ ಪೊರೆಯುತ್ತಿದ್ದ ಮಹಾ ಪುರುಷ ನನ್ನ ಪೊಪ್ಪ
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನನ್ನ ಪೊಪ್ಪ ಕೈ ಹಾಕದ ಉದ್ಯೋಗ ಇಲ್ಲ ಎಂದರೂ ತಪ್ಪಿಲ್ಲ

ಮನೆಯಲ್ಲಿ ನಾನೇ ಪೊಪ್ಪನ ಆಲ್ ಟೈಮ್ ಫೇವರಿಟ್
ತಿಂಡಿ ತಿನ್ನುವಾಗ ನನಗೆ ಸಣ್ಣ ಪಾಲು ಖಾಯಂ ಇಡುತ್ತಿದ್ದಿರಿ  ಪೊಪ್ಪ
ಮದುವೆ ಸಮಾರಂಭಗಳಿಂದ ರುಮಾಲಲ್ಲಿ ಕಟ್ಟಿ ನನಗಾಗಿ ತರುತ್ತಿದ್ದಿರಿ ಲಾಡು ಹೋಳಿಗೆ ಜಿಲೇಬಿ
ನನ್ನ ಮೀಯಿಸಿ ಮೈ ತುಂಬಾ ಪೌಡರ್ ಹಚ್ಚಿ ಮೆಚ್ಚುತಿದ್ದಿರಿ
ನನ್ನ ಎತ್ತಿ ಮುದ್ದಿಸಿ ಬಾಲೂ ಎಂದು ಕೊಂಡಾಡುತ್ತಿದ್ರಿ
ಪೊಪ್ಪ

ಹುಷಾರಿಲ್ಲ ಎಂದರೆ ಪಂಡಿತರ ಕಷಾಯ ತಂದು ಬಿಸಿನೀರು ಕೊಟ್ಟು ಆರೈಕೆ ಮಾಡುತಿದ್ದ ನನ್ನ ಪೊಪ್ಪ
ಮುಳ್ಳು , ಗಾಜು ಚುಚ್ಚಿ ಕೊಂಡರೆ ಅರಿಶಿನ ಕಾಯಿಸಿ ಹಚ್ಚಿ ಸೂಜಿಯಿಂದ ಗಾಯ ಬಿಡಿಸಿ ತೆಗೆಯುತ್ತಿದ್ರಿ ಪೊಪ್ಪ
ಕಾಲುಗಳಿಗೆ ನಂಜಾದಾಗ ತೊಳೆದು ಬಟ್ಟೆಯಿಂದ ತುರಿಸಿ ಕೀವು ತೆಗೆದು ಮಲಾಮು ಹಚ್ಚಿ ಗುಣಪಡಿಸಿದ್ರಿ ನನ್ನ ಪೊಪ್ಪ

ಏಕೋ ಬೆಳೆಯುತ್ತಾ ಹೋದಂತೆ ನಮಗೆ ಅಪ್ಪನ ಬೆಲೆ ಏನಂತ ತಿಳಿಯದೇ ಹೋಯಿತು
ನಿಮ್ಮೊಳಗಿನ  ಹುಳುಕು ಮಾತ್ರ ಹುಡುಕುತ್ತಾ ಅಪ್ಪ ಎಂಬ ಆಸರೆಯ ಆಗಸದ ವಿಸ್ಥಾರವನ್ನೆ ಕಾಣದಷ್ಟು ಕುರು ಡಾಗಿದ್ದವು ನಮ್ಮ ಅಕ್ಷುಗಳು
ಮಮತೆಯ ಮಡಿಲ ಭದ್ರ ಕೋಟೆಯ ಕಾಳಜಿಯ ಪರಿವೆಯೇ ತಿಳಿಯದಷ್ಟು ಮಂಕಾದವು ಮನಗಳು
ಪ್ರಾಯದ ಅಂಧಕಾರ ನಿಮ್ಮ ಎತ್ತರವನ್ನು ಗಮನಿಸದ ಅವಕಾಶವಾದಿ ನಿಲುವಿನತ್ತ ಸೆಳೆದು ಸ್ವರ್ಥಿಗಳನ್ನಾಗಿಸಿತು

