ಕಾವ್ಯ ಸಂಗಾತಿ
ಭಾರತಿ ಸಂ ಕೋರೆ (ಅಂಕಲಿ)
“ಹೆಣ್ಣು ಅಬಲೆಯಲ್ಲ ಸಬಲೆ”
ಸುಮಾ ಎಂಬ ಒಬ್ಬ ಮಹಿಳೆಯ ಒಂದು ಚಿಕ್ಕದಾದ ಕಥೆ. ಇದನ್ನು ಚಿಕ್ಕ ರೂಪದಲ್ಲಿ ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ:
ನಾನು ಮಗಳ ಕಡೆಗೆ ಬೆಂಗಳೂರಿಗೆ ಹೋದಾಗ ವ್ಹಿ.ಅರ್.ಎಲ್ ನಿಂದ ಇಳಿದು ಆಟೋಗಾಗೀ ನಿಂತಿದ್ದೆ. ಖಾಲಿ ಒಂದು ಆಟೋ ಕಾಣಿಸಿ ಕೈ ಮಾಡಿದೆ. ಆಗ ಒಬ್ಬ ಹೆಣ್ಣು ಮಗಳ ಆಟೋ ನನ್ನ ಮುಂದೆ ಬಂತು. ನನಗೆ ಆಶ್ಚರ್ಯ ಎನಿಸಿತು. ಆಟೋ ಹತ್ತಿ ಕುಳಿತೆ. ಹಾಗೆ ಅವಳ ಜೊತೆ ಮಾತನಾಡುತ್ತ ಅವಳಿಗೆ ಕೇಳಿದೆ. ನೀನು ಆಟೋ ಚಾಲಕಿಯಾಗಿ ದಿನಾಲು ಎಷ್ಟು ಗಂಟೆಯ ವರೆಗೆ ಕೆಲಸ ಮಾಡುತ್ತೀಯ ಅಂತ ಕೇಳಿದಾಗ, 8 ಗಂಟೆಯವರೆಗೆ ಅಂತ ಹೇಳುತ್ತಾಳೆ. ಹೆಣ್ಣು ಮಗಳಾಗಿ ಮತ್ತೆ ಮನೆಯಲ್ಲಿ ಹೋಗಿ ಕೆಲಸ ಬೇಸರ ಅಗಲ್ಲವೆ ಅಂದಾಗ, ಅದಕ್ಕೆ ಎನ್ ಮಾಡೋದು ಮೇಡಂ ಹೊಟ್ಟೆಪಾಡು ಮಕ್ಕಳ ಕುಟುಂಬದ ಹೊರೆ ಅಂತ ಹೇಳಿ ಬೇಜಾರಲ್ಲಿ ಭಾರವಾದ ಮಾತುಗಳು ಬಂದಾಗ. ಯಾಕಮ್ಮ ನಿನಗೆ ಯಾರು ಇಲ್ಲವೇ ಎಂದಾಗ, ಎಲ್ಲರೂ ಇದ್ದರೂ ನನಗೆ ಯಾರು ಇಲ್ಲ ಅಂತ ಹೇಳುತ್ತ ತನ್ನ ಜೀವನದಲ್ಲಿ ನಡೆದ ಕಥೆಯನ್ನು ನನ್ನ ಮುಂದೆ ಹೇಳುತ್ತಾಳೆ.
ಅದುವೇ ಈ ಕೆಳಗಿರುವ ಕಥೆ….
ಸುಮಳು ಒಂದು ಮಧ್ಯಮ ಕುಟುಂಬದಲ್ಲಿ ಹುಟ್ಟಿ. ತಂದೆ ತಾಯಿಗೆ ಒಬ್ಬ ಮಗ ಮತ್ತು ಸುಮ ಒಬ್ಬಳು. ಇವರದು ಚಿಕ್ಕದಾದ ಮದ್ಯಮ ವರ್ಗದ ಕುಟುಂಬ.
