ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಬುದ್ಧ ನಕ್ಕ
ಮಧ್ಯರಾತ್ರಿಯಲ್ಲಿ ನಾನು ಎದ್ದೆ
ದಿನವಿಡೀ ದಣಿದ ಮನಕೆ
ಶಾಂತಿ ನೆಮ್ಮದಿ ಅರಸುತಿದ್ದೆ
ಜಗವ ಗೆದ್ದ ಬುದ್ಧನ ನೆನಸಿದೆ
ಬುದ್ಧ ನಗುತ ಎದುರಿಗೆ ನಿಂತಿದ್ದ
ಬಾ ಕಂದಾ ನನ್ನ ಜೊತೆಗೆ ಎಂದ
ಬೆಳಕಿನ ಪುತ್ಥಳಿಯಂತಿದ್ದ ಅವನ
ಕೈ ಹಿಡಿಯಲು ತಡವರಿಸಿದೆ
ಗಂಡ ಮಕ್ಕಳು ಮಲಗಿದ್ದಾರೆ
ಅವರಿಗೆ ತಿಳಿಸದೆ ಹೇಗೆ ಬರಲಿ
ಮುಂಜಾನೆದ್ದು ಡಬ್ಬಿ ಕಟ್ಟಬೇಕು
ನಾನು ಆಫೀಸಿಗೆ ಹೋಗಬೇಕು
ಮಾವನಿಗೆ ಮಾತ್ರೆ ಕೊಡಬೇಕು
ಅತ್ತೆಗೆ ಮಾಲಿಶ್ ಮಾಡಬೇಕು
ಎದ್ದ ತಕ್ಷಣ ಗಂಡನಿಗೆ ಚಹಾ ಬೇಕು
ಬುದ್ಧ ನೀನೇನೋ ಮಹಾತ್ಮಾ
ಗಂಡಸು ನಿಶ್ಚಿಂತ ಪುರುಷ
ನನ್ನಂತೆ ಜವಾಬ್ದಾರಿ ನಿನಗಿಲ್ಲ
ಆಸೆಗಳೇ ದುಃಖಕ್ಕೆ ಮೂಲವೆಂದೆ
ಆಸೆ ಬಯಕೆಗಳಿಲ್ಲದ ಬದುಕಿಲ್ಲ
ಸಂಸಾರ ಗೆದ್ದವರೇ ಜಾಣರಲ್ಲವೆ
ಆಗ ಬುದ್ಧ ಕರುಣೆಯಿಂದ ನಕ್ಕ
ಆಗಲಿ ಮಗು ನೀನು ಗೆದ್ದು ಬಾ
ನಾನು ನಿನಗಾಗಿ ಕಾಯುವೆನೆಂದ
ಅನ್ನಪೂರ್ಣ ಸು ಸಕ್ರೋಜಿ ಪುಣೆ
Superb mam
Savita Deshmukh
Superb