ಏಕಾಂತ ಮತ್ತು ಒಂಟಿತನ…. ಒಂದು ಜಿಜ್ಞಾಸೆ-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

ಮತ್ತದೇ ಸಂಜೆ ಅದೇ ಏಕಾಂತ…. ಎಂಬ ಭಾವಗೀತೆ ಥಟ್ಟನೆ ನೆನಪಿಗೆ ಬರಬಹುದು.

 ಏಕಾಂತ ಎಂದರೆ….. ಮುಂಜಾನೆಯ ಹೊತ್ತಿನಲ್ಲಿ  ಮನೆಯ ಮುಂದಿನ ಪುಟ್ಟ ಹೂ ದೋಟದಲ್ಲಿ ಸೂರ್ಯೋದಯವಾಗುವುದನ್ನು ನೋಡುತ್ತಾ ಬಿಸಿಯಾದ ಚಹಾ ಸೇವನೆ ಮಾಡುವುದು.
 ಏಕಾಂತ ಎಂದರೆ ಸಮುದ್ರ ತೀರದ ಮರಳಿನಲ್ಲಿ ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು.
 ಏಕಾಂತ ಎಂದರೆ…ದೂರದಲ್ಲೆಲ್ಲೋ ಆಡುತ್ತಿರುವ ಮಕ್ಕಳ ಕಲರವ ಕೇಳುತ್ತಾ ಒಬ್ಬನೇ ಕುಳಿತಿರುವುದು.
 ಏಕಾಂತ ಎಂದರೆ  ಮನೆಯ ಬಾಲ್ಕನಿಯಲ್ಲಿ ಕುಳಿತು ನೆಚ್ಚಿನ ಪುಸ್ತಕ ಓದುವುದು.
 ಏಕಾಂತ ಎಂದರೆ ನೆಚ್ಚಿನ ಹಾಡನ್ನು ಕೇಳುತ್ತಾ,ಗುನುಗುತ್ತಾ ಕೆಲಸದಲ್ಲಿ ತೊಡಗಿಕೊಳ್ಳುವುದು,ಅಡುಗೆ ಮಾಡುವುದು.
ಏಕಾಂತ ಎಂದರೆ ನಮ್ಮ ಪ್ರೀತಿ ಪಾತ್ರರನ್ನು ನೆನೆದಾಗ ಮುಖದಲ್ಲಿ ಮೂಡುವ ಮುಗುಳ್ನಗೆಯನ್ನು ಆಸ್ವಾದಿಸುವುದು .
 ಏಕಾಂತವೆಂದರೆ ನನ್ನಿಚ್ಛೆಯ ಕೆಲಸದಲ್ಲಿ ಹಗಲಿರುಳು ತೊಡಗಿಕೊಂಡರೂ ದಣಿವಾಗದಿರುವುದು.
 ಏಕಾಂತ ಎಂದರೆ ನಮ್ಮೊಳಗಿನ ಧೇನಿಸುವಿಕೆ. ನಮ್ಮೊಳಗಿನ ನಾನು ಎಂಬ ಅಂತರಂಗವನ್ನು ತಟ್ಟಿ ಮಾತನಾಡಿಸುತ್ತಾ, ನೋವಿಗೆ  ಸಾಂತ್ವನವೀಯುತ್ತ,ತಪ್ಪಿದ್ದಲ್ಲಿ ತಿದ್ದುತ್ತಾ, ಸರಿ ತಪ್ಪುಗಳ ಚಿಂತನೆಗಳ ಮಂಥನ ಮಾಡಿ ಸುವಿಚಾರವೆಂಬ ಉತ್ಕೃಷ್ಟ ಬೆಣ್ಣೆಯನ್ನು ತೆಗೆಯುತ್ತಾ ನಮ್ಮನ್ನು ನಾವು ಪರಿವರ್ತನೆಯ ಹಾದಿಗೆ ಒಡ್ಡುವ ಪ್ರಯತ್ನ. ಏಕಾಂತ ಆತ್ಮ ನಿರೀಕ್ಷಣೆಯ ಮೂಲಕ ಆತ್ಮೋದ್ಧಾರಕ್ಕೆ ಕಾರಣವಾಗುತ್ತದೆ.
 ಏಕಾಂತ ಪರಮ ಪವಿತ್ರವಾದದ್ದು.

