ಪರಿಸರ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ವಿಶ್ವ ಪರಿಸರ ದಿನಾಚರಣೆ ”
ಅದೊಂದು ಕಾಲವಿತ್ತು, ಹಳ್ಳಿಗಳಲ್ಲಿ, ಚಿಕ್ಕ ಪುಟ್ಟ ಶಹರಗಳಲ್ಲಿ ಊರ ಹೊರಗಿನ ದೊಡ್ಡ ಆಲದಮರದ ಕೆಳಗೆ ಹಿರಿಯರೆಲ್ಲ ಸೇರಿ ಪಂಚಾಯತಿ ನಡೆಸುತ್ತಿದ್ದರು. ಊರಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ನಿರ್ಣಯ ಅಲ್ಲಿಯೇ ಆಗುತ್ತಿತ್ತು. ಎಲ್ಲ ಘಟನೆಗಳಿಗೂ ಆ ಮರ ಸಾಕ್ಷಿಯಾಗುತ್ತಿತ್ತು.
ಊರ ಮುಂದಣ ಬೇವಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಊರಿನ ಸರ್ವ ಜನರು ಆಡುತ್ತಿದ್ದರು. ಊರಿಗೆ ಬರುವ ಯಾರೇ ಆಗಲಿ ಆ ಕಟ್ಟೆಗೆ ಬಂದು ಜನರೊಂದಿಗೆ ಸುಖ ದುಃಖ ಹಂಚಿಕೊಳ್ಳುತ್ತಿದ್ದರು.
ಇದೀಗ ಆ ಪರಿಸರವೂ ಇಲ್ಲ, ಆ ಜನರೂ ಇಲ್ಲ. ಬೇಸಿಗೆಯಲ್ಲಿ ನೀರಿಲ್ಲ ಎಂದು ನಾವು ಪ್ರಜೆಗಳು ಬಡಬಡಿಸಿದರೆ ಸರ್ಕಾರ ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಅಲ್ಲಲ್ಲಿ ನೀರು ಪೂರೈಕೆಗೆ ಅನುಕೂಲ ಮಾಡಿಕೊಡುತ್ತದೆ. ಮುಂದೆ ಮಳೆ ಬಂದ ಕೂಡಲೇ ಬೇಸಿಗೆಯ ಸಮಸ್ಯೆಗಳನ್ನು ಮರೆತು ಬಿಡುತ್ತೇವೆ.ಕೆರೆ ಕಟ್ಟೆಗಳನ್ನು ತುಂಬಿಸುವ ಮಳೆ ಮುಂದಿನ ಕೆಲ ತಿಂಗಳುಗಳ ಕಾಲ ಜನರನ್ನು ಶಾಂತವಾಗಿಡುತ್ತದೆ ಎನ್ನುವುದೇನೋ ಸರಿ ಮತ್ತೆ ಡಿಸೆಂಬರ್ ಸುಮಾರಿಗೆ ನೀರಿಲ್ಲದೆ ಕೆರೆಕಟ್ಟೆಗಳು ಒಣಗಿ ಬಾಯಿ ತೆರೆದು ನಿಲ್ಲುತ್ತವೆ. ಮತ್ತೆ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದರದೇ ಸುದ್ದಿ. ಪರಿಸ್ಥಿತಿ ಹೇಗಿದೆ ಎಂದರೆ ನಾವು ಗಡ್ಡಕ್ಕೆ ಬೆಂಕಿ ಹತ್ತಿದೆ ಎಂದಾಗ ಬಾವಿ ತೋಡುವಂತಹ ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ಯೋಜಿಸುತ್ತಿದ್ದೇವೆ.
ಈ ಹಿಂದೆ ಕಾಡಿನಲ್ಲಿನ ಒಣ ಮರಗಳನ್ನು ಮಾತ್ರ ಕಡಿದು ಮಾರುತ್ತಿದ್ದರು. ಆದರೆ ಮಾನವನ ದುರಾಸೆಗೆ ಇಂದು ಕಾಡುಗಳು ಆಹುತಿಯಾಗುತ್ತಿವೆ.
