ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು

ಆ ನಯನವೆನಗೆ ನೂರು ಸಂದೇಶ ಕಳುಹಿಸುತ್ತಿತ್ತೇ ?
ಆ ಮೌನವೆನಗೆ ಮಾತುಗಳ ಮಲ್ಲಿಗೆ ಮುಡಿಸುತ್ತಿತ್ತೇ  ?
ಅಲ್ಲಿಲ್ಲಿ ನೋಡಿ ನನ್ನೆಡೆಗೆ ಸಾಗುವ ಆ ನೋಟ
ಸಾವಿರ ಸಾರಿ ತನ್ನೊಲವ ತೆರೆದು ತೋರುತಿತ್ತೆ ?

ಅವನ ಮಾತಿನಲಿ ನಾ ಸುಳಿಯುತ್ತಿದ್ದೆನಂತೆ
ಕಂಗಳ ಕನ್ನಡಿಯಲಿ ನನ್ನ ಬಿಂಬವಿತ್ತಂತೆ
ಕೊಡದ ಗುಲಾಬಿಯೊಂದು ಕಪಾಟಿನಲ್ಲಿತ್ತಂತೆ
ಕಳುಹಿಸದ ಪತ್ರವೊಂದು ಪುಸ್ತಕದಲ್ಲಿತ್ತಂತೆ

ಅವರಿವರ ಮುಂದೆ  ಗುಟ್ಟು ರಟ್ಟಾಗಿತ್ತಂತೆ
ಅವನೆದೆಯಲಿ ನಾನಿರುವುದು ಖಚಿತವಾಗಿತ್ತಂತೆ
ಅವನ ಮನದ  ಮುಗಿಲಿಗೆ ನಾನೇ ಚುಕ್ಕಿಯಂತೆ
ಪ್ರೀತಿಯದು ಅಡಿಗಡಿಗೆ ಅನಾವರಣಗೊಳ್ಳುತ್ತಿತ್ತಂತೆ

ಅವ ಗುನುಗುತಿದ್ದ ಹಾಡು ನನಗಾಗಿತ್ತೇ ?
ತುಟಿ ಮೇಲಿನ ನಸು ನಗು ನನಗಾಗಿತ್ತೇ ?
ಅವ ನಾಚುವ ಆ ಪರಿ ನನಗಾಗಿತ್ತೇ ?
 ಕಣ್ಣ ಹೇಳುತಿದ್ದ ಕವಿತೆ ನನಗಾಗಿತ್ತೇ ?

ಅವ ಹೇಳಲಿಲ್ಲ , ನಾ ತಿಳಿಯಲಿಲ್ಲ
ಅವ ಹೆಸರು ಉಸುರಲಿಲ್ಲ , ನಾ ಹಿಂತಿರುಗಿ ನೋಡಲಿಲ್ಲ
ಆದರಿಂದಿಗೂ ,,,
ಮಳೆ ಹನಿಯ ನೆಪದಲಿ ಕಣ್ಣೀರಾಗಿ ಜಿನುಗುವನು
ಎದೆಯ ಕದ ಬಡಿದು ನೆನಪಿನಂಗಳದಿ  ಬರುವನು
ಅವನಿನ್ನೂ ಕಾಡುವನು
ಅವನಿನ್ನೂ ಕಾಡುವನು …

————————————

Leave a Reply

Back To Top