“ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ”-ಮೇಘ ರಾಮದಾಸ್‌ ಜಿ

ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ ಎಲ್ಲಾ ಮಾಹಾನ್‌ ವ್ಯಕ್ತಿಗಳೂ ಹೇಳಿರುವುದು ಇದನ್ನೇ. ಶಾಂತಿಧೂತ ಎಂದೇ ಕರೆಸಿಕೊಳ್ಳುವ ಭಗವಾನ್‌ ಗೌತಮ ಬುದ್ಧ ಹೇಳಿರುವ ಮೈತ್ರಿಭಾವವೂ ಸಹಾ ಇದ್ದನ್ನೇ ಸಾರುತ್ತದೆ. ಎಲ್ಲಾ ಮನುಷ್ಯರು ಒಂದೇ, ಯಾವುದೇ ವಿಧದ ಅಸಮಾನತೆ ಸಲ್ಲದು, ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಬೇಕು, ಆಗ ಮಾತ್ರ ಕನಸಿನ ಸಮಸಮಾಜವನ್ನು ನಿರ್ಮಿಸಲು ಸಾಧ್ಯವೆಂಬುದು ಅವರೆಲ್ಲರ ಭಾವನೆಯಾಗಿತ್ತು. ಇದನ್ನು ತಿಳಿಸುವ ಮಾರ್ಗವೇ ನಿಜವಾದ ಧಮ್ಮ ಎಂದು ಅವರೆಲ್ಲರು ನಂಬಿದ್ದರು. ಆದರೆ ಇಂದು ’ಧಮ್ಮ’ ಮನುಜರನ್ನು ಪ್ರೀತಿಯ ಭಾವದಲ್ಲಿ ಸೇರಿಸಿ ಒಂದಾಗಿ ಇರಿಸುವ ಬದಲಿಗೆ ಪ್ರತಿಷ್ಠೆಯಾಗಿ, ರಾಜಕೀಯ ದಾಳವಾಗಿ, ಉಳ್ಳವರ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು.  
ಇಂಥ ಸಮಾಜ ವ್ಯವಸ್ಥೆಯನ್ನು ಸದ್ಧಮ್ಮ ಒಪ್ಪುವುದಿಲ್ಲ. ಮನುಷ್ಯರ ನಡುವೆ ಸಮಾನತೆಯನ್ನು ಹೆಚ್ಚಿಸುವುದೇ ಸದ್ಧಮ್ಮ ಎಂದು ಬುದ್ಧ ಹೇಳುತ್ತಾರೆ. ಇಲ್ಲವಾದಲ್ಲಿ ಆ ಧಮ್ಮ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಅಂದು ಬುದ್ಧ ಹೇಳಿದ ಈ ಮಾತು ಇಂದಿನ ವಾಸ್ತವತೆಗೂ ಸಹಾ ಅಕ್ಷರಸಃ ಹೊಂದಿಕೊಳ್ಳುತ್ತದೆ. ಪ್ರಸ್ತುತ ದೇಶದಲ್ಲಿ ಧಮ್ಮದ ಹೆಸರಲ್ಲಿ ಆಗುತ್ತಿರುವ ನೀಚ ಕೃತ್ಯಗಳು ಧಮ್ಮದ ಮಹತ್ವವನ್ನೇ ಕಳೆದು ಹಾಕುತ್ತಿವೆ. ಈಗ ನಡೆಯುತ್ತಿರುವ ಹಲವು ಮನುಷ್ಯತ್ವ ಹೀನ ಕಾರ್ಯಗಳನ್ನು ಬುದ್ಧ ಅಂದೇ ಖಂಡಿಸಿದ್ದರು. ಇಂತಹ ಕೃತ್ಯಗಳಿಗೆ ಬೆಂಬಲ ನೀಡುವ ಧಮ್ಮ ಸದ್ಧಮ್ಮ ಅಲ್ಲ ಎನ್ನುವ ವಿವೇಕದ ಆಲೋಚನೆಯನ್ನು ಬುದ್ಧ ತನ್ನ ಸಮಯದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಅರ್ಥೈಸಿದ್ದಾರೆ. ಆದರೆ ನಮ್ಮ ಈಗಿನ ಮನುಕುಲ ಕೇವಲ ಒಣಪ್ರತಿಷ್ಠೆ, ಅಹಂಕಾರ, ಸಣ್ಣತನ, ಜಡತ್ವ, ಅಂಧಭಕ್ತಿಯಿಂದ ಸಮಾಜದ ಸ್ವಾಸ್ತ್ಯವನ್ನೇ ಹಾಳುಮಾಡುತ್ತಿದೆ.