 ಏಕಾಂತ ಪರ್ವತಾರೋಹಣದಂತೆ ಏರುಮುಖದ ಹಾದಿ…. ಅದೆಷ್ಟೇ ಅಡೆತಡೆಗಳಿದ್ದರೂ ನಿಚ್ಚಳವಾದ ಪ್ರಗತಿ ಸಾಧ್ಯ.

ಆದರೆ ಒಂಟಿತನ ಏಕಾಂತವಲ್ಲ…. ಒಂಟಿತನಕ್ಕೂ ಏಕಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
 ಒಂಟಿತನ ನನಗೆ ಯಾರೂ ಇಲ್ಲ ಎಂಬ ಸಂಕಟ, ನೋವು, ಬೇಸರವನ್ನು ಉಂಟು ಮಾಡುವುದು.
 ಒಂಟಿತನ ಏನೆಲ್ಲವೂ ಇದ್ದು ಕೂಡ ಎಲ್ಲವನ್ನೂ ಕಳೆದುಕೊಂಡ ಭಾವ.
ಒಂಟಿತನ ಅಸಹನೀಯ.
ಒಂಟಿತನ ದುಶ್ಚಟಗಳಿಗೆ ಪ್ರೇರೇಪಣೆ.
 ಒಂಟಿತನ ಹಲವು ಬಾರಿ ತಪ್ಪು ದಾರಿಗೆಳಸುವ ಸಾಧನ,
 ನಾನು ಒಂಟಿ ಎಂಬ ಭಾವ ಮನಸ್ಸಿನ ಮೂಲೆಯಲ್ಲಿ ಖಾಲಿತನವನ್ನು ಹುಟ್ಟು ಹಾಕುತ್ತದೆ.
 ಮನುಷ್ಯ ಒಬ್ಬಂಟಿಯಾಗಿದ್ದಾಗ ಆತನಲ್ಲಿ ಅದುಮಿಟ್ಟ ಮನುಷ್ಯ ಸಹಜ ಕೆಟ್ಟತನಗಳು ಹೆಡೆಯೆತ್ತುವ ಸಮಯ.
 ಒಬ್ಬಂಟಿಯಾದ ನೀರವ ರಾತ್ರಿಗಳಲ್ಲಿ ಜನರು ನಿದ್ರೆ ಬಾರದೆ ಹೋದಾಗ ಅಂಗೈಯಲ್ಲಿರುವ ಪುಟ್ಟ ರಾಕ್ಷಸನ ಮೂಲಕ ಇತರರನ್ನು ಸಂಪರ್ಕಿಸುತ್ತಾರೆ. ಸಮಯ ಕಳೆಯುವ ಸಾಧನ…. ಸಮಯ ಸಾಧಕತನಕ್ಕೆ ಕಾರಣವಾಗುತ್ತದೆ.
 ಏನನ್ನೊ ಪಡೆಯುವ ಹಪಹಪಿಯಲ್ಲಿ ಗೊತ್ತಿಲ್ಲದವರಲ್ಲಿ ತನ್ನ ಕುರಿತು ಹೇಳುತ್ತಾ, ಅವರ ಬಗ್ಗೆ ಕೇಳುತ್ತಾ  ಇಲ್ಲದ ನಿರೀಕ್ಷೆಗಳನ್ನು ಹುಟ್ಟಿಸಿ ತಾನೂ ಹುಟ್ಟಿಸಿಕೊಂಡು ಅದರ ಅಮಲಿನಲ್ಲಿ ತೇಲಾಡುತ್ತಾ ತನ್ನನ್ನು ನಂಬಿದವರಿಗೆ ದ್ರೋಹ ಬಗೆಯುತ್ತಾನೆ. ಒಬ್ಬಂಟಿತನ ತಪ್ಪು ದಾರಿಗೆಳಸುತ್ತದೆ. ಒಬ್ಬಂಟಿತನ ಆತ್ಮ ಘಾತಕತನಕ್ಕೆ ಕಾರಣವಾಗುತ್ತದೆ.ಒಬ್ಬಂಟಿತನ ಸಂಕುಚಿತತೆಗೆ,
ಕೀಳರಿಮೆಗೆ ಕಾರಣವಾಗುತ್ತದೆ.
 ಒಬ್ಬಂಟಿತನ ಇಳಿಮುಖದ ಹಾದಿ….. ಅದೆಷ್ಟೇ ಅಡೆತಡೆಗಳು ಬಂದರೂ ಸಲೀಸಾಗಿ  ನಾವೇ ತೋಡಿಕೊಂಡ ಖೆಡ್ಡಾದಲ್ಲಿ ಬೀಳಬಹುದು.

