ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಮುಂಜಾನೆಯ ಬೆಡಗು.
ಮುಂಜಾನೆ ಬೆಡಗು,
ಏನದೋ ಸೊಬಗು,
ಎನ್ನ ಮನವನು ಸೂರೆಗೊಂಡಾಗಿದೆ.
ಆ ಸೂರ್ಯ ನೋಡು,
ಆ ನದಿಯ ನೋಡು,
ದೂರದ ಆ ಬೆಟ್ಟವು ನುಣಪಾಗಿದೆ.
ಬೆಳ್ಳನೆಯ ಮಂಜು,
ಮುಸುಕಿರುವುದಿಂದು,
ತಣ್ಣನೆ ಮೈಯೆಲ್ಲಾ ನಡುಗುತಲಿದೆ.
ಕೆಂಪನೆ ಸೂರ್ಯನ,
ಎಳೆಬಿಸಿಲ ಬಿಸಿಗೆ,
ಮಂಜೆಲ್ಲ ಕರಗಿ ಹಿತವೆನಿಸುತಲಿದೆ.
ಆ ಗರಿಕೆಯ ಮೇಲೆ,
ಇಬ್ಬನಿಯ ಬಿಂದು,
ತೆಳ್ಳನೆ ಸ್ಫಟಿಕದ ಶಿಲೆಯಂತಾಗಿದೆ.
ಆ ಸೂರ್ಯ ಕಿರಣ,
ಸೊಂಕಿದ ಆ ಕ್ಷಣ,
ಸುಂದರ ಬಣ್ಣಗಳೇಳನೆರಸುತಿದೆ.
ಪೊದೆಯೊಳಗಿನಿಂದ,
ಕಾಡು ಹಕ್ಕಿಯೊಂದ,
ಮಧುರ ಆಲಾಪನೆಯು ಕೇಳುತಲಿದೆ.
ಉದಯಿಸೊ ಸೂರ್ಯನ,
ಸ್ವಾಗತ ಬಯಸುತ,
ಮುದದಿ ತನ್ನೊಡನಾಡಿಯ ಕರೆಯುತಿದೆ.
ದೂರದಾ ಗುಡಿಯ,
ಗೋಪುರ ಶಿಖರದ
ತುದಿಯ ಕಳಸವು ಮಿರಮಿರ ಮಿಂಚುತಿದೆ.
ಗುಡಿಯೊಳಗಿನಿಂದ,
ಪ್ರಭಾತ ಗೀತೆಯು,
ಹೃನ್ಮನವನು ತಣಿಸಿ ಮುದಗೊಳಿಸುತಿದೆ.
ಮೂಡಣದಿಂದಲಿ,
ತಣ್ಣನೆ ಬೀಸುವ,
ಕುಳಿರ್ ಗಾಳಿಗೆ ಮೈ ಜುಮ್ಮೆನ್ನುತಿದೆ.
ರಸ್ತೆಯ ಅಂಚಿನ,
ಹಸಿ ಗದ್ದೆಗಳಲಿ.
ಬತ್ತದ ಸಸಿಗಳು ತಲೆದೂಗುತಲಿವೆ.
ಕೆರೆಯ ನೀರಿನಲಿ,
ಒಂಟಿ ಕಾಲಿನಲಿ,
ಬಕಪಕ್ಷಿಯು ನಿಂತು ಧ್ಯಾನಿಸುತಿದೆ.
ಸೂರ್ಯನ ತಾಪವೊ?
ಹೊಟ್ಟೆಯ ಹಸಿವೋ!
ಆ ನೀರಲಿ ತಲೆಯನು ಮುಳಗಿಸುತಿದೆ.
ಮಾವಿನ ಮರದಲಿ,
ತುಂಬಿದ ಚಿಗುರಲಿ,
ತಳಿರು ಹೂವಲಿ ಗಂಧವು ಸೂಸುತಿದೆ.
ಗಂಧದ ಪರಿಮಳ,
ಸೂಸುವ ಕಂಪಿಗೆ,
ದುಂಬಿಗಳ ಹಿಂಡು ಸುತ್ತ ಮುತ್ತುತಿದೆ.
ದನಗಾಹಿಯೊಬ್ಬ,
ದನಗಳನಟ್ಟುತ,
ಕಾಡಿನೆಡೆಗೆ ಹರುಷದಲಿ ಸಾಗುತಿರೆ.
ಹೆಂಗಳೆಯೊಬ್ಬಳು,
ಮನೆಯ ಮುಂದುಗಡೆ,
ಸಾರಿಸಿ ತಾ ರಂಗೋಲೆ ತೀಡುತಿರೆ.
ನಡುದಲಿ ಬಿಂದಿಗೆ,
ನೀರನು ಹೊಯ್ಯುತ,
ಲಗುಬಗೆಯಿಂದಲಿ ನಾರಿ ನಡೆಯುತಿರೆ.
ಚುಮುಚುಮು ನಸುಕಲಿ,
ತನ್ನಯ ತೋಟದಿ,
ರೈತನು ಬೆವರುತ ತಾ ದುಡಿಯುತಿರೆ.
ಅರುಣೋದಯದಲಿ,
ಅರುಣ ತೇಜಿಗೇ,
ಜೀವ ಸಂಕುಲವು ಚೇತನಗೊಂಡಿದೆ.
ಅದ್ಭುತವೆನಿಸದೆ!
ಸೃಷ್ಟಿಯ ಈ ಬಗೆ,
ಮುಂಜಾನೆ ಸೊಬಗು ಪುಲಕಿತಗೊಳಿಸಿದೆ.
ಪಿ.ವೆಂಕಟಾಚಲಯ್ಯ