ಜೀವನ ಸಂಗಾತಿ
ಸುಧಾ ಹಡಿನಬಾಳ
‘ಹದಗೆಡುತ್ತಿರುವ
ಮನುಷ್ಯ ಮನುಷ್ಯರ
ನಡುವಿನ ಬಾಂಧವ್ಯ’
ಒಂದೆರಡು ದಶಕಗಳಲ್ಲಿ ಈ ಬಗೆಯ ಬದಲಾವಣೆ ಹೇಗೆ ಸಾಧ್ಯವಾಯಿತು? ಯಾಕೆ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ? ಯಾಕೆ ಸಂಘ ಜೀವಿಯಾದ ಮನುಷ್ಯ ಒಂಟಿತನಕ್ಕೆ ಹಂಬಲಿಸುತ್ತಿದ್ದಾನೆ? ತನ್ನದೇ ಸಂಕುಚಿತ ಪರದೆಯೊಳಗೆ ಬಂಧಿಸಲ್ಪಡುತ್ತಿದ್ದಾನೆ? ಪರಸ್ಪರ ಎದುರಾದಾಗ ಮುಖ ನೋಡಿ ನಗುವ ಸಹಜ ಕ್ರಿಯೆ ಕೂಡ ಯಾಕೆ ಭಾರ ಎನಿಸುತ್ತಿದೆ ? ಪ್ರಕೃತಿದತ್ತವಾಗಿ ಸಿದ್ಧಿಸಿದ ಮಾತಿಗಿಂತ ಮೌನ ಯಾಕೆ ಹೆಚ್ಚು ಪ್ರಿಯವಾಗುತ್ತಿದೆ?ಹೀಗೆ ಕಾಡುವ ಸಾಲು ಸಾಲು ಪ್ರಶ್ನೆಗಳು… ಕಳೆದ ಬಾರಿಯ ನನ್ನ ಲೇಖನದಲ್ಲಿ ಹಳ್ಳಿಗಾಡಿನ ಹಿರಿಯರ ಪ್ರೀತ್ಯಾಧರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಈ ಲೇಖನ ಅದಕ್ಕೆ ತದ್ವಿರುದ್ಧವಾಗಿ ಇವತ್ತಿನ ಬಹುತೇಕ ಯುವ ಮನಸ್ಸುಗಳು ಯಾಕೆ ಭಾವನಾತ್ಮಕ ಕ್ಷಣಗಳಿಗೆ ಸ್ಪಂದಿಸುತ್ತಿಲ್ಲ? ಯಾಕೆ ತುಂಬಾ ನಿರ್ಲಿಪ್ತ ಭಾವ ತೋರುತ್ತಾರೆ? ಮಾತನಾಡಬೇಕಾದ ಸಂದರ್ಭದಲ್ಲಿ ಮೌನಕ್ಕೆ ಮೊರೆ ಹೋಗುತ್ತಾರೆ? ಎಂಬ ವಿಚಾರ ಯೋಚಿಸುವಂತಾಗಿದೆ .
