ಶುಭಲಕ್ಷ್ಮಿ ಆರ್ ನಾಯಕರವರ ಕವಿತೆ-ಮಳೆಯು ಬಾರದೆ..

ಚಾತಕ ಹಕ್ಕಿಯ ತೆರದಲಿ ಕಾದಿದೆ
ಧರೆಯುತಂಪಿನ ಹನಿಗಾಗಿ
ಹಗುರದ ಗಾಳಿಗೆ ಸರಿದಿದೆ ಮೋಡವು
ಮಳೆಯನು ನೀಡದೆ ಇಳೆಗಾಗಿ //೧//

ಮರಗಳು ಇಲ್ಲದೆ ಗಿಡಗಳು ಇಲ್ಲದೆ
ದಾಹವ ತೀರಿಸೆ ನೀರಿಲ್ಲ
ಕೆರೆಗಳು ಬತ್ತಿ ಕೊಳಗಳು ಒಣಗಿ
ಭೂಮಿಯ ತಾಪವು ಬಿಟ್ಟಿಲ್ಲ//೨//

ಬೆವರಿನ ಹನಿಗಳೇ ಮಳೆಯ ರೂಪದಲಿ
ಮೈಯಲಿ ಬಿಸಿಯ ಚೆಲ್ಲಿಹವು
ತಾಪಕೆ ನಲುಗಿದ ಜಲಚರ ಜೀವಿಗಳು
ಜಲವಿರದೆ ನಾಶ ಹೊಂದಿಹವು//೩//

ತರುಗಳ ಕಡಿದು ನಾಶವ ಮಾಡಿದ
ಪಾಪವು ಬದುಕನು ಸುಡುತಿಹುದು
ದುಡ್ಡಿನ ಆಸೆಗೆ ಪರಿಸರ ಕೆಡಿಸಿ
ಕಂಬನಿ ಧಾರೆ ಹರಿದಿಹುದು//೪//

ಪಾಳು ಬಿದ್ದಿದೆ ಭೂಮಿಯು ಎಲ್ಲೆಡೆ
ಹಸಿರನು ಬೆಳಸುವ ಮನಸಿರದೆ
ಮಣ್ಣಿನ ಮೋಹವು ಕಡಿಮೆ ಆಗಲು
ಕಾಂಕ್ರೀಟು ನೆಲದಲಿ ಕಾಣುತಿದೆ//೫//

ಬಾರದೆ ಮಳೆಯು ಇಳೆಯಿದು ಬೆಂಗಾಡು
ಮಸಣದ ಛಾಯೆ ಬಂದಿಹುದೆ?
ಕಾರಿದೆ ಉರಿಯಲಿ ಬೆಂಕಿಯ ಜ್ವಾಲೆಯು
ದಾವಾನಲವಾಗಿ ಸುಡಬಹುದೆ?//೬//


Leave a Reply

Back To Top