ಸುಮಾಳ ತಂದೆ ತಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಅದೊಂದು ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿದ್ದರು. ಸುಮ ಚೆನ್ನಾಗಿ ಓದಿಕೊಂಡು, ಚೆನ್ನಾಗಿ ಅಂಕ ಪಡೆದುಕೊಂಡು, ಮುಂದೆ ಕಾಲೇಜಿಗೆ ಸೇರಿದಳು. ಆದರೆ ಅವಳ ಅಣ್ಣನ ಪಲಿತಾಂಶ ಸರಿ ಬರದ ಕಾರಣ ಸುಮಾಳ ತಂದೆ ಅವನನ್ನು ಕಾಲೇಜಿಗೆ ಕಳಿಸಲಿಲ್ಲ. ತಮ್ಮ ಜೊತೆಗೆ ವ್ಯವಸಾಯ ಮಾಡಲು ನಿರ್ಧರಿಸಿದರು.
ಇತ್ತ ಸುಮ ತಮ್ಮ ಪಕ್ಕದೂರಿನ ಕಾಲೇಜಿಗೆ ಬಸ್ ಮೂಲಕ ಹೋಗಿ ಬರುತ್ತಿದ್ದಳು. ದಿನಕಳೆದಂತೆ ಸುಮ ಶಿಕ್ಷಣದ ಜೊತೆಗೆ ತಾನು ಬೆಳೆಯುತ್ತ ಮದುವೆ ವಯಸ್ಸಿಗೆ ಬಂದ ಮೇಲೆ, ಸುಮಾಳ ತಂದೆ ತಾಯಿಗೆ ಪರಿಚಯದವರು,ಅಕ್ಕ ಪಕ್ಕದವರು ವಿಚಾರಿಸತೊಡಗಿದರು. ಏನ್ರೀ ಕಮಲಮ್ಮ ಮಗಳಿಗೆ ಗಂಡು ಯಾವಾಗ ನೋಡ್ತೀರಾ ಅಂತ ಕೇಳುವುದು ಸುಮಾಳಿಗೆ ಭಾಳ ಕೋಪ ತರಿಸುತಿತ್ತು.
ಪಿ.ಯು.ಸಿ ಮುಗಿಸಿದ ಸುಮಾಳಿಗೆ ಮತ್ತೆ ಶಿಕ್ಷಣ ಮುಂದುವರೆಸುವ ಆಸೆ ಇತ್ತು.
ಆದರೆ ಇತ್ತ ಮನೆಯಲ್ಲಿ ಅನಾನುಕೂಲ ಇದ್ದುದರಿಂದ ಅವಳ ತಂದೆ ಮುಂದೆ ಓದಿಸದೆ, ಗಂಡು ನೋಡಿ ಮದುವೆ ಮಾಡುವ ಯೋಚನೆ ಇತ್ತು. ಸುಮ ಏನು ಮರು ಉತ್ತರ ಕೊಡದೆ, ಮನೆಯ ಪರಿಸ್ಥಿತಿಗೆ ಕಟ್ಟು ಬಿದ್ದು ಮದುವೆ ಮಾಡಿಕೊಳ್ಳಲು ಒಪ್ಪಿಕೊಳ್ಳತ್ತಾಳೆ.
ಸುಮಳದು ಮದ್ಯಮ ವರ್ಗದ ಕುಟುಂಬ ಆಗಿದ್ದರಿಂದ ಎಲ್ಲವನ್ನೂ ಯೋಚನೆ ಮಾಡಿ ವರ್ಷದ ಲೆಕ್ಕಾಚಾರ ಮಾಡಿ ಅವಳ ತಂದೆ ತಮ್ಮ ವಿಚಾರದಿಂದ ಮುಂದುವರೆಯುತ್ತಿದ್ದರು.