ನಮ್ಮದು ವಿವಿಧತೆಯಲ್ಲಿ ಏಕತೆಯಿಂದ ಒಂದಾಗಿ ಸಹಬಾಳ್ವೆ ನಡೆಸುತ್ತಿರುವ ದೇಶ. ಎಲ್ಲರೂ ಬಂಧುಗಳಂತೆ ಭಾರತವೆಂಬ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿರುವುದೇ ದೇಶದ ದೊಡ್ಡ ಘನತೆಯ ವಿಚಾರ. ಆದರೆ ಇಂದು ಎಲ್ಲೋ ಕೆಲವು ಕೆಟ್ಟ ಮನಸ್ಸುಗಳು ನಮ್ಮ ಮನೆಯ (ಭಾರತ) ಅಡಿಪಾಯಕ್ಕೆ ಗೆದ್ದಲು ಹಿಡಿಸುವ ಕೆಲಸ ಮಾಡುತ್ತಿವೆ. ಧಮ್ಮ, ದೇವರುಗಳ ಹೆಸರಿನಲ್ಲಿ ಒಡಕು ಮೂಡಿಸುವ ಹುನ್ನಾರ ಮಾಡುತ್ತಿದ್ದಾರೆ. ಒಂದು ಧಮ್ಮ ಶ್ರೇಷ್ಠ, ಅದೊಂದೇ ಭಾರತದ ಶಕ್ತಿ ಎಂಬ ಭ್ರಮೆಯನ್ನು ಜನರ ತಲೆಯಲ್ಲಿ ತುಂಬಿ, ವಿವಿಧ ಧಮ್ಮಗಳ ಜನರ ನಡುವಿನ ಬಾಂಧವ್ಯವನ್ನು ಒಡೆದು ಹಾಕಲಾಗುತ್ತಿದೆ. ಆದರೆ ಬುದ್ಧನ ಧಮ್ಮವೇ ಬೇರೆ. ಎಲ್ಲಾ ಮುನುಷ್ಯರನ್ನು ಒಂದೇ ಎಂದು ತಿಳಿಸುವುದೇ ಸದ್ಧಮ್ಮ. ಎಲ್ಲರೂ ಮೈತ್ರಿಭಾವದಿಂದ ಇರಬೇಕು ಎಂದು ಬುದ್ಧ ಹೇಳುತ್ತಾರೆ.
ಬುದ್ಧನ ಭೋಧನೆಗಳಲ್ಲಿ ಗರಿಷ್ಠ ಮಹತ್ವ ಪಡೆದಿರುವುದು ಈ ಮೈತ್ರಿಭಾವ. ಬುದ್ಧನ ಪ್ರಕಾರ ಮೈತ್ರಿಯ ಸಂಪೂರ್ಣ ಅರ್ಥ “ಸಕಲ ಜೀವರಾಶಿ ಮತ್ತು ಪ್ರಕೃತಿ ಜೊತೆಗೆ ಮೈತ್ರಿಭಾವದ ಸಂಬಂಧ ಹೊಂದುವುದು” ಎಂಬುದಾಗಿದೆ. ಮೈತ್ರಿ ಎಂದರೆ ಸಹೃದಯ, ಸ್ವಾತಂತ್ರ್ಯ ಎಲ್ಲವನ್ನೂ ಒಳಗೊಂಡಿರುತ್ತದೆ. ಅದು ಎಲ್ಲರಿಗೂ ದಾರಿ ತೋರುತ್ತದೆ ಎಂದು ಹೇಳುತ್ತಾರೆ. ಈ ಸಮಾಜಕ್ಕೆ ಎಲ್ಲವೂ ಬೇಕು, ಎಲ್ಲರೂ ಬೇಕು. ಎಲ್ಲರಿಗೂ ಸಮಾನತೆ ದೊರಕಬೇಕು. ಜ್ಞಾನ, ಸಂಪತ್ತು ಲಭಿಸಬೇಕು. ಸಮಾನತೆ ಇರಬೇಕು ಎಂಬುದೇ ಆದರ್ಶ, ಈ ಆದರ್ಶವನ್ನು ರೂಪಿಸಲು ಅಗತ್ಯವಿರುವ ನಿಯಮಗಳನ್ನು ರಚಿಸುವುದು ಸದ್ಧಮ್ಮದ ಹೊಣೆಗಾರಿಕೆ ಎಂದು ಬುದ್ಧ ಹೇಳುತ್ತಾರೆ.
