ಅನುರಾಧಾ ರಾಜೀವ್ ಸುರತ್ಕಲ್-ಗಝಲ್

ಮುತ್ತಿನ ಮಣಿಗಳ ಎರಚುತ ಬಾನಲಿ
ಚಿತ್ತಾರವ ಮೂಡಿಸಿದಂತೆ
ಬಿತ್ತುತ ಧರೆಯಲಿ ಒಲವಿನ ಸಿಂಚನ
ಹನಿಯಾಗಿ ಕೂಡಿಸಿದಂತೆ

ವರುಣನು ಬಂದನೇ ಮುನಿಸ ತೊರೆದು
ಇಳೆಯೊಡನೆ ಸ್ನೇಹದಿಂದಿರಲು
ಕರುಣೆಯ ತೋರಿಸಿ ಮಳೆಯನು ಸುರಿಸಿ
ಪ್ರೇಮವ ಹಾಡಿಸಿದಂತೆ

ಸರಿದು ಕಾರ್ಮೋಡಗಳು ಕರಗಿ ನೀರಾಗಿ
ತೊಟ್ಟಿಕ್ಕಿದೆ ಧಾರೆಯಾಗಿ
ವರ್ಷಕೆ ನೆನೆಯಲು ಬಿಡದೆ ಸನಿಹದಲಿ
ಕೊಡೆಯ ಬಿಡಿಸಿದಂತೆ

ಮುಂಗಾರು ನೀಡಿದೆ ತಂಪಿನ ಅನುಭೂತಿ
ತನುವಿಗೆ ಕಚಗುಳಿಯಿಡುತ
ಸಂಗಮದಿ ಪ್ರಕೃತಿ ನಲಿಯುತ ಉದಯ
ರಾಗವ ನುಡಿಸಿದಂತೆ

ಹೊಳೆದಳು ಹಸಿರು ಚಿಗುರಲಿ ನಳನಳಿಸಿ
ಸಾರ್ಥಕತೆ ಪಡೆದು
ಪುಳಕಿತ ಮನದಲಿ ರಾಧೆಯ ಭಾವಕೆ
ಮಲ್ಲಿಗೆ ಮುಡಿಸಿದಂತೆ


One thought on “ಅನುರಾಧಾ ರಾಜೀವ್ ಸುರತ್ಕಲ್-ಗಝಲ್

  1. ಅದ್ಭುತ ಸುಂದರ ಗಝಲ ಮುಂಗಾರಿನ ಕಂಪು ಸುರಿವ ಮಳೆಯ ಸಿಂಚನ ಗಝಲ್

    Sripad Algudkar ✍️

Leave a Reply

Back To Top