 ಅಸಹನೀಯ  ಒಬ್ಬಂಟಿತನವನ್ನು ಏಕಾಂತವಾಗಿ ಪರಿವರ್ತಿಸುವ ಬಗೆ.

 ಒಳ್ಳೆಯ ಹವ್ಯಾಸಗಳು, ಉತ್ತಮ ಸ್ನೇಹಿತರು, ಪ್ರೇಮ ತುಂಬಿದ ಕುಟುಂಬ, ಅಪ್ಯಾಯಮಾನವಾದ ಮನೆಯ ವಾತಾವರಣ, ಹುಮ್ಮಸ್ಸು ತುಂಬಿಸುವ ಔದ್ಯೋಗಿಕ ಸವಾಲುಗಳು, ಸಂಬಂಧ ನಿರ್ವಹಣೆ,ಪರಿಸರ ಸ್ನೇಹಿ ಜೀವನಶೈಲಿ, ಪ್ರವಾಸ, ಪುಸ್ತಕ, ಒಳ್ಳೆಯ ಸಂಗೀತ ಮತ್ತು ಮನರಂಜನೆಗಳು ಒಬ್ಬಂಟಿತನವನ್ನು ಸಹನೀಯ ಏಕಾಂತವಾಗಿಸುತ್ತವೆ.
 ಶಿಸ್ತು, ಸಂಯಮ,ಪ್ರೇಮ, ಉನ್ನತ ಧ್ಯೇಯ, ಒಂದು ನಿರ್ಧರಿತ ಜೀವನ ಶೈಲಿ ನಮ್ಮ ಒಬ್ಬಂಟಿತನವನ್ನು ತಪ್ಪು ದಾರಿಗೆಳಸದಂತಹ  ಏಕಾಂತವಾಗಿಸುತ್ತದೆ.
 ಸಂಗಾತಿಯ ಜೊತೆಯಲ್ಲಿದ್ದು ಕೂಡ ಒಂದು ಸಹನೀಯ ಏಕಾಂತವನ್ನು ಹೊಂದಬಹುದು.
ಅಲ್ಲಿ ಕೇವಲ ಮನಸುಗಳ ಪಿಸುಮಾತು, ಅವ್ಯಕ್ತ ಪ್ರೀತಿ ಪರಸ್ಪರ ಬೆಸುಗೆಗೆ ಕಾರಣವಾಗುವ ಏಕಾಂತ ಅಸದೃಶವಾದುದು..

 ಕಾಗೆ ಕೋಗಿಲೆಗಳೆರಡು ಕಪ್ಪೆ…. ಆದರೆ ಅವುಗಳ ಗುಣ ವಿಭಿನ್ನ. ಅಂತೆಯೇ ಏಕಾಂತ ಮತ್ತು ಒಂಟಿತನಗಳು ಕೂಡ ಸಂಪೂರ್ಣ ವಿಭಿನ್ನ. ಏಕಾಂತವು ಬದುಕಿನ ಜಡತೆಯನ್ನು ತೊಡೆದು ಹಾಕುವ  ಜೀವನ್ಮುಖತೆಯ ಸಂಕೇತ.
 ಆದ್ದರಿಂದ ಸ್ನೇಹಿತರೆ, ಕಿತ್ತು ತಿನ್ನುವ ಒಬ್ಬಂಟಿತನವನ್ನು ದೂರವಿರಿಸಿ ಏಕಾಂತವನ್ನು ಆಲಂಗಿಸಿ. ಉತ್ತಮ ಬದುಕಿಗೆ ನಾಂದಿ ಹಾಡಿ.


One thought on “ಏಕಾಂತ ಮತ್ತು ಒಂಟಿತನ…. ಒಂದು ಜಿಜ್ಞಾಸೆ-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

Leave a Reply

Back To Top