ಹನಮಂತ ಸೋಮನಕಟ್ಟಿಅವರ ಕವಿತೆ-ನೊಂದ ಅಂಗಿ

ಊರ ಹಬ್ಬಕ್ಕೆಂದು
ಹೊಲಿಸಿದ ಅಂಗಿ
ಹೊಲಿಗೆ ಯಂತ್ರದ ಬಾಯಿಗೆ ಸಿಕ್ಕು
ಎಲ್ಲೆಂದರಲ್ಲಿ ಸೂಜಿ ಒಳ ಹೊಕ್ಕು
ಸುಕ್ಕುಗಟ್ಟಿ ನೆಟ್ಟಗೆ ಎಳೆದರು ನಿಲ್ಲದಾಗಿತ್ತು

ದರ್ಜಿಯ ಅಧೀನದಲ್ಲಿ
ತರಬೇತಿ ಪಡೆಯುತ್ತಿದ್ದ ಉಪ ದರ್ಜಿಯ ಕೈಲಿ
ತಯಾರುಗೊಂಡ ಹೊಸ ಕನಸಿನ ಅಂಗಿ
ವಾರಕ್ಕೊಮ್ಮೆ ಸಾಣೆ ಹಿಡಿಸಿ
ಹರಿತವಾದ ಕತ್ತರಿಯ ಬಾಯಲ್ಲಿ ನಲುಗಿ
ಸಿಕ್ಕ ಕಡೆಯಲ್ಲೆಲ್ಲ ಗಾಯಗೊಂಡು ತೇಪೆ ಹಚ್ಚಿಸಿಕೊಂಡು
ಮನೆ ಬಿಟ್ಟುಬರುವಾಗಲೇ ನೊಂದು ಅಂದಗೆಟ್ಟಿತ್ತು

ಕೈತೋಳುಗಳು ಪರ್ವತದಂತೆ ಏರುಪೇರು
ಎದೆಯ ಮೇಲಿನ ಜೇಬು
ಪೂರ್ವ ಪಶ್ಚಿಮ ಉತ್ತರದೆಡೆಗೆ ಬಿಗಿಯಾಗಿ
ದಕ್ಷಿಣಕ್ಕೆ ದ್ವಾರ ಬಾಗಿಲಿನಂತೆ ತೆರೆದುಕೊಂಡು
ಕೈಯಿಂದ ಕಾಸಿಡುವ ಕಡೆ ಕೋಟೆಯ ಬಾಗಿಲಂತೆ
ಬಿಗಿಯಾಗಿ ಬಂದ್ ಮಾಡಿ
ತರಬೇತಿ ದರ್ಜಿಯ ಕಲಿಕೆಗೆ ಮಾದರಿಯಾಗಿ
ಎಡಬಲ ಕಂಕುಳಲ್ಲಿ ಗವಾಕ್ಷಿ ತೆರೆದು
ಗಾಳಿ ಬಂದು ಹೋಗಲು ಕಮಾನು ಬಿಟ್ಟಂತಿತ್ತು

ಕತ್ತಿನ ಪಟ್ಟಿಯಂತೂ
ಆಕಾರದಲ್ಲಿ ಶ್ರೀಲಂಕಾ ದೇಶದ ಭೂ ವಿಸ್ತೀರ್ಣ ಸೂಚಿಸುವ ನಕಾಶೆಯ ಆಕಾರಕ್ಕೆ ತಕ್ಕಂತೆ ಅಲ್ಲದಿದ್ದರೂ
ಕುತ್ತಿಗೆಯ ಸುತ್ತಳತೆ ಹೆಚ್ಚು ಕಡಿಮೆ ರಾವಣೂರಿನ
ಪ್ರತಿರೂಪವೆಂಬಂತೆ ನೋಡುಗರಿಗೆ ಗುರುತು ಹಿಡಿಯುವಂತಿತ್ತು

ತೋಳಿನ ತುದಿ
ಮೂಲೆ ಮೂಲೆಗೊಂದು ಗುರುತಿಗಿಟ್ಟಂತೆ
ಬುಡ್ಡಿ ಇಟ್ಟು ಹೊಲೆಯುವುದನ್ನೇ
ಮರೆತ ತೂತುಗಳು ಬೆಕ್ಕಿನ ಕಣ್ಣಂತೆ ಕೆಣಕುತಿದ್ದವು

ಏರಿಳಿತದ ಭುಜವಂತೂ ಬೇಜಾರಿಲ್ಲದೆ
ನಡೆಯುವಾಗ ಕುಣಿತದಲ್ಲಿ
ನಾ ಮುಂದು ತಾ ಮುಂದೆಂದೂ
ತರಾವರಿ ನೃತ್ಯ ಮಾಡಿ ನೋಡುವವರಿಗೆ
ನಗೆ ತರಿಸಿ ನೆಲ ಗುದ್ದುವಂತೆ ಮಾಡುತ್ತಿದ್ದವು