ಕೆಲವೆಡೆ ವರ್ಷದ ಇಂತಿಷ್ಟು ದಿನಗಳು ಕೆರೆಗಳ, ಹಳ್ಳಗಳ ನೀರನ್ನು ಬಳಸುವುದು ನಿಶಿದ್ಧವಿತ್ತು… ಕಾರಣ ಆ ಸಮಯದಲ್ಲಿ ಜಲಚರಗಳ ಸಂತಾನೋತ್ಪತ್ತಿ ಕ್ರಿಯೆ ಜರುಗುವುದೆಂದು. ಪ್ರಕೃತಿಯೊಂದಿಗೆ ಈ ರೀತಿಯ ಸಮನ್ವಯತೆಯನ್ನು ಮನುಷ್ಯ ಕಾಯ್ದುಕೊಂಡಿದ್ದ.
ನಮ್ಮ ಬದುಕಿಗೆ ಮುಖ್ಯವಾದ ನೀರು, ಆಹಾರ, ನೆರಳು ನಮಗೆ ದೊರೆಯುವುದು ಪ್ರಕೃತಿಯಿಂದಲೇ. ನಾವು ನಡೆಯುವ ನೆಲ, ಕುಡಿಯುವ ಜಲ ಎಲ್ಲವೂ ಪ್ರಕೃತಿಯೇ. ಹುಟ್ಟಿನಿಂದ ಸಾಯುವವರೆಗೂ ನಮ್ಮನ್ನು ಪೊರೆಯುವ ಈ ಪ್ರಕೃತಿಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ
ಮೊದಲೆಲ್ಲ ಬಾವಿಗಳಲ್ಲಿ ಸಿಗುತ್ತಿದ್ದ ನೀರು ಇಂದು ಕ್ಯಾನ್ ಗಳಲ್ಲಿ ದೊರೆಯುತ್ತಿದೆ… ಮುಂದೆ ಲೋಟಗಳಲ್ಲಿ ಕಾಣುವುದು ಕೂಡ ಕಷ್ಟವೇನೋ?
ಅಂದು 50-60 ಅಡಿಗೆ ಬೋರ್ ಹಾಕಿದಾಗ ದೊರೆಯುವ ನೀರು ಇಂದು ಏಳೆಂಟು ನೂರು ಅಡಿ ತೋಡಿದರೂ ಅಂತರ್ಜಲ ಸಿಗುತ್ತಿಲ್ಲ. ನಗರೀಕರಣ, ಅಭಿವೃದ್ಧಿಯ ನೆಪದಲ್ಲಿ ಎಲ್ಲೆಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಮಳೆ ನೀರನ್ನು ಹಿಂಗಿಸಲು ಯಾವುದೇ ಕ್ರಮಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿಲ್ಲ. ಭೂಮಿಗೆ ಬೀಳುವ ಒಂದೆರಡು ಮಳೆಯಿಂದಲೇ ಮನುಷ್ಯನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಗೊತ್ತಿದ್ದು ಕೂಡ ಮಳೆ ನೀರು ಕೊಯ್ಲು ಯೋಜನೆಯನ್ನು ಜಾರಿಗೆ ತಂದಿದ್ದು ಅದು ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರ ಜೀವಂತವಾಗಿದೆ.
ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆ ಕಟ್ಟೆಗಳ ನಿರ್ಮಾಣವೇನೋ ಆಗಿದೆ…. ಆದರೆ ಅವುಗಳ ಸೂಕ್ತ ನಿರ್ವಹಣೆ, ಹೂಳು ನಿವಾರಣೆ ಮುಂತಾದ ಕಾರ್ಯಗಳು ಸಮರ್ಪಕವಾಗಿ ನಿರ್ವಹಿಸಲಾಗದೆ ನಿಗದಿತ ಪ್ರಮಾಣದ ಮಳೆ ನೀರು ಸಂಗ್ರಹವಾಗದೆ ಇರುವುದು ಕೂಡ ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ.