ಮೊಬೈಲ್ ಹಿಡಿದು ತಲೆತಗ್ಗಿಸಿ ಕುಳಿತುಬಿಟ್ಟರೆ ದಿನವಿಡೀ ಬೇಕಾದಷ್ಟು ಬಿಟ್ಟಿಯಾಗಿ ಸಿಗುವ ಎಲ್ಲಾ ವಯದ ಮನರಂಜನೆ, ಅಗಾಧ ಜ್ಞಾನದ ಸಾಗರವೇ ತೆರೆದುಕೊಳ್ಳುವಾಗ ಮನುಷ್ಯ ಈ ವರ್ತುಲದಲ್ಲಿ ಸುಲಭವಾಗಿ ಕಾಣೆಯಾಗುತ್ತಿದ್ದಾನೆ ಎಂಬುದು ರೆಡಿ ಉತ್ತರ.ಇದೊಂದೇ ಕಾರಣವಿರಲಿಕ್ಕಿಲ್ಲ ಆದರೆ ಇದು ಬಹುದೊಡ್ಡ ಕಾರಣವಾಗಿ ಮನುಷ್ಯ ಅಂತ:ಕರಣದಿಂದ ಕೂಡಿದ ಮಾನವನಾಗುವ ಬದಲು ಯಂತ್ರ ಮಾನವನಾಗಲು ಹೊರಟಿರುವುದು ವಿಷಾದನೀಯ …
ಕಳೆದ ರಜೆಯಲ್ಲಿ ಒಂದು ದಿನ ಮನೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ನಡೆದು ಬರುತ್ತಿದ್ದೆ; ಬಸ್ ನಿಲ್ದಾಣಕ್ಕೆ ಹತ್ತಿರ ಬರುತ್ತಿದ್ದಂತೆ ರಸ್ತೆ ಬದಿಗೆ ಮುಖ ಮಾಡಿ ನಿಂತಿದ್ದ ಒಬ್ಬಾಕೆ ಹಿಂಬದಿಯಿಂದ ನನ್ನ ಹಳೆ ವಿದ್ಯಾರ್ಥಿನಿಯಂತೆ ಕಂಡಳು. ಎಂದೂ ಯಾರನ್ನು ಬೆನ್ನು ತಟ್ಟಿ ಮಾತನಾಡಿಸದ ನಾನು ಅಂದು ಹಿಂಬದಿಯಿಂದ ನೋಡಿ ನನ್ನ ವಿದ್ಯಾರ್ಥಿನಿ ಎಂಬ ಸಲುಗೆಯಿಂದ ಆಕೆಯ ಬೆನ್ನು ತಟ್ಟಿದೆ; ಬಹುಶಹ ನಮ್ಮಂತ ಶಿಕ್ಷಕರಿಗೆ ವಿದ್ಯಾರ್ಥಿಗಳೆಂದರೆ ಹೀಗೇ… ಅವರು ಎಲ್ಲೇ ಇರಲಿ, ಹೇಗೆ ಇರಲಿ, ಎಷ್ಟೇ ದೊಡ್ಡವರಾಗಿರಲಿ ನಮ್ಮ ಪಾಲಿಗೆ ವಿದ್ಯಾರ್ಥಿಗಳೇ! ಒಂದು ಬಗೆಯ ಸಲುಗೆ ,ಮಮತೆ…ಆಕೆ ತಿರುಗಿ ನನ್ನನ್ನೊಮ್ಮೆ ನೋಡಿದಳು, ತಕ್ಷಣ ನನಗೆ ಶಾಕ್! ಆಕೆ ನಾನು ಅಂದುಕೊಂಡ ನನ್ನ ವಿದ್ಯಾರ್ಥಿನಿ ಆಗಿರಲಿಲ್ಲ; ತಕ್ಷಣ ಸ್ಸಾರಿ ಅಂತ ಉಚ್ಚರಿಸಿದೆ ; ಆಕೆಯ ಮುಖದಲ್ಲಿ ಒಂದು ಮೆಲು ನಗೆ, ಒಂದು ಮಾತು ಕೂಡ ಹೊರಳಲಿಲ್ಲ!! ಒಮ್ಮೆ ಮುಖ ನೋಡಿ ಗಂಟಿಕ್ಕಿ ತಿರುಗಿಸಿ ಬಿಟ್ಟಳು! ನನಗೆ ಪೆಚ್ಚಾಯಿತು… ಯಾವತ್ತೂ ಯಾರನ್ನೂ ಬೆನ್ನು ತಟ್ಟಿ ಮಾತನಾಡಿಸದ ನನಗೆ ‘ ಪ್ರಥಮ ಚುಂಬನದಲ್ಲೇ ಹಲ್ಲು ಮುರಿಸಿಕೊಂಡ ಕೆಟ್ಟ ಅನುಭವ!! ಆ ಕ್ಷಣದಲ್ಲಿ ಆಕೆ ನಾನು ಕ್ಷಮಿಸಿ ಅಂದಾಗ ಒಮ್ಮೆ ಪರವಾಗಿಲ್ಲ ಎನ್ನಬಹುದಿತ್ತಲ್ಲ ;ಕನಿಷ್ಟ ಪಕ್ಷ ಒಂದು ಸೌಜನ್ಯದ ನಗುವನ್ನಾದರೂ ಆಡಬಹುದಿತ್ತಲ್ಲ, ಬಹುಶಹ ಆಕೆಗೆ ನನ್ನ ನಡೆ ಇಷ್ಟವಾಗಿರಲಿಕ್ಕಿಲ್ಲ ಅಥವಾ ಅವಳ ದೃಷ್ಟಿಯಲ್ಲಿ ನಾನು ಸಭ್ಯತೆ ಇಲ್ಲದ ಹುಲು ಮಾನವನಂತೆ ಕಂಡಿರಬಹುದು ಖೇದವಾಯಿತು ; ಹಾಗಂತ ಅವಳೇನೂ ಧರೆಗಿಳಿದು ಬಂದಂತ ದೇವತೆಯಾಗಿರಲಿಲ್ಲ!
ರಸ್ತೆ ಬದಿಯಲ್ಲಿ, ರಸ್ತೆ ಮೇಲೆ ನಡೆಯುವಾಗ ಮೊಬೈಲ್ ಹಿಡಿದು ತಲೆ ಬಗ್ಗಿಸಿ ಎದುರು ಸಿಕ್ಕಾಗ ಒಂದು ಸಣ್ಣ ಮುಗುಳ್ನಗೆ ಬೀರದೆ ಸತ್ತ ಹೆಣದಂತೆ ನಿರ್ಲಿಪ್ತ ಭಾವ ಪ್ರದರ್ಶಿಸುವ ಅನೇಕರನ್ನು ನೋಡಿದಾಗ ನಮ್ಮ ಹಿರಿಯರ ನೆನಪಾಗುತ್ತದೆ :ಮುಗಿಯದಷ್ಟು ಮಾತು … ಮಾತು ಮಾತಿಗೆ ನಗು… ಮನೆಗೆ ಬಂದವರೊಡನೆ ದಣಿವಿಲ್ಲದ ಸತ್ಕಾರ …ಇವೆಲ್ಲಾ ಕಣ್ಮರೆಯಾಗುತ್ತಿರುವ ಕಾಲ! ಮನೆಗೆ ಅತಿಥಿಗಳು ಬಂದೊಡನೆ ಕೋಣೆ ಸೇರಿಕೊಳ್ಳುವ ಇವತ್ತಿನ ಹಸುಗೂಸುಗಳು ನಾಳೆ ಬೆಳೆಯುವ ಪರಿ ಹೀಗೇ ಇರಬಹುದೇನೋ ಎಂಬ ಚಿಂತೆ. ಕೇಳಿದಷ್ಟಕ್ಕೆ ಮಾತ್ರ ಹುಂ ಹಾಂ ಎಂದು ಚುಟುಕಾಗಿ ಉತ್ತರಿಸುವ, ಮಾತನಾಡಲು ಪದಗಳಿಗಾಗಿ ತಡಕಾಡುವ, ಮನಸ್ಸು ಬಿಚ್ಚಿ ಮಾತನಾಡದ , ಮನಸ್ಸಿನೊಳಗಿನ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳದ, ಸರಿ ತಪ್ಪುಗಳನ್ನು ಚಿಂತಿಸುವ ವಿವೇಚನೆ ಇಲ್ಲದ, ತಲೆತಗ್ಗಿಸಿ ಎಲ್ಲವನ್ನು ಒಪ್ಪಿಕೊಳ್ಳುವ, ಅಂಧಾನುಕರಣೆಗಳನ್ನು ಪ್ರಶ್ನಿಸದೆ ಆಚರಿಸುವ , ಬೇಜವಾಬ್ದಾರಿಯಿಂದ ಕಾಲ ಕಳೆವ ಒಂದಿಷ್ಟು ಯುವ ಪೀಳಿಗೆಯನ್ನು ನೋಡಿದಾಗ ಮನಸ್ಸಿಗೆ ಮುಳ್ಳು ಚುಚ್ಚಿದ ಅನುಭವ…
ಯೋಚಿಸುವ -ಪ್ರಶ್ನಿಸುವ- ಮಾತನಾಡುವ -ನಗುವ -ನಗಿಸುವ- ದುಡಿವ ಜೀವಂತ ವ್ಯಕ್ತಿಗಳೇ ದೇಶದ ಸಂಪತ್ತು ,ಆಸ್ತಿ…
ಸುಧಾ ಹಡಿನಬಾಳ
1