ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಬಿಕ್ಕು
ಒಮ್ಮೊಮ್ಮೆ ನೀನು ಅತೀವ
ನೆನಪಾಗುತ್ತಿಯೆ
ಸಾವೊಂದು ಸನಿಹ ಸುಳಿದಾಡಿ ಹೋಗುವಷ್ಟು
ಹತ್ತಿರ ನಿಲ್ಲುತ್ತೀಯೆ
ಆ ರಾತ್ರಿಗಳಲ್ಲಿ ನಕ್ಷತ್ರಗಳು
ನೇಣು ಬಿಗಿದುಕೊಳ್ಳುತ್ತವೆ
ಮೋಡಗಳು ಖಾಲಿ ಕಣ್ಣುಗಳ
ಆಗಸದತ್ತ ತೂರಿ
ದು:ಖಿಸುತ್ತವೆ..
ಅಳುತ್ತವೆ ರಸ್ತೆಗಳು
ಸಕಾರಣವಿಲ್ಲದೆ
ಮರ ಗಿಡ ಹೂ ಬಳ್ಳಿಗಳ
ಮೇಲೆಲ್ಲ ಸಣ್ಣ ನರಳಿಕೆಯ
ಬಿಕ್ಕು
ಕರೆಯುತ್ತೀಯೆ ನೀನು ಮತ್ತೆ
ಮತ್ತೆ ಕನಸುಗಳಲ್ಲಿ
ನೆನಪುಗಳಲ್ಲಿ ಹಿಂತಿರುಗಿ
ಬಾರದ ಪ್ರತಿಧ್ವನಿಗಳಲ್ಲಿ
ವಿರಹದುರಿ
ಮುಗಿಲು ಮುಟ್ಟುತ್ತದೆ
ಹಸೀ ಬೇನೆಯೊಂದು
ಎದೆಯ ಸೋಕಿ ಉರಿ ತಾಕಿ
ಧರೆ ದಹಿಸುತ್ತದೆ
ಮೆಲ್ಲ ಕರಗುತ್ತೇನೆ ನಾನು
ಕಿಟಕಿಯ ಸರಳುಗಳಿಂದಾಚೆಗೆ
ಕಾಣುವ ನಿನ್ನ ಬಿಂಬವ
ಹಿಡಿಯಲು
ಓಡುತ್ತೇನೆ
ಕಾಲಿಗೆ ಕಟ್ಟಿಕೊಂಡ
ಹಗ್ಗವೊಂದು
ದಢಾರನೆ ಎದುರು ನಿಂತು
ಹಿಂದಕ್ಕೆಳೆಯುತ್ತದೆ
ನಿಶ್ಚಲ ದೇಹವೊಂದು
ಚಲಿಸದೆ ಮತ್ತಲ್ಲೇ ನಿಲ್ಲುತ್ತದೆ..
————————–
ದೀಪ್ತಿ ಭದ್ರಾವತಿ
Very nice
ಚೆನ್ನಾಗಿದೆ ಮೇಡಂ
Good poem
Nice mam
ಚೆನ್ನಾಗಿದೆ ಮೇಡಂ..