ಸ್ವಲ್ಪ ದಿನದಲ್ಲಿಯೇ ಗಂಡು ನೋಡಿ ಮದುವೆ ಗೊತ್ತು ಮಾಡುವರು. ಆ ಗಂಡಿನ ಬಗ್ಗೆ ಸರಿಯಾಗಿ ವಿಚಾರಿಸದೆ ಇದ್ದ ತಂದೆಯ ಬಗ್ಗೆ ಸುಮಾಳಿಗೆ ಬೇಸರ ತಂದಿತು. ಇಷ್ಟು ದಿನ ಬೆಳದಿಂಗಳ ಬೆಳಕಿನಂತಿದ್ದ ಅವಳ ಜೀವನ ಕತ್ತಲೆಯತ್ತ ಸಾಗುತ್ತಿದೆ ಎಂದುಕೊಂಡು ಮೊದಲ ಬಾರಿ ಸುಮಳ ಕಣ್ಣಂಚಲಿ ಅವಳಿಗೆ ಗೊತ್ತಿಲ್ಲದೆ ನೀರು ಕಾಣಿಸಿಕೊಂಡಿತು.
ಆಗ ತಲೆ ತಗ್ಗಿಸಿದ ಸುಮ ಮುಂದೆ ಮತ್ತೆಂದೂ ತಲೆ ಎತ್ತಿ ಬದುಕಬೇಕು ಎನ್ನುವ ಭರವಸೆ ಕಳೆದುಕೊಂಡಂತೆ ಸುಮ್ಮನೆ ನೆಲ ನೋಡುತ್ತ , ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಹೋದಳು. ಎಂತಹ ವಿಪರ್ಯಾಸ ನೋಡಿ.
ಹೀಗೆ ಮುಂದುವರೆದ ದಿನಗಳು ಕಳೆದಂತೆ ಮದುವೆ ಮಾಡಿಕೊಳ್ಳಲು ದಿನಕ್ಕೆ ಕಾಲಿಟ್ಟಿತು. ಅವಳ ಸುತ್ತಲೂ ಮುಳ್ಳಿನ ಬೇಲಿ ಹಾಕಿದಂತೆ ಆಯಿತು. ಅವಳ ಮೇಲೆ ಬೀಳುತ್ತಿದ್ದ ಅಕ್ಷತೆಯ ಕಾಳುಗಳಂತೆ ಅವಳ ಕನಸುಗಳು ಕೂಡ ಚಲ್ಲಾಪಿಲ್ಲಿಗಳಾದವು.ಅವನು ಹೇಳಿಕೊಳ್ಳುವಷ್ಟು ಸುಂದರ ಗುಣವಂತನೂ ಆಗಿರಲಿಲ್ಲ.
ಮುಖ್ಯವಾಗಿ ಅವನಿಗೆ ಒಳ್ಳೆಯ ಕೆಲಸವೂ ಇರಲಿಲ್ಲ. ಹಾಗೇ ಮೌನದಲ್ಲಿಯೆ ಕಟ್ಟಿಸಿಕೊಂಡಳು ಅವನ ಕೈಯಿಂದ ತಾಳಿ.
ತಂದೆ ದುಡುಕಿ ತೆಗೆದುಕೊಂಡ ನಿರ್ಧಾರದಿಂದ ಮುಂದೆ ಬರುವ ಸಂಕಷ್ಟಗಳ ಮರೆತು ಸಾಲ ಮಾಡಿಯೇ ಬಿಟ್ಟ ಅವಳ ತಂದೆ ತನ್ನ ಜವಾಬ್ದಾರಿ ಮುಗಿಯಿತು ಎಂದು ಸಂತೋಷ ಪಡುತ್ತಾರೆ..
ಇತ್ತ ಸುಮನ ಗೆಳತಿ ಕಣ್ಣೀರು ಹಾಕುತ್ತ ಅವಳನ್ನು ತಬ್ಬಕೊಂಡು ಅಳುತ್ತಾಳೆ. ಗೆಳತಿಯನ್ನು ಸಮಾಧಾನ ಮಾಡಬೇಕೋ ಅಥವಾ ತಾನು ಅಳಬೇಕೋ ಒಂದು ಗೊತ್ತಾಗದೆ ಅವಳನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತ ಇಬ್ಬರು ಮಾತನಾಡಲು ಕಣ್ಣೀರು ಬಿಡಲಿಲ್ಲ.