’ಲ್ಯಾಡ್‌ ಆಫ್‌ ಬುದ್ಧ’ ಎಂದು ಕರೆಸಿಕೊಳ್ಳುವ ನಮ್ಮ ಭಾರತದಲ್ಲಿ ಇಂದು ಧಮ್ಮ, ಜಾತಿ, ವರ್ಗ, ಲಿಂಗ, ವರ್ಣ ಹಾಗೂ ಇನ್ನೂ ಹಲವಾರು ವಿಷಯಗಳಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ದಿನೇ ದಿನೇ ಒಂದು ಧಮ್ಮಕ್ಕೆ ಮತ್ತೊಂದು ಧಮ್ಮದ ಮೇಲೆ ವಿನಾಕಾರಣ ದ್ವೇಷ ಹೆಚ್ಚುತ್ತಿದೆ. ಪ್ರೀತಿಯ ಹಾದಿ ತುಳಿದವರ ಹತ್ಯಯಾಗುತ್ತಿದೆ, ಹೆಣ್ಣನ್ನು ದೇವತೆಗೆ ಹೋಲಿಸುವ ನೆಲದಲ್ಲಿ ಆಕೆ ಬೆತ್ತಲಾಗುತ್ತಿದ್ದಾಳೆ, ಜಾತಿಗಳ ಹೆಸರಲ್ಲಿ ಆಗುತ್ತಿರುವ ದೌರ್ಜನ್ಯಗಳಂತೂ ಕ್ರೂರತೆಯ ಮೈಲಿಗಲ್ಲಾಗುತ್ತಿವೆ, ದನಿ ಎತ್ತಿದವರ ದನಿಯನ್ನು ಗುಂಡಿಟ್ಟು ಮೂಕವಾಗಿಸುತ್ತಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಕೊನೆ ಇಲ್ಲವೇ? ಎಂದು ಹಲವು ಮುಗ್ಧ ಮನಸ್ಸುಗಳು ಯೋಚಿಸುತ್ತಿವೆ. ತಮ್ಮ ಮಕ್ಕಳ ಭವಿಷ್ಯದ ಭಾರತ ನೆನೆದು ಎಷ್ಟೋ ಪೋಷಕರು ಕಂಗಾಲಾಗಿದ್ದಾರೆ. ಆದರೆ ಖಂಡಿತ ಇದೆಲ್ಲದಕ್ಕೂ ಅಂತ್ಯ ಇದ್ದೇ ಇದೆ, ಅದೂ ನಮ್ಮ ಕೈಯಲ್ಲಿ ಇದೆ.
