ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು

ಡಾ ಸಾವಿತ್ರಿ ಕಮಲಾಪೂರ

ನಿನ್ನೆ ಜಿಗಿದ ಕಡಲ ಕಿನಾರೆಯ
ಕುದಿವ ಎಸರಿನಲಿ
ತೇಲಿ ಬಂದಿತ್ತು ಹೆಣ
ಅದೇಷ್ಟೋ ಜನ ಕಂಬನಿ
ಗರೆದರು

ಅನಾಥವಾಗಿ ಬಿದ್ದ ಹೆಣದ
ಮುಂದೆ ಮಮ್ಮಲ ಮರಗಿತು ಜನ
ಇವರವ್ವ ಇದ್ದರೆ ಹೀಗಾಗುತ್ತಿತ್ತೆ? ಪಾಪ ಎಂದರು ಹಲವರು

ಪಕ್ಕದಲ್ಲಿ ಗುಜು ಗುಜು
ಅದೇನೋ ? ಅಂತೆ !ಹಾಗಂತೆ !
ಹೀಗಂತೆ! ಅಂತಾರೆ
ಮದುವೆ ಆಗಿದ್ದರೆ
ಹೀಗಾಗುತ್ತಿರಲಿಲ್ಲವಂತೆ !

ಅದಾವ ನೌಕರಿ ಇತ್ತಂತೆ
ಹುಡುಗಿಗೆ
ನಿಶ್ಯಬ್ದ ಮೌನ ಹೆಣದ ಮುಂದೆ
ಬಾಯ ತೆರೆದು ನೋಡುವ ಜನ
ಬರೀ ಮೈ ಯಿಂದ ಮಲಗಿದ
ಅವಳ ಸತ್ತ ದೇಹದ ಮುಂದೆ

ಕಿತ್ತು ತಿನ್ನುವ ಕಣ್ಣು ತೀಟೆ ತೀರಿಸಿಕೊಂಡಿತು ಕಣ್ಣೊಳಗೆ
ಹೌಹಾರಿದೆ
ಒಂಟಿ ಪಯಣದ ಮೂರು ಗಾಲಿನ
ಚಕ್ರದಲ್ಲಿ ಹುಚ್ಚಿಯಂತೆ ಚೀರಿದೆ

ಹೊರ ಚಾಚಿದ ಅವಳ ಕಾಲುಗಳು
ಈಗ ಅನಾಥವಾಗಿವೆ
ಹೆತ್ತ ತಾಯಿ ಹೌಹಾರಿ ಮೂಲೆ ಸೇರಿದ್ದಾಳೆ
ಅಪ್ಪ ಜೀವಂತ ಶವವಾಗಿದ್ದಾನೆ
ಮಾತಿಲ್ಲ ಕಥೆಯಿಲ್ಲ
ಅಣ್ಣ ತಮ್ಮ ಅಕ್ಕಂದಿರ ರೋಧನ
ಮುಗಿಲು ಮೂಟ್ಟಿದೆ

ಮುಂದೆ ಓಡುವ ಕಾರಿನಲ್ಲಿ ನಾನೊಬ್ಬಳೇ
ಮಾತು ಮೂಕವಾಗಿದೆ
ಶವದ ಕಾರು ಓಡುತ್ತಿದೆ
ಶವವಾಗಿ ಓಡುವ ಓ ಕಾರೇ
ಕಾರಣವೇನು ? ತಿಳಿಯಬಾರದೇ ?

ಥಳಮಳಿಸುತ್ತಿದೆ ಧ್ವನಿ
ಕಟ್ಟಿದ ಚಟ್ಟದಲ್ಲೇ ಕೈ ಹಿಡಿದು
ಎಳೆದಂತೆ ನಾನೂ ಶವವಾದೆ !
ಯಾರೀ ? ಈ ಹುಡುಗಿ
ಇಷ್ಟೊಂದು ರೋಧನ

ಬಿಡ್ರಿ ನನ್ನ ಬಿಡ್ರಿ
ಜಿಗಿಯುವೆ !ನಾನೂ ಇದೇ ಕಿಚ್ಚಿನಲ್ಲಿ
ಉಕ್ಕಿ ಹರಿಯುವ ಈ ಕೆಂಡದುಂಡೆ
ಆದರೂ ಉತ್ತರಿಸಲೀ
ಎದ್ದೇಳು ಗೆಳತಿ ತಡವಾಗುತ್ತಿದೆ ಶಾಲೆ
ಕರೆಯುತ್ತಿದೆ ಗಂಟೆ

ಫಟಾರ್ ಅಂತಾ ಕೊಟ್ಟ
ಅವ್ವ ನ ಏಟು ಮನವ ತಿದ್ದಿದ ಅಪ್ಪ ಮುಂದೆ ಬಂದಿದ್ದಾರೆ
ಕಲಿತ ವಿದ್ಯೆ ಎಲ್ಲಿ ಹೋಯಿತು ?
ಕಲಿಸುವ ವೃತ್ತಿ ಎಲ್ಲಿ ಹೋಯಿತು ?
ಕೈ ಹಿಡಿದು ಕರೆತಂದ ಜೀವಂತ ಹೆಣ
ಈಗ ತೇಲಿ ಬಂದಿದೆ

ಉಸಿರಾದ ನನ್ನೊಲವ ಗೆಳತಿ
ಕುಕ್ಕಿ ಕೆಡವಿದ ಕಣ್ಣುಗಳು
ಹುಡುಕುತ್ತಿರುವೆ ಸತ್ತ ಶವವಾಗಿ
ಅನಂತ ಬಯಲಿನಲಿ
ಬಯಲಾದ ಬಾಲೆಬಳಿ ಬಾರೆ ಚೆಲುವೆ


ಡಾ ಸಾವಿತ್ರಿ ಕಮಲಾಪೂರ

One thought on “ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು

Leave a Reply

Back To Top