‘ಆಯ್ಕೆಗಳು ನಮ್ಮದು’ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್’ಅವರ ಲೇಖನಿಯಿಂದ

ಆ ಕುಟುಂಬದಲ್ಲಿ ಬಡತನ ತಾಂಡವವಾಡುತ್ತಿತ್ತು. ಇಬ್ಬರು ಗಂಡು ಮಕ್ಕಳಿರುವ ಆ ಮನೆಯಲ್ಲಿ ತಂದೆ ತಾಯಿ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಕೂಲಿ ಮಾಡಿ ಬಂದ ದುಡ್ಡಿನಲ್ಲಿ ತಾಯಿ ಮನೆ ಖರ್ಚು ನಿಭಾಯಿಸಿದರೆ ತಂದೆ ತನ್ನ ಕೂಲಿ ಹಣದಲ್ಲಿ ಕುಡಿದು ತೂರಾಡುತ್ತಾ ಮನೆಗೆ ಬಂದು ಮಲಗುತ್ತಿದ್ದನು.

 ಮೊದಮೊದಲು ಹೆಂಡತಿ ಗಂಡನ ಕುಡಿತವನ್ನು ಆಕ್ಷೇಪಿಸಿ ಸಾಕಷ್ಟು ಪೆಟ್ಟು ತಿಂದಿದ್ದು, ಇದೀಗ ಮೌನವನ್ನು ವಹಿಸಿದ್ದಳು. ಮಕ್ಕಳು ಇದೀಗ ದೊಡ್ಡವರಾಗುತ್ತಿದ್ದು,ದೈನಂದಿನ ಕಲಹ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬುದು ಆಕೆಯ ಆತಂಕಕ್ಕೆ ಕಾರಣವಾಗಿತ್ತು.
 ಹೀಗೆಯೇ ದಿನಗಳು ಉರುಳಿ ವರ್ಷಗಳಾಗಿ ಮಕ್ಕಳು ಬೆಳೆದು ದೊಡ್ಡವರಾದರು. ಹಿರಿಯ ಮಗ ವಿಜ್ಞಾನದಲ್ಲಿ ಪದವಿ ಪಡೆದು ನಂತರ ಬಿ ಎಡ್ ಮಾಡಿಕೊಂಡು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡು ಸರ್ಕಾರಿ ನೌಕರಿಯ ತಯಾರಿಯಲ್ಲಿ ತೊಡಗಿಕೊಂಡು ಅದರಲ್ಲೂ ಪಾಸಾಗಿ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ನಿಯುಕ್ತಿಗೊಂಡ.
 ಎರಡನೆಯ ಮಗ ಹತ್ತನೇ ತರಗತಿಗೆ ನಪಾಸಾಗಿ ಮನೆಯಲ್ಲಿ ಕುಳಿತುಕೊಂಡನು… ತಾಯಿ ಅಣ್ಣ ಅದೆಷ್ಟೇ ಹೇಳಿದರೂ ಕೇಳದೆ ಮುಂದೆ ಓದಲು ಸಾಧ್ಯವಿಲ್ಲ ಎಂದು ಹೇಳಿ ಕೂಲಿ ಕೆಲಸಕ್ಕೆ ಹೊರಟು ನಿಂತನು. ದೈಹಿಕವಾಗಿ ದುರ್ಬಲವಾಗಿದ್ದ ಅವನಲ್ಲಿ ಕೂಲಿ ಕೆಲಸಕ್ಕೆ ಬೇಕಾದ ಕ್ಷಮತೆ ಇರಲಿಲ್ಲ…. ಜೊತೆಗಿರುವ ಕೆಲಸಗಾರರು ಆತನನ್ನು ಗೇಲಿ ಮಾಡತೊಡಗಿದ್ದುದರಿಂದ ಕೂಲಿ ಕೆಲಸವನ್ನು ಕೂಡ ಸರಿಯಾಗಿ ಮಾಡಲಾರದೆ ಕುಡಿತದ ಚಟಕ್ಕೆ ಬಿದ್ದನು. ಈ ಮೊದಲೇ ಕುಡಿತದ ಚಟಕ್ಕೆ ಬಲಿಯಾಗಿದ್ದ ಗಂಡನನ್ನು ನೋಡಿದ್ದ ಆತನ ತಾಯಿ ಮಗನಿಗೆ ಅದೆಷ್ಟೇ ಬುದ್ಧಿ ಹೇಳಿದರು ಆತ ಬದಲಾಗಲಿಲ್ಲ.

