ಮಕ್ಕಳ ಸಂಗಾತಿ
ಮಾಲತಿ ಎಸ್.ಆರಾಧ್ಯ
‘ಸಿರಿ’ ಮಕ್ಕಳ ಕಥೆ
ಒಂದು ಊರಿನಲ್ಲಿ ಒಬ್ಬ ಅಜ್ಜಿ ಇದ್ದರು. ಅಜ್ಜಿಗೆ ಒಬ್ಬಳು ಮೊಮ್ಮಗಳು. ಅವಳ ಹೆಸರು ಸಿರಿ. ಅವಳು ಬಲು ತುಂಟಿ .ಜಾಣೆ ಕೂಡ. ಯಾವಾಗಲೂ ಮತ್ತೊಬ್ಬರನ್ನು ಕೀಟಲೆ ಮಾಡುತ್ತಾ ತಮಾಷೆಯಾಗಿ ತುಂಟಾಟ ಆಡುತ್ತಾ ಬೆಳೆಯುತ್ತಿದ್ದಳು.
ಒಂದು ದಿನ ಅಜ್ಜಿ ತನ್ನ ಮೊಮ್ಮಕ್ಕಳನ್ನೆಲ್ಲಾ ಕರೆದು ಊಟ ಬಡಿಸಿದರು. ಅದರಲ್ಲಿ ಸಿರಿಯು ಸಹ ಇದ್ದಳು .ಅಜ್ಜಿ ಎಲ್ಲರ ತಟ್ಟೆಗೂ ಚಪಾತಿ ಪಲ್ಯ ಬಡಿಸಿದರು. .ನಂತರ ಲಡ್ಡು ಸಹ ಇಟ್ಟರು. ಪಕ್ಕದ ತಟ್ಟೆಯಿಂದ ಸಿರಿ ಒಂದು ಲಡ್ಡು ಕದ್ದಳು.
ಮುಕುಂದಾ ಅಳುತ್ತಾ ” ಅಜ್ಜಿ…. ಅಜ್ಜಿ ನನ್ನ ತಟ್ಟೆಯಲ್ಲಿದ್ದ ಲಡ್ಡು ಕಾಣುತ್ತಿಲ್ಲ ಎಂದು ಜೋರಾಗಿ ಅಳತೊಡಗಿದನು. ಪಕ್ಕದಲ್ಲಿದ್ದ ಸಿರಿ ಮುಸಿಮುಸಿ ನಗುತ್ತಿದ್ದಳು. ಅಜ್ಜಿಯು “ಸಿರೀ…..ಎಂದು ದೊಡ್ಡ ಕಣ್ಣು ಮಾಡಿದರು.” ಸ್ವ್ಯಾರಿ ಅಜ್ಜಿ ” ಎಂದು ಮುಕುಂದನ ತಟ್ಟೆಗೆ ಹಾಕಿದಳು. ಇನ್ನೇನು ಎಲ್ಲರದೂ ಊಟ ಮುಗಿಯುವ ವೇಳೆಗೆ ಸಿರಿಗೆ ಹೊಟ್ಟೆ ತುಂಬಿ ಸ್ವಲ್ಪ ಅನ್ನ ತಟ್ಟೆಯಲ್ಲೇ ಉಳಿಯಿತು ಆಗ ಯಾವಾಗಲೂ ನಿಧಾನವಾಗಿ ಊಟ ಮಾಡುತ್ತಿದ್ದ ಚಾಣಕ್ಯನ ತಟ್ಟೆಗೆ ಹಾಕಿಬಿಟ್ಟಳು.ಎಲ್ಲೋ ನೋಡುತ್ತಿದ್ದ ಚಾಣಕ್ಯನಿಗೆ ಗೊತ್ತೇ ಆಗಲಿಲ್ಲ. ಎಲ್ಲರೂ ಜೋರಾಗಿ ನಗುತ್ತಾ ಊಟ ಮುಗಿಸಿದರು.