ಕೇವಲ ಬೆಂಗಳೂರು ನಗರ ಒಂದರಲ್ಲಿಯೇ ನಗರೀಕರಣ ಮಾಡುವ ಭರದಲ್ಲಿ ಸಾವಿರಾರು ಕೆರೆಗಳನ್ನು ಮುಚ್ಚಲಾಗಿದ್ದು ಇದೀಗ ಕೇವಲ ಎರಡು ನೂರು ಕೆರೆಗಳು ಮಾತ್ರ ಇದ್ದು ಅವುಗಳಲ್ಲಿ 150 ಕೆರೆಗಳು ಮಾತ್ರ ಸುಸ್ಥಿತಿಯಲ್ಲಿವೆ….. ಆದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಬೃಹತ್ ಬೆಂಗಳೂರು ನಗರದ ನೀರಿನ ಬವಣೆಯನ್ನು ತೀರಿಸಲು ಇವುಗಳಿಂದ ಸಾಧ್ಯವಿಲ್ಲ….ಅಂತೆಯೇ ಬೇರೆಯವರ ಪಾಲಿನ ನೀರನ್ನು ಬೆಂಗಳೂರಿಗೆ ಹರಿಸಲಾಗುತ್ತದೆ.ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ನದಿಗಳಿಗೆ ಅಡ್ಡಲಾಗಿ ಬ್ಯಾರೇಜುಗಳನ್ನು, ಜಲಾಶಯಗಳನ್ನು ಕಟ್ಟಲು ತಮ್ಮ ಹೊಲಗಳನ್ನು ಕಳೆದುಕೊಂಡ ಜನರಿಗೆ ಕುಡಿಯುವ ನೀರು ದೊರೆಯದೆ ಇರುವುದು ಪರಿಸ್ಥಿತಿಯ ವಿಪರ್ಯಾಸತೆಯನ್ನು ತೋರುತ್ತದೆ.
ಸರ್ಕಾರ ಜನರ ವ್ಯವಸಾಯಕ್ಕೆ ಅನುಕೂಲವಾಗಲಿ ಎಂದು ರೈತರ ಹೊಲಗಳಲ್ಲಿ ಚೆಕ್ ಡ್ಯಾಮ್ಗಳನ್ನು ಕಟ್ಟಿಸಲು ಸಹಾಯಧನ ನೀಡುತ್ತಿದೆಯಷ್ಟೇ,ಇಲ್ಲೂ ಕೂಡ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಸಹಾಯಧನ ಪಡೆದು ಕೃಷಿ ಹೊಂಡಗಳನ್ನು ಮಾಡಿಕೊಳ್ಳುವ ಜನರು ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಲ್ಲವೇ!?
ಬೇಸಿಗೆಯಲ್ಲಿ ಅಬ್ಬಬ್ಬಾ! ಅದೆಂಥ ಬಿಸಿಲು ಎಂದು ನಿಡುಸುಯ್ಯುವ ನಾವು ಫ್ಯಾನ್, ಕೂಲರ್ ಮತ್ತು ಎಸಿ ಗಳ ಮೊರೆ ಹೋಗುತ್ತೇವೆಯೇ ಹೊರತು ಒಂದೆರಡು ಗಿಡಗಳನ್ನು ನೆಟ್ಟು ಅವುಗಳ ಪಾಲನೆ, ಘೋಷಣೆ ಮಾಡಿ ಅದರ ನೆರಳಿನಲ್ಲಿ ಧಗೆ ಆರಿಸಿಕೊಳ್ಳಲು ಕೂಡುವುದಿಲ್ಲ.