ತವರು ಮನೆಯ ಎಲ್ಲ ಬಂಧಗಳನ್ನು ಬಿಡಿಸಿಕೊಂಡ ಘಳಿಗೆ ಆವಳದಾದರೂ, ಸುಮಳ ಮುಂದಿನ ನಡಿಗೆ ಗಂಡನ ಮನೆಯ ಕಡೆಗೆ.
ಗುರುತು ಪರಿಚಯ ಇಲ್ಲದ ಹೊಸ ಮನೆ,ಹೊಸ ಜಾಗ,ಹೊಸ ಜನ ಹೀಗೆ ಹೊಸತನದಲಿ ಹಳೆಯ ನೆನಪು ಹೊತ್ತು ಬಂದಳು ಸುಮ.
ಹೊಸ್ತಿಲು ದಾಟಿ ಒಳಗೆ ಕಾಲಿಟ್ಟು ಬಂದ ಸುಮಳಿಗೆ ಏನೋ ಹೆದರಿಕೆ, ಸಂಕೋಚ,ನಡುಕ,ನಾಚಿಕೆ ಒಟ್ಟಿಗೆ ಸೇರಿ ಒಂಟಿಯನ್ನಾಗಿಸಿದವು. ಏನೊಂದೂ ಮಾತನಾಡದೆ, ಅಲ್ಲಿಯೂ ಕೂಡ ಅವರೇ ಮಾತನಾಡಿದರೆ ಒಂದೆರಡು ಮಾತು. ಇಲ್ಲ ಅಂದ್ರೆ ಮೂಕವೇದನೆ ಅವಳ ಪರಿಸ್ಥಿತಿ ದೇವರಿಗೆ ಪ್ರೀತಿ. ಒಬ್ಬಂಟಿಯಾದ ಸುಮಳಿಗೆ ತಾಯಿಯ ಮಾತು ಕೇಳಬೇಕು ಎನಿಸುತಿತ್ತು. ಫೋನ್ ಕಾಲ್ ಗೆ ಅಂತ ಕಾಯುತ್ತ ರೂಂನಲ್ಲಿ ಇರುತ್ತಿದ್ದಳು. 5 ನಿಮಿಷ ತಾಯಿಯ ಜೊತೆ ಮಾತನಾಡಿದರೆ ಏಷ್ಟೋ ಸಂತೋಷ ಅವಳಿಗೆ.
ಹಾಗೆಯೇ ದಿನಗಳು ಉರಳಿದಂತೆ ಸುಮ 2 ಮಕ್ಕಳ ತಾಯಿಯಾಗಿ ಬದುಕಿನ ಜೊತೆಗೆ ಸಾಗುತ್ತಿರುವಾಗ ಅನಾರೋಗ್ಯದ ನಿಮಿತ್ತ ಅತ್ತೆ,ಮಾವ ಇಬ್ಬರು ತೀರಿಹೋಗುತ್ತಾರೆ. ಆ ದುಃಖದಿಂದ ಹೊರಬಂದು ಸ್ವಲ್ಪ ದಿವಸಗಳ ನಂತರ,
ಮತ್ತೆ ಸುಮಾ ಚಿಕ್ಕ ಚಿಕ್ಕ 2 ಮಕ್ಕಳ ತಾಯಿಯಾಗಿ ಅವಳ ಕರ್ತವ್ಯ ನಿಭಾಯಿಸುತ್ತ ಇರುವಾಗ, ತಂದೆ ತಾಯಿ ತೀರಿದ ಬಳಿಕವೂ ಸುಧಾರಣೆಯಾಗದ ಗಂಡನ ಬೇಜವಾಬ್ದಾರಿತನದಿಂದ ಸುಮ ಬೇಸತ್ತು ಹೋಗಿದ್ದಳು. ಸುಮಾ ತನ್ನ ತಂದೆ ತಾಯಿಗೆ ಹೇಳಬೇಕು ಅಂತ ಫೋನ್ ಮಾಡುತ್ತಾಳೆ. ಆಗ ನೀನೇ ಅನುಸರಿಸಿಕೊಂಡು ಹೋಗಮ್ಮ ಎನ್ನುವ ಉತ್ತರ ಬಂದಾಗ, ಸುಮ ಏನು ಮರುಮಾತನಾಡದೆ ಫೋನ್ ಇಟ್ಟು ಅಡುಗೆ ಮನೆಗೆ ಹೋಗಿ ಮಕ್ಕಳಿಗೆ ತಿಂಡಿ ಮಾಡುತ್ತಾ ಇರುವಾಗ, ಅವಳ ಗಂಡ ಕುಡಿದು ಬಂದು ಪ್ರಜ್ಞೆ ಇಲ್ಲದ ಅವನು ನಿದ್ದೆ ಮಾಡುತ್ತಾನೆ. ಸುಮ ದಿನಾ ಇದೆ ಗೋಳು ಇವರದ್ದು ನೋಡಿ ನೋಡಿ ಬೇಸತ್ತು ಹೋಗಿರುತ್ತಾಳೆ.