ಮಾರನೇ ದಿನ ಶಾಲೆಯಿಂದ ಬಂದ ಸಿರಿ ಏನಾದರೂ ತಿಂಡಿ ತಿನ್ನಬೇಕು ಎಂದು ಅನಿಸುತ್ತಿತ್ತು. ಆಗ ಅಡುಗೆ ಮನೆಯಲ್ಲಿ ಅಟ್ಟದ ಮೇಲೆ ಅಮ್ಮ ಇಟ್ಟಿದ್ದ ಲಡ್ಡು ನೆನಪಿಗೆ ಬಂದು ,ಡಬ್ಬಿಯಲ್ಲಿ ಲಡ್ಡುಗಳನ್ನು ತೆಗೆಯಲು ಹೋಗಿ ಲಡ್ಡುಗಳು ಜಾರಿ ಕೆಳಗೆ ಕುಳಿತಿದ್ದ ಅಜ್ಜಿಯ ತಲೆಯ ಮೇಲೆ ಟಪಟಪ ಎಂದು ಮೂರ್ನಾಲ್ಕು ಲಡ್ಡುಗಳು ಬಿದ್ದವು. ” ಅಮ್ಮಾ…….ಎಂದು ಚೀರಿದರು ಅಜ್ಜಿ.
ಅಜ್ಜಿ ಸಿರಿಯ ಕೈಯನ್ನು ಹಿಡಿದು “ಏಯ್ ಸಿರಿ ಮೇಲೆ ಹತ್ತುವುದನ್ನು ಎಲ್ಲಿ ? ಹೇಗೆ ? ಕಲಿತೆ ನೀನು ? ” ಎಂದು ಕೇಳಿದರು.
ಅಜ್ಜಿ ಅಜ್ಜಿ ದಿನಾಲೂ ನಾನು ತಾತನ ಬೆನ್ನ ಮೇಲೆ ಹತ್ತಿ ಬೆನ್ನನ್ನು ತುಳಿಯುತ್ತೇನೆ . ತಾತ ಯಾವಾಗಲೂ ಬೆನ್ನು ನೋವು ಅಂತ ತುಳಿಸಿಕೊಳ್ಳುತ್ತಾರೆ.ಹಾಗೇ ಕಲಿತೆ ಎಂದಳು ನಗುತ್ತಾ.
“ಎಲಾ ಇವಳಾ, ಚೂಟಿ ಚುರುಕಿನ ಹಾಗೆ ಮಾತಾಡುವಳಲ್ಲಾ ? ಎಂದು ಅಜ್ಜಿ ಹಾಗೆಯೇ ನಿಂತು ಬಿಟ್ಟರು.
ಒಂದು ದಿನ ಸಿರಿ, ಮುಕುಂದ , ಚಾಣಕ್ಯ ಎಲ್ಲರೂ ಆಟವಾಡುತ್ತಿದ್ದರು. ಕಲ್ಲೋ ಮಣ್ಣು ಆಟ. ಎಲ್ಲರೂ ಕೈ ಮೇಲೆ ಕೈ ಹಾಕಿ ಯಾರು ಸೋಲುವರು ?ಎಂದು. ಕೊನೆಗೆ ಉಳಿದದ್ದು ಸಿರಿ .ಸಿರಿನೇ ಔಟ್ ಎಂದು ಜೋರಾಗಿ ಎಲ್ಲರೂ ಕೂಗಿದರು. ಸಿರಿ ನಿಂಗೆ ಕಲ್ಲು ಬೇಕೋ , ಮಣ್ಣು ಬೇಕೋ ಎಂದು ಚಾಣಕ್ಯ ಕೇಳಿದ.ಮಣ್ಣು ಎಂದಳು ಸಿರಿ. ಮಣ್ಣಿನ ಮೇಲೆ ಅವರ್ಯಾರು ಬರದಂತೆ ನೋಡುವುದು ಇವಳ ಕೆಲಸ. ಮಣ್ಣಿನ ಮೇಲೆ ಬಂದರೆ ಓಡಿ ಹೋಗಿ ಹಿಡಿಯುವುದು. ಕಲ್ಲಿನ ಮೇಲೆ ನಿಂತರೆ ಉಳಿದವರಿಗೆ ವಿರಾಮ.
