ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಕವಿತೆ,ಏನ ಬಂತ ಕಾಲ
ಏನ ಬಂತ ಕಾಲ ಕೇಳ ಬದುಕೆಲ್ಲ
ಬರೀ ಗೋಳ ಗೋಳ
ಹೆಂಗ ಬದುಕಲಿ ತಿಳಿಯದಲ್ಲ
ಬದುಕೋ ದಾರಿ ನೀನೇ ಹೇಳ//
ಸತ್ಯ ಮಾಯವಾಗೈತಲ್ಲ ಸುಳ್ಳಿನದೇ ಕಾಲ
ಎಲ್ಲೆಲ್ಲೂ ಪುಟಿಯುತಿದೆ ನೋವ ತುಂಬಿ ಹಾಲಹಲ
ಹಣದ ದಾಹ ಮೇರೆ ಮೀರಿ ಕೋಲಾಹಲ
ಮುಗುದ ಮನ ಒದ್ದಾಡತಾವ ಕೇಳ ವಿಲ ವಿಲ
ಇದ ಏನ ಕಲಿಗಾಲ ಬಂತೇನ ಕೊನೆಗಾಲ//
ಕಾರ ಹೋಗತಾವ ಭರ ಭರಾ
ಕಾಲುದಾರಿ ನಡೆಯಾಂವ ಥರಾ ಥರಾ
ಮೈ ಮೇಲೆ ಕಬರ ಗಿಬರ ಇಲ್ಲಾ
ದೆವ್ವಿನಂತ ಕಾರಿನ್ಯಾಗ ಒಬ್ಬನೇ ಇರತಾನಲ್ಲ
ಇದೇ ಏನ ಕಲಿಗಾಲ ಕರ್ಮ ತೀರಿಸೋ ಕಾಲ//
ತಿನ್ನೊ ಅನ್ನಾನೂ ಮಾಡತಾರ ಸವಾಲ
ಬಟ್ಟೆ ಬರೆ ಎಲ್ಲಾ ಏನ ಮಲ ಮಲ
ಒಳಗೆ ಏರಿ ಜೋರ ಅಮಲ
ಎಲ್ಲರ ಮನದಾಗ ದುಗುಡ ತುಮುಲ
ಕರೆಕ ಇಲ್ಲ ಕಾಲ ಇದೆ ಏನ ಕಲಿಗಾಲ///
ಗುರು ಹಿರಿಯ ತಂದೆ ತಾಯಿಗೆ ಬೆಲೆ ಇಲ್ಲ
ಸಂತ್ಯಾಗ ಗೂಳಿ ನುಗ್ಗಿದಾಂಗ ನುಗ್ಗತಾರಲ್ಲ
ಕಟ್ಟಾಕ ಕಣ್ಣಿಲ್ಲ ಬಿಚ್ಚಾಕ ಹಗ್ಗಾ ಇಲ್ಲ
ನಮ್ಮಜ್ಜಿ ಅಂದಂಗ ಎಲ್ಲಾ ಆಗಿದೆಯಲ್ಲ
ಯಾರ ಹಂಗ ಯಾರಿಗಿಲ್ಲ ಮೇರಿತಾರ ಕಾಮಣ್ಣನಂಗ//
ಹಸದರ ಪಾಸ೯ಲ್ ದಾಹಕ ಬಿಸಿಲರಿ
ಮೋಹಕ ಬೆಡಗು ತುಡುಗು ಎಲ್ಲಾ ತರಾತುರಿ
ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ
ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ
ಗುರಿಯತ್ತ ಇಲ್ಲ ಗಮನ ಕಂಡ ಕಂಡ ಕಡೆ ತಿರುಗೋ ಮನ //
ಹೇಳಾಕ ಅರಸನಿಲ್ಲ ಕೇಳಾಕ ಪರದಾನಿ ಇಲ್ಲ
ವ್ಯವಧಾನ ಮೊದಲಿಲ್ಲ ಸಮಾಧಾನ ಕಾಣದಲ್ಲ
ವಿಜ್ಞಾನ ತಂತ್ರಜ್ಞಾನ ಮುಗಿಲು
ಮುಟ್ಟಿದರೂ ಪ್ರಯೋಜನವಿಲ್ಲ
ಇದೇ ಕಟ್ಟ ಕಡೆಯ ಕಾಲ ಇದೇ ಏನ ಕಲಿಗಾಲ//
ನಂಬಿಕೆ ವಿಶ್ವಾಸಕ್ಕ ಎಳ್ಳ ಕಾಳಿನಷ್ಟ ಕಿಮ್ಮತ್ತಿಲ್ಲ
ವಚನ ಪ್ರಮಾಣ ಪ್ರಾಮಿಸ್ಗು ಮೂರು ಕಾಸಿನ ಬೆಲೆ ಇಲ್ಲ
ಊಸರವಳ್ಳಿಯಂಗ ಬಳ್ಳಿ ಬಳ್ಳಿಯಂಗ ಬಣ್ಣ
ಆಚ ಇದ್ದಾಗಷ್ಟ ಬೆಣ್ಣೆ ಸವರಿ ತಿರುಸ್ಕೊತಾರ ಚಟ
ಇಲ್ಲ ಗೆಲ್ಲೋ ಹಟ ಛಲ ಇದ ಏನ ಕಲಿಗಾಲ//
ಕೈಯಾಗ ಮೊಬೈಲ್ ನೋಡತಾರ ವಿಡಿಯೋ ರೀಲ್ಸ
ಎಲ್ಲಿ ನೋಡಿದರಲ್ಲಿ ಮೊಬೈಲಿನ ಕಾರಬಾರ
ಕಾಲ್ ಮೆಸೇಜ್ ಮಾತುಕತೆ ಜೋರ ಜೋರ
ಯಾವುದಕ್ಕೂ ಇಲ್ಲ ಟೈಮ್ ಬರೀ ಲ್ಯಾಪ್ಟಾಪ್ ಗೇಮ್
ಹುಚ್ಚಾಟ ಕಚ್ಚಾಟ ಕಪಟ ಮೋಸದ್ದೆ ಆಟ ಇದೆ ಏನ ಕಲಿಗಾಲ//
ಡಾ ಅನ್ನಪೂರ್ಣ ಹಿರೇಮಠ
Superb mam