ಮನೆಯ ಸುತ್ತಲೂ ಗಿಡ ನೆಟ್ಟು ಪೋಷಿಸಲು ನೀರಿನ ತೊಂದರೆಯನ್ನು ಹೇಳಿಕೊಳ್ಳುವ ತಾಯಂದಿರಿಗೆ ನೀರಿಗಿಂತ ಹೆಚ್ಚಿನ ತೊಂದರೆ ಇರುವುದು ಕಾಂಕ್ರೀಟ್ ಮಯವಾಗಿರುವ ತಮ್ಮ ಕಾಂಪೌಂಡ್ನಲ್ಲಿ ಬೀಳುವ ಎಲೆಗಳ ಕಸದಿಂದ. ಪೂಜೆಗಾಗಿ ಬೇಕಾಗುವ ಹೂಗಳಿಗಾಗಿ ಒಂದೆರಡು ಗಿಡಗಳನ್ನು ಬೆಳೆಸುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿದೆ ಎಂಬುದನ್ನು ಬಿಟ್ಟರೆ ಪರಿಸರದ ಉಳಿವಿಗಾಗಿ ನಾವೇನೂ ನೀಡುತ್ತಿಲ್ಲ?
ಪ್ರಸ್ತುತ ವರ್ಷದ ವರದಿಯಂತೆ ಈ ವರ್ಷದ ಬೇಸಿಗೆಯಲ್ಲಿ 48 ರಿಂದ 54 ಡಿಗ್ರಿ ಸೆಂಟಿಗ್ರೇಡ್ ನಷ್ಟು ಉಷ್ಣತೆ ಹೆಚ್ಚಾಗಿದ್ದು ಜನರ ಹಾಹಾಕಾರ ಮುಗಿಲು ಮುಟ್ಟಿದೆ. ದಕ್ಷಿಣ ಭಾರತದಲ್ಲಿ ಬೀಸಿಹೋದ ಬಿಸಿ ಹವೆ ಇದೀಗ ಉತ್ತರದಲ್ಲಿ ತನ್ನ ಕರಾಳ ಮುಖ ತೋರಿಸಿ 50 ಕ್ಕೂ ಹೆಚ್ಚು ಜನರ ಬಲಿ ಪಡೆದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಉಷ್ಣತೆ 60 ಡಿಗ್ರಿಗು ಹೆಚ್ಚಾಗುವ ದಿನಗಳು ದೂರವಿಲ್ಲ ಆಗ ಮನುಷ್ಯ ಚರ್ಮ ಸಂಬಂಧಿ ಕಾಯಿಲೆಗಳಿಗೆ, ನಿರ್ಜಲೀಕರಣ ಸಮಸ್ಯೆಗೆ ತುತ್ತಾಗುತ್ತಾನೆ, ಬದುಕು ಮತ್ತಷ್ಟು ದುಸ್ತರವಾಗುತ್ತದೆ…. ಈ ಮಟ್ಟದ ಉಷ್ಣತೆಯಲ್ಲಿ ಮನುಷ್ಯ ಬದುಕಲು ಸಾಧ್ಯವಾಗುವುದಿಲ್ಲ
ಕೇವಲ ಮೂರು ದಶಕಗಳ ಹಿಂದೆ ಧ್ರುವ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಇದ್ದ ಬೃಹತ್ ನೀರ್ಗಲ್ಲುಗಳು ನಿಧಾನವಾಗಿ ಕರಗಿ ಹೋಗುತ್ತಿದ್ದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದವು. ಜಾಗತಿಕ ಹವಾಮಾನ ಇಲಾಖೆಯ ತಜ್ಞರು ಮತ್ತು ಪರಿಸರ ತಜ್ಞರು ಪರಿಸರ ಉಳಿಸುವ ಕುರಿತು, ಜೀವಸಂಕುಲಗಳ ರಕ್ಷಣೆಯ ಕುರಿತು ವ್ಯಾಪಕವಾಗಿ ಚರ್ಚೆ ಮಾಡುವ , ಪರಿಸರ ಉಳಿಸುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆದರೆ ಈ ಎಲ್ಲಾ ಕಾರ್ಯಕ್ರಮಗಳು ನೀರಿನ ಮೇಲಣ ಗುಳ್ಳೆಯಂತೆ ಎಂಬುದು ಸಾಬೀತಾಯಿತು. ಉರಿಯುವ ಕಾಳ್ಗಿಚ್ಚಿಗೆ ಒಂದೆರಡು ಹನಿ ಮಳೆ ಸುರಿದಂತೆ…. ಎಲ್ಲರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದು ಪ್ರಯೋಜನವಾಗಿದ್ದು ಮಾತ್ರ ಅತ್ಯಲ್ಪ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಪರಿಸರಕ್ಕೆ ಮತ್ತಷ್ಟು ಹಾನಿಯಾಗುತ್ತಿರುವುದು ಪ್ಲಾಸ್ಟಿಕ್ ತ್ಯಾಜ್ಯದಿಂದ. ದಿನವೊಂದಕ್ಕೆ ಇಡೀ ಜಗತ್ತಿನಲ್ಲಿ 20 ಲಕ್ಷ ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕು. ಕೆಲ ವರ್ಷಗಳ ಹಿಂದೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂಳಿದ ಜಾಗದಲ್ಲಿ ವಾಸವಾಗಿದ್ದ ಜನರ ಮಕ್ಕಳ ಅನುವಂಶೀಯ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿದ್ದು, ಇತ್ತೀಚಿಗೆ ಹುಟ್ಟಿದ ಮಕ್ಕಳು ದೈಹಿಕ ನ್ಯೂನತೆಗಳನ್ನು ಹೊಂದಿದ್ದಾರೆ ಎಂದರೆ ಪ್ಲಾಸ್ಟಿಕ್ ಮನುಕುಲಕ್ಕೆ ಮಾಡುವ ಹಾನಿಯನ್ನು ಊಹಿಸಿಕೊಳ್ಳಬಹುದು. ಪ್ಲಾಸ್ಟಿಕ್ ಬಳಕೆಯಿಂದ ಲಕ್ಷಾಂತರ ಮರಗಳು ಉಳಿದಿವೆ ಎಂಬುದು ನಿಜವಾಗಿದ್ದರೂ ಪ್ಲಾಸ್ಟಿಕ್ ನ ಪುನರ್ಬಳಕೆಯ ಸಾಧ್ಯತೆಗಳ ಬಗ್ಗೆ ಯಾವುದೇ ವೈಜ್ಞಾನಿಕ ಆವಿಷ್ಕಾರಗಳು ದೊಡ್ಡ ಪ್ರಮಾಣದಲ್ಲಿ ಆಗಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ. ಮಹಾನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬೆಟ್ಟಗಳು ನಿರ್ಮಾಣವಾಗಿದ್ದು ಇವುಗಳಿಂದ ಅನಾರೋಗ್ಯಕರವಾದ,ವಿಷಕಾರಿ ವಸ್ತುಗಳು ಉತ್ಪತ್ತಿಯಾಗುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯಗಳ ಈ ಬೃಹತ್ ಬೆಟ್ಟಗಳ ಮೇಲೆ ಹಾರಾಡುವ ಹಕ್ಕಿಗಳ ದೆಸೆಯಿಂದ ಎಷ್ಟೋ ಬಾರಿ ವಿಮಾನ ಅಪಘಾತಗಳ ಸಂಭವಕ್ಕೆ ಕಾರಣವಾಗಿವೆ.
ಪರಿಸರ ಹಾನಿಗೆ ಸಾವಿರಾರು ಕಾರಣಗಳಿವೆ ಆದರೆ ಅದನ್ನು ಉಳಿಸಿಕೊಳ್ಳಲು ನಾವು ಕೈಕೊಳ್ಳಬೇಕಾದ ಒಂದೇ ಒಂದು ಕಾರ್ಯವೆಂದರೆ… ಗಿಡಗಳನ್ನು ನೆಟ್ಟು ಪೋಷಿಸುವುದು ತನ್ಮೂಲಕ ಜೀವ ವೈವಿಧ್ಯಗಳ ರಕ್ಷಣೆ ಮಾಡುವುದು.