ಹೀಗೆ ಆಟವಾಡುವಾಗ ಚಾಣಕ್ಯ ಜೋರಾಗಿ ಓಡಲು ಪ್ರಯತ್ನಿಸಿ ಕಲ್ಲನ್ನು ಎಡವಿ ಬಿದ್ದು ಗಾಯಮಾಡಿಕೊಂಡ.ಬಿದ್ದ ರಭಸಕ್ಕೆ ತುಟಿ ಸೀಳಾಯಿತು.ಮೊಣಕಾಲು, ಮೊಣಕೈ ತರಚಿ ಗಾಯವಾಯಿತು. ರಕ್ತ ಬರತೊಡಗಿತು. ಇದನ್ನು ಕಂಡ ಸಿರಿ ಓಡಿಬಂದು ಚಾಣಕ್ಯ ನನ್ನು ಪಕ್ಕಕ್ಕೆ ಕೂರಿಸಿ ತುಟಿ, ಕೈ ಕಾಲುಗಳನ್ನು ತೇವ ಮಾಡಿದ ಬಟ್ಟೆಯಿಂದ ಒರೆಸಿ, ಮನೆಗೆ ಓಡಿ ಹೋಗಿ ಮುಲಾಮನ್ನು ತಂದುಳು. ಆ ಮುಲಾಮನ್ನು ಸ್ವತಃ ಅಜ್ಜಿ ನೇ ಬೇವಿನಸೊಪ್ಪು,ಅರಿಸಿನ ಇನ್ನೂ ಅನೇಕ ಪದಾರ್ಥಗಳನ್ನು ಹಾಕಿ ತಯಾರಿಸಿದ್ದರು.
ಆ ಮುಲಾಮನ್ನು ನೋಡಿದ ಚಾಣಕ್ಯ ” ನಂಗೆ ಆ ಮುಲಾಮು ಬೇಡ ಎಂದ.
ಯಾಕೋ ? ಎಂದಳು ಸಿರಿ.
ಅದನ್ನು ಹಚ್ಚಿದರೆ ಉರಿಯುತ್ತದೆ ನಂಗೆ ಬೇಡ. ಇಲ್ಲ ಇಲ್ಲ ತಣ್ಣಗೆ ಇರುವುದು.ನಾನು ಸಹ ಮೊನ್ನೆ ಹಚ್ಚಿಕೊಂಡಿದ್ದೇನೆ .ಏನೂ ಆಗೋಲ್ಲ.” ಎಂದು ಮುಲಾಮನ್ನು ಹಚ್ಚಿದಳು.
ಸಿರಿ ಹೇಳಿದಂತೆ ತಣ್ಣಗಾಯಿತು.ಉರಿಯೂ ಕಡಿಮೆಯಾಯಿತು.ಚಾಣಕ್ಯನನ್ನು ಹುಡುಕಿಕೊಂಡು ಬಂದ ಅಮ್ಮ ಸಿರಿಯ ಸೇವಾ ಮನೋಭಾವ ಕಂಡು ಹೆಮ್ಮೆ ಪಟ್ಟರು.ಚಾಣಕ್ಯನ ಕೈ ಹಿಡಿದು ಎಲ್ಲರೂ ಮನೆ ಕಡೆ ಹೆಜ್ಜೆ ಹಾಕಿದರು.
ಮಾಲತಿ ಎಸ್.ಆರಾಧ್ಯ
ಧನ್ಯವಾದಗಳು ಮಧು ಸರ್
Too long