ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಕಾಂಕ್ರೀಟ್ ಕಾವು
ಸಂಪತ್ತಿನಸಿರಿ ಧರಣಿಯೋಡಲನ್ನ
ಕಾಂಕ್ರೀಟ್ ಕಾವಲಿಯಾನ್ನಾಗಿಸಿ
ದಳ್ಳುರಿಯಿಟ್ಟು ಕಾಯಿಸಿಬಿಟ್ಟಿದ್ದೇವೆ
ಕೆಂಡದ ಬಿಸಿ ಹೆಚ್ಚಿ ಕರಗುತ್ತಿದ್ದೇವೆ
ಧಗ ಧಗಿಸುವ ನಿಗಿಗೆಂಡದಲ್ಲಿ ನಿಂತ
ಕೊನರು ತರುಲತೆಗಳ ಹಸಿರನ್ನೆಲ್ಲಾ
ಒಡನಾಡಿಯಾದ ಖಗ ಮೃಗಗಳನ್ನೆಲ್ಲಾ
ಕಮರಿಸಿ ಕರಕಲಾಗಿಸಿಬಿಟ್ಟಿದ್ದೇವೆ
ಸರ್ವಸ್ವವನ್ನೂ ಉರಿಸಿ ಉರಿಸಿ
ಇಂಧನ ಖಾಲಿಯಾಗಿಸಿದ್ದೇವೆ ಈಗ
ಉರುವಲಾಗಿ ಉಳಿದಿರುವುದೊಂದೆ
ಕೊರಗುವ ನಮ್ಮ ಜೀವಗಳು ಮಾತ್ರ
ಇಂದಾದರೂ ನಮ್ಮ ತಪ್ಪನ್ನು ನಾವು
ಅರಿತರೆ ತುಸು ನಿರಾಳವಾದೀತೇನೊ
ಸಾವಿನೊಂದಿಗೆ ಸೆಣೆಸಾಡಿ ಸೋಲುವ
ಬಡ ಜೀವಗಳು ಬದುಕಬಹುದೇನೊ
ಬಂಧು ಬಾಂಧವರೆಲ್ಲಾ ಒಟ್ಟಾಗಿ ಬನ್ನಿ
ಇಂದೆ ಹಸಿರಿನ ಹರಕೆಯ ಕಟ್ಟೋಣ
ಉದ್ವೇಗದ ಉಸಿರನ್ನು ತಣಿಸುವಂತ
ಸಸ್ಯ ಸಂಕುಲವನ್ನು ಮತ್ತೆ ಸೃಜಿಸೋಣ
ಗಾಳಿ ನೀರನ್ನು ಕೊಂಡು ಬದುಕುವ
ಈ ಬದುಕಿಗೆ ವಿದಾಯ ಹೇಳೋಣ
ತರಾವರಿ ಖಾಯಿಲೆಯಿಂದ ಮುಕ್ತಾರಾಗೋಣ
ಹಸಿರಿನ ಆರೋಗ್ಯದಲ್ಲಿ ಬೆರೆಯೋಣ
ಗೀತಾಮಂಜು ಬೆಣ್ಣೆಹಳ್ಳಿ