ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಅಪ್ಪುಗೆಯ ಸಿಹಿ ನೋಟಕೆ ಬೆರಗಾಗಿ ತಪ್ತಳಾಗಿದ್ದೆ ಅಂದು
ಮುತ್ತಿನ ಮಂಪರಿನಲ್ಲಿ ಮೂಕಳಾಗಿ ಬೆಪ್ಪಳಾಗಿದ್ದೆ ಅಂದು
ಬರುವನೆಂದು ಕಾದು ಕಾದು ಕಣ್ಗೆಟ್ಟು ಆಸೆ ಬರಡಾಗಿದ್ದವು
ಮಾತಿನ ಹೊನಲಿನಲಿ ಪ್ರೀತಿ ಪದವಾಗಿ ಮರುಳಾಗಿದ್ದೆ ಅಂದು
ಸಾವಿರಾರು ಆಸೆಗಳು ಕುಡಿಯೊಡೆದು ಹಬ್ಬಿ ತಬ್ಬಿ ನಿಂತಿದ್ದವು
ಸ್ಪರ್ಶದ ಹರ್ಷದಲ್ಲಿ ಅದೆಕೋ ಹದವಾಗಿ ಚಕಿತಳಾಗಿದ್ದೆ ಅಂದು
ಹೂತಿಟ್ಟ ಬಯಕೆಗಳು ಹಸಿರಾಗಿ ಇಣುಕಿಣುಕಿ ನೆನಪಾಗಿದ್ದವು
ಸರಸದ ಸೋಗೆಯಲಿ ತುಸು ಮೃದುವಾಗಿ ಶರಣಾಗಿದ್ದೆ ಅಂದು
ಕಾಣದ ಕಡಲಿನಾಳಕ್ಕೆ ಇಳಿದಂತೆ ಕನಸುಗಳಂದು ಹಾಸಿದ್ದವು
ಸಲ್ಲಾಪದ ಸಿಹಿ ಸುಧೆಯಲಿ ಜೇನಂತಾಗಿ ಮೂಕಳಾಗಿದ್ದೆ ಅಂದು
ಗರಿಗೆದರಿದ ನವಿಲು ನರ್ತಿಸಿದಂತೆ ಬಯಕೆಗಳು ಕುಣಿದಿದ್ದವು
ಅನುರಾಗದ ಜಲಧಾರೆಯಲಿ ತೊರೆಯಾಗಿ ಮೌನಳಾಗಿದ್ದೆ ಅಂದು
ಅನುಳ ಮುಕ್ತಭಾವದ ಬಿಂದಿಗೆಯಲಿಹ ಹನಿಗಳು ತುಳುಕಿದ್ದವು
ಎದೆಬನದ ಹೊನ್ನ ನೆಲವಂದು ಹಸನಾಗಿ ಕಾತುರಳಾಗಿದ್ದೆ ಅಂದು
ಡಾ ಅನ್ನಪೂರ್ಣ ಹಿರೇಮಠ
Very nice
Very nice