ಅಂಗಿಯ ಗುಂಗಿನಲಿ
ಹೆಂಗೆಂಗೋ ಕುಣಿದಾಡಿದ ಮೊಮ್ಮಗನ
ದೇಹದ ಪಲ್ಲಕ್ಕಿ ಏರಿದ ನವತಾರೆಯಂತ ಅಂಗಿಗೆ
ಅರವಳಿಕೆ ಮದ್ದು ನೀಡದೆ
ಲೆಕ್ಕವಿಲ್ಲದಷ್ಟು ಉಚಿತ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು

ಅಂಗಿಯ ಮೇಲೆಲ್ಲ ಶಸ್ತ್ರ ಚಿಕಿತ್ಸೆಯ ಜಾಗ
ಗಾಯದ ಗುರುತಿನಂತೆ ಕಂಡರೂ
ಒಮ್ಮೊಮ್ಮೆ ನಕಾಶೆಯಲ್ಲಿ ಬೇರೆ ಬೇರೆ ಬಣ್ಣಗಳಿಂದ
ಗುರುತು ಮಾಡಿದ ಜಿಲ್ಲೆ ರಾಜ್ಯ ದೇಶ ಖಂಡಗಳ
ಮುಖವನ್ನೇ ಹೋಲುತ್ತಿತ್ತು

ಜಾತ್ರೆಯ ಸಡಗರದಲ್ಲಿದ್ದ ಊರ ಬೀದಿಯಲ್ಲಿ
ಮಿಂಚು ಮಿಂಚಾಗಿ ಜಾತ್ರೆಯ ಜನರ ಮಧ್ಯೆ
ನಡೆಯುವ ನಡಿಗೆಯೇ ನವನವಿನವಾಗಿತ್ತು

ಹೆಜ್ಜೆ ಹೆಜ್ಜೆಗೂ ಸಾಗುವಾಗ
ಎಡಬಲದಿ ಜಗ್ಗಿ
ಕುತ್ತಿಗೆಯವರೆಗೆ ನೀಟಾಗಿ ಸೇಟೆಯಿಸಿ
ಅಂಗಿಯ ಮೇಲೆ ಕೆಳಗೆ ಸರಿಮಾಡಿ
ಬುಡ್ಡಿ ಸಿಗಿಸಲು ಕತ್ತರಿಸಿದ ಕಣಿವೆಯಾಕಾರದ ಖಾಜಿಯಲ್ಲಿ
ಆಚೀಚೆ ಮಾಡಿ ಬುಡ್ಡಿ ಒತ್ತಿದರು
ಅರ್ಧ ಚಂದಿರನಂತೆ ಆಕಾರ ಹೊಂದಿ
ಅರ್ಧಕರ್ಧ ಹೊರಗುಳಿಯತಿತ್ತು

ಮೇಲಿಂದ ಕೆಳಗೆ ಕೆಳಗಿಂದ ಮೇಲೆ
ಚುಂಗು ಒಟ್ಟಿಗೆ ಮಾಡಿ
ಬುಡ್ಡಿ ಹಾಕಿದರು ಏರುಪೇರಾಗಿ
ಅವಮಾನ ಮಾಡುವಂತೆ ನಕ್ಕಾಂತಾಗುತ್ತಿತ್ತು
ಅದೆಷ್ಟೋ ವರುಷದ ಹೊಸ ಬಸ್ಸೆರಟಿನ ಆಸೆ
ತರಬೇತಿ ದರ್ಜಿಯ ಕೈಲೆ ಹಾಡು ಹಾಗಲೇ
ಹತ್ಯೆಯಾಗಿ ತೊಡಲು ಬಾರದಂತಾಗಿ
ಕೌದಿಯ ಕಚ್ಚಾ ವಸ್ತುವಿನಂತೆ
ಮನೆಯ ಲ್ಯಾವಿ ಗಂಟಿನ ಜೊತೆ ಮಿಲನ ಹೊಂದಿತ್ತು


6 thoughts on “ಹನಮಂತ ಸೋಮನಕಟ್ಟಿಅವರ ಕವಿತೆ-ನೊಂದ ಅಂಗಿ

  1. ಹಣಮಂತ ಸೋಮನಕಟ್ಟಿ ಅವರ ಕವಿತೆ ತುಂಬಾ ಚೆನ್ನಾಗಿದೆ ಸರ್. ಅಂಗಿಯ ಹಿಂದಿನ ಕಥೆ ಮತ್ತು ವೆಥ್ಯೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ

    1. ಅಂಗಿಯ ಕಥೆ ಹಳೆಯ ನೆನಪು ತುಂಬಾ ಅಧ್ಬುತವಾಗಿದೆ ಸಾರ್

  2. ದರ್ಜಿಯ ದರ್ಜೆಯ ಸ್ಥಾನಮಾನ ನೊಂದ ಅಂಗಿಯ ಬಿಗುಮಾನ
    ಅದ್ಭುತ ಸಾಲುಗಳು ಸರ್

    Sripad Algudkar ✍️

Leave a Reply

Back To Top