ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!

ಕೊಡುವ ಕಿತ್ತುಕೊಳ್ಳುವ
ನಿನ್ನಾಟದಿ ನಾನೊಂದು
ಯಕಃಶ್ಚಿತ್ ಜೀವಬಿಂದು!
ನರಳಿರುವೆ ಬಿಕ್ಕಿ ನೊಂದು
ಅರ್ಪಿಸಿಕೋ ನಿನ್ನಡಿಗೆ
ನನ್ನ ಕಣ್ಣೀರಿನಾ ಬಿಂದು.!

ಕೇಳದೇ ಕೊಟ್ಟುಬಿಡುವೆ
ಹೇಳದೇ ಕಿತ್ತುಕೊಳ್ಳುವೆ
ಬೆಸುಗೆಗೂ ನೀನೆ ಪ್ರೇರಣ
ಬಿರುಕಿಗೂ ನೀನೇ ಕಾರಣ
ಎಲ್ಲವೂ ನಿನ್ನದೇ ವಿಧಾತ
ನಿನ್ನೆದುರು ನಾ ಅನಾಥ.!

ಎದೆಯ ಬರಿದಾಗಿಸಿದರೂ
ನಿನ್ನನೆಂದೂ ಜರಿಯೆನು..
ಕಂಗಳ ಕೊಳದಿ ಉಕ್ಕುವ
ಕಂಬನಿಯ ಮೊಗೆ ಮೊಗೆದು
ನಿನ್ನ ಪಾದಾರವಿಂದಗಳಿಗೆ
ನಗುನಗುತಲೇ ಎರೆಯುವೆನು.!

ನೀನಿಟ್ಟ ಚೈತನ್ಯದ ಬದುಕು
ನೀಕೊಟ್ಟ ಕಾರುಣ್ಯದ ಬೆಳಕು
ನೀನೇ ಕಾರಣೀಕರ್ತ ಸಕಲಕು
ಭಾವ ಬಂಧ ಪ್ರೀತಿ ಋಣಭಾರ
ಇಲ್ಲಿ ಎಲ್ಲಕೂ ನೀನೇ ಹರಿಕಾರ
ನಿನ್ನಿಂದಲೇ ಬಾಳ ಝೇಂಕಾರ.!

ನಗಿಸಿದರು ಅಳಿಸಿದರು ಕೈಮುಗಿವೆ
ನನ್ನೆದೆ ತಂತಿ ನಿನ್ನದೇ ಗುರುವೆ.!
ಶರಣಾಗುತ ನಿನ್ನಡಿಗೆ ಬಾಗಿರುವೆ
ಅನುಕ್ಷಣ ಅನುಗ್ರಹಿಸು ಮಾಧವ
ಆಸರೆಯಾಗುತ ಅಡಿಗಡಿಗು ದೇವ
ಕರಪಿಡಿದು ನಡೆಸಿಬಿಡು ಈಭವ.!

Leave a Reply

Back To Top