 ಇಂತಹ ಸಾವಿರಾರು ಲಕ್ಷಾಂತರ ಕುಟುಂಬಗಳು ನಮ್ಮಲ್ಲಿವೆ.

 ನನ್ನಪ್ಪ ಕುಡಿದು ತಿಂದು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡುದಲ್ಲದೆ ನಮ್ಮೆಲ್ಲರ ಬದುಕನ್ನು ನರಕ ಮಾಡಿದ, ನಾನು ನನ್ನಪ್ಪನಂತೆ ಆಗಬಾರದು ಎಂಬ ಏಕೈಕ ಉದ್ದೇಶದಿಂದ ವಿದ್ಯೆಯನ್ನು ಪಡೆದು ಒಳ್ಳೆಯ ನೌಕರಿ ಗಳಿಸಿದೆ ಎಂದು ಹಿರಿಯ ಮಗ ಹೇಳಿದರೆ, ಕಿರಿಯ ಮಗ ಕೂಡ ನನ್ನಪ್ಪ ಸರಿಯಾಗಿದ್ದರೆ ನಮ್ಮ ಬದುಕು ನೇರವಾಗಿ ಇರುತ್ತಿತ್ತು ಎಂದು ಹಳಿಯುತ್ತಾನೆ. ಹಾಗಾದರೆ ಇವರಿಬ್ಬರಲ್ಲಿ ಯಾರು ಸರಿ??
 ಇಬ್ಬರೂ ನೋಡಿದ ಅನುಭವಿಸಿದ ಪರಿಸ್ಥಿತಿ ಒಂದೇ…. ಆದರೆ ಅದನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಸಾಗಿದ್ದು ವಿಭಿನ್ನ ಹಾದಿಗಳಲ್ಲಿ. ಒಂದು ವಿಕಸನದ ಹಾದಿಯಾದರೆ ಇನ್ನೊಂದು ಅಧಪತನದ ಹಾದಿ.
 ಸ್ನೇಹಿತರೆ ನಮ್ಮ ಬದುಕಿನಲ್ಲಿಯೂ ಕೂಡ ಹೀಗೆಯೇ ಎರಡು ಆಯ್ಕೆಗಳು ಇರುತ್ತವೆ…. ಒಂದು ಹಾದಿ ಅತ್ಯಂತ ಕಠಿಣವೆನಿಸುತ್ತದೆ. ನೋವು ಸಂಕಟ ನಿರಾಶೆಗಳೆಂಬ ಕಲ್ಲು ಮುಳ್ಳುಗಳನ್ನು ತುಂಬಿದ ಹಾದಿ ಒಳ್ಳೆಯ ಬದುಕನ್ನು ನಡೆಸುವ ಕಡೆ ತೋರುತ್ತದೆ . ಹಲ್ಲು ಬಿಗಿ ಹಿಡಿದು ಮನಸ್ಸನ್ನು ಏಕಾಗ್ರಗೊಳಿಸಿ ದೃಢ ನಿಶ್ಚಯದಿಂದ ಈ ಹಾದಿಯಲ್ಲಿ ನಡೆದರೆ ಯಶಸ್ಸು ಖಂಡಿತ.

