ಅರುಣಾ ನರೇಂದ್ರ ಅವರ ಗಜಲ್

ನಿನ್ನನ್ನು ತಿಳಿಯಬೇಕೆಂದಷ್ಟು ನನಗೆ ಬಲು ತೊಡಕಾಗಿ ಕಾಡುವಿ
ಎಷ್ಟು ಮೊಗೆದಷ್ಟು ಮತ್ತೆ ಮತ್ತೆ ತುಂಬಿದ ಕಡಲಾಗಿ ಕಾಡುವಿ

ಮಧ್ಯರಾತ್ರಿ ಮಗ ಮಡದಿಯ ಬಿಟ್ಟು ನೀನೇನೊ ಎದ್ದು ಹೋದೆ
ನೀ ಹೋದ ದಾರಿಗುಂಟ ಅದೆಷ್ಟು ಅಪಾರ್ಥಗಳ ಸರಕಾಗಿ ಕಾಡುವಿ

ಅರಿವು ಅರಸಿ ಹೊರಟವರಿಗೆಲ್ಲ ನೀನು ಬಲು ಕಾಡುತ್ತಲೇ ಇರುವಿ
ಬೋಧಿಯ ನೆರಳು ಎದೆಯ ಪ್ರೀತಿ ಜಗ ಉಳಿಸುವ ಮಾತಾಗಿ ಕಾಡುವಿ

ಜನರ ನೋವು ಸಂಕಟ ರೋಗ ರುಜಿನ ನಿನ್ನನ್ನು ಅದೆಷ್ಟು ಬಾಧಿಸಿತು
ಅರಿವಾಗಿ ಮರೆವಾಗಿ ಮತ್ತೆ ಬರಿ ಮೂರ್ತಿಯಾಗಿ ಕಾಡುವಿ

ಬುದ್ದ ನಿನ್ನ ಕರುಣೆಯ ಮಹಾಬೆಳಕು ಅರುಣಾಳ ಮನ ಬೆಳಗುತ್ತಿದೆ ನಿಜ
ಬಂದೂಕು ಬಿಳಿ ಪಾರಿವಾಳದ ನಡುವೆ ಮಾಸದ ನಗುವಾಗಿ ಕಾಡುವಿ

One thought on “ಅರುಣಾ ನರೇಂದ್ರ ಅವರ ಗಜಲ್

Leave a Reply

Back To Top