ಯಾವ ಕೆಲಸವೂ ಇಲ್ಲದೆ ತಿರುಗುತ್ತ ಇರುವ ಗಂಡ ಇರುವ ಸ್ವಲ್ಪ ಜಮೀನು ಕೂಡ ಮಾರಿರುತ್ತಾನೆ. ಒಂದು ದಿನ ಸಿಕ್ಕಾಪಟ್ಟೆ ಕುಡಿದು ಬರುತ್ತಿರುವಾಗ ಬಿದ್ದು ಗಾಯವಾಗಿ ಕಾಲು ನಡೆಯಲು ಬಾರದಂತಾಗಿ, ಮನೆಯಲ್ಲಿ ಇರುವ ಹಾಗಾಯಿತು.ತಕ್ಷಣಕ್ಕೆ ಸುಮಾಳಿಗೆ ಗಾಬರಿಯಾದರೂ ಹೀಗೆ ಆಗಿದ್ದು ಒಂದು ರೀತಿ ಒಳ್ಳೆಯದೇ ಆಯಿತು ಬಿಡು ಮನೆ ಹಿಡಿದುಕೊಂಡು ಇರುತ್ತಾನೆ. ಅಂತ ತನ್ನನ್ನು ತಾನು ಸಮಾಧಾನ ಮಡಕೋತಾಳೆ. ಹೊಟ್ಟೆಪಾಡಿಗೆ ಏನು ಮಾಡುವುದು? ಮಕ್ಕಳ ಜವಾಬ್ದಾರಿ, ಗಂಡನ ಆರೈಕೆಗೆ ದುಡ್ಡು ಇದೆಲ್ಲವು ಸುಮಾಗೆ ಚಿಂತೆಯ ಉಂಟು ಮಾಡುತ್ತವೆ. ಅವಳು ಹೀಗೆ ಕೊರಗುತ್ತ ಕುಳಿತಾಗ, ಅವಳಿಗೆ ಒಂದು ಯೋಚನೆ ಬರುತ್ತೆ. ತಾನೇ ಯಾಕೆ ಒಂದು ಉದ್ಯೋಗ ಮಾಡಬಾರದು ಅಂತ.
ಹಾಗಾದರೆ ಯಾವ ಕೆಲಸ ಮಾಡಬಹುದು ಅಂತ ಯೋಚನೆ ಮಾಡಿದ ಸುಮಾ ಸಬ್ಸಿಡಿ ಮೇಲೆ ಆಟೋ ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ಮಾಡಿ, ಸುಮಾ ಒಂದು ಒಳ್ಳೆಯ ದಿನ ನೋಡಿ ಆಟೋ ತಂದು ಪೂಜೆ ಮಾಡಿ ತನ್ನ ಕುಟುಂಬ, ಮಕ್ಕಳ ಜವಾಬ್ದಾರಿಯ ಜೀವನ ಸುಖದಿಂದ ನಡೆಸುತ್ತಿದ್ದಾಳೆ ಸುಮಾ ಇಂದಿಗೂ ಕೂಡ….
ಶ್ರೀಮತಿ ಭಾರತಿ ಸಂ ಕೋರೆ (ಅಂಕಲಿ)