ಕ್ರೂರತ್ವ ಅಳಿದು ಕರುಣೆಯ ಚಿಗುರು ಮೊಳಕೆಯೊಡೆಯುವ ಕಾಲ ಬಂದೇ ಬರುತ್ತದೆ. ಅದಕ್ಕೆ ನಾವು ಶ್ರಮ ಪಡುವ ಅಗತ್ಯವಿದೆ. ಬದಲಾವಣೆ ಜಗದ ನಿಯಮ ಎಂದು ಹೇಳುತ್ತಾರೆ. ಹಾಗಾಗಿ ವಿಷ ಬೀಜ ಹೊಕ್ಕಿರುವ ಮನಸ್ಸುಗಳನ್ನು ಪ್ರೀತಿಯೆಂಬ ಅಮೃತದಿಂದ ಬದಲಿಸಬೇಕಿದೆ. ನಿಜವಾದ ಧಮ್ಮದ ಅರ್ಥ ತಿಳಿಸಬೇಕಿದೆ. ಬುದ್ಧನ ಮೈತ್ರಿಭಾವವನ್ನು ಅರ್ಥ ಮಾಡಿಸಬೇಕಿದೆ. ಇದರ ಜೊತೆಗೆ ನಾವು ನಮ್ಮ ಮಕ್ಕಳಿಗೆ ಬುದ್ಧನ ಸಮಾನತೆಯ ಸಧಮ್ಮವನ್ನು ಕಲಿಸಬೇಕಿದೆ. ಕರುಣೆ, ಮೈತ್ರಿಭಾವ ಪ್ರೀತಿ, ವಿಶ್ವಾಸವನ್ನು ಮನ್ಯಷ್ಯ ಮನುಷ್ಯರ ನಡುವೆ ಮಾತ್ರವಲ್ಲದೇ ಪ್ರಕೃತಿಯೊಂದಿಗೂ ಹೊಂದಬೇಕು ಎನ್ನುವ ಸಕಾರಾತ್ಮಕತೆಯನ್ನು ಮಕ್ಕಳ ಮನಸ್ಸಲ್ಲಿ ಅಚ್ಚೊತ್ತಬೇಕಿದೆ.
ಹೀಗಾದಾಗ ಮಾತ್ರ ಬುದ್ಧನ ಸಮಾನತೆ ಸಾರುವ ಮತ್ತು ಮೈತ್ರಿಭಾವದ ಸದ್ಧಮ್ಮವು ದೇಶದಲ್ಲಿ ಬೇರೂರುತ್ತದೆ. ಈ ಬುದ್ಧನ ಮೈತ್ರಿಭಾವಕ್ಕೂ ಭಾರತಕ್ಕೂ ಮತ್ತೊಂದು ರೀತಿಯ ನಂಟಿದೆ. ನಮ್ಮ ಜೀವನಕ್ರಮವೆಂದೇ ಭಾವಿಸುವ ಸಂವಿಧಾನದಲ್ಲಿ ಈ ಮೈತ್ರಿಭಾವ ಈಗಾಗಲೇ ಸೇರಿಕೊಂಡಿದೆ. ಅದು “ಬಂಧುತ್ವ” ಎನ್ನುವ ರೂಪದಲ್ಲಿ. ಈ ಬಂಧುತ್ವ ಎನ್ನುವ ಪದವನ್ನು ಶಿಫಾರಸ್ಸು ಮಾಡಿ ಪೀಠಿಕೆಯಲ್ಲಿ ಸೇರಿಸಿದ್ದು ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಆದರೂ, ಅವರಿಗೆ ಪ್ರೇರಣೆಯಾಗಿದ್ದು ಈ ಮೈತ್ರಿಭಾವ (ಪಾಲಿ ಭಾಷೆಯಲ್ಲಿ ಮೆಟ್ಟಾ) ಎನ್ನುವ ಬುದ್ಧನ ಆದರ್ಶ. ಹಾಗಾಗಿ ಬುದ್ಧನ ಮೈತ್ರಿಭಾವ ನಮ್ಮ ಸಂವಿಧಾನದಲ್ಲಿ ಈಗಾಗಲೇ ಅಡಕವಾಗಿದೆ, ಹಾಗೂ ನಾವು ಅದನ್ನು ಅಳವಡಿಸಿಕೊಂಡಿದ್ದೇವೆ, ಅದನ್ನು ಆಚರಣೆಗೆ ತರುವ ಕೆಲಸ ಆಗಬೇಕಿದೆ. ಪಾಲನೆಯಾದಾಗ ಬಹುಶಃ ನಾವೆಲ್ಲಾ ಬಯಸುವ ಹಾಗೆ ಭಾರತ ಬುದ್ಧನ ಭೂಮಿ ಆಗುತ್ತದೆ ಮತ್ತು ಸಮ ಸಮಾಜದ ನಿರ್ಮಾಣ ನನಸಾಗುತ್ತದೆ.
ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.  

Leave a Reply

Back To Top