 ಎರಡನೆಯ ಹಾದಿ ಸಮಾಜ ಬಾಹಿರ ಕೃತ್ಯಗಳಿಂದ ಕೂಡಿದ್ದು ಯಾವ ಅರ್ಹತೆಗಳಿಲ್ಲದೆ ಇದ್ದಾಗಲೂ ಕೂಡ ಸುಲಭವಾಗಿ ಕೈಗೆ ಸಿಗುವಂತದ್ದು. ಮೊದಮೊದಲು ಇಲ್ಲಿ ರೋಮಾಂಚನ, ಸಾಹಸ,ಯಶಸ್ಸು ದೊರೆತರೂ ಅಂತಿಮವಾಗಿ ನೋವು ನಿರಾಶೆ ಕಟ್ಟಿಟ್ಟ ಬುತ್ತಿ. ಅದಷ್ಟೇ ಸಮಾಜಘಾತಕ ವ್ಯಕ್ತಿಯಾದರೂ ತನ್ನ ಮಕ್ಕಳಿಗೆ ಹೇಳಿಕೊಡುವುದು ಸತ್ಯ ನ್ಯಾಯ ನಿಷ್ಠೆಯ ಹಾದಿಯಲ್ಲಿ ಸಾಗಿ ಎಂದು.ಅದುವೇ ನಿತ್ಯ ಸತ್ಯ ಎಂಬ ಅರಿವು ಆತನಿಗಿಂತ ಹೆಚ್ಚು ಬೇರೆಯವರಿಗೆ ಇರುವುದಿಲ್ಲ ಎಂಬುದರ ಅರಿವಿದ್ದು ಕೂಡ ತಾನು ಸಾಗಿ ಬಂದ ದಾರಿಯಲ್ಲಿ ಮತ್ತೆ ಮುನ್ನಡೆಯುವುದು ವಿಪರ್ಯಾಸ.ಆರಂಭದಲ್ಲಿ ಎಡವಿದ ಒಂದೇ ಒಂದು ಕಾರಣದಿಂದ ಮರಳಿ ಬರಲಾರದಷ್ಟು ದೂರ ಸಾಗಿ ಬಿಟ್ಟಿರುತ್ತಾನೆ.
 ನೋವು ನಿರಾಸೆ ಸಂಕಟಗಳು ಬದುಕಿನ ಸಹಜ ಪ್ರಕ್ರಿಯೆಗಳು. ಆಯ್ಕೆ ಮಾತ್ರ ನಿಮ್ಮದಾಗಿರುತ್ತದೆ… ಒಳ್ಳೆಯದು ಇಲ್ಲವೇ ಕೆಟ್ಟದ್ದು..l

ಜಾಣರಾದರೆ ಒಳ್ಳೆಯದನ್ನು, ಮತಿಗೆ ಮಂಜು ಕವಿದಿದ್ದರೆ ಹಾವಿನ ಹುತ್ತವೆಂದು ಗೊತ್ತಿದ್ದರೂ ಅದರಲ್ಲಿ ಕೈ ಹಾಕುವ ಸಾಹಸ ಮಾಡುತ್ತಾರೆ.

 ಎಷ್ಟೋ ಬಾರಿ ಒಳ್ಳೆಯ ಹಾದಿಯನ್ನು ಆಯ್ದುಕೊಂಡಿದ್ದರೂ ಕೂಡ ಬದುಕಿನಲ್ಲಿ ನೋವು ನಿರಾಸೆ ತೊಂದರೆಗಳನ್ನು ಅನುಭವಿಸುವುದು ತಪ್ಪುವುದಿಲ್ಲ… ಅಂತಹ ಪರಿಸ್ಥಿತಿಯಲ್ಲಿ ತಪ್ಪು ದಾರಿಯಲ್ಲಿ ನಡೆದು ಯಶಸ್ವಿಯಾದ  ಬೇರೊಬ್ಬರನ್ನು ಕಂಡು ಮನಸ್ಸು ಒಂದು ಕ್ಷಣ ವಿಚಲಿತವಾಗುತ್ತದೆ.
 ಆದರೆ ನಾವು ತೆಗೆದುಕೊಂಡ ನಿರ್ಧಾರದ ಕುರಿತು ನಮಗೆ ದೃಢತೆ ಇದ್ದರೆ ನಮ್ಮ ಆತ್ಮಸಾಕ್ಷಿ ನಮ್ಮೊಂದಿಗೆ ಕೈ ಜೋಡಿಸುತ್ತದೆ… ಅಂತಿಮವಾಗಿ ತುಸು ತಡವಾದರೂ ಜಯ ತತ್ಪರಿಣಾಮದ ಆತ್ಮತೃಪ್ತಿ  ಸಿಗುವುದು ಒಳ್ಳೆಯ ಹಾದಿಯಲ್ಲಿ ನಡೆದಾಗ ಮಾತ್ರ.


Leave a Reply

Back To Top