ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಬುಧ್ಧನ ಒಡಲು

ಒಡಲೋ ಪ್ರೇಮದ ಕಡಲೋ
ಮೊಗೆದಷ್ಟು ಜಿನುಗುವ ಒರತೆ

ಯುಗ ಯುಗಗಳಿಗೂ ಸಿಂಚನ
ಮಾತೃ ಹೃದಯದ ಆಲಿಂಗನ
ಪರಿಕಿಸು ನಿರುಕಿಸು ಕಣ್ಮಿಟುಕಿಸು
ಆಳಕ್ಕೆ ಸಿಗದ ಆರ್ದ್ರತೆ
ಮೂಕ ವಿಸ್ಮಿತ ನೆನೆದರೆ ದ್ರವಿಭೂತ

ಸಿಧ್ಧಿ ಹೇತು ನಟ್ಟಿರುಳ ನಡು ರಾತ್ರಿ
ಸುಖ ಸುಪ್ಪತ್ತಿಗೆ ಬೆನ್ನುಮಾಡಿ
ಮಹಲು ತೊರೆದ ಸ್ವಾಮಿಗೆ ಮಹಾಸಿದ್ಧಿ
ನೂರೆಂಟು ಪ್ರಶ್ನೆ ಶಂಕೆ ಧುತ್ಕಾರಕೆ
ಮೌನ ಒಂದೇ ಉತ್ತರ

ಕತ್ತಿ ಝಳಪಿಸಿ ಗತ್ತಿನಲಿ ಮೆರೆದವರು
ಮಾರಣಹೋಮ ನಡೆಸಿ
ಮಾನವತೆಯ ಮರೆತವರು
ಅಹಮಿಕೆಯ ಸಾಮ್ರಾಜ್ಯದಿ
ಅವಿತು ಅಟ್ಟಹಾಸ ತೋರಿದವರು
ಮಂಡಿಯೂರಿದರು ಪ್ರೇಮ ಬಿಕ್ಕುವಿನ ಮುಂದೆ

ತಲೆಬಾಗಿ ಬಂದು ಗೌರವದಿ ನಿಂದು
ಪೂಜ್ಯ ಭಾವದಿ ಶರಣಾದವರಿಗೆ
ಸದಾ ಪ್ರೇಮ ಬುಗ್ಗೆಯ ಪಾನಾಮೃತ
ಬುದ್ಧನ ಒಡಲು


Leave a Reply

Back To Top