ಈಗ ನನ್ನ ಮಕ್ಕಳ ಅಪ್ಪ ಅವರ ಕಣ್ಣ ರೆಪ್ಪೆಯಂತೆ ಕಾಯುವಾಗ ನಿಮ್ಮ ನೆನಪು ಕಾಡುತ್ತದೆ ಪೊಪ್ಪ
ನೀವೂ ನನ್ನ ಹೀಗೇ ಪ್ರೀತಿಸುತ್ತಿದ್ದಿರಲ್ಲ, ಇದಕ್ಕಿಂತಲೂ ಹೆಚ್ಚಿನ ಕಾಳಜಿ ತೋರುತ್ತಿದ್ದರಲ್ಲ
ಆದರೂ ನಾವೇಕೆ  ನೀವಿರುವಾಗ ಅದನ್ನು ಎಂದೂ ಯೋಚಿಸಿರಲಿಲ್ಲ
ನಿಮ್ಮ ಕಿರುಬೆರಳ ಸಾಮರ್ಥ್ಯ ಗಟ್ಟಿತನ ನಮಗೆ ಬರಲಿಲ್ಲ

ನಿಮ್ಮ ಪುಣ್ಯಸ್ಮರಣೆ ನೆನಪಾಗಲಿಲ್ಲ ಎಂದು ಅಳುಕಿತ್ತು
ಆದರೆ ಈಗ ಅದರ ನೆನಪು ಬೇಡ ನನ್ನ ಪೊಪ್ಪ
ನೀವೇ ನಮ್ಮ ಜೊತೆ ಇದ್ದು ಬಿಡಿ
ನೀವಿಲ್ಲದ ನಿಮ್ಮ ಮನೆ ತೋಟ ತುಂಬಾ ಬಿಕೋ ಎನ್ನುತ್ತಿದೆ
ಮನೆ ನೋಡಲು  ಕಾಲಿಡಲು ಬೇಡವಾಗಿದೆ

ನಿಮ್ಮ ಪ್ರೀತಿಯ ಮಾತುಗಳು, 4 ಹಲ್ಲಿನ ಮಗುವಿನ ಮುಗ್ಧ ನಗು
ಮಕ್ಕಳ ಪದಗಳು ಮತ್ತೆ ಮತ್ತೆ ನೆನಪಾಗುತ್ತವೆ
ಪದೇ ಪದೇ ನಿಮ್ಮ ಪ್ರೀತಿಸಲಿಲ್ಲವೇನೋ ಎಂಬ ಪಾಪ ಪ್ರಜ್ಞೆ ಕಾಡುತ್ತಿದೆ
ನಿಮ್ಮ ಕೊನೆ ದಿನಗಳಲ್ಲೂ ಆರೈಕೆ ಮಾಡದಷ್ಟು ಬಿಡುವಿಲ್ಲದೆ ಹೋದ ನನ್ನ ಅಭಾಗ್ಯ ಈಗ ನನ್ನ ಅಣಕಿಸುತ್ತಿದೆ

ಎಲ್ಲವನ್ನೂ ಮರೆಯಲು ಸಾಧ್ಯವಾದರೆ ನಿಮ್ಮ ಜೊತೆ ಇರುವ ಅವಕಾಶ ಮತ್ತೊಮ್ಮೆ ಮಾಡಿ ಕೊಡಿ
ನಿಮ್ಮ ತೊಡೆಯಲ್ಲಿ ಮತ್ತೊಮ್ಮೆ ಆಟವಾಡಿಸಿ
ಭುಜಗಳಲ್ಲಿ ಹೊತ್ತು ತಿರುಗಿಸಿ ಬಾಯಿತುಂಬಾ ಬಾಲೂ ಎಂದು ಕರೆಸಿಕೊಳ್ಳುವ ಆಸೆ ಒತ್ತರಿಸಿ ಬರುತ್ತಿದೆ
ಪೊಪ್ಪಾ………….. ನಿಮ್ಮ ಮಮತೆಯ ಆಸರೆ ಬೇಕು ಪೊಪ್ಪಾ.


One thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಮತ್ತೆ ಬನ್ನಿ ಪೊಪ್ಪ

Leave a Reply

Back To Top