ಪರಿಸರ ರಕ್ಷಣೆಗೆ ಸರಪಳಿ ಕ್ರಿಯೆಯ ಮೊದಲ ಕೊಂಡಿ ನಾವಾಗಬೇಕು…. ಗಿಡಗಳನ್ನು ನೆಡುವ ಮೂಲಕ ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಬಹುದು ಜೀವ ವೈವಿಧ್ಯಗಳನ್ನು ರಕ್ಷಿಸಬಹುದು, ಸಾಮುದಾಯಿಕ ಆಸ್ತಿಗಳೆಂದು ಪರಿಗಣಿಸಿ ನಮ್ಮ ನೀರಿನ ಮೂಲಗಳನ್ನು ಸಂರಕ್ಷಿಸಬೇಕು.
ರೆಡ್ಯೂಸ್, ರೀ ಯೂಸ್ ಮತ್ತು ರಿಸೈಕಲ್ ಎಂಬ ಮೂರು ಪದಗಳನ್ನು ನಮ್ಮ ದೈನಂದಿನ ಬದುಕಿನ ಮಂತ್ರಗಳಾಗಿಸಬೇಕು.
ಮುಖ್ಯವಾಗಿ ಪ್ರಜ್ಞೆ ಇರಬೇಕಾಗಿರುವುದು ನಾವು ನಾಗರಿಕರಲ್ಲಿ. ನನ್ನ ಮನೆ ನನ್ನ ಊರು ನನ್ನ ಪರಿಸರ ನನ್ನ ಜವಾಬ್ದಾರಿ ಎಂಬ ಸಾಮುದಾಯಿಕ ಪ್ರಜ್ಞೆಯಿಂದ ಕಾರ್ಯ ಸಂಘಟಿತರಾಗಿ ಎಲ್ಲರೂ ಸೇರಿ ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ಸು ದೊರೆಯುತ್ತದೆ.
ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆಯನ್ನು ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಸಬೇಕು. ಸಾಧ್ಯವಾದಷ್ಟು ವಸ್ತುಗಳನ್ನು ಪುನರ್ ಬಳಕೆ ಮಾಡಬೇಕು ಪುನರ್ ಬಳಕೆ ಸಾಧ್ಯವಾಗುವ ವಸ್ತುಗಳನ್ನು ಹೆಚ್ಚು ಬಳಸಬೇಕು. ತನ್ಮೂಲಕ ನಮ್ಮ ಗ್ರಾಮವನ್ನು
ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಮುಂದೆ ಪರಿಸ್ಥಿತಿ ಗಂಭೀರವಾಗದಿರಲು ಭಾರತ ದೇಶಕ್ಕೆ ಐದು ನೂರು ಕೋಟಿ ಮರಗಳ ಅವಶ್ಯಕತೆ ಇದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಗಿಡ ಮರಗಳು ನಮ್ಮ ಬದುಕಿಗೆ ಜೀವದಾಯಿನಿಗಳು ಎಂಬುದನ್ನು ಅರಿತು ಪ್ರತಿ ಮನೆಯ ಮುಂದೆ ಒಂದು ಪುಟ್ಟ ತೋಟವನ್ನು ಮಾಡಿಕೊಂಡು ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ನಮ್ಮ ಕೈಲಾದಷ್ಟು ಉಳಿಸಿ ಬೆಳೆಸೋಣ
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
ವೀಣಾ ಹೇಮಂತ್ ಗೌಡ ಪಾಟೀಲ್,
ಅತ್ಯಂತ ಮಾಹಿತಿ ಪೂರ್ಣ ಬರಹ